ಬೆಂಗಳೂರು : ಮಹಾ ನಗರದ ಜನತೆಯ ಸಾಮೂಹಿಕ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರತಿದಿನ ಸದ್ಯ 15 ಲಕ್ಷ ಮಹಾನಗರದ ಜನತೆ ಬಳಸುವ ಈ ಸಾರಿಗೆ ವ್ಯವಸ್ಥೆಯ ಸಿಬ್ಬಂದಿಗಳ ನಡುವೆ ಕೋವಿಡ್ ಸೋಂಕು ಹೆಚ್ಚುತ್ತಿರುವುದು ಪ್ರಯಾಣಿಕರಿಗೂ ಸೋಂಕು ಹಬ್ಬಲು ಕಾರಣವಾಗಲಿದೆ. ಆದಕಾರಣ ಕೂಡಲೇ ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಎಂಟಿಸಿ ಆಡಳಿತ ಮಂಡಳಿಯನ್ನು ಒತ್ತಾಯಿಸಿವೆ.
ವೆಚ್ಚ ಕಡಿತದ ನೆಪದಲ್ಲಿ ನೌಕರರಿಂದ 12 ತಾಸು ದುಡಿಮೆ ಮತ್ತು ಪಾಳೀರಹಿತ ಕೆಲಸವು ಹಾಗೂ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಬಸ್ಸುಗಳನ್ನು ಕಾರ್ಯಾಚರಣೆಗೆ ಇಳಿಸದಿರುವ ಆಡಳಿತ ಮಂಡಳಿಯ ಕ್ರಮದಿಂದಾಗಿ ಬಿಎಂಟಿಸಿ ಸಿಬ್ಬಂದಿ ಅನಿವಾರ್ಯವಾಗಿ ಸೋಂಕಿಗೆ ತುತ್ತಾಗುವಂತಾಗಿದೆ. ಬಲವಂತದ ರಜೆ ನೀಡಿ ಕೆಲವರನ್ನು ಕೆಲಸದಿಂದ ಹೊರಗಿಟ್ಟಿರುವುದು ಮತ್ತು ಕಡಿಮೆ ಬಸ್ಸುಗಳನ್ನು ಹಾಗೂ ಟ್ರಿಪ್ಗಳನ್ನು ಬಿಡುತ್ತಿರುವುದು ಪೀಕ್ ಅವರ್ ಗಳಲ್ಲಿ ಬಸ್ಗಳಲ್ಲಿನ ಪ್ರಯಾಣಿಕರ ಸಂದಣಿ ಹೆಚ್ಚುವಂತೆ ಮಾಡಿದ್ದು ಇದರಿಂದಾಗಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಬ್ಬರಿಗೂ ಸೋಂಕಿನ ಸಾಧ್ಯತೆಯನ್ನು ಹೆಚ್ಚುವಂತೆ ಮಾಡಿದೆ. ಮಹಾನಗರದ ಜನತೆಯು ಆರ್ಥಿಕತೆಯು ತೆರೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೀಕ್ ಅವರ್ ಗಳಲ್ಲಿ ಸಂದಣಿ ಹೆಚ್ಚಿದ್ದರೂ ಬಸ್ಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆಗೆ ದೂಡಲ್ಪಟ್ಟಿದ್ದಾರೆ.
ಇದರಿಂದಾಗಿ 6 ಅಡಿ ಅಂತರ ಎಂಬ ಕೋವಿಡ್ ಪ್ರೋಟೋಕಾಲ್ ಗೆ ಬೆಲೆ ಇಲ್ಲದಂತಾಗಿದೆ ಹಾಗೂ ಪ್ರಯಾಣಿಕರು ಅನಿವಾರ್ಯವಾಗಿ ನಿಂತೇ ಪ್ರಯಾಣಿಸುವಂತಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಮತ್ತು ಬಿಎಂಟಿಸಿ ಆಡಳಿತ ಮಂಡಳಿಯು ಉಂಟುಮಾಡಿದೆ. ಪೀಕ್ ಅವರ್ ಗಳಲ್ಲಿ ಹೆಚ್ಚು ಟ್ರಿಪ್ಗಳಿಗೆ ಅನುವುಗೊಳಿಸುವ ಬದಲು ವೆಚ್ಚಕಡಿತದ ನೆಪದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರಿಬ್ಬರ ಜೀವಕ್ಕೆ ಬಿಎಂಟಿಸಿ ಯ ಆಡಳಿತ ಮಂಡಳಿ ಹಾಗೂ ಸರ್ಕಾರ ಕಂಟಕವಾಗಿ ಪರಿಣಮಿಸುತ್ತಿವೆ. ಇದರಿಂದಾಗಿ ಮಹಾನಗರ ಜನತೆ ಪೂರ್ಣ ಪ್ರಮಾಣದಲ್ಲಿ ಬಿಎಂಟಿಸಿ ಬಳಸುತ್ತಿಲ್ಲ. ನಿತ್ಯ ಸಂಚರಿಸುತ್ತಿದ್ದ 35 ಲಕ್ಷ ಪ್ರಯಾಣಿಕರ ಸಂಖ್ಯೆ ಈಗ 15 ಲಕ್ಷಕ್ಕೆ ಇಳಿದಿದೆ.
6 ಅಡಿ ಅಂತರ ಕಾಪಾಡಿ ಎಂದು ಬಸ್ಗಳ ಮೇಲೆ ಜಾಹಿರಾತು ಫಲಕ ಹಾಕುವ ಸರ್ಕಾರ ಹಾಗೂ ಬಿಎಂಟಿಸಿ ಹೆಚ್ಚು ಟ್ರಿಪ್ಗಳನ್ನು ಓಡಿಸದೆ ಪ್ರಯಾಣಿಕರಿಗೆ ನಿಂತೇ ಪ್ರಯಾಣಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸಿ ಅದಕ್ಕೆ ಸಿಬ್ಬಂದಿಯನ್ನು ಹೊಣೆಗಾರರಾಗಿಸಿ ಅವರಿಗೆ ದಂಡ ಮತ್ತು ಅಮಾನತ್ತಿನಂತಹ ಶಿಕ್ಷೆಗಳನ್ನು ವಿಧಿಸುತ್ತಿರುವುದು ಬಿಎಂಟಿಸಿ ಆಡಳಿತದ ನೌಕರ ವಿರೋಧಿ, ಜನವಿರೋಧಿ ಕ್ರಮಗಳಾಗಿವೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿಯಾದ ಕೆ.ಎನ್.ಉಮೇಶ್ ಆರೋಪಿಸಿದ್ದಾರೆ.
ಈಗಾಗಲೇ 20 ಸಿಬ್ಬಂದಿ ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು ಇದು ಹೆಚ್ಚಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಕಂಟಕಪ್ರಾಯವಾಗಿ ಪರಿಣಮಿಸುವ ಮೊದಲು ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕು, ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಎಂಟಿಸಿ ಆಡಳಿತ ಮಂಡಳಿಯು ಕೋವಿಡ್ ಸೋಂಕಿಗೆ ಬಲಿಯಾಗಿರುವ ಸಿಬ್ಬಂದಿಗೆ ಕೂಡಲೇ ಘೋಷಿತ 3೦ ಲಕ್ಷ ರೂಗಳ ಪರಿಹಾರ ನೀಡಬೇಕೆಂದು ಎಂದು ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.