ಸ್ಟಾಕ್ಹೋಮ್: 2020ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಬುಧವಾರ ಘೋಷಣೆಯಾಗಿದೆ. ಜೀನೋಮ್ ಎಡಿಟಿಂಗ್ ವಿಧಾನದ ಅಭಿವೃದ್ಧಿಗಾಗಿ ಎಮಾನ್ಯುಯೆಲ್ ಶರ್ಪಾನ್ಟೈ (Emmanuelle Charpentier) ಮತ್ತು ಜೆನಿಫರ್ ಎ.ಡೌಡ್ನ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಎಮಾನ್ಯುಯೆಲ್ ಅವರು ಜರ್ಮನಿಯ ಬರ್ಲಿನ್ನ ಮ್ಯಾಕ್ಸ್ ಬ್ಲ್ಯಾಂಕ್ ಯೂನಿಟ್ ಫಾರ್ ದಿ ಸೈನ್ಸ್ ಆಫ್ ಪ್ಯಾಥೊಜೆನ್ಸ್ನ ವಿಭಾಗದ ನಿರ್ದೇಶಕಿಯಾಗಿದ್ದಾರೆ. ಜೆನಿಫರ್ ಎ.ಡೌಡ್ನ ಅಮೆರಿಕದ ಬರ್ಕ್ಲಿಯ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್ ಆಗಿದ್ದಾರೆ.
ತಳಿಗುಣ (ಜೀನ್) ತಂತ್ರಜ್ಞಾನದಲ್ಲಿ ಅತ್ಯಂತ ತೀಕ್ಷ್ಣವಾದ ತಂತ್ರಗಳ (ಟೂಲ್ಸ್) ಅನ್ವೇಷಣೆಯನ್ನು ಎಮಾನ್ಯುಯೆಲ್ ಮತ್ತು ಜೆನಿಫರ್ ಮಾಡಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್ಪರ್ (CRISPR/Cas9) ಕತ್ತರಿಗಳನ್ನು (ಜೆನೆಟಿಕ್ ಸಿಸರ್ಸ್) ಅಭಿವೃದ್ಧಿ ಪಡಿಸಿದ್ದಾರೆ.
ಈ ತಂತ್ರಜ್ಞಾನವನ್ನು ಬಳಸಿ ಸಂಶೋಧಕರು ಪ್ರಾಣಿಗಳ, ಸಸ್ಯಗಳ ಹಾಗೂ ಸೂಕ್ಷ್ಮಜೀವಿಗಳ ಡಿಎನ್ಎ ಅತ್ಯಂತ ನಿಖರವಾಗಿ ಬದಲಿಸಿಬಿಡಬಹುದಾಗಿದೆ. ಸಸ್ಯ ತಳಿಗಳ ಅಭಿವೃದ್ಧಿ, ಅತ್ಯಾಧುನಿಕ ರೀತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಹಾಗೂ ಅನುವಂಶಿಕ ಕಾಯಿಲೆಗಳನ್ನು ಗುಣ ಪಡಿಸಲು ಇದರಿಂದ ಸಾಧ್ಯವಾಗುತ್ತಿದೆ.