– ನಾವೇ ಸಿಎಂ ಮಾಡಿದ್ದ ಕುಮಾರಸ್ವಾಮಿ ಅವರನ್ನು ನಾವೇ ಇಳಿಸಲಾಗುತ್ತಾ?
– ರಾಜ್ಯಾಧ್ಯಕ್ಷ ಸ್ಥಾನ ನೀಡಿ ಶಾಸಕರಾಗಿಸಿಯೂ ಕೈ ಕೊಟ್ಟ ಎಚ್.ವಿಶ್ವನಾಥ್ ಕಾಲೆಳೆದ ಜಿಟಿ ದೇವೇಗೌಡ
ಬೆಂಗಳೂರು: ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಜಿ.ಟಿ ದೇವೇಗೌಡ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಬಿಜೆಪಿಯಿಂದ ಬಂದಿದ್ದ ಹಳೆ ಆಫರ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.
”ಬಿಜೆಪಿಯಿಂದ ನನಗೂ ಡಿಸಿಎಂ ಆಗುವ ಆಫರ್ ಬಂದಿತ್ತು. ಆದರೆ, ಅಧಿಕಾರಕ್ಕೆ ಆಸೆಪಡಲಿಲ್ಲ, ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ, ಐದು ವರ್ಷ ಅವರೇ ಸಿಎಂ ಆಗಬೇಕು ಎಂದು ಬಯಸಿದ್ದೆವು, ನಾವೇ ಕುಮಾರಸ್ವಾಮಿಯನ್ನು ಸಿಎಂ ಮಾಡಿ, ನಾವೇ ಇಳಿಸೋಕೆ ಆಗುತ್ತಾ?” ಎಂದು ಮಾಜಿ ಸಚಿವ, ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಾನು ಮತ್ತು ಡಿ.ಕೆ. ಶಿವಕುಮಾರ್ ಅವರು ಬಹಳ ವರ್ಷಗಳಿಂದ ಸ್ನೇಹಿತರು. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದ ಅನೇಕ ಮುಖಂಡದಲ್ಲಿ ನಾವಿಬ್ಬರೂ ಇದ್ದೆವು. ಮುಂಬೈಗೆ ತೆರಳಿ ಮಾತುಕತೆ ನಡೆಸಿದ್ದೆವು. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ” ಎಂದರು.
ಉಪ ಚುನಾವಣೆ ಸಮಯದಲ್ಲಿಸಿಬಿಐ ರೇಡ್ ಮಾಡಬಾರದಿತ್ತು. ರೇಡ್ ಮಾಡಿರುವುದು ತಪ್ಪು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇಷ್ಟೇ ಅಲ್ಲ ಡಿಕೆಶಿ ಅವರ ಶ್ರೀಮತಿಯವರು ನಮ್ಮ ಮೈಸೂರಿನವರು. ರೇಡ್ ಆದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಬೇಕು. ಯಾಕೆಂದರೆ ಅವರು ನನ್ನ ಸ್ನೇಹಿತರು ಎಂದು ಜಿಟಿ ದೇವೇಗೌಡ ಹೇಳಿದರು. ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಡಿಕೆ ಶಿವಕುಮಾರ್ ಅವರು ಜಿಟಿ ದೇವೇಗೌಡರನ್ನು ಸಹಕಾರ ಮಹಾಮಂಡಲದ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.