ಹಾತ್ರಾಸ್‍ ಅತ್ಯಾಚಾರ ಪ್ರಕರಣ: ದೆಹಲಿಯ ಜಂತರ್‌ ಮಂತರ್‌ನಲ್ಲಿ ಭಾರಿ ಪ್ರತಿಭಟನೆ

  • ಸೀತಾರಾಂ ಯೆಚುರಿ, ಬೃಂದಾ ಕಾರಟ್‍, ಡಿ.ರಾಜಾ, ಅರವಿಂದ ಕೇಜ್ರಿವಾಲ್‍ ಭಾಗಿ

ನವದೆಹಲಿ: ಉತ್ತರ ಪ್ರದೇಶದ ಹಾತ್ರಾಸ್‍ನಲ್ಲಿ 19ರ ವಯಸ್ಸಿನ ದಲಿತ ಯುವತಿಯನ್ನು ಅತ್ಯಾಚಾರ ಪ್ರಕರಣ ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಶುಕ್ರವಾರ ಸಂಜೆ ಭಾರಿ ಪ್ರತಿಭಟನೆ ನಡೆಯಿತು. 

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿರುವ ಹಾತ್ರಾಸ್‍ ಯುವತಿಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆಯೂ ಪ್ರತಿಭಟನಾಕಾರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಮೊದಲು ಇಂಡಿಯಾ ಗೇಟ್‌ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ,  ದೆಹಲಿ ಪೊಲೀಸರು ಇಂಡಿಯಾ ಗೇಟ್‌ ಪ್ರದೇಶದಲ್ಲಿ 144 ಸೆಕ್ಷನ್‌ ವಿಧಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಜಂತರ್‌ ಮಂತರ್‌ಗೆ ವರ್ಗಾಯಿಸಲಾಗಿತ್ತು.

ಈ ವಿಚಾರವಾಗಿ ವಿಡಿಯೊ ಟ್ವೀಟ್‌ ಮಾಡಿರುವ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ತಮ್ಮ ಬೆಂಬಲಿಗರನ್ನು ಜಂತರ್ ಮಂತರ್‌ನಲ್ಲಿ ಒಟ್ಟುಗೂಡುವಂತೆ ಕೇಳಿಕೊಂಡಿದ್ದಾರೆ.

‘ಪೊಲೀಸರು ಸರ್ವಾಧಿಕಾರಿಗಳಂತೆ ಇಂಡಿಯಾ ಗೇಟ್ ಅನ್ನು ಮುಚ್ಚಿದ್ದಾರೆ. ಇದು ಸರ್ವಾಧಿಕಾರವನ್ನು ತೋರಿಸುತ್ತಾರೆ. ಆದರೆ, ನಮ್ಮ ನ್ಯಾಯದ ಬೇಡಿಕೆಯು ದುರ್ಬಲಗೊಳ್ಳಲು ನಾವು ಬಿಡುವುದಿಲ್ಲ. ಇದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕಾಗುತ್ತದೆ’ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ತಿಳಿಸಿದ್ದಾರೆ.

ಜಂತರ್‍ ಮಂತರ್‍ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪೊಲಿಟ್‍ ಬ್ಯೂರೋ ಸದಸ್ಯೆ ಬೃಂದಾ ಕಾರಟ್‍, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ  ಪಾಲ್ಗೊಂಡಿದ್ದು, ‘ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ. ಹಾತ್ರಾಸ್‌ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದು ಯೆಚೂರಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಹಾತ್ಮ ಗಾಂಧಿಯವರಂತೆ ಬಟ್ಟೆ ಧರಿಸಿರುವ ಮೂಲಕ ಯುವ ಕಾಂಗ್ರೆಸ್ ಸದಸ್ಯರು ಜಂತರ್ ಮಂತರ್ ರಸ್ತೆಯಲ್ಲಿ ಪ್ರದರ್ಶನವನ್ನು ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *