ಕಥೆ ಹೇಳು ದೊರೆ ಕಥೆ ಹೇಳು
ಒಂದಾನೊಂದು ಕಾಲದಲ್ಲಿ ಚಿನ್ನದ ಹಕ್ಕಿಯಾಗಿದ್ದ ಭಾರತ
ಸೂರ್ಯ ಮುಳುಗುವ ದಿಕ್ಕು ದೇಶಗಳಲ್ಲಿ ಅನಾಗರಿಕ ಜನ
ಬೆತ್ತಲೆ ಓಡಾಡುವಾಗ ಕಾಡುಗಳಲ್ಲಿ ಕುಣಿಯುವಾಗ
ಸಿಕ್ಕಿದ್ದೆಲ್ಲ ಹಸಿಹಸಿ ತಿನ್ನುವಾಗ
ಸಾಲು ಸಾಲು ಮನೆಗಳ ಹರಪ್ಪ, ಮುಂದೆ ಹಿಂದೂವಾದ ಸಿಂಧೂ ಸಂಸ್ಕೃತಿ
ಕೊಳಚೆ ಹರಿಯಲು ಪ್ರತ್ಯೇಕ ಗಟಾರ ತೆಗೆದಿದ್ದ ಕಥೆ ಹೇಳು
ಹದಿನಾರು ಸಂಸ್ಕಾರಗಳು, ಸಂಭೋಗಕ್ಕೂ ಮುಹೂರ್ತ
ಸೋಮರಸ, ಹೊಲಿದ ಬಟ್ಟೆ, ಟಂಕಿಸಿದ ನಾಣ್ಯ,
ನಾಟ್ಯಕ್ಕೊಂದು ಶಾಸ್ತ್ರ, ರಾಗಕ್ಕೊಂದು ವಾದ್ಯ,
ಋಕ್ಕು ಬರೆದ ಋಷಿಕೆಯರು, ಕತ್ತಿ ಹಿಡಿದ ರಾಣಿಯರು
ಆರ್ಯಭಟ ಚರಕ ಭಾರದ್ವಾಜ ಮತಂಗ ಮಾತಂಗಿಯರ ಕಥೆ ಹೇಳು
ಸರ್ವೇ ಭವಂತು ಸುಖಿನಃ ಎಲ್ಲರ ಸುಖದ ಪ್ರಾರ್ಥನೆಯ ಕಥೆ ಹೇಳು.
ಕಥೆ ಹೇಳು ದೊರೆ ಕಥೆ ಹೇಳು
ಭಾನುವಾರಗಳಲ್ಲಿ ಎದೆ ಮೇಲೆ ಅಡ್ಡಡ್ಡ ಕೈಯಿಟ್ಟು ಉರುಹೊಡೆದ ಕಥೆ ಹೇಳು
ಶಕರು ಬಂದರು, ಹೂಣರು ಬಂದರು, ತುರ್ಕರು ಬಂದರು
ಬಂದವರನ್ನೆಲ್ಲ ಭಾರತ ತಿಂದು ತೇಗಿತು
ವೀರ ಸಿಕಂದರ ಸೋತು ಮರಳಿದ
ಹ್ಯೂಯೆನ್ ತ್ಸಾಂಗ್ ಬೆರಗಾಗಿ ಹೋದ
ನೀರು ಕೇಳಿದರೆ ಮಜ್ಜಿಗೆ ಕೊಟ್ಟರು
ಫಾಹಿಯಾನ ಕೊಂಡಾಡಿದ – ಅವೆಲ್ಲ ಕಥೆ ಹೇಳು.
ಕ್ರಿಸ್ತನ ನೆಲದಲ್ಲಿ ಹೆಣ್ಣುಗಳ ಸುಟ್ಟ ಕಥೆ
ಪೈಗಂಬರನ ಮರಳುಗಾಡಲ್ಲಿ ಮುಸುಕಿನ ಹೆಣ್ಣುಗಳ ಕತ್ತರಿಸಿದ ಕಥೆ
ಶಿಲುಬೆ ಹಿಡಿದು, ಕುರಾನ್ ಹಿಡಿದು, ಕತ್ತಿ ತೋರಿಸಿ ಧರ್ಮಗೆಡಿಸಿದವರ ಕಥೆ…
ಮರೆಯದೇ ಹೇಳು;
ಘಜನಿ ಬಂದ ಘೋರಿ ಬಂದ
ಬಂದವರು ಬಗೆದು ತಿಂದರು, ಸಿಗಿದು ತಿಂದರು, ಮೊಗೆದು ತಿಂದರು
ಗುಡಿ ಗುಂಡಾರ ಪುಡಿಪುಡಿಯಾದವು –
ಮೂರ್ತಿಭಂಜಕರ ಕಥೆ ಹೇಳು.
ಮುಗಿಯುವುದಿಲ್ಲ ದೊರೆ, ಕಾಲ ನಡೆದಷ್ಟೂ ಕಥೆಗೆ ಬರವಿಲ್ಲ.
ಸೊಂಟಕ್ಕೆ ಪೊರಕೆ ಕಟ್ಟಿಕೊಂಡು ನಡೆದವರ ಕಥೆ ಇದೆ
ಕುಕ್ಕುರಗಾಲಲ್ಲಿ ಕೂತು ಕೈಯೊಡ್ಡಿ ನೀರು ಬೇಡಿದವರ ಕಥೆ ಇದೆ
ತಲೆ ಬೋಳಿಸಿ ಮುಂಡೆಯಾಗಿ ಮೂಲೆ ಬಿದ್ದವರ ಕಥೆ ಇದೆ
ಕೋರೆಗಾಂವದ ಕಥೆ ಇದೆ, ಖೈರ್ಲಾಂಜಿಯ ಕಥೆ ಇದೆ, ಕಂಬಾಲಪಲ್ಲಿಯ ಕಥೆಯಿದೆ…
ಕಾಶ್ಮೀರದ ಕಗ್ಗೊಲೆಗಳ ಕಥೆಯಿದೆ,
ಪಂಡಿತರ ಅನ್ಯಾಯದ ಸಾವುಗಳ ಜೊತೆ
ಪೆಲ್ಲೆಟ್ಟು ಗುಂಡುಗಳ ಕಥೆಯೂ ಇದೆ;
ಯಾರೂ ಬೀಳಿಸದ ಬಾಬ್ರಿಯ ಕಥೆ ಇದೆ,
ಗೋಧ್ರಾದ ಕಥೆಯಿದೆ, ದಾದ್ರಿಯ ಕಥೆಯಿದೆ.
ಬೀದಿ ಬೀದಿ ಹೆಣವಾದ ಅಖ್ಲಾಕರ ಪೆಹ್ಲೂ ಖಾನರ ಕಥೆಯಿದೆ.
ಹಾಜಬ್ಬ ಹಸನಬ್ಬರ ಕಥೆ ಇದೆ, ದಾನಮ್ಮಳ ಕಥೆಯಿದೆ
ಕಾವ್ಯಾಳ ಕಥೆಯಿದೆ, ಆಸಿಫಾಳ ಕಥೆಯಿದೆ,
ಮನಿಶಾಳ ಹಸಿ ಹೆಣದ ವಾಸನೆ ಇನ್ನೂ ಹಾಗೇ ಇದೆ
ದೊರೆ, ಕಥೆ ಹೇಳು ಬಾ ಇದೆಲ್ಲದರದ್ದೂ
ಸಾಲಲ್ಲಿ ನಿಂತು ಸತ್ತವರು
ನಡೆನಡೆದು ಸತ್ತವರು
ಕೆಲಸ ಕಸಿದುಕೊಂಡವರ ಕ್ರೌರ್ಯಕ್ಕೆ ಸತ್ತವರು
ಇವರೆಲ್ಲರ ಕಥೆ ಹೇಳು
ರಕ್ತ ಸುರಿಸುವ ರೈತರ ಕಥೆ, ಬೆವರು ಬತ್ತಿದ ಕಾರ್ಮಿಕರ ಕಥೆ
ಮಲದ ಗುಂಡಿಗಳಲ್ಲಿ ಸತ್ತವರ ಕಥೆ, ಜಾತಿಜಾತಿಯ ತೆವಲಿಗೆ
ಕೊಂದವರ ಕಥೆ, ಸತ್ತವರ ಕಥೆ ಎಲ್ಲವನ್ನೂ ಹೇಳು ದೊರೆ
ಕಾಲ ಖಾಲಿಯಾಗದ ಕಥೆಯ ಕಣಜ.
ನೀನಿತ್ತ ಕಾಳುಗಳ ತಿಂದು ಕತ್ತು ಕೊಂಕಿಸಿದ ನವಿಲು
ಗರಿ ಬಿಚ್ಚಿದರೆ ನೂರಾರು ಕಣ್ಣು,
ದೃಷ್ಟಿಯಿಲ್ಲ ಯಾವುದಕ್ಕೂ, ಬರೀ ಬಣ್ಣಬಣ್ಣದ ಚಿತ್ರ;
ದೊರೆ, ನೀನೂ ಹಾಗೇ ಅಲ್ಲವೆ?
ಕಾಣಲಾರದು ನಿನ್ನ ಕಣ್ಣು, ಕೇಳಲಾರದು ನಿನ್ನ ಕಿವಿ
ಮಾತೇ ಕಳಕೊಂಡ ನಿನ್ನ ಬಾಯಿಗೆ ಬರೀ ಮುರಿಯುವುದಷ್ಟೆ ಗೊತ್ತು.
ದೊರೆ, ಸಾವಧಾನ
ನೀನು ಕಂಕುಳಲ್ಲಿ ಅವುಚಿ ತಂದ ಮೊಸಳೆ ಮರಿಯ ಕಥೆ
ನಮಗೆ ಗೊತ್ತಿದೆ.
ನೀನು ಮಾರುತಿದ್ದ ಚಹಾ ಕುಡಿಯುತ್ತ ಮಾವಿನ ಹಣ್ಣು ಹೇಗೆ ತಿನ್ನಬೇಕೆಂದು
ಹಂತ ಹಂತ ವಿವರಿಸುತ್ತಾ
ವಿರುಷ್ಕಾ ಮಗುವಿಗೆ ಹೆಸರು ಹುಡುಕಿ ಮುಗಿದ ಮೇಲೆ;
ಬಾ; ನೀನು ನಮ್ಮ ನೆಮ್ಮದಿಗೆಡಿಸಿ ನಿದ್ದೆ ಕಸಿದ
ಸಾವಿರಾರು ರಾತ್ರಿಗಳ ಕಥೆ ಹೇಳು.
– ಚೇತನಾ ತೀರ್ಥಹಳ್ಳಿ