ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತವಲ್ಲ:; 32 ಆರೋಪಿಗಳಿಗೂ ಕ್ಲೀನ್ ಚಿಟ್

ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವನಿಯೋಜಿತವಲ್ಲ, ಆಕಸ್ಮಿಕ ಎಂದು ಅಭಿಪ್ರಾಯ ಪಟ್ಟಿರುವ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ, ಎಲ್ಲಾ 32 ಆರೋಪಿಗಳಿಗೂ
ಕ್ಲೀನ್ ಚಿಟ್ ನೀಡಿ ಖುಲಾಸೆಗೊಳಿಸಿದೆ.
ಬಾಬ್ರಿ ಮಸೀದಿ ಕಟ್ಟಡವನ್ನು 1992ರಲ್ಲಿ ಕರಸೇವಕರು ಕೆಡವಿಹಾಕಿದ ಘಟನೆ ಸಂಬಂಧ ಬುಧವಾರ ನ್ಯಾಯಾಲಯ ತೀರ್ಪು ನೀಡಿದೆ. 28 ವರ್ಷಗಳ ಈ ಹಳೆಯ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ಬಾಬರಿ ಮಸೀದಿ ಧ್ವಂಸ ಮಾಡಿದ್ದು ಪೂರ್ವನಿಯೋಜಿತ ಎಂದು ಅನಿಸುವುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಲ್ಲಾ 32 ಆರೋಪಿಗಳನ್ನ ಖುಲಾಸೆಗೊಳಿಸಿ ಲಕ್ನೋ ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠ ಇಂದು 2 ಸಾವಿರ ಪುಟಗಳ ತೀರ್ಪನ್ನು ಪ್ರಕಟಿಸಿದೆ.

ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಜರಂಗ ದಳ ಸಂಸ್ಥಾಪಕ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ಈ ಪ್ರಕರಣದಲ್ಲಿದ್ದಾರೆ. ಇವರೆಲ್ಲರೂ ಇವತ್ತಿನ ಕೋರ್ಟ್ ಕಲಾಪಕ್ಕೆ ಹಾಜರಾಗಬೇಕಿತ್ತು. ವಯಸ್ಸು ಮತ್ತು ಕೋವಿಡ್ ಕಾರಣಕ್ಕೆ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ನೃತ್ಯಗೋಪಾಲ್ ದಾಸ್ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿತ್ತು.

ಸೆಪ್ಟೆಂಬರ್ 1ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಇವೆಲ್ಲವೂ 1992ರ ಡಿಸೆಂಬರ್ 6ರಂದು ಕರಸೇವಕರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳಾಗಿವೆ.

ಒಂದು ವೇಳೆ ಪ್ರಕರಣದಲ್ಲಿ ದೋಷಿಗಳೆಂದು ಇವತ್ತು ತೀರ್ಪಾಗಿದ್ದರೆ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ, ಮಹಂತ ನೃತ್ಯ ಗೋಪಾಲದಾಸ್, ಚಂಪತ್ ರಾಯ್ ಬನ್ಸಾಲ್, ರಾಮ್ ವಿಲಾಸ್ ವೇದಾಂತಿ, ಧರ್ಮದಾಸ್ ಮತ್ತು ಸತೀಶ್ ಪ್ರಧಾನ್ ಅವರಿಗೆ ಗರಿಷ್ಠ 5 ವರ್ಷದವರೆಗೆ ಶಿಕ್ಷೆ ನೀಡುವ ಸಾಧ್ಯತೆ ಇತ್ತು.

ಕಲ್ಯಾಣ್ ಸಿಂಗ್, ಸಾಕ್ಷಿ ಮಹಾರಾಜ್, ಅಂದಿನ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್.ಎನ್. ಶ್ರೀವಾಸ್ತವ ಅವರಿಗೆ 3 ವರ್ಷದವರೆಗೂ ಶಿಕ್ಷೆಯಾಗುವ ಸಾಧ್ಯತೆ ಇತ್ತು.

ಪ್ರಕರಣದ ಹಿನ್ನೆಲೆ:

ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ಕಾಲಾನಂತರ ಅಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಈ ವಿಚಾರದಲ್ಲಿ ಆಂದೋಲನ ಶುರುಮಾಡಿತು. ಇದಾದ ಬಳಿಕ ವ್ಯಾಜ್ಯ ನಾಯಾಲಯದ ಮೆಟ್ಟಿಲೇರಿತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ‘ಕರಸೇವಕರೆಂಬ’ ಹಿಂದು ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಕೆಡವಿದರು.

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಮತ್ತಿತರ 32 ಮಂದಿ ಸೇರಿಕೊಂಡು ಸಂಚುರೂಪಿಸಿ ಭೂವಿವಾದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಕೆಡವಿದ್ದಾರೆ ಎಂದು ದೂರು ದಾಖಲಿಸಲಾಯಿತು.

ಸೆಷನ್ ಕೋರ್ಟಿನಿಂದ ಸಿಬಿಐ ವಿಶೇಷ ನ್ಯಾಯಾಲಯದವರೆಗೆ ವಿಚಾರಣೆ ನಡೆದಿದೆ. ಇದೀಗ ಸಿಬಿಐ ವಿಶೇಷ ನ್ಯಾಯಲಯ ಅಂತಿಮ ತೀರ್ಪು ಪ್ರಕಟಿಸಿದೆ. ತೀರ್ಪು ಪ್ರಕಟದ ಹಿನ್ನೆಲೆಯಲ್ಲಿ ‌ಅಯೋಧ್ಯೆಯೂ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್​​ ಜಾರಿಗೊಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *