ಜಮೀನ್ದಾರಿ ಪದ್ಧತಿ ಮುನ್ನಲೆಗೆ ಬರುವಂತೆ ಮಾಡಿದೆ: ಸಿದ್ದರಾಮಯ್ಯ ಆರೋಪ

  • ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ

ಬೆಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿ ಆಳುತ್ತಿರುವ ಬಿಜೆಪಿ ಸರ್ಕಾರಗಳು ಸುಗ್ರೀವಾಜ್ಞೆ ಹೊರಡಿಸಿರುವಂತೆ ಕಾಯ್ದೆಗಳು ಜಾರಿಗೆ ಬಂದರೆ ದೇಶದಲ್ಲಿ  ಮತ್ತೆ ಜಮೀನ್ದಾರಿ ಪದ್ಧತಿ ಜಾರಿಗೆ ಬರುತ್ತದೆ ಎಂದು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿ  ಮಾತನಾಡಿದ ಅವರು, “ರೈತರು ಮಾತ್ರ ಭೂಮಿ ಕೊಳ್ಳಬಹುದು ಎಂಬ ಕಾನೂನು 1974ರಿಂದ ಜಾರಿಗೆ ಬಂದಿತು. ಭೂಮಿ ಕೊಳ್ಳುವ ಮೀತಿಯನ್ನೂ ನಿರ್ಧರಿಸಲಾಗಿತ್ತು. ಆದರೆ ಈಗಿನ ಸರ್ಕಾರ ಈ ಎರಡನ್ನೂ ತೆಗೆದುಹಾಕಿ, ಜಮೀನ್ದಾರಿ ಪದ್ಧತಿ ಮತ್ತೆ ಮುನ್ನೆಲೆಗೆ ಬರುವಂತೆ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಳುವವನೇ ಭೂಮಿಯ ಒಡೆಯ ಎಂದು ದೇವರಾಜ ಅರಸು ಕಾಲದಲ್ಲಿ ಕಾನೂನು ತರಲಾಯಿತು. ಆದರೆ ಈಗ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ಕಾನೂನು ತರಲು ಹೊರಟಿದ್ದಾರೆ. ಇದನ್ನು ರೈತರ ಮಕ್ಕಳಾದ ನಾವು ಒಪ್ಪಲು ಸಾಧ್ಯವಿಲ್ಲ ಎಂದು  ಸಿದ್ದರಾಮಯ್ಯ  ಪ್ರಕಟಿಸಿದರು.

ಹಿಂದೆ ಕೃಷಿ ವಲಯದಲ್ಲಿ ಆದಾಯ ಹೆಚ್ಚಾಗಿತ್ತು. ಕೈಗಾರಿಕಾ ವಲಯ ಮತ್ತು ಸೇವಾ ವಲಯಗಳ ಪಾಲು ಕಡಿಮೆಯಿತ್ತು. ಆದರೆ ಬರುಬರುತ್ತಾ ಕೃಷಿ ಆದಾಯ ಕಡಿಮೆಯಾಗಿ, ಕೈಗಾರಿಕಾ ಮತ್ತು ಸೇವಾ ವಲಯದ ಆದಾಯ ಹೆಚ್ಚಾಯಿತು. ಆದರೆ ಇಂದು ಎಲ್ಲದರ ಆದಾಯವೂ ಕಡಿಮೆಯಾಗಿದೆ ಇದಕ್ಕೆಲ್ಲ ಮೋದಿ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಣ್ಣ ರೈತರು ತಮ್ಮ ಜಮೀನನ್ನು ಮಾರಿ, ಅದೇ ಜಮೀನಿನಲ್ಲಿ ಈಗ ಕೂಲಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಗಳು ನಿರ್ಮಾಣ ಆಗುವುದನ್ನು ತಡೆಯಬೇಕು. ಹಾಗಾಗಿ ಭೂಮಿಗಾಗಿನ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆಯೆಂದು ಅವರು ಘೋಷಿಸಿದರು.

ನರೇಂದ್ರಮೋದಿಯವರ ಆಡಳಿತದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಮರ ನಡೆಯುತ್ತಿದೆ. ನಮ್ಮ ಧ್ವನಿಯನ್ನು ದಮನಿಸಲು ಮೋದಿ ಸರ್ಕಾರ ಮುಂದಾಗಿದೆ. ರಾಜ್ಯಸಭೆಯ ಸದಸ್ಯರನ್ನು ಅಮಾನತುಗೊಳಿಸಿ ಮಸೂದೆ ಪಾಸು ಮಾಡುವ ಅಗತ್ಯವೇನಿತ್ತು? -ಸಿದ್ದರಾಮಯ್ಯ

ರಾಜ್ಯದ ವಿಧಾನಪರಿಷತ್ತಿನಲ್ಲಿ ಭೂಮಿ ಕಿತ್ತುಕೊಳ್ಳುವ ಈ ಮಸೂದೆ ಅಂಗೀಕಾರವಾಗಲು ಬಿಡಬಾರದು. ಮಂಡನೆ ಮಾಡಲೂ ಬಿಡಬಾರದು. ಅಲ್ಲಿ ಬಿಜೆಪಿಗೆ ಬಹುಮತವಿಲ್ಲ. ಹಾಗಾಗಿ ಜೆಡಿಎಸ್ ಸದಸ್ಯರು ಮತ್ತು ನಮ್ಮ ಪಕ್ಷದ ಸದಸ್ಯರೂ ಇದನ್ನು ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.

ಭೂಮಿಯ ಹಕ್ಕು ರೈತರದ್ದು .ಭೂಮಿಯ ಹಕ್ಕು ಕಾರ್ಮಿಕರದ್ದು, ದಲಿತರದ್ದು, ಬಡವರದ್ದು. ಯಾವತ್ತಿಗೂ ಭೂಮಿಯ ಹಕ್ಕನ್ನು ಬಿಟ್ಟುಕೊಡಬಾರದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Donate Janashakthi Media

Leave a Reply

Your email address will not be published. Required fields are marked *