ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಂಗ್ರೆಸ್ ನಿಲುವೇನು ? ಬರಗೂರು ರಾಮಚಂದ್ರಪ್ಪ ಬಹಿರಂಗ ಪತ್ರ

ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಕಟಿಸಿದ್ದಲ್ಲದೆ ಅದರ ಸಮರ್ಥನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಶಿಕ್ಷಣಾಸಕ್ತರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಕೆಲವು ಕಾರ್ಯಕ್ರಮಗಳಲ್ಲಿ ಪೂರ್ಣ ಪ್ರಶಂಸೆ ಪ್ರಕಟವಾಗಿದ್ದರೆ, ಇನ್ನು ಕೆಲವಲ್ಲಿ ಅನೇಕ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಆದರೆ ರಾಜ್ಯದ ಅಧಿಕೃತ ವಿರೋಧ ಪಕ್ಷ ಮಾತ್ರ ಮೌನವಾಗಿದೆ! ಈ ಮೌನವು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಪೂರಕವಲ್ಲ ಎಂದು ಬಂಡಾಯಸಾಹಿತಿ ಬರಗೂರು ರಾಮಚಂದ್ರಪ್ಪರವರು ಬಹಿರಂಗ ಪತ್ರ ಬರೆಯುವುದರ ಮೂಲಕ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿದ್ದಾರೆ.

ಪತ್ರದ ಸಾರಾಂಶ ಹೀಗಿದೆ.

ಬಹುಮುಖ್ಯವಾಗಿ, ಶಿಕ್ಷಣವು ಸಂವಿಧಾನದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಂಬಂಧಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇತರೆ ಅಂಶಗಳ ಜೊತೆಗೆ ಒಕ್ಕೂಟ ವ್ಯವಸ್ಥೆಯ ನೆಲಯಲ್ಲೂ ಒರೆಗಲ್ಲಿಗೆ ಹಚ್ಚಬೇಕಾಗಿದೆ. ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ ಮತ್ತು ಸ್ವಾಭಿಮಾನದ ಪ್ರಶ್ನೆಯೂ ಇದರಲ್ಲಿ ಅಡಗಿದೆ. ಆದ್ದರಿಂದ ರಾಜ್ಯದ ಅಧಿಕೃತ ವಿರೋಧ ಪಕ್ಷದ ನಿಲುವೇನು ಎಂದು ಪ್ರಶ್ನಿಸಬೇಕಾಗಿದೆ. ಕಾಂಗ್ರೆಸ್ ಪಕ್ಷವು ಇತರೆ ಕೆಲವು ವಿಷಯಗಳ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದೆ. ಆದರೆ ಶಿಕ್ಷಣ ಮತ್ತು ಸಂಸ್ಕೃತಿ ಸಂಬಂಧಿ ವಿಷಯಗಳಲ್ಲಿ ತನ್ನ ‘ಪಕ್ಷಪರಂಪರೆ’ಗೆ ಅನುಗುಣವಾಗಿ ಉಪೇಕ್ಷೆ ತೋರುತ್ತಿದೆಯೆಂದು ವಿಷಾದದಿಂದ ಹೇಳಬೇಕಾಗಿದೆ. ವಿರೋಧ ಪಕ್ಷಗಳಲ್ಲಿ ಎಡಪಕ್ಷಗಳು ಮಾತ್ರ ಶಿಕ್ಷಣ ಮತ್ತು
ಸಂಸ್ಕೃತಿ ವಿಷಯಗಳಲ್ಲಿ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವನ್ನು ಪ್ರಕಟಿಸುತ್ತ ಬಂದಿವೆ.

ಇನ್ನು, ಬಿ.ಜೆ.ಪಿಗೆ ಯಾವಾಗಲೂ ಶಿಕ್ಷಣ ಮತ್ತು ಸಂಸ್ಕೃತಿ ವಿಷಯಗಳು ಆದ್ಯತೆಯಾಗಿದ್ದು ತನ್ನ ಕಾರ್ಯಸೂಚಿಯನ್ನು ಅಳವಡಿಸಿ, ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿರುತ್ತದೆ. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಈಗಲಾದರೂ ಶಿಕ್ಷಣ ಮತ್ತು ಸಂಸ್ಕೃತಿ ವಿಷಯಗಳಿಗೆ ಆದ್ಯತೆ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ನೀತಿಯ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು. ಈ ನೀತಿಯನ್ನು ಪೂರ್ಣ ಒಪ್ಪುವುದು ಅಥವಾ ಪೂರ್ಣ ಒಪ್ಪದೆ ಇರುವುದು ಅಥವಾ ಕೆಲವಂಶ ಒಪ್ಪಿ ಮರು ಪರಿಶೀಲನೆಗೆ ಒತ್ತಾಯಿಸುವುದು – ಹೀಗೆ ಯಾವುದಾದರೊಂದು ನಿಲುವಿಗೆ ಬರಬೇಕು. ಇದೊಂದು ಪ್ರಮುಖ ಪ್ರಜಾಸತ್ತಾತ್ಮಕ ವಿಷಯವೆಂಬ ನೆಲೆಯಲ್ಲಿ ನಾನು ಒತ್ತಾಯ ಪೂರ್ವಕವಾಗಿ ವಿನಂತಿಸುತ್ತಿರುವುದಾಗಿ ಬರಗೂರು ರಾಮಚಂದ್ರಪ್ಪನವರು ಪತ್ರ ಮುಖೆನ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *