- ಬಿಬಿಎಂಪಿವಾರ್ಡ್ ಮೀಸಲಾತಿ ಬಿಜೆಪಿಯ ಸಂಚು ಬಯಲು
ರಾಜ್ಯ ಸರ್ಕಾರವು ಮುಂಬರುವ ಬಿಬಿಎಂಪಿ ಚುನಾವಣೆಗಳಿಗೆ ನಿಗದಿ ಮಾಡಿರುವ ವಾರ್ಡ್ ಮೀಸಲಾತಿಯು ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಬಿಜೆಪಿಯ ಸಂಚಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.
ಬಿಬಿಎಂಪಿಯಲ್ಲಿನ ಬಿಜೆಪಿ ಆಡಳಿತಾವಧಿಯ ದುರಾಡಳಿತ ಮತ್ತು ಕೇಂದ್ರ ರಾಜ್ಯ ಸರ್ಕಾರಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಜನವಿರೋಧಿ ನೀತಿಗಳು, ಕೋವಿಡ್-19 ನಿಯಂತ್ರಣ ಮತ್ತು ಲಾಕ್ಡೌನ್ ಪರಿಹಾರ ಒದಗಿಸುವಲ್ಲಿನ ವೈಫಲ್ಯದಿಂದಾಗಿ ಬಿಜೆಪಿಯು ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ. ಹಾಗಾಗಿ ಒಂದಲ್ಲ ಒಂದು ಕುಂಟು ನೆಪ ಹೇಳುತ್ತಾ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಮಾತ್ರವಲ್ಲದೆ ಏನಾದರೂ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಅಧಿಕಾರವನ್ನು ಮತ್ತೆ ಪಡೆಯಬೇಕೆಂಬ ಸಂಚಿನ ಭಾಗವಾಗಿ ಬಿಬಿಎಂಪಿ ವಾರ್ಡ್ ಮೀಸಲಾತಿಗಳನ್ನು ನಿಗದಿಗೊಳಿಸಿದೆ.
ವಾರ್ಡ್ ಪುನರ್ವಿಂಗಡಣೆಯನ್ನು ವೈಜ್ಞಾನಿಕವಾಗಿ ಮಾಡದೆ ತನ್ನ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಏನಾದರೂ ಮಾಡಿ ಹಿಂಬಾಗಿಲಿನಿಂದಾದರೂ ಅಧಿಕಾರ ಹಿಡಿಯಬೇಕೆಂಬ ಹಂಬಲದಿಂದ ವಾರ್ಡ್ ಮೀಸಲಾತಿಗಳನ್ನು ನಿಗದಿಗೊಳಿಸಿದೆ ಎಂದು ಸಿಪಿಐ(ಎಂ) ಕರಡು ಮೀಸಲಾತಿ ಪಟ್ಟಿಯನ್ನು ವಿರೋಧಿಸಿದೆ.
ಇಂತಹ ಸಂಚಿನಿಂದಾಗಿ ವಿರೋಧ ಪಕ್ಷಗಳ ಪ್ರಾತಿನಿದ್ಯ ಹೊಂದಿದ ವಾರ್ಡ್ ಗಳಿಗೆ ಅವರು ಮತ್ತೆ ಸ್ಪರ್ಧಿಸಲು ಸಾಧ್ಯವಾಗದಂತೆ ವಾರ್ಡ್ ಮೀಸಲಾತಿಗಳನ್ನು ನಿಗದಿಗೊಳಿಸಿದೆ. ಅಂತೆಯೇ ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಗೆದ್ದು ಬಂದ ನಂತರ ಆರ್.ಎಸ್.ಎಸ್. ಪ್ರೇರಿತ ಕಾಲಾಳುಗಳನ್ನು ಅಧಿಕಾರಕ್ಕೆ ತರುವ ದುರುದ್ದೇಶದಿಂದ ಬಿಜೆಪಿಯ ಹಲವು ಹಿರಿಯ ಕೌನ್ಸಿಲರ್ ಗಳ ವಾರ್ಡ್ ಗಳಿಗೂ ಪ್ರತಿಕೂಲ ಮೀಸಲಾತಿಗಳನ್ನು ನಿಗದಿಮಾಡಿದೆ. ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾಗಿದ್ದ ಬಿಜೆಪಿಯೇತ್ತರ ಶಾಸಕರ ಹಿಡಿತವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಆ ಮೂಲಕ ಆರ್.ಎಸ್.ಎಸ್. ಹಿತಾಸಕ್ತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅದಕ್ಕೆ ಅನುಕೂಲಕರ ಮೀಸಲಾತಿಯನ್ನು ನಿಗದಿಗೊಳಿಸುವ ಮೂಲಕ ಪ್ರಜಾಪ್ರಭುತ್ವ ಆಶಯಕ್ಕೆ ವ್ಯತಿರಿಕ್ತ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುನ್ನಡೆದಿದೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್.ಉಮೇಶ ಟೀಕಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿಗೆ ವೈಜ್ಞಾನಿಕ ಮಾನದಂಡದ ನೀತಿಯನ್ನು ಪ್ರಕಟಿಸಿ ಅದರ ಆಧಾರಿತ ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಸಿಪಿಐ(ಎಂ) ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ.