– ದಿಲ್ಲಿ ಪೋಲಿಸ್ ಆಯುಕ್ತರಿಗೆ 9 ನಿವೃತ್ತ ಐಪಿಎಸ್ ಅಧಿಕಾರಿಗಳ ಪತ್ರ
ಒಂಭತ್ತು ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿಗಳು, ಈ ವರ್ಷದ ಫೆಬ್ರುವರಿಯಲ್ಲಿ ನಡೆದ ದಿಲ್ಲಿ ಹಿಂಸಾಚಾರದ ಬಗ್ಗೆ ದಿಲ್ಲಿ ಪೋಲೀಸ್ ನಡೆಸಿರುವ ತನಿಖೆ ಹಲವು ರೀತಿಗಳಲ್ಲಿ ದೋಷಪೂರಿತವಾಗಿದೆ ಎಂಬ ಸಂಗತಿಯತ್ತ ದಿಲ್ಲಿ ಪೋಲೀಸ್ ಕಮಿಷನರ್ ಎಸ್.ಎಸ್.ಶ್ರೀವಾಸ್ತವ ಅವರ ಗಮನ ಸೆಳೆಯುತ್ತ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ದಿಲ್ಲಿ ಪೋಲೀಸ್ನ ಈ ತನಿಖೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಲಾನ್ಗಳು ಪಕ್ಷಪಾತದಿಂದಕೂಡಿವೆ, ರಾಜಕೀಯ ಪ್ರೇರಿತವಾಗಿವೆ ಎಂದು ಅಭಿಪ್ರಾಯ ವ್ಯಾಪಕವಾಗಿದೆ. ಇದು ನಿಜಕ್ಕೂ ಭಾರತೀಯ ಪೋಲೀಸ್ನ ಇತಿಹಾಸದಲ್ಲಿ ಒಂದು ಬೇಸರದ ದಿನ, ಇದು ಕಾನೂನು ಮತ್ತು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದು ನಂಬಿರುವ ಎಲ್ಲ ಪೋಲೀಸ್ ಅಧಿಕಾರಿಗಳಿಗೆ, ಸೇವೆಯಲ್ಲಿ ಇರುವವರಿಗೂ, ನಿವೃತ್ತರಿಗೂ ನೋವುಂಟು ಮಾಡುವ ಸಂಗತಿ ಎಂದು ಈ ಐಪಿಎಸ್ ಅಧಿಕಾರಿಗಳು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ದಿಲ್ಲಿಯ ಒಬ್ಬ ವಿಶೇಷ ಪೋಲೀಸ್ ಆಯುಕ್ತರು ಹಿಂದು ಸಮುದಾಯದ ಕೆಲವು ಗಲಭೆಕೋರರನ್ನು ಬಂಧಿಸಿರುವುದಕ್ಕೆ ಆ ಸಮುದಾಯದಲ್ಲಿ ಅಸಂತೃಪ್ತಿ ಉಂಟಾಗಿದೆ ಎನ್ನುತ್ತ ತನಿಖೆಯ ಮೇಲೆ ಪ್ರಭಾವ ಬೀರಿರುವ ಬಗ್ಗೆಯೂ ಈ ಅಧಿಕಾರಿಗಳು ನೋವು ವ್ಯಕ್ತಪಡಿಸಿದ್ದಾರೆ. ಇಂತಹ ನಿಲುವು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರುವ ಗಲಭೆ ಪೀಡಿತ ಕುಟುಂಬಗಳಿಗೆ ನ್ಯಾಯದ ಬಗ್ಗೆ ಸಂದೇಹವನ್ನು ಉಂಟು ಮಾಡುತ್ತದೆ.
“ಬಹಿರಂಗಪಡಿಸಿದ್ದಾರೆ’ ಎನ್ನಲಾದ ಹೇಳಿಕೆಗಳ ಆಧಾರದಲ್ಲಿಯೇ, ಮೂರ್ತ ಸಾಕ್ಷ್ಯಗಳಿಲ್ಲದೆ ತನಿಖೆ ನಡೆಸುವುದು ನ್ಯಾಯಪೂರ್ಣ ತನಿಖೆಯ ಎಲ್ಲ ನೀತಿಗಳನ್ನು ಉಲ್ಲಂಘಿಸುತ್ತದೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗವಹಿಸಿದವರನ್ನು ಆರೋಪಿಗಳಾಗಿಸುವುದು, ಇನ್ನೊಂದೆಡೆಯಲ್ಲಿ ಹಿಂಸಾಚಾರ ಪ್ರಚೋದಿಸಿದವರನ್ನು, ಆಳುವ ಪಕ್ಷಕ್ಕೆ ಸೇರಿದವರನ್ನು ಬಿಟ್ಟು ಬಿಡುವ ತನಿಖೆಗಳು ಜನರು ನ್ಯಾಯ, ಪ್ರಜಾಪ್ರಭುತ್ವ, ಮತ್ತು ಸಂವಿಧಾನದಲ್ಲಿ ನಂಬಿಕೆ ಕಳಕೊಳ್ಳುವಂತೆ ಮಾಡುತ್ತದೆ ಎಂದು ಈ ನಿವೃತ್ತ ಐಪಿಎಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತ ನ್ಯಾಯಯುತವಾದ ಮರುತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತು ವಿವಿಧ ಸೇವೆಗಳಿಗೆ ಸೇರಿದ್ದ ನಿವೃತ್ತ ಅಧಿಕಾರಿಗಳು ರಚಿಸಿಕೊಂಡಿರುವ ‘ಕನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್’( ಸಿಸಿಜಿ-ಸಂವಿಧಾನಿಕ ವರ್ತನೆ ಗುಂಪು)ಗೆ ಸೇರಿರುವ ವೈಎಸ್.ದುಲತ್ (ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಕಾಶ್ಮೀರ ಕುರಿತಂತೆ ವಿಶೇಷ ಅಧಿಕಾರಿಯಾಗಿದ್ದವರು), ಪಿ.ಜಿ.ಜೆ ನಂಬೂತ್ತಿರಿ (ಗುಜರಾತಿನ ನಿವೃತ್ತ ಪೋಲೀಸ್ ಮಹಾನಿರ್ದೇಶಕರು), ಶಫಿ ಆಲಂ (ಮಾಜಿ ಮಹಾನಿರ್ದೇಶಕರು, ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ), ಕೆ.ಸಲೀಂ ಅಲಿ( ಮಾಜಿ ವಿಶೇಷ ನಿರ್ದೇಶಕರು, ಸಿಬಿಐ), ಮೊಹಿಂದರ್ ಪಾಲ್ ಔಲಖ್(ಪಂಜಾಬಿನ ಜೈಲು ಇಲಾಖೆಯ ಮಾಜಿ ಮಹಾನಿರ್ದೇಶಕರು), ಅಲೋಕ್ ಬಿ ಲಾಲ್ (ಉತ್ತರಾಖಂಡದ ಮಾಜಿ ಮಹಾನಿರ್ದೇಶಕರು-ವಿಚಾರಣೆ), ಅಮಿತಾಭ ಮಾಥುರ್(ಮಾಜಿ ವಿಶೇಷ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿಮಂಡಳಿ), ಅವಿನಾಶ ಮೊಹಂತಿ (ಸಿಕ್ಕಿಂನ ಮಾಜಿ ಪೋಲೀಸ್ ಮಹಾನಿರ್ದೇಶಕರು) ಮತ್ತು ಎಕೆ.ಸಮಂತ (ಪಶ್ಚಿಮ ಬಂಗಾಲದ ಮಾಜಿ ಪೋಲಿಸ್ ಮಹಾನರ್ದೇಶಕರು-ಬೇಹುಗಾರಿಕೆ) ಈ ಬಹಿರಂಗಪತ್ರವನ್ನು ಬರೆದ ವರಿಷ್ಟ ಪೋಲೀಸ್ ಅಧಿಕಾರಿಗಳು.
ಯಾವುದೇ ಬುದ್ಧಿಯುಳ್ಳ ರಾಜಕೀಯೇತರ ವ್ಯಕ್ತಿಗೆ
ಬೇಸರವುಂಟು ಮಾಡುವ ಸಂಗತಿ- ಜೂಲಿಯೊ ರಿಬೆರೊ
ಇದಕ್ಕೆ ಮೊದಲು ಇದೇ ಸಿಸಿಜಿ ಗೆ ಸೇರಿರುವ ಖ್ಯಾತ ಪೋಲಿಸ್ ಅಧಿಕಾರಿ ಜೂಲಿಯೊ ರಿಬೆರೊ ಕೂಡ ದಿಲ್ಲಿ ಹಿಂಸಾಚಾರದ ನ್ಯಾಯಯುತ ತನಿಖೆ ನಡೆಸುವಂತೆ ದಿಲ್ಲಿ ಪೋಲಿಸ್ ಕಮಿಷನರ್ ಗೆ ಪತ್ರ ಬರೆದಿದ್ದರು.
ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಹಾಕಿರುವ 753 ಎಫ್ ಐ ಆರ್ ಗಳ ಬಗ್ಗೆ ನ್ಯಾಯಯುತ ತನಿಖೆ ನಡೆಯುವಂತೆ ಖಾತ್ರಿಪಡಿಸಬೇಕು ಎಂದೂ ಅವರು ಈ ಪತ್ರದಲ್ಲಿ ಆಗ್ರಹಿಸಿದ್ದರು.
ದಿಲ್ಲಿ ಪೋಲೀಸ್ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಂಡಿದೆ, ಆದರೆ ಈಶಾನ್ಯ ದಿಲ್ಲಿಯಲ್ಲಿ ಗಲಭೆಗಳನ್ನು ಪ್ರಚೋದಿಸಿದ ದ್ವೇಷ ಭಾಷಣಗಳನ್ನು ಮಾಡಿದವರ ವಿರುದ್ಧ ದಂಡನೀಯ ಅಪರಾಧಗಳನ್ನು ದಾಖಲಿಸಿಕೊಳ್ಳಲು ಉದ್ದೇಶಪೂರ್ವಕವಾಗಿಯೇ ವಿಫಲವಾಗಿದೆ. ಕಪಿಲ್ ಮಿಶ್ರ, ಅನುರಾಗ್ ಠಾಕುರ್ ಮತ್ತು ಪರ್ವೇಶ್ ವರ್ಮರವರನ್ನು ನ್ಯಾಯಾಲಯದ ಮುಂದೆ ಏಕೆ ನಿಲ್ಲಿಸಿಲ್ಲ, ಆದರೆ ಅತ್ಯಂತ ನೋವುಂಡಿರುವ ಮುಸ್ಲಿಂ ಮಹಿಳೆಯರನ್ನು, ಧರ್ಮದ ಹೆಸರಲ್ಲಿ ತಾರತಮ್ಯ ಮಾಡುವುದರ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರನ್ನು ತಿಂಗಳಾನುಗಟ್ಟಲೆ ಜೈಲುಗಳಲ್ಲಿ ಇಟ್ಟಿರುವುದು ಏಕೆ ಎಂಬುದು ಯಾವುದೇ ಬುದ್ಧಿಯುಳ್ಳ ರಾಜಕೀಯೇತರ ವ್ಯಕ್ತಿಗೆ ಬೇಸರವುಂಟು ಮಾಡುವ ಸಂಗತಿ ಎಂದು ಜೂಲಿಯೊ ರಿಬೆರೊ ನೇರವಾಗಿಯೇ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“ಹರ್ಷ್ ಮಂದರ್ ಮತ್ತು ಪ್ರೊ. ಅಪೂರ್ವಾನಂದ ರಂತಹ ನಿಜವಾದ ದೇಶಪ್ರೇಮಿಗಳನ್ನು ಕ್ರಿಮಿನಲ್ ಕೇಸ್ಗಳಲ್ಲಿ ಸಿಲುಕಿಸುವ ಅಷ್ಟೇನೂ ಸೂಕ್ಷ್ಮವಲ್ಲದ ಪ್ರಯತ್ನ ಮತ್ತೊಂದು ಆತಂಕದ ಸಂಗತಿ…ದಿಲ್ಲಿಯಲ್ಲಿ ನಿಮ್ಮ ನೇತೃತ್ವದ ಅಡಿಯಲ್ಲಿರುವ ಪೋಲೀಸರ ಕ್ರಿಯೆಗಳನ್ನು ಮರುಪರಿಶೀಲಿಸಿ, ಅವರು ಸೇವೆಗೆ ಸೇರುವಾಗ ತೆಗೆದುಕೊಂಡಿರುವ ಪ್ರತಿಜ್ಞೆಗೆ ಬದ್ಧರಾಗಿದ್ದಾರೆಯೇ ಎಂದು ನಿರ್ಧರಿಸಿ” ಎಂದು ರೊಮಾನಿಯ ದೇಶಕ್ಕೆ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿರುವ ಈ ಪ್ರಖ್ಯಾತ ಪೋಲಿಸ್ ವರಿಷ್ಟರು ತಮ್ಮ ಪತ್ರದ ಕೊನೆಯಲ್ಲಿ ಕೋರಿದ್ದಾರೆ.