ವಾಯುಪಡೆಗೆ ರಫೇಲ್‌ ಅಧಿಕೃತ ಸೇರ್ಪಡೆ

ವಾಯುಪಡೆಗೆ ರಫೇಲ್‌ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡುತ್ತಿರುವುದು ಮಹತ್ವದ ಕ್ರಮ: ರಾಜನಾಥ್‌ಸಿಂಗ್‌

 

ಅಂಬಾಲಾ: ಫ್ರಾನ್ಸ್‌ನಿಂದ ತರಲಾಗಿರುವ ಐದು ರಫೇಲ್‌ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆಗೆ ಗುರುವಾರ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು.

ಗಡಿ ವಿಷಯವಾಗಿ ಚೀನಾದೊಂದಿಗೆ ಸಂಘರ್ಷ ಏರ್ಪಟ್ಟಿರುವ ಈ ಸಂದರ್ಭದಲ್ಲಿಯೇ ಇವುಗಳ ಸೇರ್ಪಡೆಯಾಗಿದ್ದು, ಇಲ್ಲಿರುವ ವಾಯುನೆಲೆಯಲ್ಲಿ ಯುದ್ಧವಿಮಾನಗಳ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸರ್ವಧರ್ಮ ಪೂಜೆ ಹಾಗೂ ಜಲಫಿರಂಗಿಗಳಿಂದ ಗೌರವ ಸಮರ್ಪಣೆ ನಂತರ ಈ ಯುದ್ಧವಿಮಾನಗಳ ಸಾಮರ್ಥ್ಯ ಪ್ರದರ್ಶನವೂ ನಡೆಯಿತು.

ವಾಯುಪಡೆಯ 17 ಸ್ಕ್ಯಾಡ್ರನ್‌ಗೆ ಈ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಿದ ಘಳಿಗೆಗೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ, ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜನರಲ್‌ ಬಿಪಿನ್‌ ರಾವತ್‌, ಏರ್‌ ಚೀಫ್‌ ಮಾರ್ಷಲ್‌ ಆರ್‌.ಕೆ.ಎಸ್‌ ಭದೌರಿಯಾ ಹಾಗೂ ಇತರರು ಸಾಕ್ಷಿಯಾದರು.

ರಾಜನಾಥ್‌ ಸಿಂಗ್‌, ಕೇಂದ್ರ ರಕ್ಷಣಾ ಸಚಿವ

ದೇಶೀಯವಾಗಿ ನಿರ್ಮಿಸಲಾಗಿರುವ ಯುದ್ಧವಿಮಾನ ತೇಜಸ್‌ ಹಾಗೂ ಹೆಲಿಕಾಪ್ಟರ್‌ ಸಾರಂಗ್‌ಗಳಿಂದ ಬಾನಂಗಳದಲ್ಲಿ ನಡೆದ ಕಸರತ್ತು ಪ್ರದರ್ಶನ ಗಮನ ಸೆಳೆಯಿತು.

ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳನ್ನು ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಕಂಪನಿ ನಿರ್ಮಿಸಿದ್ದು, ನಿಖರ ದಾಳಿ ಮಾಡುವ ಇವುಗಳ ಸಾಮರ್ಥ್ಯ ಸಾಬೀತಾಗಿದೆ.

 59,000 ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದವಾಗಿ ನಾಲ್ಕು ವರ್ಷಗಳಾಗಿದ್ದರೂ, ಮೊದಲ ಬ್ಯಾಚ್‌ನ ಐದು ಯುದ್ಧವಿಮಾನಗಳನ್ನು ಕಳೆದ ಜನವರಿಯಲ್ಲಿ ಭಾರತಕ್ಕೆ ತರಲಾಗಿತ್ತು. ಎರಡನೇ ಹಂತದಲ್ಲಿ ನಾಲ್ಕು ಅಥವಾ ಐದು ರಫೇಲ್‌ ಯುದ್ಧವಿಮಾನಗಳು ನವೆಂಬರ್‌ನಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ. ಮುಂದಿನ ವರ್ಷದ ಅಂತ್ಯಕ್ಕೆ ಎಲ್ಲಾ ಯುದ್ಧವಿಮಾನಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಮಹತ್ವದ ಕ್ರಮ: ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ವಾಯುಪಡೆಗೆ ರಫೇಲ್‌ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡುತ್ತಿರುವುದು ಮಹತ್ವದ ಕ್ರಮವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಹೇಳಿದರು.

ವಾಯುನೆಲೆಯಲ್ಲಿ ರಫೇಲ್‌ ಯುದ್ಧವಿಮಾನಗಳನ್ನು ವಾಯಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರದ ಭದ್ರತೆ, ದೇಶದ ಗಡಿಯ ರಕ್ಷಣೆಗೆ ಭಾರತ ಬದ್ಧ. ಹೀಗಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ದುಸ್ಸಾಹಸ ಮಾಡುತ್ತಿರುವವರಿಗೆ ಇದು ಪ್ರಬಲ ಸಂದೇಶವೂ ಹೌದು’ ಎಂದು ಹೇಳಿದರು. ಮಾಸ್ಕೊದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರೊಡನೆ ಮಾತುಕತೆ ನಡೆಸಲಿದ್ದಾರೆ. ಇಂಥ ಸಂದರ್ಭದಲ್ಲಿಯೇ ರಾಜನಾಥ್‌ ಸಿಂಗ್‌ ಅವರು ಕಟುವಾದ ಸಂದೇಶ ರವಾನಿಸಿದ್ದು ಸಹ ಗಮನಾರ್ಹ. ತನ್ನ ಭೂಪ್ರದೇಶದ ಗಡಿಯನ್ನು ರಕ್ಷಣೆ ಮಾಡುವುದಕ್ಕಷ್ಟೇ ಭಾರತದ ಜವಾಬ್ದಾರಿ ಸೀಮಿತವಾಗಿಲ್ಲ. ಇಂಡೊ–ಪೆಸಿಫಿಕ್‌ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಹಾಗೂ ರಕ್ಷಣೆ ಸಹ ಭಾರತ ಹೊಣೆಗಾರಿಕೆಯಾಗಿದೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *