ಬೇರೆ ದೇಶಗಳ ಒಂದಿಂಚು ಪ್ರದೇಶವನ್ನೂ ಆಕ್ರಮಿಸಿಲ್ಲ: ಚೀನಾ

 

ಬಹುಶಃ ಸ್ವಲ್ಪ ಸಂವಹನ ಸಮಸ್ಯೆಗಳಿವೆ: ಹುವಾ ಚುನೈಂಗ್

ಬೀಜಿಂಗ್‌: ಬೇರೆ ದೇಶಗಳ ಒಂದಿಂಚು ಪ್ರದೇಶವನ್ನೂ ಚೀನಾ ಆಕ್ರಮಿಸಿಲ್ಲ. ಸೇನೆ ಎಂದಿಗೂ ಗಡಿ ದಾಟಿ ಮುಂದೆ ಹೋಗಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನೈಂಗ್‌ ಮಂಗಳವಾರ ಹೇಳಿದ್ದಾರೆ.

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ಬಳಿ ಯಥಾಸ್ಥಿತಿ ಉಲ್ಲಂಘಿಸುವ ಚೀನಾ ಸೇನೆಯ ಪ್ರಯತ್ನವನ್ನು ಭಾರತದ ಯೋಧರು ಹಿಮ್ಮೆಟ್ಟಿಸಿದ ವಿಷಯ ಸೋಮವಾರ ಬಹಿರಂಗವಾಗಿತ್ತು. ಇದೇ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿರುವ ಚುನೈಂಗ್‌, ‘ಚೀನಾ ಎಂದಿಗೂ ಯಾವುದೇ ಯುದ್ಧ ಅಥವಾ ಸಂಘರ್ಷವನ್ನು ಪ್ರಚೋದಿಸಿಲ್ಲ. ಇತರ ದೇಶದ ಭೂಪ್ರದೇಶದ ಒಂದು ಇಂಚನ್ನೂ ಆಕ್ರಮಿಸಿಕೊಂಡಿಲ್ಲ. ಚೀನಾದ ಸೇನೆ ಎಂದಿಗೂ ಗಡಿ ದಾಟಿಲ್ಲ. ಬಹುಶಃ ಸ್ವಲ್ಪ ಸಂವಹನ ಸಮಸ್ಯೆಗಳಿವೆ,’ ಎಂದು ಹುವಾ ಚುನೈಂಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಎರಡೂ ಕಡೆಯವರು ಸತ್ಯದ ಕಡೆ ನಿಲ್ಲಬೇಕು. ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಸದ್ಭಾವನೆ ಹೊಂದಿರಬೇಕು. ಗಡಿಯಲ್ಲಿ ಶಾಂತಿ ಕಾಪಾಡಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ,’ ಎಂದೂ ಅವರು ಹೇಳಿದ್ದಾರೆ.

ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣವ್‌ ಮುಖರ್ಜಿ ಅವರ ನಿಧನಕ್ಕೆ ಇದೇ ವೇಳೆ ಚುನೈಂಗ್‌ ಸಂತಾಪ ಸೂಚಿಸಿದರು. ‘ಪ್ರಣಬ್ ಮುಖರ್ಜಿ ಭಾರತದ ಅನುಭವಿ ರಾಜಕಾರಣಿ. ತಮ್ಮ 50 ವರ್ಷಗಳ ರಾಜಕೀಯದಲ್ಲಿ ಅವರು ಚೀನಾ-ಭಾರತ ಸಂಬಂಧಗಳಿಗೆ ಸಕಾರಾತ್ಮಕ ಕೊಡುಗೆ ನೀಡಿದ್ದಾರೆ. ಇದು ಚೀನಾ-ಭಾರತ ಸ್ನೇಹಕ್ಕೆ ಭಾರತಕ್ಕೆ ಭಾರಿ ನಷ್ಟವಾಗಿದೆ. ಅವರ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ,’ ಎಂದು ತಿಳಿಸಿದರು.

ನಾಲ್ಕು ತಿಂಗಳಿಂದ ಪಾಂಗಾಂಗ್‌ ಸರೋವರದ ಉತ್ತರದ ದಡದಲ್ಲಿ ಬೀಡುಬಿಟ್ಟಿದ್ದ ಚೀನಾ ಸೇನೆ ಮೊದಲ ಬಾರಿಗೆ ದಕ್ಷಿಣ ದಡದತ್ತ ಬಂದಿದ್ದು, ಸಮೀಪದ ಪರ್ವತವೊಂದನ್ನು ವಶಪಡಿಸಿಕೊಳ್ಳುವ ವಿಫಲ ಯತ್ನ ನಡೆಸಿದೆ. ಗಡಿ ಪ್ರದೇಶದ ಪರ್ವತ ಶ್ರೇಣಿಯಲ್ಲಿ ಚೀನಾ ಯೋಧರ ಚಲನವಲನಗಳು ಗಮನಕ್ಕೆ ಬಂದ ತಕ್ಷಣ ಭಾರತೀಯ ಯೋಧರು ಕೂಡ ಆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದಾರೆ ಎಂದು ಭಾರತದ ಸೇನೆಯ ವಕ್ತಾರ ಕರ್ನಲ್‌ ಅಮನ್‌ ಆನಂದ್‌ ಸೋಮವಾರ ತಿಳಿಸಿದ್ದರು.

ಲೆಹ್‌ ಪರ್ವತ ಶ್ರೇಣಿಗಳ ಮೇಲೆ ಭಾರತದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿವೆ. ಚೀನಾ ಯೋಧರ ಅತಿಕ್ರಮಣ ತಡೆಯಲು ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಎರಡೂ ಕಡೆಯ ಯೋಧರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಸದ್ಯಕ್ಕೆ ಪರಿಸ್ಥಿತಿ ಸಂಘರ್ಷದ ಮಟ್ಟವನ್ನು ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಚುಶುಲ್‌ ಎಂಬಲ್ಲಿ ಎರಡೂ ಕಡೆಯ ಬ್ರಿಗೇಡ್‌ ಕಮಾಂಡರ್‌ ಹಂತದ ಸಭೆ‌ ಪ್ರಗತಿಯಲ್ಲಿದೆ. ಭಾರತದ ಸಾರ್ವಭೌಮತೆ ಮತ್ತು ಗಡಿ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಭಾರತೀಯ ಸೇನೆ ಪ್ರತಿಪಾದಿಸಿದೆ.

Donate Janashakthi Media

Leave a Reply

Your email address will not be published. Required fields are marked *