ಪೊಲೀಸ್ ನಿಯಂತ್ರಣದಲ್ಲಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ

  • ಪ್ರವಾದಿ ಮಹಮದ್‌ರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ನಡೆದಿದ್ದ ಪ್ರತಿಭಟನೆ
  • ಪ್ರತಿಭಟನೆ ವೇಳೆ ಕಿಡಿಗೇಡಿಗಳಿಂದ ಗಲಭೆ
  • ಗಲಭೆ ನಿಯಂತ್ರಿಸಲು ಪೊಲೀಸರಿಂದ ಗೋಲಿಬಾರ್‌
  • ಗುಂಡೇಟಿಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿಕೆ

 

ಬೆಂಗಳೂರು: ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮಹಮದ್‌ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆ ಗಲಭೆಯಾಗಿ ಪರಿವರ್ತಿತವಾಗಿದ್ದ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರ  ಪ್ರದೇಶ ಪೊಲೀಸರ ನಿಯಂತ್ರಣದಲ್ಲಿ ಇದೆ. ಪ್ರದೇಶದ ರಸ್ತೆಯುದ್ದಕ್ಕೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಇದೇ ವೇಳೆ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಆರೋಪಿ ನವೀನ್‌ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಹಾಗೂ ಗಲಭೆಗೆ ಕಾರಣವಾದವರೆಂದು ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಿಡಿಗೇಡಿಗಳು ಸುಟ್ಟು ಹಾಕಿರುವ ವಾಹನಗಳನ್ನು ಪೊಲೀಸರು ರಸ್ತೆ ಬದಿಯಲ್ಲಿ ಹಾಕಿದ್ದಾರೆ. ಇಡೀ ಪ್ರದೇಶದಲ್ಲಿ ವಾಹನಗಳ ಓಡಾಟ ಮಿತಿಗೊಳಿಸಲಾಗಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಅಧಿಕಾರಿಗಳು ಕೆ.ಜಿ.ಹಳ್ಳಿ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದಾರೆ.  ಗಲಭೆ ಸೃಷ್ಟಿಸಿದ ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ.

ಗುಂಡೇಟಿಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿಕೆ

ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ನಡೆಸಿದ ಗಲಭೆ ವೇಳೆ ಪೊಲೀಸರು ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಮೂಲಕ ಗುಂಡೇಟಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ.

ಮಂಗಳವಾರ ತಡರಾತ್ರಿ ಗಲಭೆ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಮೃತಪಟ್ಟವರನ್ನು ಡಿ.ಜೆ.ಹಳ್ಳಿ ನಿವಾಸಿಗಳಾದ ಯಾಸೀರ್ (19), ವಾಜಿದ್ (19) ಎಂದು ಗೊತ್ತಾಗಿದೆ. ಇನ್ನೊಬ್ಬ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದು ಆತನ ಹೆಸರು ಗೊತ್ತಾಗಿಲ್ಲ.

ಆರೋಪಿ ನವೀನ್‌ ಬಂಧನ

ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾನೆ ಎನ್ನಲಾದ ಆರೋಪಿ ನವೀನ್‌ನನ್ನು ಪೊಲೀಸರು ಮಂಗಳವಾರ ತಡರಾತ್ರಿಯೇ ಬಂಧಿಸಿದ್ದಾರೆ. ಬಂಧಿತ ಆರೋಪಿ ನವೀನ್, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿಯ ಮಗನೆಂದು ಗೊತ್ತಾಗಿದೆ. ಆತನನ್ನು ಸದ್ಯದಲ್ಲೇ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮಂಗಳವಾರ ಬೆಳಿಗ್ಗೆಯೇ ಆರೋಪಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ. ಅದನ್ನು ನೋಡಿದ್ದ ಜನ, ಠಾಣೆಗೆ ದೂರು ನೀಡಲು ಹೋಗಿದ್ದರು. ಕೆಲವರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ತೆರಳಿದ್ದರು. ಎರಡು ಕಡೆಯೂ ಕೆಲ ಕಿಡಿಗೇಡಿಗಳು, ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು‌. ಆ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿತ್ತು.

ಇದರ ನಡುವೆಯೇ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ನಸುಕಿನಲ್ಲಿ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಕೊರೊನಾ ಪರೀಕ್ಷೆಯನ್ನೂ ಮಾಡಿಸಿದ್ದಾರೆ.

ಗಲಭೆ: ಬಂಧಿತರ ಸಂಖ್ಯೆ 137ಕ್ಕೆ ಏರಿಕೆ

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸಂಬಂಧ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ ಪೊಲೀಸರು, 137 ಮಂದಿಯನ್ನು ಬಂಧಿಸಿದ್ದಾರೆ. ಗಲಭೆ ಸೃಷ್ಟಿಸಿ ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ಪತ್ತೆಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.

ಗಲಭೆ ಸಂಬಂಧ 137 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಹಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೂ ಶೋಧ ಮುಂದುವರಿದಿದೆ’ ಎಂದು ಸಿಸಿಬಿ ಜಂಟಿ‌ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *