ಕೋವಿಡ್ ಬಿಕ್ಕಟ್ಟಿನಲ್ಲಿ ಭ್ರಷ್ಟಾಚಾರ: ಸರ್ಕಾರದಿಂದ 2,000 ಕೋಟಿ ಅವ್ಯವಹಾರ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಲೂಟಿಗೆ ಇಳಿದಿದೆ ಎಂಬ ತಮ್ಮ ಆರೋಪವನ್ನು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಈ ಮೊದಲು ಸಿದ್ದರಾಮಯ್ಯ ಆರೋಪವನ್ನು ಬಲವಾಗಿ ತಳ್ಳಿಹಾಕಿದ್ದ ಸಚಿವರುಗಳಿಗೆ ಇಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ. ದಾಖಲೆಗಳ ಸಮೇತ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಸಿದ್ದರಾಮಯ್ಯ, ತಾವು ಹಿಂದೆ ಆರೋಪಿಸಿದ್ದಕ್ಕಿಂತಲೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದ್ದಾರೆ.

ತಮಗೆ ವಿವಿಧ ಮೂಲಗಳಿಂದ ಕಲೆಹಾಕಿದ ಮಾಹಿತಿ ಮತ್ತು ದಾಖಲೆ ಪ್ರಕಾರ ಬೇರೆ ಬೇರೆ ಇಲಾಖೆಗಳಿಂದ ಕೊರೋನಾಗಾಗಿ ಒಟ್ಟು 4,157 ಕೋಟಿ ರೂ ಖರ್ಚಾಗಿದೆ. ಆದರೆ, ಶ್ರೀರಾಮುಲು ಅವರು 324 ಕೋಟಿ ರೂ ಖರ್ಚಾಗಿದೆ ಎನ್ನುತ್ತಾರೆ. ಅಶ್ವಥ ನಾರಾಯಣ ಅವರು ಬೇರೆ ಲೆಕ್ಕ ಹೇಳುತ್ತಾರೆ. ಇಲ್ಲಿ ಸುಳ್ಳು ಹೇಳುತ್ತಿರೋದು ಯಾರು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇಲ್ಲಿ ಕನಿಷ್ಠ 2 ಸಾವಿರ ಕೋಟಿ ರೂ ಭ್ರಷ್ಟಾಚಾರ ಆಗಿದೆ ಎಂದು ಶಂಕಿಸಿದ್ದಾರೆ.

ಇದೇ ವೇಳೆ, ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎಂದು ಬಲವಾಗಿ ಆರೋಪಿಸಿದ ಸಿದ್ದರಾಮಯ್ಯ ಅದಕ್ಕೆ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.

ಒಂದು ವೆಂಟಿಲೇಟರ್​ಗೆ 4 ಲಕ್ಷ ರೂನಂತೆ ಕೇಂದ್ರ ಸರ್ಕಾರ ಖರೀದಿ ಮಾಡಿದೆ. ತಮಿಳುನಾಡು 4.78 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ಆದರೆ, ಕರ್ನಾಟಕ ಸರ್ಕಾರ 18 ಲಕ್ಷ ರೂಪಾಯಿಯವರೆಗೂ ಹಣ ತೆತ್ತು ವೆಂಟಿಲೇಟರ್​ಗಳನ್ನ ಖರೀದಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರ 2 ಸಾವಿರ ಕೋಟಿ ಹಣ ಖರ್ಚು ಮಾಡಿ 50 ಸಾವಿರ ವೆಂಟಿಲೇಟರ್ಸ್ ಖರೀದಿ ಮಾಡಿದೆ. ಒಂದು ವೆಂಟಿಲೇಟರ್​ಗೆ 4 ಲಕ್ಷ ರೂನಂತೆ ಖರ್ಚು ಮಾಡಿದೆ. ತಮಿಳುನಾಡು ಸರ್ಕಾರ 4.78 ಲಕ್ಷ ರೂನಂತೆ ನೂರು ವೆಂಟಿಲೇಟರ್ ಖರೀದಿಸಿದೆ. ರಾಜ್ಯ ಸರ್ಕಾರ ಮಾರ್ಚ್ 22ರಂದು 5.6 ಲಕ್ಷ ರೂನಂತೆ ವೆಂಟಿಲೇಟರ್ ಖರೀದಿ ಮಾಡಿದೆ. ಅದಾದ ಬಳಿಕ ಮತ್ತೊಂದು ಬಾರಿ 12.32 ಲಕ್ಷ ರೂನಂತೆ ಖರೀದಿ ಮಾಡಿದೆ. ಏಪ್ರಿಲ್ 23ರಂದು 18.23 ಲಕ್ಷದಂತೆ ವೆಂಟಿಲೇಟರ್ ಪರ್ಚೇಸ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿವರ ನೀಡಿದ್ದಾರೆ.

ಇನ್ನು, ಪಿಪಿಇ ಕಿಟ್ ಖರೀದಿ ವಿಚಾರದಲ್ಲೂ ರಾಜ್ಯ ಸರ್ಕಾರ ವ್ಯಾಪಕ ಅವ್ಯವಹಾರ ನಡೆದಿರುವುದಕ್ಕೆ ಸಿದ್ದರಾಮಯ್ಯ ದಾಖಲೆ ನೀಡಿದ್ದಾರೆ. ಒಂದು ಪಿಪಿಇ ಕಿಟ್​ಗೆ ಮಾರುಕಟ್ಟೆಯಲ್ಲಿ 330 ರೂ ಇದೆ. ಆದರೆ, ರಾಜ್ಯ ಸರ್ಕಾರ ಚೀನಾದ ಪಿಪಿಇ ಕಿಟ್​ಗಳನ್ನ 2,117 ರೂ ಕೊಟ್ಟು ಖರೀದಿ ಮಾಡಿದೆ. ಇವೆಲ್ಲವೂ ಕಳಪೆ ಗುಣಮಟ್ಟದ್ದೆಂದು ವೈದ್ಯರೇ ಅಸಮಾಧಾನಗೊಂಡಿದ್ದಾರೆ. ಸರ್ಕಾರ ದುಬಾರಿ ಬೆಲೆ ತೆತ್ತು ಕಳಪೆ ಪಿಪಿಇ ಕಿಟ್ ಖರೀದಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *