ನೋಟು ರದ್ದತಿ ಮತ್ತು ಬ್ಯಾಂಕ್ ಸಾಲಗಳ ಪ್ರಶ್ನೆ

ರೈತ ಕೃಷಿಗೆ ಸಾಲದತ್ತ ಸರಕಾರದ ಗಮನ ಏಕಿಲ್ಲ?

ನೋಟುರದ್ಧತಿಯ ಪರಿಣಾಮವಾಗಿ ಬ್ಯಾಂಕೇತರ-ಹಣಕಾಸು ವಲಯದಲ್ಲಿ ಭರಾಟೆಯ ವಾತಾವರಣ ಉಂಟಾಯಿತು ಎಂಬ ಅಭಿಪ್ರಾಯದ ಸಮರ್ಥನೆಗೆ ಆಧಾರವಿಲ್ಲ. ಮುಂದೆ ಇದೇ ಆರ್ಥಿಕ ಮಂದಗತಿಗೆ ಮತ್ತು ಸುಸ್ತಿಸಾಲಗಳ ಪ್ರಮಾನದ ಏರಿಕೆಗೆ ಕಾರಣವಾಯಿತು ಎನ್ನಲಾಗಿದೆ. ನೋಟು ರದ್ಧತಿ ಉಂಟುಮಾಡಿದ ನಗದು ಹಣದ ಕೊರತೆಯಿಂದಾಗಿ ರೈತರು ತೀವ್ರ ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿದ್ದ ಪರಿಸ್ಥಿತಿಯಲ್ಲಿ ಬ್ಯಾಂಕುಗಳ ಬಳಿ ಅಪಾರ ಹಣವಿದೆ ಎಂಬುದು ಗೊತ್ತಿದ್ದರೂ ಸಹ, ರೈತ ಕೃಷಿಗೆ ಹೆಚ್ಚು ಸಾಲ ಒದಗಿಸುವಂತೆ ಸರ್ಕಾರವು ಬ್ಯಾಂಕುಗಳಿಗೆ ಯಾವ ಸೂಚನೆಯನ್ನೂ ಕೊಡಲಿಲ್ಲವೇಕೆ?

ಚಾಲ್ತಿಯಲ್ಲಿದ್ದ ೫೦೦ ಮತ್ತು ೧,೦೦೦ ರೂಪಾಯಿ ಮುಖ ಬೆಲೆಯ ನೋಟುಗಳನ್ನು ನರೇಂದ್ರ ಮೋದಿ ಸರ್ಕಾರವು ೨೦೧೬ರ ನವೆಂಬರ್ ೮ ರಂದು ರದ್ದು ಮಾಡಿತ್ತು. ಜನರು ರದ್ದಾದ ನೋಟುಗಳಿಗೆ ಬದಲಿ ಹಣ ಪಡೆಯಲು ಅವುಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲೇಬೇಕಿತ್ತು. ಹಾಗಾಗಿ, ಬ್ಯಾಂಕ್‌ಗಳಲ್ಲಿ ಇದ್ದಕ್ಕಿದ್ದಂತೆಯೇ ಠೇವಣಿಗಳು ಅಗಾಧವಾಗಿ ಹೆಚ್ಚಿದವು. ನೋಟು ರದ್ದತಿಯ ಕಾರಣದಿಂದಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದವರಿಗೆ, ಆ ಹಣ ಅವರ ಖಾತೆಯಲ್ಲಿ ಎಷ್ಟು ದಿನ ಇತ್ತೊ ಅಷ್ಟು ದಿನಗಳಿಗೆ ಬಡ್ಡಿ ಕೊಡಲೇಬೇಕಿತ್ತು. ಹಾಗಾಗಿ, ತಮ್ಮ ಬಳಿ ಸಂಗ್ರಹವಾದ ಅಗಾಧ ಪ್ರಮಾಣದ ಠೇವಣಿಗಳನ್ನು ಬ್ಯಾಂಕುಗಳು ತಾತ್ಕಾಲಿಕವಾಗಿ ಹೂಡಿಕೆ ಮಾಡಿ ಸ್ವಲ್ಪವಾದರೂ ಆದಾಯ ಗಳಿಸಲೇಬೇಕಿತ್ತು. ಹಾಗೆ ಮಾಡದಿದ್ದರೆ, ಬ್ಯಾಂಕ್‌ಗಳ ನಷ್ಟ ಹೆಚ್ಚುತ್ತಿತ್ತು. ಆದ್ದರಿಂದ, ಏಕಾಏಕಿಯಾಗಿ ಹೆಚ್ಚಿದ  ಅಗಾಧ ಪ್ರಮಾಣದ ಠೇವಣಿಗಳನ್ನು(ಹಣವನ್ನು) ಬ್ಯಾಂಕ್‌ಗಳು ಯಾವ ರೀತಿಯಲ್ಲಿ ಬಳಕೆಮಾಡಿಕೊಂಡವು ಎಂಬುದು ಬೋಧಪ್ರದವಾಗಿದೆ.

ಈ ಠೇವಣಿಗಳನ್ನು ಬ್ಯಾಂಕ್‌ಗಳು ಯಾವ ರೀತಿಯಲ್ಲಿ ಬಳಕೆಮಾಡಿಕೊಂಡವು ಎಂಬುದರ ಬಗ್ಗೆ, ತೀರ ಇತ್ತೀಚಿನವರೆಗೆ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣ್ಯಂ ಅವರು ತಮ್ಮ ಒಂದು ಅಭಿಪ್ರಾಯವನ್ನು ಇತ್ತೀಚೆಗೆ ಮಂಡಿಸಿದ್ದಾರೆ. ಅವರ ಪ್ರಕಾರ, ಬ್ಯಾಂಕ್‌ಗಳು ಈ ಹಣವನ್ನು ಬ್ಯಾಂಕೇತರ-ಹಣಕಾಸು ಕಂಪೆನಿಗಳಿಗೆ ಸಾಲ ಕೊಟ್ಟಿದ್ದವು. ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಈ ಬ್ಯಾಂಕೇತರ-ಹಣಕಾಸು ಕಂಪೆನಿಗಳು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಕಂಪೆನಿಗಳಿಗೆ ಸಾಲ ಕೊಟ್ಟವು. ಅದರಿಂದಾಗಿ ಬ್ಯಾಂಕೇತರ-ಹಣಕಾಸು ವಲಯದಲ್ಲಿ ಭರಾಟೆಯ ವಾತಾವರಣ ನಿರ್ಮಾಣವಾಯಿತು ಎಂದು ಅರವಿಂದ್ ಸುಬ್ರಮಣ್ಯಂ ಅಭಿಪ್ರಾಯಪಡುತ್ತಾರೆ. ಈ ಬ್ಯಾಂಕೇತರ-ಹಣಕಾಸು ವಲಯವು ಬ್ಯಾಂಕ್‌ಗಳಿಂದ ಎರ್ರಾಬಿರ್ರಿಯಾಗಿ ಸಾಲ ಪಡೆದು ಅದನ್ನು ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳಿಗೂ ಹಿಂದೆ ಮುಂದೆ ನೋಡದೆ ಸಾಲ ಕೊಟ್ಟವು. ತದನಂತರ, ಬ್ಯಾಂಕೇತರ-ಹಣಕಾಸು ವಲಯವು ತಾನು ಕೊಟ್ಟ ಸಾಲವನ್ನು ವಸೂಲು ಮಾಡಲಾಗದ ಮತ್ತು ಅದೇ ಕಾರಣದಿಂದ ತಾನು ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿಯಲ್ಲಿ ಕುಸಿದು ಬಿದ್ದಿದೆ. ಈ ವಲಯದ ಅಧಃಪತನವು ಇಡೀ ಅರ್ಥವ್ಯವಸ್ಥೆಯನ್ನೇ ನಿಧಾನಗತಿಗೆ ಒಳಪಡಿಸಿರುವುದರ ಜೊತೆಗೆ ಬ್ಯಾಂಕ್‌ಗಳನ್ನೂ, ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು, ಅಪಾಯಕ್ಕೆ ತಳ್ಳಿದೆ. ಈ ವಲಯವು ಸಾಲ ತೀರಿಸದೇ ಇರುವುದು, ಬ್ಯಾಂಕ್‌ಗಳ ಎನ್‌ಪಿಎ (ವಸೂಲಾಗದ ಸಾಲಗಳು) ಅಪಾಯಕಾರಿ ಮಟ್ಟದಲ್ಲಿರುವ ಪರಿಸ್ಥಿತಿಯ ಹಿಂದಿರುವ ಒಂದು ಮುಖ್ಯ ಕಾರಣ.

ಆದರೆ ಬ್ಯಾಂಕೇತರ-ಹಣಕಾಸು ವಲಯದಲ್ಲಿ ಭರಾಟೆಯ ವಾತಾವರಣ ಉಂಟಾಯಿತು ಎಂಬ ಈ ಅಭಿಪ್ರಾಯದ ಸಮರ್ಥನೆಗೆ ಆಧಾರವಿಲ್ಲ. ನೋಟು ರದ್ದತಿಯ ಮೂಲಕ ಏಕಾಏಕಿಯಾಗಿ ಸಂಗ್ರಹವಾದ ಅಗಾಧ ಪ್ರಮಾಣದ ಠೇವಣಿಗಳನ್ನು ಬಳಸಿಕೊಂಡು, ಒಂದು ವೇಳೆ, ಬ್ಯಾಂಕ್‌ಗಳು, ವಾಸ್ತವವಾಗಿ, ಬ್ಯಾಂಕೇತರ-ಹಣಕಾಸು ವಲಯದ ಮೂಲಕ ರಿಯಲ್ ಎಸ್ಟೇಟ್ ಮತ್ತಿತರ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಲ ಕೊಟ್ಟಿದ್ದರೆ, ಮತ್ತು, ಸಾಕಷ್ಟು ಸಮಯದ ವರೆಗೆ ಇಂತಹ ಒಂದು ವಿದ್ಯಮಾನ ಜರುಗಿದ್ದರೆ, ಆಗ, ಬ್ಯಾಂಕ್‌ಗಳಲ್ಲಿರುವ ಠೇವಣಿಗಳು ಮತ್ತು ಸಾರ್ವಜನಿಕ ಚಲಾವಣೆಯಲ್ಲಿದ್ದ ನಗದು ಹಣದ ಅನುಪಾತದಲ್ಲಿ ಇಳಿಕೆ ಸುಮಾರು ಸಮಯದವರೆಗೆ  ಇರುತ್ತಿತ್ತು.

ಅನುಪಾತದ ಇಳಿಕೆಯನ್ನು ಹೀಗೆ ವಿವರಿಸಬಹುದು: ರದ್ದುಪಡಿಸಿದ ನೋಟುಗಳಲ್ಲಿ ೧೦೦ರೂ. ಮೌಲ್ಯದ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಜನರು ಬ್ಯಾಂಕಿಗೆ ಹೋದರು ಎಂದು ಇಟ್ಟುಕೊಳ್ಳೋಣ. ಆಗ, ಅವರಿಗೆ ೧೦೦ರೂ. ಮೌಲ್ಯದ ಹೊಸ ನೋಟುಗಳನ್ನು ಕೊಡುತ್ತಿರಲಿಲ್ಲ. ಬದಲಿಗೆ, ಜನರು, ರದ್ದುಪಡಿಸಿದ ನೋಟುಗಳ ಮೌಲ್ಯದ ಒಂದು ದೊಡ್ಡ ಭಾಗವನ್ನು, ಅಂದರೆ ಸುಮಾರು ೮೦ ರೂಗಳನ್ನು ಠೇವಣಿಯಾಗಿ ಇಡಬೇಕಾಗುತ್ತಿತ್ತು. ಠೇವಣಿಯಾಗಿ ಬಂದ ೮೦ ರೂಗಳ ಅಧಾರದ ಮೇಲೆ ರಿಯಲ್ ಎಸ್ಟೇಟ್ ಮತ್ತಿತರ ಚಟುವಟಿಕೆಗಳಿಗೆ ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಸಾಲ ಕೊಡಲಾಗಿದೆ ಎಂದು ಊಹಿಸಿಕೊಳ್ಳಬೇಕಾಗುತ್ತದೆ. ಆದರೆ, ಜನರು ಈ ಠೇವಣಿಯನ್ನು ಒಂದೆರಡು ತಿಂಗಳುಗಳಲ್ಲಿ ಮುರಿದು ನಗದು ರೂಪದಲ್ಲಿ ಹಣ ಪಡೆದ ಕೂಡಲೇ ಬ್ಯಾಂಕಿನ ಠೇವಣಿ ಇಳಿಯುತ್ತದೆ ಮತ್ತು ಸಾರ್ವಜನಿಕ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ ಹೆಚ್ಚುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನೋಟು ರದ್ದತಿಗೆ ಮೊದಲಿದ್ದ ಪರಿಸ್ಥಿತಿಗೆ ಮರಳುತ್ತೇವೆ, ಮತ್ತು, ಹೆಚ್ಚಿನ ಮಟ್ಟದಲ್ಲಿ ಸಾಲ ಕೊಡಲು ಬ್ಯಾಂಕ್‌ಗಳಿಗೆ ಆಸ್ಪದವೇ ಇರುವುದಿಲ್ಲ.

ಆದ್ದರಿಂದ, ರದ್ದುಪಡಿಸಿದ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವುದರ ಬದಲಾಗಿ ಜನರು ಅದೇ ಹಣವನ್ನು ಬ್ಯಾಂಕಿನಲ್ಲಿ ಸ್ವಲ್ಪ ಹೆಚ್ಚು ಅವಧಿಯ ಠೇವಣಿಯಾಗಿ ಇಟ್ಟಿದ್ದ ಸಂದರ್ಭದಲ್ಲಿ ಮಾತ್ರ  ಬ್ಯಾಂಕ್ ಸಾಲಗಳ ವೃದ್ಧಿಯ ಮೂಲಕ ಭರಾಟೆಯ ವಾತಾವರಣ ಉಂಟಾಯಿತು ಎಂದು ಹೇಳಲು ಸಾಧ್ಯವಿತ್ತು. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬ್ಯಾಂಕ್‌ಗಳಲ್ಲಿ ಹೆಚ್ಚು ಹಣ ಅಲ್ಪಾವಧಿಯಲ್ಲದ ಸಮಯದ ಠೇವಣಿಯಾಗಿ ಇಟ್ಟಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಠೇವಣಿಗಳ ಮತ್ತು ಸಾರ್ವಜನಿಕ ಚಲಾವಣೆಯಲ್ಲಿದ್ದ ನಗದು ಹಣದ ಅನುಪಾತವು ಹೆಚ್ಚಿನ ಮಟ್ಟದಲ್ಲಿ ಇರುತ್ತಿತ್ತು.

ವಾಸ್ತವವಾಗಿ ಠೇವಣಿಗಳು ಹೆಚ್ಚಲಿಲ್ಲ. ಬದಲಿಗೆ, ಸಾರ್ವಜನಿಕ ಚಲಾವಣೆಯಲ್ಲಿದ್ದ ನಗದು ಹಣದ ಪ್ರಮಾಣ ಮಾಮೂಲು ಸ್ಥಿತಿಗೆ ಮರಳಿತು. ರದ್ದಾದ ಶೇಕಡಾ ೯೯ಕ್ಕಿಂತಲೂ ಹೆಚ್ಚು ನೋಟುಗಳು ಹೊಸ ನೋಟುಗಳೊಂದಿಗೆ ಬದಲಾವಣೆಯಾದವು. ಇದು, ನೋಟು ರದ್ದತಿಯ ಮೂಲಕ ಕಪ್ಪು ಹಣ ನಿರ್ಮೂಲನೆಗೊಳಿಸುವ ಸರ್ಕಾರದ ಅತಿಯಾದ ಆತ್ಮವಿಶ್ವಾಸಕ್ಕೆ ಆಘಾತ ಉಂಟುಮಾಡಿತು. ನೋಟು ರದ್ದತಿಯ ಆರಂಭದ ದಿನಗಳಲ್ಲಿ ಖಾತೆಗೆ ಜಮೆಯಾದ ನೋಟುಗಳಿಗೆ ಬದಲಿಯಾಗಿ ನಗದು ಹಣ ಪಡೆಯಲು ಕೆಲವು ಮಿತಿಗಳಿದ್ದವು. ಕ್ರಮೇಣ ಈ ಮಿತಿಗಳು ಸಡಿಲಗೊಂಡವು ಮತ್ತು ಸಾರ್ವಜನಿಕ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣವು ಒಂದು ವರ್ಷದೊಳಗೆ ಮಾಮೂಲು ಸ್ಥಿತಿಗೆ ಮರಳಿತು. ಹಾಗಾಗಿ ನೋಟು ರದ್ದತಿಯ ನಂತರದ ಬೆಳವಣಿಗೆಗಳ ಕುರಿತ ಈ ಕಥನವು ತಳ ಬುಡ ಇಲ್ಲದ್ದು ಎಂಬುದು ಸ್ಪಷ್ಟವಾಗುತ್ತದೆ.

ಒಂದು ವಾಸ್ತವಾಂಶ ಏನೆಂದರೆ, ಬ್ಯಾಂಕ್‌ಗಳ ಬಳಿ ನಗದು ಹಣದ ಪ್ರಮಾಣ ಹಠಾತ್ತಾಗಿ ಏರಿಕೆಯಾದ ಅವಧಿಯಲ್ಲಿ, ಬ್ಯಾಂಕ್‌ಗಳು ಆ ಹಣವನ್ನು ರಿಸರ್ವ್ ಬ್ಯಾಂಕಿನಲ್ಲಿಟ್ಟು ಸ್ವಲ್ಪ ಬಡ್ಡಿ ಗಳಿಸಿದವು ಅಥವಾ ವಿಶೇಷವಾಗಿ ಸೃಷ್ಟಿಸಿದ ಸರ್ಕಾರಿ ಬಾಂಡ್‌ಗಳನ್ನು ಕೊಂಡು ಅದರಿಂದ ಸ್ವಲ್ಪ ಬಡ್ಡಿ ಗಳಿಸಿದವು. ಆದರೆ, ಬಾಂಡ್ ಮಾರಾಟದ ಮೂಲಕ ಬಂದ ಹಣವನ್ನು ಸರ್ಕಾರ ಖರ್ಚು ಮಾಡಲಿಲ್ಲ (ಏಕೆಂದರೆ, ಹಣಕಾಸು ಬಂಡವಾಳವು ಹಾಕಿದ ವಿತ್ತೀಯ ಕೊರತೆಯ ಗೆರೆಯನ್ನು ದಾಟುವ ಭಯವಿತ್ತು). ಹಾಗಾಗಿ, ಬ್ಯಾಂಕ್‌ಗಳ ಬಳಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ಹಣವನ್ನು ಸಾಲಗಳ ಬೆಳವಣಿಗೆ ಉತ್ತೇಜಿಸಲು ಬಳಸಲೇ ಇಲ್ಲ.

ಇತ್ತ, ಮಾರ್ಚ್ ೨೦೧೬ ಮತ್ತು ಮಾರ್ಚ್ ೨೦೧೭ರ ನಡುವೆ, ಬ್ಯಾಂಕುಗಳು ಒದಗಿಸಿದ ಆಹಾರೇತರ ಸಾಲಗಳು, ಹಿಂದಿನ ವರ್ಷದ ಶೇ.೯.೧ ರಿಂದ ಶೇ. ೮.೪ಕ್ಕೆ ಇಳಿದವು. ಇದೇ ಅವಧಿಯಲ್ಲಿ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಒದಗಿಸಿದ ಸಾಲಗಳೂ ಸಹ, ಹಿಂದಿನ ವರ್ಷದ ಶೇ.೧೫.೩ ರಿಂದ ಶೇ. ೧೨.೪ಕ್ಕೆ ಇಳಿದವು ಮತ್ತು ಕೈಗಾರಿಕೆಗಳಿಗೆ ಒದಗಿಸಿದ ಸಾಲಗಳು ಹಿಂದಿನ ವರ್ಷದ ಶೇ.೨.೭ ರಿಂದ ಶೇ.-೧.೯ಕ್ಕೆ ಕುಸಿದವು. ಇಡೀ ಆದ್ಯತಾ ವಲಯಕ್ಕೆ ಒದಗಿಸಿದ ಸಾಲಗಳೂ ಸಹ, ಹಿಂದಿನ ವರ್ಷದ ಶೇ.೧೦.೭ ರಿಂದ ಶೇ. ೯.೪ಕ್ಕೆ ಇಳಿದವು.

ನೋಟು ರದ್ದತಿಯಿಂದಾಗಿ ರೈತರ ಕೈಯಲ್ಲಿ ನಗದು ಹಣದ ಅಭಾವ ತೀವ್ರವಾಗಿತ್ತು ಎಂಬುದನ್ನು ಜ್ಞಾಪಿಸಿಕೊಳ್ಳಬಹುದು. ರೈತರು ತಾವು ಬೆಳೆದ ಫಸಲನ್ನು ಮಾರಿದಾಗ ನಗದು ಹಣ ಸಿಗುವುದು  ದುರ್ಲಭವಿತ್ತು. ಮುಂದಿನ ಬೆಳೆಗೆ ಬೇಕಾದ ಲಾಗುವಾಡುಗಳನ್ನು ಕೊಳ್ಳಲೂ ರೈತರಿಗೆ ನಗದು ಹಣದ ಲಭ್ಯತೆ ಇರಲಿಲ್ಲ. ಹಾಗಾಗಿ, ಲಾಗುವಾಡುಗಳನ್ನು ಕೊಳ್ಳಲು ರೈತರು ಖಾಸಗಿ ಲೇವಾದೇವಿದಾರರಿಂದ ಮಿತಿಮೀರಿದ ಬಡ್ಡಿ ದರದಲ್ಲಿ ಸಾಲ ಪಡೆದ ಕಾರಣದಿಂದ ಅವರ ಸಾಲದ ಹೊರೆ ಹೆಚ್ಚಾಯಿತು ಮತ್ತು ಅವರ ಸಂಕಷ್ಟಗಳು ಮತ್ತಷ್ಟು ಹೆಚ್ಚಿದವು ಮತ್ತು ಅವುಗಳನ್ನು ಅವರು ಸಹಿಸಿಕೊಂಡರು. ಇದು ನೋಟು ರದ್ದತಿಯಿಂದ ರೈತರಿಗೆ ದೊರೆತ ಬಳುವಳಿ. ನೋಟು ರದ್ದತಿಯಿಂದ ರೈತರಿಗೆ ಉಂಟಾದ ಸಂಕಷ್ಟಗಳನ್ನು ಅವರು ತಾತ್ಕಾಲಿಕವಾಗಿ ಅನುಭವಿಸಿದ ಅನಾನುಕೂಲಗಳು ಎಂದು ನೋಡುವಂತಿಲ್ಲ. ನಗದು ಹಣದ ಚಲಾವಣೆಯ ಹೆಚ್ಚಳದೊಂದಿಗೆ ಅವರ ಸಂಕಷ್ಟಗಳು ಮಾಯವಾಗಲಿಲ್ಲ. ರೈತರು ತಾವು ಬೆಳೆದ ಫಸಲನ್ನು ಮಾರಿದಾಗ ಮತ್ತು ಮುಂದಿನ ಬೆಳೆಗೆ ಬೇಕಾದ ಲಾಗುವಾಡುಗಳನ್ನು ಕೊಳ್ಳಲು ನಗದು ಹಣ ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ ಅವರು ಮಿತಿಮೀರಿದ ಬಡ್ಡಿ ದರದಲ್ಲಿ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದ ಸಂದರ್ಭದಲ್ಲಿ ಬ್ಯಾಂಕ್‌ಗಳ ಬಳಿ ಹಠಾತ್ತಾಗಿ ಏರಿಕೆಯಾದ ಮತ್ತು ಯಾವತ್ತೂ ಇಲ್ಲದಷ್ಟು ಅಪಾರ ಹಣದ ಸಂಗ್ರಹವಿದ್ದರೂ ಸಹ ಮತ್ತು ಕೃಷಿ ವಲಯಕ್ಕೆ ಒದಗಿಸಿದ ಸಾಲಗಳು ವಾಸ್ತವವಾಗಿ ಇಳಿಕೆಯಾಗಿದ್ದರೂ ಸಹ, ಬ್ಯಾಂಕುಗಳು ರೈತರಿಗೆ ಸಾಲ ಒದಗಿಸಲಿಲ್ಲ.

ಈ ಒಂದು ಕಾಲ ಮತ್ತು ಸನ್ನಿವೇಶದಲ್ಲಿ ಮಾತ್ರ ರೈತರಿಗೆ ಸಾಲ ಸಿಗಲಿಲ್ಲ ಎಂದು ತಿಳಿಯುವಂತಿಲ್ಲ. ಮಾರ್ಚ್ ೨೦೧೭ರ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಬದಲಿಗೆ ಪರಿಸ್ಥಿತಿ ಬಿಗಡಾಯಿಸಿತು. ಮಾರ್ಚ್ ೨೦೧೭ಮತ್ತು ಮಾರ್ಚ್ ೨೦೧೮ರ ನಡುವೆ ಬ್ಯಾಂಕುಗಳು ಕೃಷಿ ವಲಯಕ್ಕೆ ಒದಗಿಸಿದ ಸಾಲಗಳ ಬೆಳವಣಿಗೆಯ ದರವು ಶೇ.೩.೮ರ ಜುಜುಬಿ ಮಟ್ಟದಲ್ಲಿತ್ತು. ಬ್ಯಾಂಕಿಂಗ್ ವ್ಯವಸ್ಥೆಗೆ ಅಸಾಧಾರಣ ಮಟ್ಟದ ಹಣದ ಸಂಗ್ರಹ ಎಟುಕುತ್ತಿದ್ದರೂ ಸಹ ಕೃಷಿ ವಲಯಕ್ಕೆ ಒದಗಿಸಿದ ಸಾಲಗಳು ಮಂದಗತಿಯಲ್ಲಿದ್ದವು ಎಂಬುದು ಭಾರತದ ಅರ್ಥವ್ಯವಸ್ಥೆಯ ಕಾರ್ಯವೈಖರಿಯ ವಿದ್ಯಮಾನದ ಬಗ್ಗೆ ಬೋಧಪ್ರದವಾಗಿದೆ.

ಈ ವಿದ್ಯಮಾನವು ಇಡೀ ನವ ಉದಾರ ಆಳ್ವಿಕೆಯ ಕಾಲಾವಧಿಯ ಪ್ರವೃತ್ತಿಗೆ ಪೂರ್ಣವಾಗಿ ಅನುಗುಣವಾಗಿದೆ. ಈ ಅವಧಿಯಲ್ಲಿ, ರೈತ ಕೃಷಿಗೆ ದೊರೆಯುತ್ತಿದ್ದ ಸಾಂಸ್ಥಿಕ ಸಾಲಗಳು ಗಣನೀಯವಾಗಿ ಇಳಿದಿವೆ  ಮತ್ತು ಮಿತಿಮೀರಿದ ಬಡ್ಡಿ ದರ ವಸೂಲಿ ಮಾಡುವ ಖಾಸಗಿ ಲೇವಾದೇವಿದಾರ ಕುಳಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ವಸಾಹತು ಕಾಲದ ಲೇವಾದೇವಿದಾರರಿಗೆ ಹೋಲಿಸಿದರೆ ಈಗಿನವರನ್ನು ಒಂದು ಹೊಸ ತಳಿಗೆ ಸೇರಿದ ಪೀಳಿಗೆ ಎನ್ನಬಹುದು. ಆದರೆ, ಇವರ ದುಬಾರಿ ಬಡ್ಡಿಗೂ ಮತ್ತು ವಸಾಹತು ಕಾಲದ ಇವರ ಪೂರ್ವಜರ ಬಡ್ಡಿಗೂ ವ್ಯತ್ಯಾಸವೇನಿಲ್ಲ.

ಈ ಪರಿಸ್ಥಿತಿಯಲ್ಲಿ ಸರ್ಕಾರ ತಳೆದ ಮನೋಭಾವವೂ ಸಹ ಅಷ್ಟೇ ಬೋಧಪ್ರದವಾಗಿದೆ. ನಗದು ಹಣದ ಕೊರತೆಯಿಂದಾಗಿ ರೈತರು ತೀವ್ರ ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಬ್ಯಾಂಕುಗಳ ಬಳಿ ಅಪಾರ ಹಣವಿದೆ ಎಂಬುದು ಗೊತ್ತಿದ್ದರೂ ಸಹ, ರೈತ ಕೃಷಿಗೆ ಹೆಚ್ಚು ಸಾಲ ಒದಗಿಸುವಂತೆ ಸರ್ಕಾರವು ಬ್ಯಾಂಕುಗಳಿಗೆ ಯಾವ ಸೂಚನೆಯನ್ನೂ ಕೊಡಲಿಲ್ಲ. ಬದಲಿಗೆ, ಬ್ಯಾಂಕುಗಳು ತಮ್ಮ ಬಳಿ ಇದ್ದ ಅಪಾರ ಹಣವನ್ನು ಹೂಡಿಕೆ ಮಾಡಲು ಅನುವಾಗುವಂತೆ ಸರ್ಕಾರವು ತನ್ನ ಬಾಂಡುಗಳನ್ನು ಅವರಿಗೆ ಮಾರಿತು. ಬಾಂಡ್ ಮಾರಾಟದ ಮೂಲಕ ಬಂದ ಹಣವನ್ನು, ವಿತ್ತೀಯ ಕೊರತೆಯ ಮಿತಿಯ ನೆಪದಲ್ಲಿ  ಸರ್ಕಾರ ಖರ್ಚು ಮಾಡದ ಕಾರಣದಿಂದಾಗಿ ನಗದು ಹಣ ವಂಚಿತ ರೈತರು ದುಬಾರಿ ಬಡ್ಡಿಯ ಲೇವಾದೇವಿ ಸಾಲ ಅವಲಂಬಿಸುವಂತೆ ಮಾಡಲಾಯಿತು.

ಒಂದು ನಿರ್ದಿಷ್ಟ ವಲಯಕ್ಕೆ ಸಾಲ ಕೊಡುವಂತೆ ಬ್ಯಾಂಕುಗಳ ಮೇಲೆ ಈ ಹಿಂದೆ ಒತ್ತಾಯ ಹೇರಿದ ಪ್ರಸಂಗಗಳಿವೆ. ವಾಸ್ತವವಾಗಿ, ಈ ಶತಮಾನದ ಆದಿ ಭಾಗದಲ್ಲಿ, ಸರ್ಕಾರವು ಮೂಲಸೌಕರ್ಯ ವಲಯದ ಖಾಸಗಿ ಕಂಪೆನಿಗಳಿಗೆ ಸಾಲ ಕೊಡುವಂತೆ ಬ್ಯಾಂಕುಗಳ ಮೇಲೆ ಒತ್ತಡ ಹೇರಿದ್ದರಿಂದಾಗಿಯೇ ಮೂಲಸೌಕರ್ಯ ವಲಯದಲ್ಲಿ ಭಾರಿ ಪ್ರಮಾಣದ ಹೂಡಿಕೆ ಸಾಧ್ಯವಾಯಿತು. ಆದರೆ, ರೈತ ಕೃಷಿಯು ಅದೇ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲಿಲ್ಲ.

ಸರ್ಕಾರವು ರೈತ ಕೃಷಿಯ ಬಗ್ಗೆ ಗಮನ ಹರಿಸಿದ್ದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಬಹುದಿತ್ತು: ನಗದು ಹಣದ ಕೊರತೆ ಎದುರಿಸುತ್ತಿದ್ದ ರೈತರಿಗೆ ಸಹಾಯ ಮಾಡಬಹುದಿತ್ತು, ಮತ್ತು, ಬ್ಯಾಂಕುಗಳ ಲಾಭದಾಯಕತೆಯನ್ನು ಅದರ ಪೂರ್ವ ಸ್ಥಿತಿಗೆ ಮರಳಿಸಬಹುದಿತ್ತು. ಅದಕ್ಕಾಗಿ ವಿಶೇಷ ಬಾಂಡುಗಳನ್ನು ಮಾರುವ ಅಸಾಧಾರಣ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ. ಈ ವಿಚಾರವನ್ನು ಸರಕಾರ ಮನಸ್ಸಿಗೆ ಹಾಕಿಕೊಳ್ಳಲೇ ಇಲ್ಲ. ನವ-ಉದಾರ ಪ್ರಭುತ್ವದ ಒಂದು ಸರ್ಕಾರದ ಲಕ್ಷಣವೇ ಹಾಗಿದೆ.

ಸರ್ಕಾರವು ರೈತ ಕೃಷಿಯ ಬಗ್ಗೆ ಗಮನ ಹರಿಸಿದ್ದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಬಹುದಿತ್ತು: ನಗದು ಹಣದ ಕೊರತೆ ಎದುರಿಸುತ್ತಿದ್ದ ರೈತರಿಗೆ ಸಹಾಯ ಮಾಡಬಹುದಿತ್ತು, ಮತ್ತು, ಬ್ಯಾಂಕುಗಳ ಲಾಭದಾಯಕತೆಯನ್ನು ಅದರ ಪೂರ್ವ ಸ್ಥಿತಿಗೆ ಮರಳಿಸಬಹುದಿತ್ತು. ಅದಕ್ಕಾಗಿ ವಿಶೇಷ ಬಾಂಡುಗಳನ್ನು ಮಾರುವ ಅಸಾಧಾರಣ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ. ಈ ವಿಚಾರವನ್ನು ಸರಕಾರ ಮನಸ್ಸಿಗೆ ಹಾಕಿಕೊಳ್ಳಲೇ ಇಲ್ಲ. ನವ-ಉದಾರ ಪ್ರಭುತ್ವದ ಒಂದು ಸರ್ಕಾರದ ಲಕ್ಷಣವೇ ಹಾಗಿದೆ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *