ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಬಿಸಿಯೂಟ ನೌಕರರು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆಯ ಮುಂದಾಳತ್ವದಲ್ಲಿ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ವಹಿಸುವ ಸರ್ಕಾರದ ನಿರ್ಧಾರಕ್ಕೆ ಬಿಸಿಯೂಟ ನೌಕರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಯಾದರೆ ಸಾವಿರಾರು ಮಹಿಳಾ ನೌಕರರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 1.20 ಲಕ್ಷ ಬಿಸಿಯೂಟ ಕಾರ್ಯಕರ್ತೆಯರಿದ್ದು, ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ಬಂದರೆ ಸುಮಾರು 60 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇದು ತಮ್ಮ ಬದುಕು ಮತ್ತು ಉದ್ಯೋಗದ ಉಳಿವಿನ ಪ್ರಶ್ನೆಯಾಗಿದ್ದು, ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಇದನ್ನೂ ಓದಿ : ಬಿಜೆಪಿಯ ಈಡೇರದ ಭರವಸೆಗಳೇ 2029ರಲ್ಲಿ ಎನ್‌ಡಿಎಗೆ ಮುಳುವಾಗಲಿವೆ: ಅಶೋಕ್ ಗೆಹ್ಲೋಟ್
ಬಿಸಿಯೂಟ ಯೋಜನೆಯ ಮೂಲ ಉದ್ದೇಶವನ್ನು ಮರೆಮಾಚಿ ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಅಡುಗೆ ಕೆಲಸವನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ವಹಿಸಲು ಸರ್ಕಾರ ಮುಂದಾಗಿದೆ. ಈ ಕ್ರಮದಿಂದ ಬಿಸಿಯೂಟ ನೌಕರರ ಉದ್ಯೋಗ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ. ಹಾಗಾಗಿ ಬಿಸಿಯೂಟ ಯೋಜನೆಯಡಿ ಶಾಲೆಗಳಲ್ಲಿಯೇ ಅಡುಗೆ ತಯಾರಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, ಅಕ್ಷರ ದಾಸೋಹ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷೆ ಲಕ್ಷ್ಮೀ ಸೋನಾರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಗಣೇಶ್ ರಾಠೋಡ್, ರಾಜ್ಯ ಕಾರ್ದರ್ಶಿ ವಿಜಯ್ ಕುಮಾರ್, ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮುಖಂಡರಾದ ನವೀನ್ ಕುಮಾರ್, ಚನ್ನರಾಯಪ್ಪ, ಬಿಸಿಯೂಟ ನೌಕರರಾದ ಹನುಮಮ್ಮ, ಅನ್ನಪೂರ್ಣ, ಸವಿತಾ, ಮಹಾಲಕ್ಷ್ಮೀ, ಅರವಿಂದ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಇದನ್ನೂ ನೋಡಿ : ವೊಂಬಾಟ್ ಎಂಬ ವಿಸ್ಮಯ | ಚೌಕಾಕಾರದ ಮಲ ವಿಸರ್ಜಿಸುವ ಪ್ರಾಣಿ! Janashakthi Media
