ʼಚರ್ಚಾಗ್ರಾಮ್ ತಾಂತ್ರಿಕ ಉಪಕ್ರಮ ಸಂಘಟನೆʼಯ ಪ್ರಕಾರ ಚುನಾವಣಾ ಆಯೋಗ ಮತದಾರರ ನಮೂನೆ 6 ರ ದತ್ತಾಂಶವನ್ನು ನಾಗರಿಕರ ಸೇವಾ ಪೊರ್ಟಲ್ ನಲ್ಲಿ ಎಲ್ಲರಿಗೂ ಸಿಗುವಂತೆ ಕನಿಷ್ಟ ಕಳೆದ ಮೂರು ವರ್ಷಗಳ ಕಾಲದಿಂದ ಇಟ್ಟಿದೆ. ಇದು ದತ್ತಾಂಶವನ್ನು ಬೀದಿಯಲ್ಲಿ ಇಟ್ಟಂತೆ! ಚರ್ಚಾಗ್ರಾಮ್ ಸಂಘಟನೆ ಸಾರ್ವಜನಿಕ ಜೀವನದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಿಕತೆ ತರುವ ದಿಸೆಯಲ್ಲಿ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿದೆ. ಈ ಸಂಘಟನೆಯ ಪ್ರಕಾರ ಈ ಅವಧಿಯಲ್ಲಿ ಏಳು ಕೋಟಿಯಷ್ಟು ಮತದಾರರು ನೋಂದಣಿ ನಮೂನೆಗಳನ್ನು ಸಲ್ಲಿಸಿದ್ದಾರೆ. ಪ್ರತಿ ನಮೂನೆ 6, ಮತದಾರರ ಹೆಸರು, ಲಿಂಗ, ಸಂಪರ್ಕ ವಿವರ, ಆಧಾರ್ ಸಂಖ್ಯೆ, ವಯಸ್ಸಿನ ದಾಖಲೆ ಮತ್ತು ಇತರ ವಿವರಗಳನ್ನು ಒಳಗೊಂಡಿರುತ್ತದೆ. ಚರ್ಚಾಗ್ರಾಮ್ 2023 ರಿಂದ ಈ ವಿವರಗಳ ಪರಿಶೀಲನೆ ನಡೆಸಿದೆ. ಅದಕ್ಕೂ ಹಿಂದಿನ ವಿವರಗಳು (ಅರ್ಥಾತ್ ದತ್ತಾಂಶ) ಸುರಕ್ಷೆಗೆ ಒಳಪಟ್ಟಿವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಚರ್ಚಾಗ್ರಾಮ್ನ ದತ್ತಾಂಶ ವಿಜ್ಞಾನಿ ಸೌರಭ ರಾಜ್ಪೂತ್ ಅವರ ಪ್ರಕಾರ ಈ ವರ್ಷದ(2026) ನವೆಂಬರ್ 20 ರ ನಂತರ ಈ ದತ್ತಾಂಶ ರಕ್ಷಿತವಾಗಿದೆ (ಸಂಬಂಧಪಟ್ಟವರಿಗೆ ಮಾತ್ರ ಲಭ್ಯವಿದೆ).
ಇದನ್ನೂ ಓದಿ :ಮುಲಾಯಂ ರಾಜಕೀಯ ಪರಂಪರೆಯ ಮೊರೆ ಹೋದ ಅಖಿಲೇಶ್ ಯಾದವ್: 2027ರಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು PDA ಅಸ್ತ್ರ!
ಈ ವಿಷಯ ಗೊತ್ತಾದ ನಂತರ ಚರ್ಚಾಗ್ರಾಮ್ ಭಾರತೀಯ ಚುನಾವಣಾ ಆಯೋಗ ಮತ್ತು ಸರ್ಟ್ ಇನ್ (ಇದು ಕಂಪ್ಯೂಟರ್ ಮತ್ತು ದತ್ತಾಂಶ ಸುರಕ್ಷೆಗೆ ಸಂಬಂಧಪಟ್ಟ ಸಂಸ್ಥೆ) ಗೆ ವಿಷಯವನ್ನು ತಿಳಿಸಿತು. ನವೆಂಬರ್ 13 ರಂದು ಈ ಮಾಹಿತಿಗೆ ಪ್ರತಿಕ್ರಿಯಿಸಿದ ಸರ್ಟ್ ಇನ್ ಈ ನ್ಯೂನತೆಯನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿತು. ಯಾವುದೇ ಉಲ್ಲೇಖ, ಸಮಯದ ಗಡಿ ಅಥವಾ ನ್ಯೂನತೆಯನ್ನು ಸರಿಪಡಿಸುವ ಬದ್ಧತೆಯ ಮಾತುಗಳಿಲ್ಲದೆ ನೀಡಿದ ಉತ್ತರ ಅದು.
ಭಾರತೀಯ ಚುನಾವಣಾ ಆಯೋಗ ಮತ್ತು ಸರ್ಟ್ ಇನ್ ನ್ಯೂನತೆ ಸರಿಪಡಿಸಲಾಗಿರುವ ಧೃಢೀಕರಣ ಮತ್ತು ಈ ದತ್ತಾಂಶ ಹೊಂದಿರುವ ಸರ್ವರ್ ಸುರಕ್ಷಿತವಾಗಿದೆ ಎಂದಾಗಲಿ ಧೃಢೀಕರಿಸಿಲ್ಲ. ಯಾವ ನಾಗರೀಕರ ದತ್ತಾಂಶಗಳು ಒಳಗೊಂಡಿವೆಯೋ ಅವರಿಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಚರ್ಚಾಗ್ರಾಮ್ ಹೇಳಿದೆ.
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬ ಪತಾಕೆಯ ಹೊಣೆ ಹೊತ್ತ ಭಾರತೀಯ ಚುನಾವಣಾ ಆಯೋಗಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಕನಿಷ್ಠ ಉತ್ತರದಾಯಿತ್ವ ಇರಬೇಕಲ್ಲವೇ?
(ಆಧಾರ: ದಿ ಹಿಂದೂ ಪತ್ರಿಕೆಯಲ್ಲಿ 24.11.2026 ರಂದು ಬಂದ ವರದಿ)
ಇದನ್ನೂ ನೋಡಿ : ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳಿಗೆ ಜಾಮೀನು, ನ್ಯಾಯದ ಮೇಲೆಯೇ ಮತ್ತೆ ಪ್ರಶ್ನೆ! Janashakthi Media
