ಕೆ.ಆರ್.ಪುರಂ : ಕೆ.ಆರ್.ಪುರ ಪೂರ್ವ ತಾಲ್ಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿದ್ದ ಮಾಸಿಕ ಪಿಂಚಣಿಯನ್ನು ಸುಮಾರು 8–9 ತಿಂಗಳಿನಿಂದ 9 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸ್ಥಗಿತಗೊಳಿಸಿರುವುದರಿಂದ ಬಡ ಮತ್ತು ವೃದ್ಧರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪಿಂಚಣಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ಅನೇಕರು ಹಣವಿಲ್ಲದೆ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರದಾಡುವಂತಾಗಿದೆ. ಪಿಂಚಣಿ
ಪಿಂಚಣಿ ಸ್ಥಗಿತಕ್ಕೆ ವಾರ್ಷಿಕ ಆದಾಯದ ಮಿತಿ ಸೇರಿದಂತೆ ಅವೈಜ್ಞಾನಿಕ ಮಾನದಂಡಗಳನ್ನು ಕಾರಣವಾಗಿಸಲಾಗಿದೆ. ವಾರ್ಷಿಕ ಆದಾಯ 32 ಸಾವಿರ ರೂ. ಮೀರಿದವರಿಗೆ ಪಿಂಚಣಿ ನಿರಾಕರಿಸಲಾಗಿದೆ. ಕೆಲವರಿಗೆ ಆದಾಯದ ಮಿತಿಯನ್ನು 1.20 ಲಕ್ಷ ರೂ. ಎಂದು ಪರಿಗಣಿಸಿ ಪಿಂಚಣಿ ಮರು ವಿತರಣೆ ಮಾಡಲಾಗಿದ್ದರೂ, ಇನ್ನೂ ಅನೇಕ ಫಲಾನುಭವಿಗಳಿಗೆ ಯಾವುದೇ ಸಮರ್ಪಕ ವಿಚಾರಣೆ ನಡೆಸದೆ ಪಿಂಚಣಿ ಸ್ಥಗಿತಗೊಳಿಸಲಾಗಿದೆ.
ಇನ್ನೂ ಗಂಭೀರವಾದ ಸಂಗತಿಯೆಂದರೆ, ಜೀವಂತವಾಗಿರುವ ಫಲಾನುಭವಿಗಳನ್ನೇ ಮೃತಪಟ್ಟಿದ್ದಾರೆ ಎಂದು ದಾಖಲೆಗಳಲ್ಲಿ ನಮೂದಿಸಿ ಪಿಂಚಣಿ ನಿಲ್ಲಿಸಿರುವುದು. ಇಂತಹ ಫಲಾನುಭವಿಗಳು ತಾವು ಬದುಕಿರುವುದನ್ನು ಸಾಬೀತುಪಡಿಸಲು ವಯಸ್ಸಾದ ಸ್ಥಿತಿಯಲ್ಲಿ ಕಚೇರಿಗಳಿಗೆ ಅಲೆದು ದಾಖಲೆಗಳನ್ನು ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಂಚಣಿ
ಇದನ್ನೂ ಓದಿ : ರಾಜಸ್ಥಾನದಲ್ಲಿ ಬಿಜೆಪಿಯ ‘ಡಬಲ್ ಇಂಜಿನ್’ಗೆ ಗ್ರಾಮೀಣ ಮತದಾರರ ಹೊಡೆತ; ಕಾಂಗ್ರೆಸ್‌ಗೆ ಭರ್ಜರಿ ಜಯ, ಸಿಪಿಐ(ಎಂ) ಗಮನಾರ್ಹ ಸಾಧನೆ
ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ತಿಂಗಳಿಗೆ 10 ಸಾವಿರ ರೂ. ಆದಾಯದಲ್ಲಿಯೂ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಡವರ ಬದುಕಿನ ಸಂಕಷ್ಟವನ್ನು ಅರ್ಥಮಾಡಿಕೊಳ್ಳದೆ ಪಿಂಚಣಿ ಸ್ಥಗಿತಗೊಳಿಸುವ ಸರ್ಕಾರದ ಕ್ರಮ ಅಮಾನವೀಯವಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಪಿಂಚಣಿ ಫಲಾನುಭವಿಗಳಿಗೆ ವಿಧಿಸಿರುವ ಅವೈಜ್ಞಾನಿಕ ಮಾನದಂಡಗಳನ್ನು ಕೈಬಿಡಬೇಕು, ವಾರ್ಷಿಕ ಆದಾಯದ ಮಿತಿಯನ್ನು ಕನಿಷ್ಠ 6 ಲಕ್ಷ ರೂ.ಗಳಿಗೆ ಏರಿಸಬೇಕು ಹಾಗೂ ಪಿಂಚಣಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ಸಂಘಟನೆಯ ಮುಖಂಡರು ಕೆ.ಆರ್.ಪುರ ಪೂರ್ವ ತಾಲ್ಲೂಕಿನ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ಜಿಲ್ಲಾ ಮುಖಂಡರಾದ ವನಿತಾ, ಗಾಯತ್ರಿ, ರಾಜೇಶ್ವರಿ, ಕಲ್ಪನಾ, ಚಂದ್ರ, ಮಲ್ಲಿಕಾ ಹಾಗೂ ಕಾರ್ಮಿಕ ಮುಖಂಡರಾದ ಗೋಪಾಲ ಗೌಡ ಮತ್ತು ಮುನಿರಾಜು ಉಪಸ್ಥಿತರಿದ್ದರು. ಪಿಂಚಣಿ
ಇದನ್ನೂ ನೋಡಿ : ಸಾಹಿತ್ಯಕ್ಕೆ ಪ್ರಾಯೋಜಕತ್ವ| ಜಿಂದಾಲ್ ಸಾಹಿತ್ಯ ಹಬ್ಬದ ನಡುವೆ ‘ಜನನುಡಿ’ ಯಾಕೆ ಮಾದರಿಯಾಗುತ್ತದೆ? Janashakthi Media
