ದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಭದ್ರತಾ ಉಲ್ಲಂಘನೆಗೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಸಮಯಪ್ರಜ್ಞೆಯಿಂದ ತಡೆದಿದ್ದಾರೆ. ಯಾವುದೇ ಮಾನ್ಯ ಪ್ರಯಾಣದ ದಾಖಲೆಗಳಿಲ್ಲದೆ ಟರ್ಮಿನಲ್-3 ಪ್ರವೇಶಿಸಲು ಬಲವಂತವಾಗಿ ಯತ್ನಿಸಿದ ಹರಿಯಾಣ ಮೂಲದ ವ್ಯಕ್ತಿಯನ್ನು ಕೆಲವೇ ಸೆಕೆಂಡುಗಳಲ್ಲಿ ವಶಕ್ಕೆ ಪಡೆಯಲಾಗಿದೆ. ದೆಹಲಿ
ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟರ್ಮಿನಲ್-3ರ ನಿರ್ಗಮನ ದ್ವಾರದಲ್ಲಿ ಭದ್ರತಾ ತಪಾಸಣೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬಲವಂತವಾಗಿ ಒಳನುಗ್ಗಲು ಪ್ರಯತ್ನಿಸಿದ್ದಾನೆ.
ಈ ವೇಳೆ ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಸಿಬ್ಬಂದಿ ಆತನನ್ನು ತಡೆಯಲು ಮುಂದಾಗಿದ್ದಾರೆ. ಆದರೆ, ಸಿಬ್ಬಂದಿಯ ಹಿಡಿತದಿಂದ ತಪ್ಪಿಸಿಕೊಂಡು ಆತ ಕೆಲವು ಮೀಟರ್‌ಗಳಷ್ಟು ಒಳಗೆ ಓಡಿದ್ದಾನೆ. ತಕ್ಷಣವೇ ಮತ್ತೊಬ್ಬ ಶಸ್ತ್ರಸಜ್ಜಿತ CISF ಸಿಬ್ಬಂದಿ ಹಾಗೂ ಕ್ವಿಕ್ ರೆಸ್ಪಾನ್ಸ್ ಟೀಮ್ (QRT) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಈ ಮೂಲಕ ವಿಮಾನ ನಿಲ್ದಾಣದೊಳಗೆ ಅನಧಿಕೃತ ಪ್ರವೇಶವಾಗುವುದನ್ನು ತಡೆಯಲಾಗಿದೆ. ಘಟನೆಯ ಬಗ್ಗೆ ಸಿಐಎಸ್‌ಎಫ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ 25 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ವ್ಯಕ್ತಿ ಭದ್ರತಾ ಸಿಬ್ಬಂದಿಯನ್ನು ತಳ್ಳಿ ಒಳನುಗ್ಗಲು ಯತ್ನಿಸುವುದು ಹಾಗೂ ಸಿಬ್ಬಂದಿ ಆತನನ್ನು ಹಿಡಿದು ತಡೆಯುವ ದೃಶ್ಯ ಸೆರೆಯಾಗಿದೆ.
ಬ್ಯಾಗ್‌ನಲ್ಲಿ ಗುರುತಿನ ಚೀಟಿ, ಶೈಕ್ಷಣಿಕ ದಾಖಲೆ ಪತ್ತೆ
ವಶಕ್ಕೆ ಪಡೆದ ವ್ಯಕ್ತಿಯ ಬ್ಯಾಗ್ ಪರಿಶೀಲಿಸಿದಾಗ ಕೆಲವು ಗುರುತಿನ ಚೀಟಿಗಳು ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳು ಪತ್ತೆಯಾಗಿವೆ ಎಂದು ಸಿಐಎಸ್‌ಎಫ್ ತಿಳಿಸಿದೆ. ಬಳಿಕ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸಲು ಮಾನ್ಯವಾದ ಪ್ರಯಾಣದ ದಾಖಲೆ ಮತ್ತು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು. ವಿಮಾನ ನಿಲ್ದಾಣದ ಸಿಬ್ಬಂದಿಗೂ ಗುರುತಿನ ಚೀಟಿ ತೋರಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: ಗ್ರಾಮೀಣ ಉದ್ಯೋಗ ಯೋಜನೆಯ ದೂರುಗಳ ಪರಿಹಾರಕ್ಕೆ ಜಿಲ್ಲಾಮಟ್ಟದಲ್ಲಿ ಲೋಕಪಾಲರ ನೇಮಕ
ಹೈ ಸೆಕ್ಯುರಿಟಿ ವಲಯದಲ್ಲಿ ಕಟ್ಟುನಿಟ್ಟಿನ ಭದ್ರತೆ
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅತ್ಯಂತ ಸೂಕ್ಷ್ಮ ಭದ್ರತಾ ಪ್ರದೇಶವೆಂದು ಪರಿಗಣಿಸಲಾಗಿದೆ. ಪ್ರತಿದಿನ ಸಾವಿರಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಇಲ್ಲಿಂದ ಸಂಚರಿಸುತ್ತಾರೆ.
ವಿಮಾನ ನಿಲ್ದಾಣಕ್ಕೆ ಭಯೋತ್ಪಾದನಾ ನಿಗ್ರಹ ಸೇರಿದಂತೆ ಬಿಗಿ ಭದ್ರತೆಯನ್ನು ಸಿಐಎಸ್‌ಎಫ್ ಒದಗಿಸುತ್ತಿದೆ. ಇಂತಹ ಸೂಕ್ಷ್ಮ ಪ್ರದೇಶಕ್ಕೆ ವ್ಯಕ್ತಿಯೊಬ್ಬ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಘಟನೆ ಭದ್ರತಾ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಇದನ್ನೂ ನೋಡಿ: AIKS ಸಮ್ಮೇಳನ | ಕೃಷಿ ಮತ್ತು ರೈತರ ಬದುಕಿನ ರಕ್ಷಣೆಗಾಗಿ ಚಳವಳಿ ಬಲಪಡಿಸುವ ಸಂಕಲ್ಪ Janashakthi Media
