ಕಾರ್ಮಿಕ ಸಂಹಿತೆಗಳ ವಿರುದ್ಧ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ

Please follow and like us:
1996ರ ಕಟ್ಟಡ ಕಾರ್ಮಿಕರ ಕಾಯ್ದೆ ಮತ್ತು ಸೆಸ್‌ ಕಾಯ್ದೆ ಮರುಸ್ಥಾಪನೆಗೆ ಆಗ್ರಹ | ಕಲ್ಯಾಣ ಮಂಡಳಿಯ ನಿಧಿ ಸಂರಕ್ಷಣೆ, ಶೈಕ್ಷಣಿಕ ನೆರವು ಮತ್ತು ಪಿಂಚಣಿ ಹೆಚ್ಚಳಕ್ಕೆ ಒತ್ತಾಯ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಹಾಗೂ 1996ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಮತ್ತು ಸೆಸ್‌ ಕಾಯ್ದೆಗಳನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು. ಕಾರ್ಮಿಕ

ಕನ್ಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ (ಸಿಡಬ್ಲ್ಯುಎಫ್‌ಐ) ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಕೊಡಗಿನಿಂದ ಬೀದರ್‌ವರೆಗೆ, ಕೋಲಾರದಿಂದ ದಕ್ಷಿಣ ಕನ್ನಡದವರೆಗೆ ನಿರ್ಮಾಣ ವಲಯದ ಕಾರ್ಮಿಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಟ್ಟಡ ಕಾರ್ಮಿಕರಿಗಾಗಿ ರೂಪಿಸಲಾಗಿದ್ದ 1996ರ ಕಾಯ್ದೆ ಮತ್ತು ಸೆಸ್‌ ಕಾಯ್ದೆಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ರದ್ದುಗೊಳಿಸಿರುವುದನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂಪಾಯಿ ನಿಧಿಯನ್ನು ಸಂರಕ್ಷಿಸಬೇಕು. ಈ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಗದಗ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ದಾವಣಗೆರೆ, ತುಮಕೂರು, ಕೋಲಾರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು. ವಿವಿಧ ತಾಲೂಕು ಕೇಂದ್ರಗಳಲ್ಲಿಯೂ ಕಾರ್ಮಿಕರು ಕೆಲಸ ಬಹಿಷ್ಕರಿಸಿ ಹೋರಾಟದಲ್ಲಿ ಭಾಗವಹಿಸಿದರು.ಕಾರ್ಮಿಕ

ಕಲ್ಯಾಣ ಮಂಡಳಿ ನಿಧಿ ದುರ್ಬಳಕೆ ತಡೆಯಲು ಆಗ್ರಹ

ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಬಾರದು, ಕಟ್ಟಡ ಕಾರ್ಮಿಕರ ಶೈಕ್ಷಣಿಕ ಧನಸಹಾಯ ಹೆಚ್ಚಿಸಬೇಕು, ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಕಲ್ಯಾಣ ಮಂಡಳಿಯಲ್ಲಿರುವ ನಿಧಿಯ ದುರ್ಬಳಕೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿದ ಮಂಡಳಿಯ ಕಾರ್ಯದರ್ಶಿಗಳು ನವೆಂಬರ್ 20ರಂದು ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಇದನ್ನೂ ಓದಿ : ಕುಟುಂಬದ ಬಗ್ಗೆ ಹರಡಿರುವ ಸುಳ್ಳುಗಳಿಗೆ ಉತ್ತರಿಸಲು ಆತ್ಮಕಥೆ ಬರೆದೆ: ಸೋನಿಯಾ ಗಾಂಧಿ

ಡಿಸೆಂಬರ್ 1ರಿಂದ ಸಂಸತ್ ಮಾರ್ಗಕ್ಕೆ ಕಾರ್ಮಿಕರ ಮುತ್ತಿಗೆ

ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ ಮತ್ತು 1996ರ ಕಟ್ಟಡ ಕಾರ್ಮಿಕರ ಕಾಯ್ದೆ ಹಾಗೂ ಸೆಸ್‌ ಕಾಯ್ದೆಗಳ ಮರುಸ್ಥಾಪನೆಗಾಗಿ ಡಿಸೆಂಬರ್ 1ರಿಂದ ನವದೆಹಲಿಯ ಸಂಸತ್ ಮಾರ್ಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಒಂದು ಲಕ್ಷ ಕಾರ್ಮಿಕರ ಮುತ್ತಿಗೆ ಹೋರಾಟ ನಡೆಯಲಿದೆ.

ಈ ಹೋರಾಟದಲ್ಲಿ ಕರ್ನಾಟಕದಿಂದ 500ಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದಾರೆ. ವಿವಿಧ ವಲಯಗಳ ಒಟ್ಟು 5,000ಕ್ಕೂ ಅಧಿಕ ಕಾರ್ಮಿಕರು ಕರ್ನಾಟಕದಿಂದ ತೆರಳಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ರಾಜ್ಯವ್ಯಾಪಿ ಪ್ರತಿಭಟನೆಗೆ ಪೂರ್ವಭಾವಿಯಾಗಿ ನವೆಂಬರ್ 1ರಿಂದ 15ರವರೆಗೆ 500ಕ್ಕೂ ಅಧಿಕ ಕೆಲಸದ ಸ್ಥಳಗಳಲ್ಲಿ ಭಿತ್ತಿಪತ್ರ ಪ್ರದರ್ಶನ, ಸಣ್ಣ ಸಭೆಗಳು ಮತ್ತು ಕಾರ್ಮಿಕರ ಸಮಾವೇಶಗಳನ್ನು ಆಯೋಜಿಸಲಾಗಿತ್ತು. ಈ ಮೂಲಕ ಸಾವಿರಾರು ನಿರ್ಮಾಣ ಕಾರ್ಮಿಕರನ್ನು ಹೋರಾಟದಲ್ಲಿ ಸಂಘಟಿಸಲಾಗಿತ್ತು.

ರಾಜ್ಯಾದ್ಯಂತ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಿದ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಭಿನಂದನೆ ಸಲ್ಲಿಸಿದೆ ಎಂದು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ. ಕಾರ್ಮಿಕ

ಇದನ್ನೂ ನೋಡಿ : AIKS ಸಮ್ಮೇಳನ | ರೈತರ ಒಗ್ಗಟ್ಟಿನ ಮೆರವಣಿಗೆ, ಕೃಷಿ ಬಿಕ್ಕಟ್ಟಿನ ಕುರಿತು ಚರ್ಚೆ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *