ಲೇಬರ್ ಕೋಡ್ ರದ್ದತಿ, ಕಲ್ಯಾಣ ನಿಧಿ ಬಳಕೆಗೆ ಆಗ್ರಹ: ನವೆಂಬರ್ 16ರಂದು ಕಟ್ಟಡ ಕಾರ್ಮಿಕರ ದೇಶವ್ಯಾಪಿ ಪ್ರತಿಭಟನೆ

Please follow and like us:
ಶಿಕ್ಷಣ ಸಹಾಯಧನ ಬಾಕಿ ಪಾವತಿ, ಮಾಸಿಕ ಪಿಂಚಣಿ ₹5 ಸಾವಿರಕ್ಕೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳು; ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಕಚೇರಿ ಎದುರು ಹೋರಾಟ
ಬೆಂಗಳೂರು: ನಾಲ್ಕು ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್) ರದ್ದುಗೊಳಿಸಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂಪಾಯಿ ನಿಧಿಯನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 16ರಂದು ದೇಶಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ. ಲೇಬರ್

ಕನ್ಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ (CWFI) ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯ ಭಾಗವಾಗಿ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ಕಾರ್ಮಿಕ ಅಧಿಕಾರಿಗಳ ಕಚೇರಿಗಳ ಎದುರು ಸಾವಿರಾರು ಕಾರ್ಮಿಕರು ಧರಣಿ ನಡೆಸಲಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಲೇಬರ್ ಕೋಡ್‌ಗಳ ಅಡಿಯಲ್ಲಿ ರದ್ದಾಗಿರುವ 1996ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಹಾಗೂ ಸೆಸ್ ಕಾಯ್ದೆಗಳನ್ನು ಪುನರ್‌ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗಳನ್ನು ಉಳಿಸಬೇಕು ಮತ್ತು ಅವುಗಳಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂಪಾಯಿ ನಿಧಿಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿಯೇ ಬಳಸಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿದೆ.

ಕರ್ನಾಟಕದಲ್ಲಿ ಹಲವು ಬೇಡಿಕೆಗಳಿಗಾಗಿ ಹೋರಾಟ

ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ಬರಬೇಕಿರುವ ಬಾಕಿ ಶೈಕ್ಷಣಿಕ ಸಹಾಯಧನವನ್ನು ತಕ್ಷಣ ಪಾವತಿಸಬೇಕು ಮತ್ತು ಸಹಾಯಧನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಆಗ್ರಹಿಸಿದೆ.

ಕಾರ್ಮಿಕರ ಮಾಸಿಕ ಪಿಂಚಣಿಯನ್ನು ಈಗಿರುವ ಮೊತ್ತದಿಂದ 5,000 ರೂಪಾಯಿಗೆ ಹೆಚ್ಚಿಸಬೇಕು. ವೈದ್ಯಕೀಯ ತಪಾಸಣೆಯ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು. ದುಬಾರಿ ವೆಚ್ಚದ ಕೌಶಲ್ಯ ಕೇಂದ್ರ ಮತ್ತು ವಸತಿ ಶಾಲೆಗಳ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.

ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿರುವ ಖಾಸಗಿ ಏಜೆನ್ಸಿಗಳ ಕಾರ್ಮಿಕ ಸೇವಾ ಕೇಂದ್ರಗಳನ್ನು ರದ್ದುಗೊಳಿಸಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯಚಟುವಟಿಕೆಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ನಿರ್ವಹಿಸುವ ಬದಲು ಮಂಡಳಿಯೇ ನೇರವಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಫೆಡರೇಶನ್ ಒತ್ತಾಯಿಸಿದೆ.

ಇದನ್ನೂ ಓದಿ : ಮಕ್ಕಳ ದಿನಾಚರಣೆ | ಒಂದು ದೇಶ, ಎರಡು ಬಾಲ್ಯಗಳು: ಕೆಲವರಿಗೆ ಸಂಭ್ರಮ, ಹಲವರಿಗೆ ಸಂಕಷ್ಟ

ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಕಚೇರಿ ಎದುರು ಪ್ರತಿಭಟನೆ

ಬೆಂಗಳೂರಿನಲ್ಲಿ ಬನ್ನೇರುಘಟ್ಟ ರಸ್ತೆಯ ಡೈರಿ ಸರ್ಕಲ್ ಸಮೀಪದಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಕಾರ್ಮಿಕ ಅಧಿಕಾರಿಗಳ ಕಚೇರಿಗಳ ಎದುರು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.

500ಕ್ಕೂ ಅಧಿಕ ಕೆಲಸದ ಸ್ಥಳಗಳಲ್ಲಿ ಪ್ರಚಾರ

ನವೆಂಬರ್ 16ರ ದೇಶವ್ಯಾಪಿ ಹೋರಾಟಕ್ಕೆ ಕಾರ್ಮಿಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ನವೆಂಬರ್ 1ರಿಂದ 15ರವರೆಗೆ ರಾಜ್ಯಾದ್ಯಂತ ಪೂರ್ವಭಾವಿ ಪ್ರಚಾರ ನಡೆಸಲಾಗಿದೆ. ಐನೂರಕ್ಕೂ ಅಧಿಕ ಕೆಲಸದ ಸ್ಥಳಗಳಲ್ಲಿ ಪೋಸ್ಟರ್ ಪ್ರದರ್ಶನ ಹಾಗೂ ಸಣ್ಣ ಸಭೆಗಳನ್ನು ಆಯೋಜಿಸುವ ಮೂಲಕ ಸಾವಿರಾರು ಕಟ್ಟಡ ಕಾರ್ಮಿಕರನ್ನು ಪ್ರತಿಭಟನೆಗೆ ಅಣಿಗೊಳಿಸಲಾಗಿದೆ.

ಇದಲ್ಲದೆ, ಡಿಸೆಂಬರ್ 1ರಿಂದ ನವದೆಹಲಿಯಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಸಿದ್ಧತೆಯನ್ನೂ ಫೆಡರೇಶನ್ ನಡೆಸುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ.

ಇದನ್ನೂ ನೋಡಿ : ಸಾರ್ವಜನಿಕರ ಬ್ಯಾಂಕ್‌ ಖಾಸಗಿಯವರ ಪಾಲಿಗೆ: IDBI ಮಾರಾಟದ ಹಿಂದಿನ ಲೆಕ್ಕವೇನು? Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *