ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಸಭೆ, ಸಮಾವೇಶಗಳಿಗೆ ಅವಕಾಶ; 10 ದಿನ ಮುಂಚಿತವಾಗಿ ಅನುಮತಿ ಕಡ್ಡಾಯಗೊಳಿಸಲು ದೆಹಲಿ ಪೊಲೀಸರ ಕರಡು ಮಾರ್ಗಸೂಚಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಪ್ರತಿಭಟನೆ ಮತ್ತು ಸಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ಪ್ರಮುಖ ಪ್ರತಿಭಟನಾ ಸ್ಥಳವಾದ ರಾಮಲೀಲಾ ಮೈದಾನದಲ್ಲಿ ನಡೆಯುವ ಸಭೆ, ಸಮಾವೇಶ ಮತ್ತು ಪ್ರತಿಭಟನೆಗಳಿಗೆ ಗರಿಷ್ಠ 50 ಸಾವಿರ ಜನರ ಮಿತಿ ವಿಧಿಸುವುದರ ಜೊತೆಗೆ, ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಕಾರ್ಯಕ್ರಮ ನಡೆಸಲು ಅವಕಾಶ ನೀಡುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.
ಈ ಸಂಬಂಧ ದೆಹಲಿ ಪೊಲೀಸರು ಸಿದ್ಧಪಡಿಸಿರುವ ಕರಡು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಅನುಮೋದನೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಪ್ರಸ್ತುತ ಇದು ಪ್ರಾಥಮಿಕ ಹಂತದಲ್ಲಿದ್ದು, ಮಾರ್ಗಸೂಚಿಗಳ ಅಂತಿಮ ರೂಪ ಇನ್ನೂ ನಿರ್ಧಾರವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟ ಬಳಿಕ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಅಕ್ಟೋಬರ್ 11ರಂದು ಹೊರಡಿಸಲಾದ ಆದೇಶದಲ್ಲಿ ಜಂತರ್ ಮಂತರ್ ಬದಲಿಗೆ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನಗಳನ್ನು ಪ್ರತಿಭಟನೆಗಳಿಗೆ ಪರ್ಯಾಯ ಸ್ಥಳಗಳಾಗಿ ಗುರುತಿಸಲಾಗಿತ್ತು.
ಕರಡು ಮಾರ್ಗಸೂಚಿಗಳ ಪ್ರಕಾರ, ಕಾರ್ಯಕ್ರಮ ಆಯೋಜಕರು ಮೊದಲು ದೆಹಲಿ ಮಹಾನಗರ ಪಾಲಿಕೆಯಿಂದ (ಎಂಸಿಡಿ) ರಾಮಲೀಲಾ ಮೈದಾನ ಲಭ್ಯವಿರುವ ಕುರಿತು ಅನುಮತಿ ಪಡೆಯಬೇಕು. ನಂತರವೇ ಪೊಲೀಸ್ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕಾರ್ಯಕ್ರಮ ನಡೆಯುವ ದಿನಕ್ಕಿಂತ ಕನಿಷ್ಠ 10 ದಿನ ಮುಂಚಿತವಾಗಿ ಅನುಮತಿ ಕೋರುವುದು ಕಡ್ಡಾಯವಾಗಲಿದೆ.
ಇದನ್ನೂ ಓದಿ : ಮುಂಬೈನಲ್ಲಿ ಸಾಧಾರಣ ವಾಯು ಗುಣಮಟ್ಟ, ನಾಗಪುರದಲ್ಲಿ ವಾಯುಮಾಲಿನ್ಯ ಹೆಚ್ಚಳ
ಪ್ರತಿಭಟನೆಗಳಲ್ಲಿ ಭಾಗವಹಿಸುವ ಜನರ ನಿರ್ವಹಣೆ, ವಾಹನ ನಿಲುಗಡೆ, ಸಂಚಾರ ವ್ಯವಸ್ಥೆ ಮತ್ತು ತುರ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಆಯೋಜಕರ ಮೇಲೆಯೇ ಹೊರಿಸಲು ಪ್ರಸ್ತಾವಿಸಲಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಮೆರವಣಿಗೆ ಮತ್ತು ಮೆರವಣಿಗೆಯ ರೂಪದಲ್ಲಿ ಸಾಗುವುದಕ್ಕೂ ನಿರ್ಬಂಧ ವಿಧಿಸುವ ಅಂಶ ಕರಡು ಮಾರ್ಗಸೂಚಿಯಲ್ಲಿದೆ.
ಇದಲ್ಲದೆ, ಬಂದೂಕು, ಕತ್ತಿ, ಈಟಿ, ಹರಿತವಾದ ಆಯುಧಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ಮೈದಾನಕ್ಕೆ ತರುವುದನ್ನು ನಿರ್ಬಂಧಿಸಲು ಉದ್ದೇಶಿಸಲಾಗಿದೆ. ಮೈದಾನದ ಸುತ್ತಮುತ್ತ ಡ್ರೋನ್ ಹಾರಾಟ ನಡೆಸಲು ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಕುಡಿಯುವ ನೀರು, ವೈದ್ಯಕೀಯ ನೆರವು, ಶೌಚಾಲಯ, ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳನ್ನು ಕಲ್ಪಿಸುವ ಜವಾಬ್ದಾರಿಯೂ ಸಂಘಟಕರ ಮೇಲಿರಲಿದೆ.
ನವೆಂಬರ್ 1ರಂದು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಕೂಟವು ಎಸ್ಐಆರ್ ವಿರುದ್ಧ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ನಿರ್ಬಂಧ ವಿಧಿಸಿದ ಬಳಿಕ ರಾಮಲೀಲಾ ಮೈದಾನವು ಪ್ರಮುಖ ರಾಜಕೀಯ ಮತ್ತು ಜನಾಂದೋಲನಗಳ ಸಭೆಗಳಿಗೆ ಪರ್ಯಾಯ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಆದರೆ, ಹೊಸ ನಿಯಮಗಳು ಜಾರಿಗೆ ಬಂದಿಲ್ಲ. ಪೊಲೀಸ್ ಪ್ರಧಾನ ಕಚೇರಿಯ ಪರಿಶೀಲನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಅನುಮೋದನೆಯ ನಂತರವೇ ಅಂತಿಮ ಮಾರ್ಗಸೂಚಿಗಳು ಜಾರಿಯಾಗಲಿವೆ.
ಇದನ್ನೂ ನೋಡಿ : ದತ್ತು/ಮೆಂಟರ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮಾರಾಟ ಮಾಡಲು ಮುಂದಾದ ಡಿ.ಕೆ.ಶಿವಕುಮಾರ್ ಸರ್ಕಾರ..Janashakthi Media
