ಒಂದೆಡೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ. ಮತ್ತೊಂದೆಡೆ ಹೊಟ್ಟೆಪಾಡಿಗಾಗಿ ದುಡಿಯುವ ಬಾಲಕಾರ್ಮಿಕರು, ಬೀದಿಗಳಲ್ಲಿ ಭಿಕ್ಷೆ ಬೇಡುವ ಮಕ್ಕಳು, ಶಿಕ್ಷಣದಿಂದ ವಂಚಿತರಾದ ಲಕ್ಷಾಂತರ ಬಾಲಕ-ಬಾಲಕಿಯರು. ಮಕ್ಕಳ ಹಕ್ಕುಗಳಿಗಾಗಿ ಕಾನೂನುಗಳಿವೆ, ಯೋಜನೆಗಳಿವೆ, ಭಾಷಣಗಳಿವೆ. ಆದರೆ ಈ ಮಕ್ಕಳ ಬದುಕಿನಲ್ಲಿ ಮಾತ್ರ ಬದಲಾವಣೆ ಏಕಿಲ್ಲ? ಸರ್ಕಾರಿ ಶಾಲೆಗಳ ದುರ್ಬಲಗೊಳಿಸುವಿಕೆ, ಶಿಕ್ಷಣದ ಖಾಸಗೀಕರಣ ಮತ್ತು ಹೆಚ್ಚುತ್ತಿರುವ ಸಾಮಾಜಿಕ-ಆರ್ಥಿಕ ಅಸಮಾನತೆಯ ನಡುವೆ ಮಕ್ಕಳ ಭವಿಷ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ? ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ದೇಶದ ಮಕ್ಕಳ ಬದುಕಿನ ವಾಸ್ತವವನ್ನು ಪರಿಶೀಲಿಸುವ ಲೇಖನ.
ಗುರುರಾಜ ದೇಸಾಯಿ
ನವೆಂಬರ್ 14. ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗೆ ಸಿಹಿ ಹಂಚಿಕೆ, ಆಟೋಟಗಳು, ಭಾಷಣಗಳು, ವಿವಿಧ ಸ್ಪರ್ಧೆಗಳು. ಮಕ್ಕಳ ಹಕ್ಕುಗಳು, ಅವರ ಭವಿಷ್ಯ, ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಯ ಕುರಿತು ಉಪನ್ಯಾಸಗಳು. ಮಕ್ಕಳೇ ದೇಶದ ಭವಿಷ್ಯ, ಅವರೇ ನಾಳಿನ ಪ್ರಜೆಗಳು ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತವೆ.
ಆದರೆ ಇದೇ ದಿನ ಬೆಳಗಿನ ಜಾವ ಮನೆಮನೆಗೆ ಪತ್ರಿಕೆ ಹಂಚುವ ಪುಟ್ಟ ಮಕ್ಕಳು, ಹೋಟೆಲ್ಗಳಲ್ಲಿ ಲೋಟ-ತಟ್ಟೆ ತೊಳೆಯುವ ಬಾಲಕರು, ರಸ್ತೆಬದಿಯ ಅಂಗಡಿಗಳಲ್ಲಿ ಕೆಲಸ ಮಾಡುವ ಬಾಲಕಿಯರು, ವಾಹನಗಳ ಗಾಜು ಒರೆಸುವ ಮಕ್ಕಳು, ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವ ಪುಟ್ಟ ಕಂದಮ್ಮಗಳು ನಮ್ಮ ಕಣ್ಣಿಗೆ ಬೀಳುತ್ತಾರೆ. ಶಾಲೆಯ ತರಗತಿಗಳಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ ನಡೆಯುತ್ತಿರುವಾಗಲೇ, ಬದುಕಿನ ಅನಿವಾರ್ಯತೆಗಾಗಿ ಬಾಲ್ಯವನ್ನೇ ಕಳೆದುಕೊಳ್ಳುತ್ತಿರುವ ಈ ಮಕ್ಕಳಿಗೆ ಯಾವ ದಿನಾಚರಣೆ?
ಮಕ್ಕಳ ದಿನಾಚರಣೆ ಎಂದರೆ ಶಾಲೆಗಳಿಗೆ ಸೀಮಿತವಾದ ಕಾರ್ಯಕ್ರಮವೇ? ಶಾಲೆಯ ಒಳಗಿರುವ ಮಕ್ಕಳಿಗೆ ಮಾತ್ರವೇ ಈ ದಿನದ ಸಂಭ್ರಮ? ಶಾಲೆಯ ಹೊರಗಿರುವ, ಬಾಲ್ಯವನ್ನು ಕಳೆದುಕೊಂಡಿರುವ, ಬದುಕಿನ ಕನಿಷ್ಠ ಸೌಲಭ್ಯಗಳಿಗೂ ಪರದಾಡುತ್ತಿರುವ ಮಕ್ಕಳೂ ಈ ದೇಶದ ಮಕ್ಕಳಲ್ಲವೇ? ಈ ಪ್ರಶ್ನೆಗಳನ್ನು ಕೇಳದೆ ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಅರ್ಥವಿದೆಯೇ? ಬಾಲಕಾರ್ಮಿಕತೆ ತಡೆಯಲು ಕಾನೂನುಗಳಿವೆ, ಆದರೆ ಅವು ಹಲ್ಲುಕಿತ್ತ ಹಾವಿನಂತಾಗಿರುವ ಕಾರಣ ಬಾಲ್ಯ ಸುರಕ್ಷಿತವಾಗಿಲ್ಲ ಎಂದು ಹೇಳಬಹುದು.
ಅಂಕಿ-ಅಂಶಗಳು ಈ ಸಮಸ್ಯೆಯ ಗಂಭೀರತೆಯನ್ನು ಬಯಲು ಮಾಡುತ್ತವೆ.
2011ರ ಜನಗಣತಿಯ ಪ್ರಕಾರ, ದೇಶದಲ್ಲಿ 5ರಿಂದ 14 ವರ್ಷದೊಳಗಿನ 43.53 ಲಕ್ಷ ಮಕ್ಕಳು ದುಡಿಯುತ್ತಿದ್ದರು. ಇವರಲ್ಲಿ 10.1 ಲಕ್ಷ ಮಕ್ಕಳು ಮುಖ್ಯ ಅಥವಾ ಅಲ್ಪಾವಧಿ ಕಾರ್ಮಿಕರೆಂದು ಗುರುತಿಸಲ್ಪಟ್ಟಿದ್ದರು ಎಂಬ ಅಂಕಿ-ಅಂಶವನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) ಉಲ್ಲೇಖಿಸಿದೆ. 2024ರಲ್ಲಿ ಪ್ರಕಟವಾದ ಯುನಿಸೆಫ್ನ Child Labour and Schooling in India ಅಧ್ಯಯನವು 2018–19ರ ಆವರ್ತಕ ಕಾರ್ಮಿಕ ಸಮೀಕ್ಷೆಯ ದತ್ತಾಂಶವನ್ನು ವಿಶ್ಲೇಷಿಸಿ, 5ರಿಂದ 17 ವರ್ಷದೊಳಗಿನ ಸುಮಾರು 50 ಲಕ್ಷ ಮಕ್ಕಳು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಂದಾಜಿಸಿದೆ. ಬಾಲಕಾರ್ಮಿಕತೆಯನ್ನು ಅಳೆಯುವಲ್ಲಿ ಸಮೀಕ್ಷೆಗಳ ವ್ಯಾಖ್ಯಾನ ಮತ್ತು ವಿಧಾನಗಳ ಮಿತಿಗಳನ್ನೂ ಈ ಅಧ್ಯಯನ ಸ್ಪಷ್ಟಪಡಿಸಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇವು ಇಂದಿನ ನಿಖರ ಸಂಖ್ಯೆಗಳಲ್ಲ. ಭಾರತದಲ್ಲಿ ಬಾಲಕಾರ್ಮಿಕತೆಯ ಸಮಗ್ರ ಹೊಸ ಜನಗಣತಿ ಲಭ್ಯವಿಲ್ಲದಿರುವುದರಿಂದ ಹಳೆಯ ಜನಗಣತಿ ಮತ್ತು ನಂತರದ ಸಮೀಕ್ಷೆಗಳ ಆಧಾರದಲ್ಲೇ ಸಮಸ್ಯೆಯ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಮಕ್ಕಳ ದುಡಿಮೆಯ ನೈಜ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯಲು ಸಮಗ್ರ ದತ್ತಾಂಶದ ಅಗತ್ಯವಿದೆ. ಮಕ್ಕಳನ್ನು ಕೆಲಸದಿಂದ ಬಿಡಿಸುವುದಷ್ಟೇ ಸಾಕಾಗುವುದಿಲ್ಲ; ಅವರ ಕುಟುಂಬಗಳಿಗೆ ಪರ್ಯಾಯ ಆದಾಯ, ಆಹಾರ, ವಸತಿ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು.
ಬಾಲಕಾರ್ಮಿಕತೆಯ ಮೂಲವನ್ನು ಕೇವಲ ಮಕ್ಕಳನ್ನು ಕೆಲಸಕ್ಕೆ ನೇಮಿಸುವವರಲ್ಲಿ ಹುಡುಕಿದರೆ ಸಮಸ್ಯೆಯ ಸಂಪೂರ್ಣ ಚಿತ್ರಣ ಸಿಗುವುದಿಲ್ಲ. ಕುಟುಂಬಗಳ ಬಡತನ, ಉದ್ಯೋಗದ ಅಭದ್ರತೆ, ಕಡಿಮೆ ಕೂಲಿ, ಸಾಲದ ಹೊರೆ, ವಲಸೆ ಮತ್ತು ಸಾಮಾಜಿಕ ಭದ್ರತೆಯ ಕೊರತೆ ಮಕ್ಕಳನ್ನು ದುಡಿಮೆಗೆ ತಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ. ಪೋಷಕರಿಗೆ ಸಾಕಷ್ಟು ಆದಾಯವಿಲ್ಲದಿದ್ದಾಗ ಮಕ್ಕಳ ದುಡಿಮೆಯೂ ಕುಟುಂಬದ ಬದುಕಿನ ಭಾಗವಾಗುತ್ತದೆ. ಹೀಗಾಗಿ ಬಾಲಕಾರ್ಮಿಕತೆಯ ನಿರ್ಮೂಲನೆಗೆ ಕಾನೂನು ಕ್ರಮದ ಜೊತೆಗೆ ಬಡತನದ ವಿರುದ್ಧವೂ ಸಮಗ್ರ ಹೋರಾಟ ಅಗತ್ಯ.
ಭಿಕ್ಷಾಟನೆಗೆ ತಳ್ಳಲ್ಪಟ್ಟ ಮಕ್ಕಳಿಗೆ ಯಾರು ಹೊಣೆ?
ಸಂಚಾರ ದಟ್ಟಣೆಯ ಸಿಗ್ನಲ್ಗಳಲ್ಲಿ ಕಾರುಗಳ ಬಳಿ ಬಂದು ಕೈಚಾಚುವ ಮಕ್ಕಳು, ರೈಲು ನಿಲ್ದಾಣಗಳಲ್ಲಿ ಅಲೆದಾಡುವ ಬಾಲಕರು, ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುವ ಬಾಲಕಿಯರು ನಮ್ಮ ನಗರಗಳ ಸಾಮಾನ್ಯ ದೃಶ್ಯಗಳಾಗಿವೆ. ಈ ಮಕ್ಕಳನ್ನು ಕಂಡಾಗ ಕೆಲವರು ಹಣ ನೀಡುತ್ತಾರೆ, ಇನ್ನು ಕೆಲವರು ನಿರ್ಲಕ್ಷಿಸಿ ಮುಂದೆ ಸಾಗುತ್ತಾರೆ. ಆದರೆ ಈ ಮಕ್ಕಳು ಭಿಕ್ಷೆ ಬೇಡುವ ಸ್ಥಿತಿಗೆ ತಲುಪಲು ಕಾರಣವೇನು ಎಂಬುದನ್ನು ಪ್ರಶ್ನಿಸುವವರು ಕಡಿಮೆ.
ಬಡತನ, ನಿರುದ್ಯೋಗ, ವಲಸೆ, ಕುಟುಂಬದ ಅಸ್ಥಿರತೆ, ಬಾಲಕಳ್ಳಸಾಗಣೆ ಮತ್ತು ಸಂಘಟಿತ ಭಿಕ್ಷಾಟನೆಯ ಜಾಲಗಳು ಮಕ್ಕಳನ್ನು ಇಂತಹ ಪರಿಸ್ಥಿತಿಗೆ ತಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಮಕ್ಕಳನ್ನು ಉದ್ದೇಶಪೂರ್ವಕವಾಗಿಯೇ ಭಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ಮಕ್ಕಳನ್ನು ರಕ್ಷಿಸುವುದು ಕೇವಲ ದಾನಧರ್ಮದ ಪ್ರಶ್ನೆಯಲ್ಲ; ಅದು ಸರ್ಕಾರದ ಸಾಂವಿಧಾನಿಕ ಮತ್ತು ಸಾಮಾಜಿಕ ಹೊಣೆಗಾರಿಕೆ.
2026ರ ಏಪ್ರಿಲ್ 1ರಂದು ರಾಜ್ಯಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, 2011ರ ಜನಗಣತಿಯಲ್ಲಿ ದೇಶದಲ್ಲಿ 0–14 ವರ್ಷದೊಳಗಿನ 45,296 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ದಾಖಲಾಗಿತ್ತು. ಇದರಲ್ಲಿ ಕರ್ನಾಟಕದ ಮಕ್ಕಳ ಸಂಖ್ಯೆ 1,602. ಉತ್ತರ ಪ್ರದೇಶದಲ್ಲಿ 10,167, ರಾಜಸ್ಥಾನದಲ್ಲಿ 7,167 ಮತ್ತು ಪಶ್ಚಿಮ ಬಂಗಾಳದಲ್ಲಿ 3,216 ಮಕ್ಕಳು ದಾಖಲಾಗಿದ್ದರು.
ಇದು 15 ವರ್ಷಗಳ ಹಿಂದಿನ ಜನಗಣತಿಯ ಅಂಕಿ-ಅಂಶ. ಇಂದಿನ ಪರಿಸ್ಥಿತಿಯ ನಿಖರ ಚಿತ್ರಣ ಇದರಿಂದ ಸಿಗುವುದಿಲ್ಲ. ಬೀದಿ ಮಕ್ಕಳ ಕುರಿತು ಸಮಗ್ರ ರಾಷ್ಟ್ರೀಯ ಸಮೀಕ್ಷೆಯ ಕೊರತೆಯೂ ಇದೆ. ಆದರೂ ಸರ್ಕಾರದ ಇತ್ತೀಚಿನ ಅಂಕಿ-ಅಂಶಗಳು ಸಮಸ್ಯೆ ಮುಂದುವರಿದಿರುವುದನ್ನು ತೋರಿಸುತ್ತವೆ. 2026ರ ಜೂನ್ 30ರವರೆಗೆ ಭಿಕ್ಷಾಟನೆಯಲ್ಲಿ ತೊಡಗಿದ್ದ 2,824 ಮಕ್ಕಳನ್ನು ಗುರುತಿಸಿ, ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಅವರಲ್ಲಿ 1,549 ಮಕ್ಕಳನ್ನು ಕುಟುಂಬಗಳಿಗೆ ಒಪ್ಪಿಸಲಾಗಿದೆ, 676 ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲಾಗಿದೆ ಮತ್ತು 309 ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸಲಾಗಿದೆ.
ಈ ಸಾಧನೆ ಸ್ವಾಗತಾರ್ಹ. ಆದರೆ ದೇಶದಾದ್ಯಂತ ಬೀದಿಗಳಲ್ಲಿ ಬದುಕುತ್ತಿರುವ ಮಕ್ಕಳ ನಿಜವಾದ ಸಂಖ್ಯೆಯೇ ತಿಳಿಯದಿರುವಾಗ, ರಕ್ಷಿಸಲ್ಪಟ್ಟ ಮಕ್ಕಳ ಸಂಖ್ಯೆಯನ್ನು ಮುಂದಿಟ್ಟು ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಲು ಸಾಧ್ಯವೇ? ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಿದ ನಂತರ ಅವರಿಗೆ ನಿರಂತರ ಶಿಕ್ಷಣ, ಆರೋಗ್ಯ ಸೇವೆ, ಸುರಕ್ಷಿತ ವಸತಿ ಮತ್ತು ಕುಟುಂಬಕ್ಕೆ ಆರ್ಥಿಕ ನೆರವು ದೊರೆಯುತ್ತಿದೆಯೇ ಎಂಬುದೂ ಮುಖ್ಯ.
ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದೇ ಸಮಯದಲ್ಲಿ ಬೀದಿಗೆ ಬಂದಿರುವ ಮಗುವನ್ನು ಅಪರಾಧಿಯಂತೆ ನೋಡುವ ಮನೋಭಾವ ಬದಲಾಗಬೇಕು. ಆ ಮಗು ಯಾವ ಪರಿಸ್ಥಿತಿಯಿಂದ ಬೀದಿಗೆ ಬಂದಿದೆ, ಅದರ ಕುಟುಂಬದ ಸ್ಥಿತಿ ಏನು, ಅದಕ್ಕೆ ಶಿಕ್ಷಣ ಮತ್ತು ಸುರಕ್ಷಿತ ಬದುಕು ಕಲ್ಪಿಸಲು ಏನು ಮಾಡಬೇಕು ಎಂಬುದರತ್ತ ಗಮನ ಹರಿಸಬೇಕು. ಮಕ್ಕಳ ರಕ್ಷಣೆ ಎಂದರೆ ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವುದಲ್ಲ; ಗೌರವಯುತ ಬದುಕಿಗೆ ಮರಳಿಸುವುದು.
ಇದನ್ನೂ ಓದಿ : 88 ಸಾವಿರ ಪತ್ರಿಕೆಗಳ ನೋಂದಣಿ ರದ್ದು: ಸಣ್ಣ ಪತ್ರಿಕೆಗಳ ಕತ್ತು ಹಿಸುಕುತ್ತಿದೆಯೇ ಹೊಸ ನಿಯಮ? ಅಂಚೆ ವೆಚ್ಚದ ಹೊರೆ!
ಶಾಲೆಯ ಬಾಗಿಲು ತೆರೆದಿದೆ, ಆದರೆ ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗುತ್ತಿದೆಯೇ?
2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂತು. 6ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಯಿತು. ಆದರೆ ಶಾಲೆಗೆ ದಾಖಲಾಗುವುದೇ ಶಿಕ್ಷಣದ ಅಂತಿಮ ಗುರಿಯಲ್ಲ. ಮಗು ಶಾಲೆಯಲ್ಲಿ ಉಳಿಯಬೇಕು, ಕಲಿಯಬೇಕು, ಪೌಷ್ಟಿಕ ಆಹಾರ ಪಡೆಯಬೇಕು, ಉತ್ತಮ ವಾತಾವರಣದಲ್ಲಿ ಬೆಳೆಯಬೇಕು. ಇವೆಲ್ಲವೂ ಶಿಕ್ಷಣದ ಹಕ್ಕಿನ ಭಾಗವಾಗಬೇಕು.
ಆದರೆ ಬಡ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮುಂದುವರಿಸುವುದು ಇಂದಿಗೂ ಸವಾಲಾಗಿದೆ. ಕುಟುಂಬದ ಆದಾಯಕ್ಕೆ ನೆರವಾಗಲು ದುಡಿಯಬೇಕಾದ ಅನಿವಾರ್ಯತೆ, ಮನೆಯ ಜವಾಬ್ದಾರಿ, ಶಾಲೆಯ ನಂತರದ ಕಲಿಕಾ ಸೌಲಭ್ಯಗಳ ಕೊರತೆ, ಶಿಕ್ಷಣದ ವೆಚ್ಚ ಮತ್ತು ಡಿಜಿಟಲ್ ಅಂತರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿವೆ.
ಇದಕ್ಕೆ ಕೇಂದ್ರ ಸರ್ಕಾರದ 2025–26ರ ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳೂ ಸಾಕ್ಷಿಯಾಗಿವೆ. 2023–24ರ ಆವರ್ತಕ ಕಾರ್ಮಿಕ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿ ಸಿದ್ಧಪಡಿಸಿದ ಈ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 14ರಿಂದ 18 ವರ್ಷದೊಳಗಿನ ಸುಮಾರು ಎರಡು ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಇವರಲ್ಲಿ ಶೇ 44ರಷ್ಟು ಮಕ್ಕಳು ಕುಟುಂಬದ ಆದಾಯಕ್ಕೆ ನೆರವಾಗಬೇಕಾದ ಅನಿವಾರ್ಯತೆಯಿಂದ ಶಾಲೆ ತೊರೆದಿದ್ದಾರೆ. ಹೆಣ್ಣುಮಕ್ಕಳ ವಿಚಾರದಲ್ಲಿ ಮನೆಯ ಕೆಲಸ ಮತ್ತು ಕುಟುಂಬದ ಆರೈಕೆಯ ಜವಾಬ್ದಾರಿಗಳು ಪ್ರಮುಖ ಅಡ್ಡಿಯಾಗಿವೆ. ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಲ್ಲಿ ಶೇ 55ಕ್ಕೂ ಹೆಚ್ಚು ಮಂದಿಗೆ ಇಂತಹ ಕೌಟುಂಬಿಕ ಜವಾಬ್ದಾರಿಗಳು ಶಿಕ್ಷಣ ಮುಂದುವರಿಸಲು ತೊಡಕಾಗಿವೆ.
ಈ ಅಂಕಿ-ಅಂಶಗಳು ಒಂದು ಕಹಿ ವಾಸ್ತವವನ್ನು ತೆರೆದಿಡುತ್ತವೆ. ಬಡ ಕುಟುಂಬದ ಮಗುವಿಗೆ ಶಿಕ್ಷಣದ ಹಕ್ಕು ಕಾಗದದಲ್ಲಿದೆ. ಆದರೆ ಬದುಕಿನ ಹೋರಾಟದಲ್ಲಿ ಆ ಹಕ್ಕನ್ನು ಅನುಭವಿಸುವ ಅವಕಾಶವೇ ಇಲ್ಲದಂತಾಗಿದೆ.
ಶಿಕ್ಷಣದ ಖಾಸಗೀಕರಣ ಈ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಮತ್ತು ಶಿಕ್ಷಕರ ಲಭ್ಯತೆಯನ್ನು ಬಲಪಡಿಸುವ ಬದಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಮಹತ್ವ ನೀಡಿದಾಗ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಶಿಕ್ಷಣ ಒಂದು ಹಕ್ಕಾಗಿರುವ ಬದಲು ಹಣವಿರುವವರಿಗೆ ಸಿಗುವ ಸೌಲಭ್ಯವಾಗುತ್ತಿದೆ. ಹೀಗಾಗಿ ಒಂದೇ ದೇಶದಲ್ಲಿ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಒಂದು ಶ್ರೀಮಂತರ ಮಕ್ಕಳಿಗೆ ಸಕಲ ಸೌಲಭ್ಯಗಳಿರುವ ಶಿಕ್ಷಣ; ಮತ್ತೊಂದು ಬಡ ಮಕ್ಕಳಿಗೆ ಸೀಮಿತ ಅವಕಾಶಗಳ ಶಿಕ್ಷಣ.
ಇಲ್ಲಿ ಸರ್ಕಾರದ ಅಂಕಿ-ಅಂಶಗಳಲ್ಲಿರುವ ಪ್ರಗತಿಯನ್ನೂ ಗಮನಿಸಬೇಕು. ಕೇಂದ್ರದ Children in India 2025 ಪ್ರಕಟಣೆಯ ಪ್ರಕಾರ, ಪ್ರೌಢಶಾಲಾ ಹಂತದ ಮಕ್ಕಳ ಶಾಲೆ ತೊರೆಯುವ ಪ್ರಮಾಣ 2022–23ರಲ್ಲಿ ಶೇ 13.8ರಷ್ಟಿದ್ದದ್ದು 2024–25ರಲ್ಲಿ ಶೇ 8.2ಕ್ಕೆ ಇಳಿದಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ ಶಾಲೆ ತೊರೆಯುವ ಪ್ರಮಾಣ ಕಡಿಮೆಯಾಗಿದೆ ಎಂಬುದಷ್ಟೇ ಸಾಕಾಗುವುದಿಲ್ಲ. ಶಾಲೆಯಿಂದ ಹೊರಗಿರುವ ಎರಡು ಕೋಟಿ ಹದಿಹರೆಯದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ.

ಕರ್ನಾಟಕದ ಸರ್ಕಾರಿ ಶಾಲೆಗಳ ಸ್ಥಿತಿ: ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ, ದಾಖಲಾತಿಯೂ ಕುಸಿಯುತ್ತಿದೆ
ದೇಶದ ಮಕ್ಕಳ ಶಿಕ್ಷಣದ ಸ್ಥಿತಿಯನ್ನು ಚರ್ಚಿಸುವಾಗ ಕರ್ನಾಟಕದ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಗಮನಿಸಬೇಕಿದೆ. ಶಿಕ್ಷಣದಲ್ಲಿ ಮುಂಚೂಣಿಯ ರಾಜ್ಯವೆಂದು ಗುರುತಿಸಿಕೊಂಡಿರುವ ಕರ್ನಾಟಕದಲ್ಲಿಯೇ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿರುವುದು ಮತ್ತು ಶಾಲೆಗಳ ವಿಲೀನ ಪ್ರಕ್ರಿಯೆ ಮುಂದುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ.
ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 2014–15ರಲ್ಲಿ ಕರ್ನಾಟಕದಲ್ಲಿ 50,486 ಸರ್ಕಾರಿ ಶಾಲೆಗಳಿದ್ದವು. 2025–26ರ ವೇಳೆಗೆ ಈ ಸಂಖ್ಯೆ 48,527ಕ್ಕೆ ಇಳಿದಿದೆ. ಅಂದರೆ ಈ ಅವಧಿಯಲ್ಲಿ 1,959 ಸರ್ಕಾರಿ ಶಾಲೆಗಳ ನಿವ್ವಳ ಇಳಿಕೆ ಕಂಡುಬಂದಿದೆ. ಕೆಲವು ಶಾಲೆಗಳು ಮುಚ್ಚಲ್ಪಟ್ಟಿದ್ದರೆ, ಇನ್ನು ಕೆಲವು ಸಮೀಪದ ಶಾಲೆಗಳೊಂದಿಗೆ ವಿಲೀನಗೊಂಡಿವೆ. ಶಾಲೆಗಳ ಸಂಖ್ಯೆಯಲ್ಲಿನ ಈ ಇಳಿಕೆಯನ್ನು ಕೇವಲ ಆಡಳಿತಾತ್ಮಕ ಮರುಹೊಂದಾಣಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದರ ಪರಿಣಾಮವನ್ನು ಹಳ್ಳಿಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಅಂಚಿನ ಸಮುದಾಯಗಳ ಮಕ್ಕಳ ಬದುಕಿನಲ್ಲಿ ಪರಿಶೀಲಿಸಬೇಕಿದೆ.
ಶಾಲೆಯೊಂದು ಮುಚ್ಚಿದಾಗ ಅಥವಾ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಂಡಾಗ ಅದರ ಪರಿಣಾಮ ಕೇವಲ ಕಟ್ಟಡದ ಬಳಕೆಗೆ ಸೀಮಿತವಾಗುವುದಿಲ್ಲ. ಆ ಶಾಲೆಯನ್ನು ಅವಲಂಬಿಸಿದ್ದ ಮಕ್ಕಳಿಗೆ ದೂರದ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಬಹುದು. ವಿಶೇಷವಾಗಿ ಪ್ರಾಥಮಿಕ ತರಗತಿಯ ಮಕ್ಕಳು, ಹೆಣ್ಣುಮಕ್ಕಳು, ಅಂಗವೈಕಲ್ಯ ಹೊಂದಿರುವ ಮಕ್ಕಳು ಮತ್ತು ಸಾರಿಗೆ ಸೌಲಭ್ಯವಿಲ್ಲದ ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಇದು ಹೆಚ್ಚುವರಿ ತೊಂದರೆಯಾಗುತ್ತದೆ. ಶಾಲೆ ದೂರವಾದಂತೆ ಹಾಜರಾತಿ ಕಡಿಮೆಯಾಗುವ, ಮಕ್ಕಳು ಶಾಲೆ ಬಿಡುವ ಅಪಾಯವೂ ಹೆಚ್ಚುತ್ತದೆ.
ವಿದ್ಯಾರ್ಥಿಗಳ ದಾಖಲಾತಿಯಲ್ಲಿನ ಕುಸಿತವೂ ಇದೇ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. 2015–16ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಸುಮಾರು 47.1 ಲಕ್ಷ ವಿದ್ಯಾರ್ಥಿಗಳಿದ್ದರೆ, 2025–26ರ ವೇಳೆಗೆ ಈ ಸಂಖ್ಯೆ ಸುಮಾರು 38.2 ಲಕ್ಷಕ್ಕೆ ಇಳಿದಿದೆ ಎಂಬ ಅಂಕಿ-ಅಂಶಗಳು ಲಭ್ಯವಾಗಿವೆ. ಅಂದರೆ ಸುಮಾರು ಒಂದು ದಶಕದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಕುಸಿತಕ್ಕೆ ಜನಸಂಖ್ಯೆಯ ಬದಲಾವಣೆ, ಖಾಸಗಿ ಶಾಲೆಗಳತ್ತ ವಲಸೆ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಕರ ಕೊರತೆ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ ಅವುಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಹರಿಸುವ ಹೊಣೆ ಸರ್ಕಾರದ್ದಾಗಿದೆ.
ಇನ್ನೊಂದು ಆತಂಕಕಾರಿ ಅಂಶವೆಂದರೆ, 2025–26ರಲ್ಲಿ ಕರ್ನಾಟಕದ 25,683 ಸರ್ಕಾರಿ ಶಾಲೆಗಳಲ್ಲಿ ತಲಾ 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರು ಎಂಬುದು. ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚುವುದು ಅಥವಾ ವಿಲೀನಗೊಳಿಸುವುದೇ ಪರಿಹಾರವೆಂದು ನಿರ್ಧರಿಸುವ ಮೊದಲು, ಆ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಕಾರಣವೇನು ಎಂಬುದನ್ನು ಸರ್ಕಾರ ಪರಿಶೀಲಿಸಬೇಕಿದೆ. ಶಿಕ್ಷಕರನ್ನು ನೇಮಿಸದೆ, ಮೂಲಸೌಕರ್ಯ ಒದಗಿಸದೆ, ಶಾಲೆಗಳನ್ನು ಬಲಪಡಿಸದೆ ನಂತರ ವಿದ್ಯಾರ್ಥಿಗಳಿಲ್ಲ ಎಂಬ ಕಾರಣ ನೀಡಿ ಶಾಲೆಗಳನ್ನು ವಿಲೀನಗೊಳಿಸುವುದು ಸರಿಯಾದ ಶಿಕ್ಷಣ ನೀತಿಯೇ?
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ ಎಂದರೆ ಮಕ್ಕಳಿಗೆ ಸರ್ಕಾರಿ ಶಿಕ್ಷಣದ ಅಗತ್ಯ ಕಡಿಮೆಯಾಗಿದೆ ಎಂದರ್ಥವಲ್ಲ. ಬದಲಿಗೆ ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಪೋಷಕರಲ್ಲಿ ವಿಶ್ವಾಸ ಕುಸಿಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು, ವಿಷಯ ಶಿಕ್ಷಕರನ್ನು ನೇಮಿಸುವುದು, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು ಮತ್ತು ಡಿಜಿಟಲ್ ಕಲಿಕಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು.
ಸರ್ಕಾರಿ ಶಾಲೆಗಳ ಬಲವರ್ಧನೆಯ ಮೂಲಕ ದಾಖಲಾತಿಯನ್ನು ಹೆಚ್ಚಿಸುವ ಬದಲು ಶಾಲೆಗಳ ಸಂಖ್ಯೆಯನ್ನೇ ಕಡಿಮೆ ಮಾಡುವ ನೀತಿ ಅನುಸರಿಸಿದರೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಮತ್ತಷ್ಟು ದುರ್ಬಲಗೊಳ್ಳುವ ಅಪಾಯವಿದೆ. ಶಾಲೆ ಇಲ್ಲದ ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣದ ಹೊಣೆಗಾರಿಕೆಯನ್ನು ಕುಟುಂಬಗಳ ಮೇಲೆಯೇ ಹಾಕಿದಂತಾಗುತ್ತದೆ. ಸಾರಿಗೆ ಸೌಲಭ್ಯವಿಲ್ಲದ ಬಡ ಕುಟುಂಬಗಳು ಖಾಸಗಿ ಶಾಲೆಗಳ ಶುಲ್ಕವನ್ನು ಭರಿಸಲು ಸಾಧ್ಯವಾಗದಿದ್ದರೆ ಮಕ್ಕಳ ಶಿಕ್ಷಣವೇ ಸಂಕಷ್ಟಕ್ಕೆ ಸಿಲುಕುತ್ತದೆ.
ಸರ್ಕಾರಿ ಶಾಲೆಗಳನ್ನು ಖಾಸಗಿ ವಲಯಕ್ಕೆ ಒಪ್ಪಿಸುವ ಅಪಾಯ
ಸರ್ಕಾರಿ ಶಾಲೆಗಳ ಬಲವರ್ಧನೆಯ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ಕಂಪನಿಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿನಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಅಥವಾ ದತ್ತು ಪಡೆಯುವ ಪ್ರಸ್ತಾಪಗಳೂ ಮುನ್ನೆಲೆಗೆ ಬಂದಿವೆ. ‘ನಮ್ಮ ಶಾಲೆ–ನಮ್ಮ ಜವಾಬ್ದಾರಿ’ಯಂತಹ ಉಪಕ್ರಮಗಳ ಮೂಲಕ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಬಳಸಿಕೊಂಡು ಶಾಲೆಗಳಿಗೆ ನೆರವು ನೀಡುವ ಪ್ರಯತ್ನಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಕೆಲವು ಶಾಲೆಗಳನ್ನು ಕಂಪನಿಗಳು ದತ್ತು ಪಡೆದಿರುವುದಾಗಿಯೂ ಸರ್ಕಾರದ ಕಡೆಯಿಂದ ಹೇಳಲಾಗಿದೆ. ಖಾಸಗಿ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಪ್ರಸ್ತಾಪವೂ ಚರ್ಚೆಗೆ ಬಂದಿದೆ.
ಶಾಲೆಗಳಿಗೆ ಹೆಚ್ಚುವರಿ ಮೂಲಸೌಕರ್ಯ ಒದಗಿಸಲು ಸಮಾಜದ ನೆರವು ಪಡೆಯುವುದರಲ್ಲಿ ತಾತ್ವಿಕವಾಗಿ ತಪ್ಪಿಲ್ಲ. ಆದರೆ ಸರ್ಕಾರಿ ಶಾಲೆಗಳ ನಿರ್ವಹಣೆ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ನೇಮಕಾತಿ ಮತ್ತು ಮಕ್ಕಳ ಹಕ್ಕುಗಳ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವುದು ಸಂಪೂರ್ಣ ಭಿನ್ನವಾದ ಸಂಗತಿ. ಸರ್ಕಾರದ ಜವಾಬ್ದಾರಿಯನ್ನು ಖಾಸಗಿ ವಲಯದ ದೇಣಿಗೆ ಅಥವಾ ಸಿಎಸ್ಆರ್ ನೆರವಿನ ಮೇಲೆ ಅವಲಂಬಿಸುವುದು ಸಾರ್ವಜನಿಕ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.
ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಹಣವನ್ನು ಸರ್ಕಾರವೇ ಒದಗಿಸಬೇಕು. ಕಟ್ಟಡ ದುರಸ್ತಿ, ಶೌಚಾಲಯ, ಕುಡಿಯುವ ನೀರು, ಶಿಕ್ಷಕರ ನೇಮಕಾತಿ, ಕಲಿಕಾ ಸಾಮಗ್ರಿ, ಗ್ರಂಥಾಲಯ ಮತ್ತು ಪ್ರಯೋಗಾಲಯಗಳ ಅಭಿವೃದ್ಧಿ ಇವೆಲ್ಲವೂ ಸರ್ಕಾರದ ಮೂಲಭೂತ ಕರ್ತವ್ಯಗಳು. ಕಂಪನಿಗಳು ಅಥವಾ ಖಾಸಗಿ ಸಂಸ್ಥೆಗಳು ನೆರವು ನೀಡಿದರೆ ಅದನ್ನು ಹೆಚ್ಚುವರಿ ಸಹಕಾರವಾಗಿ ಪರಿಗಣಿಸಬಹುದು. ಆದರೆ ಆ ನೆರವು ನಿಂತರೆ ಶಾಲೆಯ ಸ್ಥಿತಿ ಮತ್ತೆ ಹಳೆಯದಾಗುವಂತಿರಬಾರದು. ಶಾಲೆಯ ನಿರ್ವಹಣೆಯ ಮೇಲೆ ಖಾಸಗಿ ಸಂಸ್ಥೆಗಳ ಪ್ರಭಾವ ಹೆಚ್ಚಾದರೆ ಶಿಕ್ಷಣದ ಆದ್ಯತೆಗಳು, ಆಡಳಿತಾತ್ಮಕ ನಿರ್ಧಾರಗಳು ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಸ್ವರೂಪ ಬದಲಾಗುವ ಅಪಾಯವಿದೆ.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಲಾಭದ ಉದ್ದೇಶದಿಂದ ನಡೆಯುವುದಿಲ್ಲ. ಪ್ರತಿಯೊಂದು ಮಗುವಿಗೂ ಅದರ ಕುಟುಂಬದ ಆದಾಯ, ಜಾತಿ, ಧರ್ಮ, ಲಿಂಗ ಅಥವಾ ಸಾಮಾಜಿಕ ಹಿನ್ನೆಲೆ ಏನೇ ಇರಲಿ, ಸಮಾನ ಶಿಕ್ಷಣ ಒದಗಿಸುವುದು ಅದರ ಮೂಲ ಆಶಯ. ಖಾಸಗಿ ಸಂಸ್ಥೆಗಳ ಆದ್ಯತೆಗಳು ಮತ್ತು ಸಾರ್ವಜನಿಕ ಶಿಕ್ಷಣದ ಆಶಯಗಳು ಯಾವಾಗಲೂ ಒಂದೇ ಆಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಖಾಸಗಿ ನಿರ್ವಹಣೆಯತ್ತ ಕೊಂಡೊಯ್ಯುವ ಯಾವುದೇ ಪ್ರಸ್ತಾಪವನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು.
ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ, ದಾಖಲಾತಿ ಕಡಿಮೆಯಾಗಲು ಅವಕಾಶ ನೀಡಿ, ನಂತರ ಖಾಸಗಿ ಸಂಸ್ಥೆಗಳ ನೆರವಿನಿಂದ ಅವುಗಳನ್ನು ನಡೆಸುವ ಮಾದರಿಯನ್ನು ಪರಿಹಾರವೆಂದು ಬಿಂಬಿಸುವುದು ಸರಿಯಲ್ಲ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವುದು ಸರ್ಕಾರದ ಹೊಣೆಗಾರಿಕೆ. ಅದನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಪ್ರಯೋಗಗಳ ಮೂಲಕ ಸಾರ್ವಜನಿಕ ಶಿಕ್ಷಣದ ಹಕ್ಕನ್ನು ದುರ್ಬಲಗೊಳಿಸಬಾರದು.

ಹಸಿವು, ಅಪೌಷ್ಟಿಕತೆ ಮತ್ತು ಆರೋಗ್ಯದ ಪ್ರಶ್ನೆ
ಮಕ್ಕಳ ಭವಿಷ್ಯ ಎಂದರೆ ಕೇವಲ ಪುಸ್ತಕ, ಪೆನ್ನು, ಶಾಲೆ ಮಾತ್ರವಲ್ಲ. ಉತ್ತಮ ಆಹಾರ, ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷಿತ ವಸತಿ ಕೂಡ ಅಷ್ಟೇ ಮುಖ್ಯ. ಹಸಿದ ಹೊಟ್ಟೆಯಲ್ಲಿ ಶಾಲೆಗೆ ಹೋಗುವ ಮಗು ಹೇಗೆ ಕಲಿಯಬಲ್ಲದು? ಅಪೌಷ್ಟಿಕತೆಯಿಂದ ಬಳಲುವ ಮಗು ಆರೋಗ್ಯವಂತ ಬದುಕನ್ನು ಹೇಗೆ ಕಟ್ಟಿಕೊಳ್ಳಬಲ್ಲದು?
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019–21) ದೇಶದ ಮಕ್ಕಳ ಪೌಷ್ಟಿಕತೆಯ ಪರಿಸ್ಥಿತಿಯ ಬಗ್ಗೆ ಆತಂಕಕಾರಿ ಚಿತ್ರಣ ನೀಡಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ 35.5ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ಎತ್ತರ ಇಲ್ಲದ ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ಶೇ 19.3ರಷ್ಟು ಮಕ್ಕಳು ಎತ್ತರಕ್ಕೆ ತಕ್ಕ ತೂಕ ಇಲ್ಲದ ತೀವ್ರ ಕ್ಷೀಣತೆಯಿಂದ ಬಳಲುತ್ತಿದ್ದಾರೆ. ಶೇ 32.1ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆಯ ಪ್ರಮಾಣ ಶೇ 67.1ರಷ್ಟಿದೆ.
ಇದು ಕೇವಲ ಆರೋಗ್ಯದ ಸಮಸ್ಯೆಯಲ್ಲ. ಬಡತನ, ಆಹಾರದ ಅಲಭ್ಯತೆ, ಪೌಷ್ಟಿಕ ಆಹಾರದ ಕೊರತೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಅಂತರಗಳ ಪರಿಣಾಮವೂ ಹೌದು.
ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಯೋಜನೆಗಳಿವೆ. ಆದರೆ ಯೋಜನೆಗಳ ಹೆಸರಿಗಿಂತ ಅವುಗಳ ಅನುಷ್ಠಾನ ಮುಖ್ಯ. ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕ ಆಹಾರ, ಶಾಲೆಗಳಲ್ಲಿ ಗುಣಮಟ್ಟದ ಬಿಸಿಯೂಟ, ಮಕ್ಕಳಿಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆಯ ವ್ಯವಸ್ಥೆ ಬಲಗೊಳ್ಳಬೇಕು.
ಒಂದು ಕಡೆ ಮಕ್ಕಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳನ್ನು ಘೋಷಿಸುವ ಸರ್ಕಾರಗಳು, ಮತ್ತೊಂದೆಡೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ.
ಮಕ್ಕಳ ಹಸಿವು ಮತ್ತು ಅಪೌಷ್ಟಿಕತೆಯನ್ನು ಕೇವಲ ಕುಟುಂಬಗಳ ಸಮಸ್ಯೆ ಎಂದು ಪರಿಗಣಿಸಲಾಗದು. ಆಹಾರ ಭದ್ರತೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಅಂಗನವಾಡಿಗಳ ಕಾರ್ಯನಿರ್ವಹಣೆ, ಶಾಲಾ ಬಿಸಿಯೂಟದ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳು ಪರಸ್ಪರ ಸಂಬಂಧ ಹೊಂದಿವೆ. ಇವುಗಳಲ್ಲಿ ಯಾವುದಾದರೂ ಒಂದು ವ್ಯವಸ್ಥೆ ದುರ್ಬಲಗೊಂಡರೂ ಅದರ ಹೊರೆ ಮಕ್ಕಳ ಮೇಲೆ ಬೀಳುತ್ತದೆ. ಮಕ್ಕಳ ಪೌಷ್ಟಿಕತೆಯನ್ನು ಸುಧಾರಿಸುವುದು ದೀರ್ಘಕಾಲೀನ ಮಾನವ ಸಂಪನ್ಮೂಲ ಅಭಿವೃದ್ಧಿಯ ಭಾಗವೂ ಆಗಿದೆ.
ಮಕ್ಕಳ ಹಕ್ಕುಗಳು ಕಾನೂನಿನಲ್ಲಷ್ಟೇ ಉಳಿಯಬಾರದು
ಭಾರತದಲ್ಲಿ ಮಕ್ಕಳ ರಕ್ಷಣೆಗಾಗಿ ಹಲವು ಕಾನೂನುಗಳು ಮತ್ತು ಯೋಜನೆಗಳಿವೆ. ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ ಹೀಗೆ ಹಲವು ಕಾನೂನುಗಳು ಜಾರಿಯಲ್ಲಿವೆ.
2015ರ ಬಾಲ ನ್ಯಾಯ ಕಾಯ್ದೆಯ ಪ್ರಕಾರ, ಕಾನೂನುಬಾಹಿರವಾಗಿ ದುಡಿಯುವ, ಭಿಕ್ಷಾಟನೆಯಲ್ಲಿ ತೊಡಗಿರುವ ಅಥವಾ ಬೀದಿಗಳಲ್ಲಿ ವಾಸಿಸುವ ಮಕ್ಕಳನ್ನು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಗುಂಪಿಗೆ ಸೇರಿಸಲಾಗಿದೆ. ಇಂತಹ ಮಕ್ಕಳಿಗೆ ರಕ್ಷಣೆ, ಪುನರ್ವಸತಿ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬದೊಂದಿಗೆ ಮರುಸೇರ್ಪಡೆ ಕಲ್ಪಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಮಿಷನ್ ವಾತ್ಸಲ್ಯ ಯೋಜನೆಯೂ ಇಂತಹ ಮಕ್ಕಳ ಪುನರ್ವಸತಿಗೆ ನೆರವು ಒದಗಿಸುತ್ತದೆ. ಮಕ್ಕಳ ಸಹಾಯವಾಣಿ 1098 ಕೂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.
ಆದರೆ ಪ್ರಶ್ನೆ ಇರುವುದು ಕಾನೂನುಗಳ ಸಂಖ್ಯೆಯಲ್ಲ, ಅವು ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತಿವೆ ಎಂಬುದರಲ್ಲಿ. ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಕೆಲಸದಿಂದ ಬಿಡಿಸಿದ ನಂತರ ಅವರ ಶಿಕ್ಷಣ ಮತ್ತು ಕುಟುಂಬದ ಬದುಕಿಗೆ ನೆರವು ದೊರೆಯುತ್ತಿದೆಯೇ? ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ ಮಕ್ಕಳು ಮತ್ತೆ ಅದೇ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳಲಾಗುತ್ತಿದೆಯೇ? ಶಾಲೆ ತೊರೆದ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಕರೆತರುವ ವ್ಯವಸ್ಥೆ ಪರಿಣಾಮಕಾರಿಯಾಗಿದೆಯೇ? ಇಂತಹ ಪ್ರಶ್ನೆಗಳಿಗೆ ಸರ್ಕಾರಗಳು ಉತ್ತರಿಸಬೇಕು.
ಮಕ್ಕಳನ್ನು ದುಡಿಸಿಕೊಳ್ಳುವ ಉದ್ಯೋಗದಾತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಮಕ್ಕಳನ್ನು ದುಡಿಮೆಗೆ ಕಳುಹಿಸುವ ಅನಿವಾರ್ಯತೆ ಸೃಷ್ಟಿಸಿರುವ ಕುಟುಂಬಗಳ ಬಡತನವನ್ನೂ ನಿವಾರಿಸಬೇಕು. ಪೋಷಕರಿಗೆ ಉದ್ಯೋಗ, ನ್ಯಾಯಯುತ ಕೂಲಿ, ಸಾಮಾಜಿಕ ಭದ್ರತೆ, ಆಹಾರ ಭದ್ರತೆ ಮತ್ತು ವಸತಿ ಒದಗಿಸಬೇಕು. ಇಲ್ಲದಿದ್ದರೆ ಒಂದು ಕಡೆ ಮಕ್ಕಳನ್ನು ಕೆಲಸದಿಂದ ಬಿಡಿಸಿದರೂ ಮತ್ತೊಂದು ಕಡೆ ಕುಟುಂಬದ ಹಸಿವು ಅವರನ್ನು ಮತ್ತೆ ದುಡಿಮೆಗೆ ತಳ್ಳುತ್ತದೆ.
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸ್ಥಳೀಯ ಸಂಸ್ಥೆಗಳು, ಶಾಲೆಗಳು, ಅಂಗನವಾಡಿಗಳು, ಮಕ್ಕಳ ರಕ್ಷಣಾ ಸಮಿತಿಗಳು ಮತ್ತು ನಾಗರಿಕ ಸಮಾಜದ ಪಾತ್ರವೂ ಮಹತ್ವದ್ದಾಗಿದೆ. ಶಾಲೆಗೆ ನಿರಂತರವಾಗಿ ಗೈರಾಗುವ ಮಕ್ಕಳನ್ನು ಗುರುತಿಸುವುದು, ಶಾಲೆ ಬಿಟ್ಟ ಮಕ್ಕಳ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವುದು, ಬಾಲಕಾರ್ಮಿಕತೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಪರಿಣಾಮಕಾರಿಯಾಗಬೇಕು. ಮಕ್ಕಳ ರಕ್ಷಣೆ ಕೇವಲ ಒಂದು ಇಲಾಖೆಯ ಕೆಲಸವಲ್ಲ; ಅದು ಸರ್ಕಾರದ ಎಲ್ಲ ಇಲಾಖೆಗಳ ಸಮನ್ವಯದ ಹೊಣೆಗಾರಿಕೆಯಾಗಿದೆ.
ಯಾವ ಭಾರತವನ್ನು ಕಟ್ಟುತ್ತಿದ್ದೇವೆ?
ಇಂದು ಭಾರತ ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ, ಬಾಹ್ಯಾಕಾಶ ಸಾಧನೆ ಮತ್ತು ಜಾಗತಿಕ ಪ್ರಭಾವದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದೆ. ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳ ಸಾಲಿನಲ್ಲಿ ನಿಲ್ಲುವ ಕನಸು ಕಾಣುತ್ತಿದೆ. ಆದರೆ ದೇಶದ ಭವಿಷ್ಯವಾಗಬೇಕಾದ ಮಕ್ಕಳು ಒಂದು ಹೊತ್ತಿನ ಊಟಕ್ಕಾಗಿ ದುಡಿಯುವ, ಶಿಕ್ಷಣದಿಂದ ವಂಚಿತರಾಗುವ, ಬೀದಿಗಳಲ್ಲಿ ಬದುಕುವ ಪರಿಸ್ಥಿತಿ ಮುಂದುವರಿದರೆ ಈ ಅಭಿವೃದ್ಧಿಯ ಅರ್ಥವೇನು?
ಒಂದೆಡೆ ಐಷಾರಾಮಿ ಶಾಲೆಗಳಲ್ಲಿ ಓದುವ ಮಕ್ಕಳು, ಮತ್ತೊಂದೆಡೆ ರಸ್ತೆಬದಿಯಲ್ಲಿ ಪತ್ರಿಕೆ ಮಾರುವ ಮಕ್ಕಳು. ಒಂದೆಡೆ ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಕುಟುಂಬಗಳು, ಮತ್ತೊಂದೆಡೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಕುಟುಂಬಗಳು. ಒಂದೆಡೆ ಮಕ್ಕಳಿಗೆ ವಿದೇಶಿ ಪ್ರವಾಸ, ದುಬಾರಿ ಆಟಿಕೆಗಳು, ಅತ್ಯಾಧುನಿಕ ಶಿಕ್ಷಣ; ಮತ್ತೊಂದೆಡೆ ಶಾಲೆಗೆ ಹೋಗಲು ಚಪ್ಪಲಿಯೂ ಇಲ್ಲದ ಮಕ್ಕಳು.
ಸರ್ಕಾರಿ ಶಾಲೆಗಳನ್ನು ಉಳಿಸುವುದು ಕೇವಲ ಒಂದು ಶಾಲಾ ಕಟ್ಟಡವನ್ನು ಉಳಿಸುವುದಲ್ಲ. ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು ಮತ್ತು ಗ್ರಾಮೀಣ ಸಮುದಾಯಗಳ ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶವನ್ನು ಉಳಿಸುವುದಾಗಿದೆ. ಸರ್ಕಾರಿ ಶಾಲೆ ಎಂದರೆ ಎಲ್ಲ ವರ್ಗಗಳ ಮಕ್ಕಳು ಒಟ್ಟಿಗೆ ಕಲಿಯುವ ಸಾರ್ವಜನಿಕ ಸ್ಥಳ. ಅಲ್ಲಿ ಮಕ್ಕಳ ನಡುವೆ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ಗೋಡೆಗಳು ಕಡಿಮೆಯಾಗುವ ಅವಕಾಶವಿದೆ. ಈ ವ್ಯವಸ್ಥೆ ದುರ್ಬಲಗೊಂಡರೆ ಶಿಕ್ಷಣದ ಜೊತೆಗೆ ಸಾಮಾಜಿಕ ಸಮಾನತೆಯ ಆಶಯವೂ ದುರ್ಬಲಗೊಳ್ಳುತ್ತದೆ.
ಮಕ್ಕಳ ದಿನಾಚರಣೆಯಂದು ಶಾಲೆಗಳಲ್ಲಿ ನಡೆಯುವ ಸಂಭ್ರಮವನ್ನು ವಿರೋಧಿಸುವ ಅಗತ್ಯವಿಲ್ಲ. ಪ್ರತಿಯೊಂದು ಮಗುವೂ ನಗಬೇಕು, ಆಡಬೇಕು, ಹಾಡಬೇಕು, ಕಲಿಯಬೇಕು. ಆದರೆ ಈ ಸಂಭ್ರಮ ಕೆಲವೇ ಮಕ್ಕಳಿಗೆ ಸೀಮಿತವಾಗಬಾರದು. ಬೀದಿಯಲ್ಲಿ ದುಡಿಯುವ ಮಗುವಿಗೂ ಶಾಲೆಯಲ್ಲಿ ಸಂಭ್ರಮಿಸುವ ಮಗುವಿನಷ್ಟೇ ಹಕ್ಕು ಮತ್ತು ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಆಳುವವರು ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಿದೆ.
( ಲೇಖನದಲ್ಲಿ ಬಳಸಿದ ಅಂಕಿ-ಅಂಶಗಳ ಮೂಲಗಳು : ಯುನಿಸೆಫ್ – Child Labour and Schooling in India (2024), ಕೇಂದ್ರ ಸರಕಾರ – Economic Survey 2025–26, ಕೇಂದ್ರ ಸರಕಾರ – Children in India 2025, ಕೇಂದ್ರ ಸರಕಾರ – ಮಕ್ಕಳ ಭಿಕ್ಷಾಟನೆ ಕುರಿತ ಅಂಕಿ-ಅಂಶ, ಏಪ್ರಿಲ್ 2026, ಕೇಂದ್ರ ಸರಕಾರ – SMILE ಯೋಜನೆಯಡಿ ಮಕ್ಕಳ ಪುನರ್ವಸತಿ, ಆಗಸ್ಟ್ 2026, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019–21) )
ಇದನ್ನೂ ನೋಡಿ : ಎಸ್ಐಆರ್ ಕರ್ನಾಟಕ | ಪತ್ತೆಯಾದ ವಿದೇಶಿ ಪ್ರಜೆಗಳೆಷ್ಟು? ಬಾಂಗ್ಲಾದೇಶದವರು ಎಷ್ಟು? Janashakthi Media
