ಯು.ಎಸ್ ಮಧ್ಯಂತರ ಚುನಾವಣೆಯ ಫಲಿತಾಂಶಗಳ ಬಗ್ಗೆ ಪ್ರಶ್ನೆಗಳು – 2 : ರಿಪಬ್ಲಿಕನ್ ಪರಾಭವಕ್ಕೆ ಟ್ರಂಪ್ ಕಾರಣವಾ?  ಟ್ರಂಪ್ ದುರ್ಬಲ ಅಧ್ಯಕ್ಷರಾಗ್ತಾರಾ?

Please follow and like us:
ವಸಂತರಾಜ ಎನ್.ಕೆ
ಯು.ಎಸ್ 2026 ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು ಯು.ಎಸ್ ನಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಅಚ್ಚರಿ. ಹರ್ಷ ಎರಡನ್ನೂ ತಂದಿವೆ. ಜಗತ್ತಿನ ಎಲ್ಲೆಡೆ ಉಗ್ರ ಬಲಪಂಥದ ಪ್ರಭಾವ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಬ್ರೆಜಿಲ್, ಇಸ್ರೇಲ್ ಚುನಾವಣಾ ಫಲಿತಾಂಶಗಳ ಬೆನ್ನಲ್ಲಿ ಬಂದ ಯು.ಎಸ್ ಫಲಿತಾಂಶಗಳು ಉಗ್ರ ಬಲಪಂಥವನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆಯೆಂಬ ಆಶಾಭಾವನೆ ಮೂಡಿಸಿದೆ. ಈ ಫಲಿತಾಂಶಗಳ ಬಗ್ಗೆ ಎದ್ದಿರುವ ಕೆಲವು ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುವುದು ಆ ಕುರಿತು ಹೆಚ್ಚಿನ ಮಾಹಿತಿ ತಿಳಿದಿಕೊಳ್ಳುವ ಮತ್ತು ವಿಶ್ಲೇಷಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಇದನ್ನು ನೀಲೀ ಸುನಾಮಿ ಎನ್ನಬಹುದೇ? ಚಾರಿತ್ರಿಕ ಪ್ರಥಮಗಳು ಯಾವುವು? ಇದಕ್ಕೆ ಇರಾನ್ ಯುದ್ಧ ಕಾರಣವೇ? – ಈ ಪ್ರಶ್ನೆಗಳಿಗೆ ಈ ಲೇಖನಮಾಲೆಯ ಭಾಗ 1 ರಲ್ಲಿ ಉತ್ತರಿಸಲಾಗಿತ್ತು. ಈ ಸೋಲಿಗೆ ಇತರ ಪ್ರಮುಖ ಕಾರಣಗಳಿವೆಯೇ? ಟ್ರಂಪ್ ಸರಕಾರದ ಮೇಲೆ ಯಾವ ಪರಿಣಾಮ ಬೀರಲಿದೆ?  _ ಈ ಪ್ರಶ್ನೆಗಳಿಗೆ ಈ ಭಾಗ-2 ರಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನವಿದೆ. ಯು.ಎಸ್ ರಾಜಕೀಯದ ಮೇಲೆ ಪರಿಣಾಮಗಳೇನು? ಇದರಿಂದ ಇರಾನ್ ಯುದ್ಧ ನಿಲ್ಲುತ್ತಾ? ಟ್ರಂಪ್ ವಿದೇಶ ನೀತಿಯ ಮೇಲೆ, ಭಾರತದ ವಾಣಿಜ್ಯ ಒಪ್ಪಂದ, ಸುಂಕ ದರದ ಮೇಲೆ ಪರಿಣಾಮಗಳೇನು? – ಈ ಪ್ರಶ್ನೆಗಳಿಗೆ ಉತ್ತರವನ್ನು  ಮುಂದಿನ ಭಾಗಗಳಲ್ಲಿ ಕಂಡುಕೊಳ್ಳಲಾಗುವುದು.

4. ರಿಪಬ್ಲಿಕನ್ ಪಕ್ಷದ ಈ ಭಾರೀ ಸೋಲಿಗೆ ಕಾರಣಗಳೇನು ?

ಎನ್.ಬಿ.ಸಿ ನ್ಯೂಸ್ ಎಕ್ಸಿಟ್ ಪೋಲ್ ಗಳ ಪ್ರಕಾರ, ಈ ಚುನಾವಣೆಗಳಲ್ಲಿ ಮತದಾನದ ಪ್ರಧಾನ ಆಶಯ ಟ್ರಂಪ್ ನೀತಿಗಳನ್ನು ವಿರೋಧಿಸುವುದು ಎಂದು 60% ಜನ ಹೇಳಿದ್ದಾರೆ, ಅಧ್ಯಕ್ಷರಾಗಿ ಟ್ರಂಪ್ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು 63% ಜನ ಹೇಳಿದ್ದಾರೆ. ರಿಪಬ್ಲಿಕನ್ ಬಹುಮತವಿದ್ದ ಕಾಂಗ್ರೆಸ್ (ಪಾರ್ಲಿಮೆಂಟ್) ಸಹ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು 77% ಜನ ಹೇಳಿದ್ದಾರೆ. ಅವರ ಆರ್ಥಿಕ ನೀತಿಗಳು ದೇಶದ ಆರ್ಥಿಕತೆಯನ್ನು ಇನ್ನಷ್ಟು ದುರ್ಭರಗೊಳಿಸಿವೆ ಎಂದು 66% ಜನ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಣದುಬ್ಬರ-ಬೆಲೆಏರಿಕೆ ಗಳಿಂದ ತನ್ನ ಕುಟುಂಬ ಸಂಕಷ್ಟಕ್ಕೊಳಗಾಗಿದೆ ಎಂದು 79% ಜನ ಹೇಳಿದ್ದಾರೆ. ಟ್ರಂಪ್ ಅವರ ಆಮದು ಸುಂಕದ ನೀತಿ ದೇಶದ ಆರ್ಥಿಕತೆಗೆ ಆಘಾತವುಂಟು ಮಾಡಿತು ಎಂದು 64% ಜನ ಅಭಿಪ್ರಾಯ ಪಟ್ಟಿದ್ದಾರೆ. ವಲಸೆ ನಿಯಂತ್ರಣದಲ್ಲಿ  ಟ್ರಂಪ್ ಆಡಳಿತ ಮತ್ತು ಸಂಭಂಧಿತ ICE ಇಲಾಖೆ ಹದ್ದು ಮೀರಿ ವರ್ತಿಸಿದೆ ಎಂದು 58% ಜನ ಅಭಿಪ್ರಾಯ ಪಟ್ಟಿದ್ದಾರೆ.

ಹೀಗೆ ಇರಾನ್ ಯುದ್ಧದಿಂದ ಮಾತ್ರವಲ್ಲ, ಟ್ರಂಪ್ ಅವರ ಇನ್ನೆರಡು ಪ್ರಮುಖ ನೀತಿಗಳಾದ ಇತರ ದೇಶಗಳ ಮೇಲೆ ಹೂಡಿದ ಸುಂಕ ಯುದ್ಧ ಮತ್ತು ಬಿಳಿಯರಲ್ಲದ ವಲಸಿಗರ ವಿರುದ್ಧ ಕಟು ನೀತಿಗಳಿಂದ ಸಹ ತೀವ್ರ ಅತೃಪ್ತಿ ಮತ್ತು ಆಕ್ರೋಶ ಉಂಟಾಗಿತ್ತು, ಎಂದು ಎಕ್ಸಿಟ್-ಪೋಲ್ ಸೂಚಿಸುತ್ತದೆ.

ಕಳೆದ ಕೆಲವು ದಶಕಗಳ ಸತತ ಅಪ-ಕೈಗಾರಿಕೀಕರಣದ ನಂತರ ಯು.ಎಸ್ ನಲ್ಲಿ, ಶಸ್ತ್ರಾಸ್ತ್ರ, ಸಾಫ್ಟ್ ವೇರ್, ಉನ್ನತ ತಂತ್ರಜ್ಞಾನದ  ಕೆಲವು ವಸ್ತು-ಯಂತ್ರಗಳನ್ನು ಬಿಟ್ಟರೆ, ಇತರ (ವಿಶೇಷವಾಗಿ ದೈನಿಕ ಬಳಕೆಯ) ಎಲ್ಲ ಸರಕುಗಳನ್ನು ಆಮದು ಮಾಡುವ ಸ್ಥಿತಿ ಇತ್ತು. ವ್ಯಂಗ್ಯವಾಗಿ ಯು.ಎಸ್ ಟಾಯ್ಲೆಟ್ ಪೇಪರ್, ಮೇಣದ ಬತ್ತಿ ಸಹ ಆಮದು ಮಾಡ್ತದೆ ಎನ್ನಲಾಗುತ್ತದೆ. ಟ್ರಂಪ್ ಅವರ ನೀತಿಯ ಘೋಷಿತ ಉದ್ದೇಶ ವಿದೇಶೀ ಆಮದನ್ನು (ಅದನ್ನು ತುಟ್ಟಿ ಮಾಡುವುದರ ಮೂಲಕ) ಕಡಿಮೆ ಮಾಡಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದಾಗಿತ್ತು. ಆದರೆ ಪ್ರಾಯೋಗಿಕವಾಗಿ ಎಲ್ಲ ದೇಶಗಳ ಮೇಲೆ ಸಾರಿದ ಬೇಕಾಬಿಟ್ಟಿ ಸುಂಕ-ಯುದ್ಧದ ನೀತಿ ಬಿಟ್ಟರೆ ದೇಶೀ ಉತ್ಪಾದನೆಗೆ ಯಾವುದೇ ಕ್ರಮವಿಲ್ಲದೆ, ಎಲ್ಲ ದೈನಿಕ ವಸ್ತುಗಳ ಬೆಲೆಗಳು ವಿಪರೀತವಾಗಿ ಏರಿದವು. ಮಾತ್ರವಲ್ಲ, ಆಗಾಗ ದೇಶವಾರು ಸುಂಕ-ದರ ಬದಲಾಯಿಸುತ್ತಾ ಹೋಗಿದ್ದರಿಂದ ರಫ್ತುದಾರ ದೇಶಗಳಲ್ಲಿ ಅನಿಶ್ಚಿತತೆ ಮತ್ತು ಜಾಗತಿಕ ಸರಕು ಸಾಗಾಣಿಕೆ ಸರಪಣಿ ಅಸ್ತವ್ಯಸ್ತವಾಗಿ ಕೊರತೆ ಮತ್ತು ಅದರಿಂದಾಗಿ ಇನ್ನಷ್ಟು ಹೆಚ್ಚು ಬೆಲೆಏರಿಕೆ ಉಂಟಾದವು.

ಮೊದಲ ಎರಡು ಅತಿ ದೊಡ್ಡ ಪ್ರಮಾಣದ ವಾಣಿಜ್ಯ ಸಂಬಂಧ ಹೊಂದಿದ್ದ ಮೆಕ್ಸಿಕೊ, ಕೆನಡಾ ಮತ್ತು ಯು.ಎಸ್ ಕೃಷಿ-ಕೈಗಾರಿಕಾ ವ್ಯವಸ್ಥೆಗಳು (ಹಿಂದಿನ ನಾಫ್ತಾ ಒಪ್ಪಂದದಿಂದಾಗಿ) ಘನಿಷ್ಟ ಸಂಬಂಧ ಮತ್ತು ಪರಸ್ಪರಾವಲಂಬನೆ ಹೊಂದಿದ್ದು ಸುಂಕ ಯುದ್ಧ ಅದನ್ನು ಅಸ್ತವ್ಯಸ್ತ ಗೊಳಿಸಿತು. ಚೀನಾ, ಕೆನಡಾಗಳ ಮೇಲೆ ಹೇರಿದ ಭಾರೀ ಸುಂಕಗಳಿಗೆ ಅವು ಹಲವು ಆಯಕಟ್ಟಿನ ಸರಕುಗಳಿಗೆ ಪ್ರತಿ ಸುಂಕ ಹೇರಿದ್ದು ಸಹ ಯು.ಎಸ್ ಕೃಷಿ-ಕೈಗಾರಿಕಾ ವ್ಯವಸ್ಥೆಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದವು.  ಅದು ದೈನಿಕ ಬಳಕೆಯ ಮತ್ತು ಹೆಚ್ಚಿನ ಇತರ ವಸ್ತುಗಳ ಕೊರತೆ, ಬೆಲೆಏರಿಕೆಗೆ ಕಾರಣವಾಗಿದ್ದು ಮಾತ್ರವಲ್ಲ, ಯು.ಎಸ್ ನ ಈಗಿರುವ ಕೈಗಾರಿಕೆ-ಕೃಷಿ ಉತ್ಪಾದನೆಯನ್ನು, ಆರ್ಥಿಕವನ್ನು ಅಸ್ತವ್ಯಸ್ತ ಗೊಳಿಸಿತು. ಇದು ಉದ್ಯೋಗದ ಮೇಲೂ  ದುಷ್ಪರಿಣಾಮ ಬೀರಿತು.

ಯ.ಎಸ್ ನಲ್ಲಿ ಜೀವನ ವೆಚ್ಚ ಬಿಕ್ಕಟ್ಟು

ಸುಂಕ ಯುದ್ಧ, ಇರಾನ್ ಯುದ್ಧದ ಹೊರತಾಗಿಯೂ ಅದರ ಮೊದಲೇ, ಭಾರೀ ಜೀವನ ವೆಚ್ಚ ಏರಿಕೆಯ ಮೂಲಕ ಹೆಚ್ಚಿನ ಜನವಿಭಾಗಗಳನ್ನು ತಟ್ಟಿತ್ತು. ಯು.ಎಸ್ ನ ಮರು-ಕೈಗಾರಿಕೀಕರಣ ಮತ್ತು ಅದರಿಂದ ಸೃಷ್ಟಿಯಾಗುವ ಉತ್ತಮ ಉದ್ಯೋಗಗಳ ಟ್ರಂಪ್ ಭರವಸೆಯಿಂದಾಗಿ ಅವರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಬೆಂಬಲ ನೀಡಿದ ಕಾರ್ಮಿಕ ವರ್ಗದ ವಿಭಾಗಗಳಿಗೆ ಭ್ರಮನಿರಸನವಾಯಿತು. ಬದಲಿಗೆ ಅವರ ಸುಂಕ-ಯುದ್ಧದ ನೀತಿ ಈಗಿರುವ ಕೈಗಾರಿಕೆಗಳನ್ನು ಅಸ್ತವ್ಯಸ್ತಗೊಳಿಸಿದ್ದು ಆಕ್ರೋಶವನ್ನು ಉಂಟು ಮಾಡಿತು. ಕೆನಡಾ ಮತ್ತು ಚೀನಾದ ಜತೆ ವ್ಯಾಪಾರದಲ್ಲಿ ಏರುಪೇರು ಮತ್ತು ಪ್ರತಿ-ಸುಂಕಗಳು ಕೃಷಿಯ ವೆಚ್ಚ ಮತ್ತು ರಫ್ತು ಮಾರುಕಟ್ಟೆ ಮೇಲೆ ತೀವ್ರ ದುಷ್ಪರಿಣಾಮ ಬೀರಿದವು. ಇದರಿಂದಾಗಿ ರಿಪಬ್ಲಿಕನ್ ಪಕ್ಷದ  ಭದ್ರನೆಲೆಗಳಾದ ಕೃಷಿ ಪ್ರಧಾನ ಮತ್ತು ಗ್ರಾಮೀಣ ರಾಜ್ಯ ಮತ್ತು ಪ್ರದೇಶಗಳಲ್ಲಿ ಸಹ ವ್ಯಾಪಕ ಅತೃಪ್ತಿ-ಆಕ್ರೋಶವುಂಟು ಮಾಡಿತು.

ಯು.ಎಸ್ ನಲ್ಲಿ ಯುರೋಪಿನ ಮೊದಲ ವಲಸಿಗರು ಮೂಲನಿವಾಸಿಗಳ ನರಮೇಧ ಮಾಡಿದ್ದರು. ಅದರ ನಂತರ ಯುರೋಪ್, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಶ್ಯಾಗಳಿಂದ ವಲಸಿಗರ ಹಲವು ಅಲೆಗಳು ಬಂದು, ಅದೊಂದು ವಲಸಿಗರ ದೇಶವೇ ಆಗಿ ಬಿಟ್ಟಿತ್ತು.  ಡೆಮೊಕ್ರಾಟರು ಮತಬ್ಯಾಂಕಿಗಾಗಿ ವಲಸಿಗರ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಹಾಗಾಗಿ ‘ಕಾನೂನುಬಾಹಿರ ವಲಸಿಗರ’ ವಿರುದ್ಧ ದೃಢ ಮತ್ತು ಕಠಿಣ ಕ್ರಮಗಳು ಟ್ರಂಪ್ ಅವರ ಪ್ರಮುಖ ನೀತಿ ಮತ್ತು ಭರವಸೆಯಾಗಿತ್ತು.  ನಿಜವಾಗಿಯೂ  ‘ಕಾನೂನುಬಾಹಿರ ವಲಸಿಗರ’ ಸಂಖ್ಯೆ ದೊಡ್ಡದೇನಲ್ಲ.  ಆದರೆ ಈ ನೀತಿಗೆ ಕಳೆದ ಕೆಲವು ದಶಕಗಳಲ್ಲಿ ಬಂದ ವಲಸಿಗರು ಬಿಟ್ಟರೆ, ಹಿಂದಿನ ವಲಸಿಗರ ಬೆಂಬಲವೂ ಇತ್ತು. ದೇಶದ ಸಮಸ್ಯೆಗಳೆಲ್ಲ ಇತ್ತೀಚೆಗೆ ಬಂದ ವಲಸಿಗರಿಂದಾಗಿ ಎಂದು ಆಳುವವರು ಅವರನ್ನು ನಂಬಿಸಿದ್ದರು. ಎಕ್ಸಿಟ್ ಪೋಲ್ ನಲ್ಲಿ 14% ಜನ, ವಲಸಿಗರು ದೇಶದ ಅತಿ ದೊಡ್ಡ ಸಮಸ್ಯೆ ಎಂದಿದ್ದರು ಎಂಬುದು ಗಮನಾರ್ಹ.  ಟ್ರಂಪ್ ಅದನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿ ಮಾಢಿದರು ಕೂಡಾ. ವಲಸೆಗೆ ಸಂಬಂಧಿಸಿದ (ಉದಾ: ಎಚ್.1ಬಿ, ಹಸಿರು ಕಾರ್ಡು, ನಾಗರಿಕತ್ವದ ನೀಡಿಕೆಯ) ಶರತ್ತುಗಳಿಗೆ ಸಂಬಂಧಿಸಿದ ಎಲ್ಲಾ ಕಾನೂನು, ನಿಯಮಗಳನ್ನು ಬಿಗಿಗೊಳಿಸಲಾಯಿತು.  ವಲಸೆ ನಿಯಂತ್ರಣಕ್ಕೆ ICE ಪಡೆಗಳಿಗೆ ಮಾರಕ ಶಸ್ತ್ರಗಳನ್ನು ಪೂರೈಸುವುದಲ್ಲದೆ ಅವರಿಗೆ ವಿಶೇಷ ಅಧಿಕಾರಗಳನ್ನು ಕೊಡಲಾಗಿತ್ತು. ಅವರು ‘ಕಾನೂನುಬಾಹಿರ ವಲಸಿಗರ’ನ್ನು ಗುರುತಿಸುವ ಬದಲು ಬಿಳಿಯರು ಬಿಟ್ಟು, ಕಳೆದ ಕೆಲವು ದಶಕಗಳಲ್ಲಿ ಬಂದ ಎಲ್ಲ ವಲಸಿಗರಿಗೆ ಬರಿಯ ಗುಮಾನಿ ಮೇಲೆ ಕಾನೂನುಬಾಹಿರವಾಗಿ ಕಿರುಕುಳ, ದಾಳಿ, ಹಿಂಸಾಚಾರ, ಬಂಧನ, ಅವಮಾನಕಾರಿ ರೀತಿಯಲ್ಲಿ ಗಡಿಪಾರುಗಳಂತಹ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಹಲವು ಯು.ಎಸ್ ನಾಗರಿಕರು,  ಗ್ರೀನ್ ಕಾರ್ಡು, ಕೆಲಸದ ವೀಸಾ  ಹೊಂದಿರುವವರು ಅಥವಾ ಅವರ ಕುಟುಂಬದವರು ಸಹ ಇಂತಹ ಕಾನೂನುಬಾಹಿರ ಕ್ರಮಗಳಿಗೆ ತುತ್ತಾದರು. ಈ ಕ್ರಮಗಳು ಲ್ಯಾಟಿನ್ ಅಮೆರಿಕ, ಆಫ್ರಿಕಾ, ಮುಸ್ಲಿಂ ದೇಶಗಳು, ಏಶ್ಯಾ ದಿಂದ ಇತ್ತೀಚಿನ ದಶಕಗಳಲ್ಲಿ ಬಂದ ವಲಸಿಗರ ತೀವ್ರ ಅತೃಪ್ತಿ, ಆಕ್ರೋಶಕ್ಕೆ ಕಾರಣವಾಗಿತ್ತು. ಅಧ್ಯಕ್ಷ ಟ್ರಂಪ್ DEI (Diversity, Equity, and Inclusion) ನೀತಿಗಳು ಎಂಧು ಕರೆಯಲಾಗುವ, ಚಾರಿತ್ರಿಕ ತಾರಮ್ಯದಿಂದ ಹಿಂದೆ ಬಿದ್ದಿರುವ ಮಹಿಳೆಯರು, ಅಲ್ಪಸಂಖ್ಯಾತ ಜನವಿಭಾಗಗಳನ್ನು ಒಳಗೊಳ್ಳುವ ವೈವಿಧ್ಯತೆ, ಸಮಾನತೆಗಳನ್ನು ಉತ್ತೇಜಿಸುವ ಈಗಾಗಲೇ ಇದ್ದ ಕ್ರಮಗಳನ್ನು ರದ್ದು ಮಾಡಿದ್ದೂ ಅತೃಪ್ತಿ, ಆಕ್ರೋಶಕ್ಕೆ ಕಾರಣವಾಗಿತ್ತು. ಬಿಳಿಯರಲ್ಲದ ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಾಗಿ ಡೆಮೊಕ್ರಾಟ್  ಬೆಂಬಲಿಗರು. ಆದರೆ ಮರು-ಕೈಗಾರಿಕೀಕರಣ, ಯುದ್ಧ-ವಿರೋಧಿ ಭರವಸೆಗಳಿಂದಾಗಿ ಟ್ರಂಪ್ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅದರ ಗಮನಾರ್ಹ ವಿಭಾಗಗಳನ್ನು ಗೆದ್ದುಕೊಂಡಿದ್ದರು.  ಈ ಚುನಾವಣೆಗಳಲ್ಲಿ ICE ಪಡೆಗಳ ಅತಿರೇಕಗಳಿಂದಾಗಿ ಮತ್ತು DEI ಕ್ರಮಗಳ ರದ್ದತಿಗಳಿಂದಾಗಿ ಅವರೆಲ್ಲರು ಡೆಮೊಕ್ರಾಟರನ್ನು ದೃಢವಾಗಿ ಬೆಂಬಲಿಸಿದರು. ಡೆಮೊಕ್ರಾಟ್ ಪ್ರಾಥಮಿಕ ಚುನಾವಣೆಗಳಲ್ಲಿ ಹಲವು ಬಿಳಿಯರಲ್ಲದ ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಎಡಪಂಥೀಯರು ಗೆದ್ದು ಅಭ್ಯರ್ಥಿಯಾಗಿದ್ದು ಸಹ ಈ ವಿಭಾಗಗಳಲ್ಲಿ ಮತದಾನದ ಮತ್ತು ಡೆಮೊಕ್ರಾಟರಿಗೆ ಬೆಂಬಲದ ಪ್ರಮಾಣ ಹೆಚ್ಚಲು ಕಾರಣವಾಗಿತ್ತು. ಎಚ್-1ಬಿ ನಿಯಮ ಬದಲಾವಣೆಗಳು, ICE ದಾಳಿಗಳು, ಕಿರುಕುಳಗಳು ಭಾರತೀಯ ಅಮೆರಿಕನ್ನರಲ್ಲಿ ಸಹ ಆಕ್ರೋಶ ಉಂಟು ಮಾಡಿದ್ದು ಡೆಮೊಕ್ರಾಟರಿಗೆ ಬೆಂಬಲ ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತೀಯ ಅಮೆರಿಕನ್ನರು ನಿರ್ಣಾಯಕವಾಗಿರುವ 85% ಕ್ಷೇತ್ರಗಳಲ್ಲಿ ಡೆಮೊಕ್ರಾಟರು ಗೆದ್ದಿದ್ದಾರೆ.

ಇದನ್ನೂ ಓದಿ :ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ಗೆ ಭಾರೀ ಮುಖಭಂಗ: ರಿಪಬ್ಲಿಕನ್ ಪಕ್ಷಕ್ಕೆ ಮತದಾರರ ಏಟು!

ICE ಪಡೆಗಳ ಅತಿರೇಕಗಳು
ICE ಪಡೆಗಳ ಅತಿರೇಕಗಳು

ಸರಕಾರದಲ್ಲಿ ಭ್ರಷ್ಟಾಚಾರ ತನಗೆ ನಿರ್ಣಾಯಕ ಅಥವಾ ಪ್ರಮುಖ ಸಮಸ್ಯೆಯೆಂದು 90% ಜನ ಹೇಳಿದ್ದಾರೆ ಎಂಬುದು ಗಮನಾರ್ಹ. ಟ್ರಂಪ್, ಯುದ್ಧ ಮಂತ್ರಿ ಹೆಗ್ ಸೆತ್, ವಿದೇಶಾಂಗ ಮಂತ್ರಿ ಮಾರ್ಕ್ ರುಬಿಯೊ ಮತ್ತು ಅವರ ಕುಟುಂಬದವರು, ನಿಕಟ ಸ್ನೇಹಿತರು ಇರಾನ್ ಯುದ್ಧದಿಂದ, ಸುಂಕ-ದರಗಳ ಮತ್ತು ಅದರಲ್ಲಿ ಬದಲಾವಣೆಗಳ ಘೋಷಣೆ-ಪೂರ್ವ ಮಾಹಿತಿಯಿಂದ ಮತ್ತು ಇತರ ಹಲವು ಅಧಿಕಾರದ ದುರುಪಯೋಗದಿಂದ ಭಾರೀ ಹಣ ಮಾಡಿದ್ದಾರೆ ಎಂಬ ಗಂಭೀರ ಆಪಾದನೆಗಳಿದ್ದವು. ಟ್ರಂಪ್ ಅವರ ಆದ್ಯತೆಗಳು ಸರಿಯಾಗಿಲ್ಲವೆಂದು 64%, ಜನ, ಅವರಿಗೆ ವೈಯಕ್ತಿಕ ಆಸಕ್ತಿಯೇ ಆದ್ಯತೆಯೆಂದು 62% ಜನ ಎಕ್ಸಿಟ್ ಪೋಲ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಶ್ವೇತ ಭವನದ ಪಕ್ಕದಲ್ಲಿ ಭಾರೀ ವೈಭವೋಪೇತ ‘ಬಾಲ್ ರೂಂ’, ರಾಜಧಾನಿಯಲ್ಲಿ ‘ವಿಜಯ ಸ್ಮಾರಕ’ ಕಟ್ಟಿಸುವ ಅವರ ದುಬಾರಿ ಯೋಜನೆಗಳು, ಜನತೆ ಎದುರಿಸುತ್ತಿರುವ ಜೀವನ ವೆಚ್ಚ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ಅಸಹ್ಯ, ಅಶ್ಲೀಲ, ಅಸೂಕ್ಷ್ಮ ವೆಂದು ಭಾವಿಸಲಾಯಿತು.  ಇವೆಲ್ಲದರಿಂದ ರಿಪಬ್ಲಿಕನ್ ಪಕ್ಷ ವ್ಯಾಪಕವಾಗಿ ಬೆಂಬಲ ಕಳೆದುಕೊಂಡಿತು.

ಯು.ಎಸ್ ಚುನಾವಣೆಗಳಲ್ಲಿ ಪ್ರತಿನಿಧಿಯ ಆಯ್ಕೆಯಲ್ಲದೆ, ಪ್ರತಿ ಕ್ಷೇತ್ರದಲ್ಲಿ ಕೆಲವು ಪ್ರಮುಖ ವಿವಾದಾಸ್ಪದ ವಿಷಯಗಳ ಬಗ್ಗೆ ಪ್ರಶ್ನೆ ಹಾಕಿ ಜನಮತಸಂಗ್ರಹ ಸಹ ನಡೆಯುತ್ತದೆ. ಈ ಚುನಾವಣೆಯಲ್ಲಿ ಹಲವು ಕಡೆ ಸೋತ ‘ಪಕ್ಷೇತರ’ ಡಾಟಾ ಸೆಂಟರ್ ಎನ್ನಲಾಗಿದೆ!  ಎ.ಐ ವಿಸ್ತರಣೆಗೆ ಪ್ರಮುಖವಾಗಿ ಬೇಕಾದ ಡಾಟಾ ಸೆಂಟರ್ ಗಳ ಸ್ಥಾಪನೆ ವಿಶೇಷವಾಗಿ ಗ್ರಾಮೀಣ ಪ್ರದೇಶದ 21 ಕ್ಷೇತ್ರಗಳಲ್ಲಿ ವಿವಾದಾಸ್ಪದ ವಿಷಯವಾಗಿತ್ತು. ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿ ಡಾಟಾ ಸೆಂಟರ್ ಗಳ ಸ್ತಾಪನೆಯ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಬೇಕೆಂದು ಜನಾದೇಶ ಬಂದಿದೆ. ಡಾಟಾ ಸೆಂಟರ್ ಗಳ ಸ್ಥಾಪನೆಗೆ, ಅದು ವಿದ್ಯುತ್ ಶಕ್ತಿ, ನೀರು ಗಳ ಅಭಾವ, ಬೆಲೆಏರಿಕೆಯ ಹಾಗೂ ಶಬ್ದ ಮತ್ತಿತರ ಮಾಲಿನ್ಯದ ಆತಂಕ ಕಾರಣ. ಡಾಟಾ ಸೆಂಟರ್ ಒಂದು ನಿರ್ದಿಷ್ಟ ಪ್ರಶ್ನೆಯಾಗಿರದ ಕ್ಷೇತ್ರಗಳಲ್ಲೂ, ಇಡೀ ದೇಶದಲ್ಲಿ ನಿರ್ದಿಷ್ಟವಾಗಿ ಡಾಟಾ ಸೆಂಟರ್ ಮತ್ತು ಎ.ಐ ಸಾಮಾನ್ಯವಾಗಿ ಸಹ ಚುನಾವಣಾ ವಿಷಯವಾಗಿತ್ತು. ಟ್ರಂಪ್ ಮತ್ತು ರಿಪಬ್ಲಿಕನ್ ನಾಯಕರು ಎ.ಐ ದೈತ್ಯ ಕಂಪನಿಗಳ ಮಾಲಕರ ಜತೆ ಅತ್ಯುತ್ತಮ ಸಂಬಂಧ ಹೊಂದಿದ್ದು ಅವರಿಗೆ ಭಾರೀ ಬೆಂಬಲ ಕೊಡುತ್ತಿದ್ದುದು, ಎ.ಐ ಮೇಲೆ ಯಾವುದೇ ನಿರ್ಬಂಧಗಳನ್ನು ವಿರೋಧಿಸಿದ್ದು ರಿಪಬ್ಲಿಕನ್ ಪಕ್ಷಕ್ಕೆ ಮುಳುವಾಯಿತು. ಎಕ್ಸಿಟ್ ಪೋಲ್ ನಲ್ಲಿ ಸಹ 76% ಜನ ತಮ್ಮ ಪ್ರದೇಶದಲ್ಲಿ ಡಾಟಾ ಸೆಂಟರ್ ಸ್ತಾಪನೆಯನ್ನು ವಿರೋಧಿಸಿದ್ದರು. ಎ.ಐ ಸಮಾಜಕ್ಕೆ ಕೆಡುಕು ಮಾಡುತ್ತಿದೆ ಎಂದು 57% ಜನ ಪೋಲ್ ನಲ್ಲಿ ಹೇಳಿರುವುದು ಗಮನಾರ್ಹ. ಗೆದ್ದ ಹಲವು ಗವರ್ನರ್ ಗಳು, ಕಾಂಗ್ರೆಸ್ ಪ್ರತಿನಿಧಿಗಳು ಡಾಟಾ ಸೆಂಟರ್ ಸ್ಥಾಪನೆಯ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಫೆಡರಲ್ ಕಾನೂನು ಮಾಡುತ್ತೇವೆ ಎಂದು ಭರವಸೆಯಿತ್ತಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ‘ಡಾಟಾ ಸೆಂಟರ್ ಬೇಡ’ ಪ್ರತಿಭಟನೆ

ಕ್ಯಾಲಿಫೋರ್ನಿಯಾದಲ್ಲಿ ‘ಡಾಟಾ ಸೆಂಟರ್ ಬೇಡ’ ಪ್ರತಿಭಟನೆ

ಟ್ರಂಪ್ ಅಧ್ಯಕ್ಷರಾಗಲು ಅಗತ್ಯವಾದ ಮಾನಸಿಕ ಸಾಮರ್ಥ್ಯ ಹೊಂದಿಲ್ಲವೆಂದು 57% ಜನ ಅಭಿಪ್ರಾಯ ಪಟ್ಟಿದ್ದಾರೆ ಪಕ್ಷದೊಳಗಿನ ಪ್ರಾಥಮಿಕ ಹಂತ ಸೇರಿದಂತೆ ಈ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ, ಟ್ರಂಪ್ ಸಾಕಷ್ಟು ಮಧ್ಯಪ್ರವೇಶ ಮಾಡಿದ್ದರು. ತಮ್ಮ ಕುರುಡು ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದರು. ಪಕ್ಷದೊಳಗಿನ ತಮ್ಮ ಟೀಕಾಕಾರರಿಗೆ  ಟಿಕೆಟ್ ಸಿಗದಂತೆ ಮಾಡಿದ್ದರು. ಅವರು ಟಿಕೆಟ್ ಕೊಡಿಸಿದ ಎಲ್ಲ ಅಭ್ಯರ್ಥಿಗಳೂ ಭಾರೀ ಸೋಲು ಅನುಭವಿಸಿದ್ದಾರೆ. ಇಂತಹ ಅಭ್ಯರ್ಥಿಗಳು ಅಸಮರ್ಥರೂ ಜನಪ್ರಿಯತೆ ಇಲ್ಲದವರೂ ಆಗಿರುವುದೂ, ಟ್ರಂಪ್ ಮತ್ತು ಅವರ ಮಧ್ಯಪ್ರವೇಶದ ವಿರುದ್ಧ ಆಕ್ರೋಶ ಎರಡೂ ಕಾರಣವಾಗಿರಬಹುದು.   ಹೀಗೆ ಟ್ರಂಪ್ ಅವರ ನೀತಿಗಳು ಮತ್ತು ಅವರ ವೈಯಕ್ತಿಕ ವರ್ತನೆ, ಒಟ್ಟಾರೆ ವೈಫಲ್ಯಗಳೇ ಈ ‘ನೀಲಿ ಸುನಾಮಿ’ಗೆ ಪ್ರಧಾನವಾಗಿ ಕಾರಣವಾದವು ಎನ್ನಬಹುದು.

ಈ ಚುನಾವಣೆಗಳಲ್ಲಿ ಡೆಮೊಕ್ರಾಟಿಕ್ ಪಕ್ಷ ಗೆಲ್ಲಲಿಲ್ಲ. ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷ ತನ್ನ ನೀತಿ, ಧೋರಣೆಗಳಿಂದ ‘ಆತ್ಮಹತ್ಯೆ’ ಮಾಡಿಕೊಂಡಿತು ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. ಇದರಲ್ಲಿ ಸ್ವಲ್ಪ ನಿಜಾಂಶವಿದ್ದರೂ, ಇದು ಪೂರ್ಣ ನಿಜವಲ್ಲ. ಡೆಮೊಕ್ರಾಟಿಕ್ ಪಕ್ಷ ಇಡಿಯಾಗಿ ಅಲ್ಲದಿದ್ದರೂ, ಅದರ ಹಲವು ಅಭ್ಯರ್ಥಿಗಳು ಜೀವನ ವೆಚ್ಚದ ಬಿಕ್ಕಟ್ಟು, ಕಲ್ಯಾಣ ಯೋಜನೆಗಳಲ್ಲಿ ಕಡಿತ, ವಿದ್ಯಾರ್ಥಿ ಸಾಲಗಳು, ಮೆಡಿಕೇರ್, ICE ಪಡೆಗಳ ಅತಿರೇಕಗಳು, ಭ್ರಷ್ಟಾಚಾರ, ಡಾಟಾ ಸೆಂಟರ್ – ಜನರನ್ನು ಬಾಧಿಸುವ ಈ ಸಮಸ್ಯೆಗಳನ್ನು ಎತ್ತಿ ಅದಕ್ಕೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಪ್ರಚಾರದಲ್ಲಿ ಹೇಳಿದ್ದರು. ಇರಾನ್ ಯುದ್ಧ ಮತ್ತು ತೈಲ ಮತ್ತಿತರ ಬೆಲೆ ಏರಿಕೆ, ಆರ್ಥಿಕ ದುಸ್ಥಿತಿಗಳ ನಡುವಿನ ನೇರ ಸಂಬಂಧಗಳ ಬಗ್ಗೆ  ಮಾತಾಡಿದರು. ಇರಾನ್ ಯುದ್ಧದಲ್ಲಿ ಯು.ಎಸ್ ನ ಭದ್ರತಾ ಅಥವಾ ಇನ್ಯಾವುದೇ ಹಿತಾಸಕ್ತಿಯಿಲ್ಲ, ಇಸ್ರೇಲಿ ನಾಯಕರ ಮತ್ತು ಯು.ಎಸ್ ಮಿಲಿಟರಿ-ಕೈಗಾರಿಕಾ ಸಂಕೀರ್ಣದ ಹಿತಾಸಕ್ತಿಗಳಿಗಾಗಿ ಯು.ಎಸ್ ಜನತೆಯನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಒಂದು ಜನಾಂಗದ್ವೇಷಿ ಯಹೂದಿ-ಮೂಲಭೂತವಾದಿ ದೇಶವಾದ ಇಸ್ರೇಲಿ ಪ್ರಧಾನಿ ನೇತನ್ಯಾಹು ಒತ್ತಡದ ಮೇಲೆ ಗಾಜಾದಲ್ಲಿ ನರಮೇಧ ನಡೆಸಲಾಗುತ್ತಿದೆ. ಇಸ್ರೇಲಿ ಏಜೆಂಟನಾಧ ಬಾಲಕಾಮಿ ಎಪ್-ಸ್ಟೀನ್ ನ ಫೈಲ್ಸ್ ನಲ್ಲಿ ಹೆಸರು ಇದ್ದಿದ್ದನ್ನು ಇಟ್ಟುಕೊಂಡು, ಟ್ರಂಪ್ ಅವರನ್ನು ಬ್ಲಾಕ್ ಮೇಲ್ ಮಾಡಿ ಯುದ್ಧಕ್ಕೆ ಎಳೆಯಲಾಯಿತು ಎಂದೂ ಕೆಲವರು ಪ್ರಚಾರ ಮಾಡಿದರು. ಹಾಗಾಗಿ ಟ್ರಂಪ್ ಅವರ ನೀತಿ, ವೈಯಕ್ತಿಕ ವರ್ತನೆ, ಒಟ್ಟಾರೆ ವೈಫಲ್ಯಗಳಿಂದ ಉಂಟಾದ ಅತೃಪ್ತಿ-ಆಕ್ರೋಶಗಳನ್ನು ಬಳಸಿ, ಜನರನ್ನು ಬಾಧಿಸುವ ವಿಷಯಗಳನ್ನು ಎತ್ತಿಕೊಂಡು ಸಕಾರಾತ್ಮಕ ಹಾದಿಯಲ್ಲಿ ಅದನ್ನು ಹರಿಸುವುದರಲ್ಲಿ ಡೆಮೊಕ್ರಾಟರು ಸಫಲರಾದರು ಎನ್ನಬಹುದು. ಅದು ಈ ‘ನೀಲಿ ಸುನಾಮಿ’ಗೆ ಕಾರಣವಾಯಿತು.

5. ಚುನಾವಣಾ ಫಲಿತಾಂಶ ಟ್ರಂಪ್ ಆಡಳಿತದ ಮೇಲೆ ಯಾವ ಪರಿಣಾಮವಾಗಲಿದೆ? ಡೆಮೊಕ್ರಾಟರು ಈ ಭಾರೀ ಬಹುಮತದಿಂದ ಏನು ಮಾಡಬಹುದು ?

ಅಧ್ಯಕ್ಷ ಟ್ರಂಪ್ ಡೆಮೊಕ್ರಾಟರು ಗೆದ್ದರೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಚುನಾವಣೆಯೇ ನ್ಯಾಯಯುತವಾಗಿರಲಿಲ್ಲವೆಂದು ಹೇಳಬಹುದು. ಅದರ ವಿರುದ್ಧ ಕಾನೂನು ಅಥವಾ ಅಧ್ಯಕ್ಷೀಯ ಕ್ರಮ ಕೈಗೊಳ್ಳಬಹುದು ಅಥವಾ ಅವರ ‘ಮಗ’ (ಮೇಕ್ ಅಮೆರಿಕ ಗ್ರೇಟ್ ಅಗೈನ್) ಸಂಘಟನೆ ಚುನಾವಣೆಯ ಫಲಿತಾಂಶ ವಿರೋಧಿಸಿ ಹಿಂಸಾಚಾರಕ್ಕೆ ತೊಡಗಬಹುದು – ಎಂದೆಲ್ಲ ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಹಾಗಂತ ಆಗಾಗ ಅವರು ಚುನಾವಣಾ ಪ್ರಚಾರದಲ್ಲಿಯೇ ಹೇಳಿದ್ದರು. ಮೊದಲ ದಿನ ಚುನಾವಣೆ ಫಲಿತಾಂಶವನ್ನು ಟ್ರಂಪ್ ಒಪ್ಪಿಕೊಂಡರು ಎಂಬುದೇ ವಿಶೇಷ. ಇದು ಬಹುಶಃ ‘ನೀಲಿ ಸುನಾಮಿ’ ಎಂದು ಕರೆಯಲಾದ ಡೆಮೊಕ್ರಾಟರ ಭಾರೀ ವಿಜಯದ ಪರಿಣಾಮವಿರಬಹುದು ಮತ್ತು ಟ್ರಂಪ್ ಅವರ ಇರಾನ್ ಯುದ್ಧವನ್ನು ವಿರೋಧಿಸಿದ ‘ಮಗ’ ಸಂಘಟನೆಯ ದೊಡ್ಡ ವಿಭಾಗದ ಸಕ್ರಿಯ ಬೆಂಬಲವಿಲ್ಲದೆ ಚುನಾವಣೆಯ ಫಲಿತಾಂಶ ವಿರೋಧಿಸಿ ಹಿಂಸಾಚಾರ ಸಂಘಟಿಸುವುದು ಕಷ್ಟವಾದ್ದರಿಂದಲೂ ಇರಬಹುದು. ಫಲಿತಾಂಶದ  4-5 ದಿನಗಳ ನಂತರ (ನವೆಂಬರ್ 10 ರಂದು) ಚುನಾವಣಾ ಅಕ್ರಮಗಳ ಕುರಿತು ಮತ್ತೆ ಹಳೆರಾಗ ಎತ್ತಿದ್ದಾರೆ. ಆದರೂ ಇರಾನ್ ಯುದ್ಧ, ಜೀವನ ವೆಚ್ಚ ಏರಿಕೆ, ICE ಪಡೆಗಳ ಕಠಿಣ ಕ್ರಮಗಳು ರಿಪಬ್ಲಿಕನ್ ಸೋಲಿಗೆ ಕಾರಣವಾದವು. ಡೆಮೊಕ್ರಾಟರು ಉತ್ತಮವಾಗಿ ಪ್ರಚಾರ ಮಾಡಿದರು ಎಂದು ಟ್ರಂಪ್ ಒಪ್ಪಿಕೊಂಡಿರುವುದು ಗಮನಾರ್ಹ.

ದುರ್ಬಲ ಅಧ್ಯಕ್ಷ – ಟ್ರಂಪ್ ಎಲ್ಲಿಗೂ ಹೋಗುವುದಿಲ್ಲ!
ದುರ್ಬಲ ಅಧ್ಯಕ್ಷ – ಟ್ರಂಪ್ ಎಲ್ಲಿಗೂ ಹೋಗುವುದಿಲ್ಲ! (ಕೃಪೆ: ಸತೀಶ ಆಚಾರ್ಯ)

ಡೆಮೊಕ್ರಾಟರು ಇತ್ತೀಚಿನ (ನವೆಂಬರ್ 10 ರಾತ್ರಿ 10 ಗಂಟೆ ಹೊತ್ತಿಗೆ) ವರದಿಗಳ ಪ್ರಕಾರ ಪ್ರತಿನಿಧಿ ಸಭೆ (ಕೆಳ ಸದನ) ಯಲ್ಲಿ 435ರಲ್ಲಿ 254 (ರಿಪಬ್ಲಿಕನ್ನರು 165), ಸೆನೆಟ್ ನಲ್ಲಿ 100 ಸೀಟುಗಳಲ್ಲಿ 54 ((ರಿಪಬ್ಲಿಕನ್ನರು 44) ಸೀಟಿನ ಭಾರೀ ಬಹುಮತ ಪಡೆದಿದ್ದಾರೆ. ಸದನದ ನಾಯಕರಾಗಿ (ಭಾರತದ ಸ್ಪೀಕರ್ ನಂತಹ ಹುದ್ದೆ) ಎರಡೂ ಸದನಗಳಲ್ಲಿ ಡೆಮೊಕ್ರಾಟರೇ ಆಯ್ಕೆಯಾಗುತ್ತಾರೆ. ನಾಯಕರು ಸದನದ ಅಜೆಂಡಾವನ್ನು ನಿರ್ಧರಿಸುತ್ತಾರೆ. ಅಧ್ಯಕ್ಷರು ಅಥವಾ ಸದಸ್ಯರು ತರುವ ಕಾನೂನು, ಕ್ರಮಗಳಲ್ಲಿ ಯಾವುದನ್ನು ಯಾವಾಗ ಸದನ ಎತ್ತಿಕೊಳ್ಳುತ್ತದೆ ಎಂದು ನಿರ್ಧರಿಸುವುದು ಇವರೇ.

ಡೆಮೊಕ್ರಾಟರ ಈ ಭಾರೀ ಬಹುಮತದಿಂದಾಗಿ ಬಜೆಟ್ ಪ್ರಸ್ತಾವದಿಂದ ಆರಂಭಿಸಿ, ಅಧ್ಯಕ್ಷರು ಅಥವಾ ಸದಸ್ಯರು ತರುವ ಹೆಚ್ಚಿನ ಕಾನೂನು, ಕ್ರಮಗಳ ಕುರಿತು, ಸದನ ಮತ್ತು ಅಧ್ಯಕ್ಷರ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಅತಿ ಹೆಚ್ಚು. ಬಜೆಟ್ 2027ರ ಕುರಿತು ಘರ್ಷಣೆಯಿಂದ, ಹಿಂದೆ ಆದಂತೆ ಸರಕಾರಿ ಕೆಲಸಗಳೆಲ್ಲ ವಾರಗಟ್ಟಲೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಜೆಟ್ ನಲ್ಲಿ ಚಾರಿತ್ರಿಕವಾಗಿಯೇ ಅತಿ ಹೆಚ್ಚಿನ 1.5 ಟ್ರಿಲಿಯನ್ (ಅಥವಾ 1500 ಶತಕೋಟಿ) ರಕ್ಷಣಾ ಬಜೆಟ್ ನಲ್ಲಿ ಡೆಮೊಕ್ರಾಟರು ತೀವ್ರ ಕಡಿತ ಮಾಡಲು ಒತ್ತಾಯಿಸಬಹುದು. ಮೆಡಿಕೇರಿನಲ್ಲಿ, ಕಲ್ಯಾಣ ಯೋಜನೆಗಳಲ್ಲಿ ಕಡಿತವನ್ನು ಮಾಡದಿರಲು ಅಥವಾ ಇನ್ನಷ್ಟು ಹೆಚ್ಚಿಸಲು ಒತ್ತಡ ಹಾಕಬಹುದು. ಕೊನೆಗೆ ಈ ವಿಷಯಗಳ ಬಗ್ಗೆ ಚೌಕಾಶಿ ನಡೆದು ಒಂದು ಒಪ್ಪಂದಕ್ಕೆ ಬರಬಹುದು.

ಅಧ್ಯಕ್ಷ ಟ್ರಂಪ್ ಸುಂಕ ಆರಂಭಿಸಿ ತ್ರಿಶಂಕು ಆಗಿರುವ ಹಲವು ದೇಶಗಳ ಜತೆಗಿನ ಸುಂಕ ಇತ್ಯಾದಿ ವಾಣಿಜ್ಯ ಒಪ್ಪಂದಗಳ ಬಗೆಗೂ (ಪ್ರಮುಖವಾಗಿ ಕೆನಡಾ) ಎರಡೂ ಸದನಗಳು ಮಧ್ಯಪ್ರವೇಶ ಮಾಡಬಹುದು. ಇದು ಬೆಲೆಏರಿಕೆ ಮತ್ತು ಪೂರೈಕೆ ಅಸ್ಯವ್ಯಸ್ತತೆಗೆ ಕಾರಣವಾಗಿದ್ದು ಡೆಮೊಕ್ರಾಟರು ಇದಕ್ಕೆ ಆದ್ಯತೆ ನೀಡಬಹುದು. ICE ಪಡೆಗಳ ಕಾನೂನುಬಾಹಿರ ಕಠಿಣ ಕ್ರಮಗಳ ಬಗೆಗೂ ಟ್ರಂಪ್ ಆಡಳಿತವನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು. ಅಧ್ಯಕ್ಷರಿಗೆ ಕಾಂಗ್ರೆಸ್ ಮಂಜೂರು ಮಾಡಿದ ಕಾನೂನು, ಕ್ರಮ ಅಥವಾ ನಿರ್ಣಯಗಳನ್ನು ವಿಟೋ ಮಾಡುವ ಅಧಿಕಾರವಿರುವುದರಿಂದ ಮತ್ತು ಟ್ರಂಪ್ ಆ ಅಧಿಕಾರವನ್ನು ಬಳಸಲು ಹಿಂಜರಿಯದೆ ಇರುವುದರಿಂದ ಡೆಮೊಕ್ರಾಟರ ಕ್ರಮ ಯಶಸ್ವಿಯಾಗಲಿಕ್ಕಿಲ್ಲ. ಟ್ರಂಪ್ ಅವರು ಈಗಾಗಲೇ (ಇರಾನ್ ಯುದ್ಧ, ಸುಂಕ ಯುದ್ಧ  ಸೇರಿದಂತೆ) ಹೆಚ್ಚಿನ ಕ್ರಮಗಳನ್ನು ಕಾಂಗ್ರೆಸ್ ಮಂಜೂರಾತಿ ಬೇಕಾಗಿದ್ದಾಗಲೂ ಸುಗ್ರೀವಾಜ್ಞೆ ಗಳ ಮೂಲಕವೇ ತೆಗೆದುಕೊಂಡಿದ್ದಾರೆ.

ಆದರೆ ಪ್ರಮುಖವಾಗಿ ಆಧ್ಯಕ್ಷ ಟ್ರಂಪ್ ಮತ್ತು/ಅಥವಾ ಯುದ್ಧ ಮಂತ್ರಿ ಪೀಟ್ ಹೆಗೆಸೆತ್ ಮತ್ತು ಅಥವಾ ವಿದೇಶಾಂಗ ಮಂತ್ರಿ ಮಾರ್ಕ್ ರೂಬಿಯೊ ಇವರ ಮೇಲೆ ಮಹಾಭಿಯೋಗ (ಇಂಫೀಚ್ ಮೆಂಟ್) ಹೂಡುವುದು ಹೆಚ್ಚು ಕಡಿಮೆ ಖಚಿತ. ಹೆಚ್ಚಿನ ರಾಜಕೀಯ ವೀಕ್ಷಕರು ಅವರ ಮೊದಲ ಅವಧಿಯ ಅನುಭವದ ಆಧಾರದ ಮೇಲೆ ಅಧ್ಯಕ್ಷ ಟ್ರಂಪ್ ಅವರ ಮೇಲೆ ಹೂಡಲಿಕ್ಕಿಲ್ಲ ಎಂದು ಹೇಳುತ್ತಾರೆ.  ಪೀಟ್ ಹೆಗೆಸೆತ್ ಮತ್ತು/ಅಥವಾ ಮಾರ್ಕ್ ರೂಬಿಯೊ ವಿರುದ್ಧ ಮಹಾಭಿಯೋಗ ಹೂಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ಅದರ ಯಶಸ್ಸಿನ ಸಾಧ್ಯತೆ ಹೆಚ್ಚು. ಅದನ್ನು ತಡೆಯಲು ಇವರಿಬ್ಬರ ರಾಜೀನಾಮೆ ಕೊಡುವ (ಅಥವಾ ಟ್ರಂಪ್ ಅದನ್ನು ಕೇಳುವ) ಸಾಧ್ಯತೆಯೂ ಇದೆ. ಈಗಾಗಲೇ ರಿಪಬ್ಲಿಕನ್ ಸದಸ್ಯರೊಬ್ಬರು 8 ಆಪಾದನೆಗಳ ಮೇಲೆ ಪೀಟ್ ಹೆಗೆಸೆತ್ ಮೇಲೆ ಮಹಾಭಿಯೋಗ ಪ್ರಸ್ತಾವ ಇಟ್ಟಿದ್ದಾರೆ. ಮಹಾಭಿಯೋಗ ಅಲ್ಲದೆ ಅದಕ್ಕೆ ಬದಲಿಯಾಗಿ, ಇವರು ಮೂವರ ವಿರುದ್ಧವೂ ಕಾನೂನು/ಸಂವಿಧಾನಗಳ ಉಲ್ಲಂಘನೆಯ ನಿರ್ದಿಷ್ಟ ಆಪಾದನೆಗಳ ಮೇಲೆ  ಹಲವಾರು ಸದನದ ನ್ಯಾಂಗದ ತನಿಖೆಗಳನ್ನು ಆರಂಭಿಸಿ, ಈ ಮೂವರಿಗೂ ಸಾಕಷ್ಟು ಕಿರುಕುಳ ಕೊಡಬಹುದು. ಹಲವಾರು ಇಂತಹ ಪ್ರಕರಣಗಳು, ಆಪಾದನೆಗಳು ಈಗಾಗಲೇ ಇವೆ.

ಸುಂಕ ಯುದ್ಧ ಮತ್ತು ಮಧ್ಯಂತರ ಚುನಾವಣೆಗಳು
ಸುಂಕ ಯುದ್ಧ ಮತ್ತು ಮಧ್ಯಂತರ ಚುನಾವಣೆಗಳು

ಎ.ಐ, ಡಾಟಾ ಸೆಂಟರ್ ಕಂಪನಿಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರುವುದನ್ನು ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷ ವಿರೋಧಿಸುತ್ತದೆ. ಡೆಮೊಕ್ರಾಟರು ಹಲವು ರಾಜ್ಯಗಳಲ್ಲಿ ಗವರ್ನರ್ ಎರಡೂ ಸದನಗಳನ್ನು ಗೆದ್ದಿದ್ದು ಈ ರಾಜ್ಯಗಳಲ್ಲಿ ಈ ನಿರ್ಬಂಧಗಳನ್ನು ಜಾರಿಗೆ ತರಬಹುದು. ಯು.ಎಸ್ ಸಂವಿಧಾನದಲ್ಲಿ ರಾಜ್ಯದ ಸದನಗಳು ಮತ್ತು ಗವರ್ನರ್ ಗಳಿಗೆ ಸಾಕಷ್ಟು ಅಧಿಕಾರಗಳಿದ್ದು ಅದನ್ನು ಬಳಸಬಹುದು. ರಾಜ್ಯ ಕಾನೂನುಗಳನ್ನು ಅಧ್ಯಕ್ಷರು ಸಹ ವಿಟೋ ಮಾಡುವಂತಿಲ್ಲ. ICE ಪಡೆಗಳ ಕಾನೂನುಬಾಹಿರ ಕಠಿಣ ಕ್ರಮಗಳ ವಿರುದ್ಧ ಸಹ ಡೆಮೊಕ್ರಾಟರು ಕ್ರಮಕೈಗೊಳ್ಳಬಹುದು. ಕಾಂಗ್ರೆಸ್ ನಲ್ಲೂ  ಡೆಮೊಕ್ರಾಟರಿಗೆ ಭಾರೀ ಬಹುಮತವಿದ್ದು ಎ.ಐ, ಡಾಟಾ ಸೆಂಟರ್ ಕಂಪನಿಗಳ ಮೇಲೆ ನಿರ್ಬಂಧಗಳನ್ನು ಹೇರುವುದಕ್ಕೆ ಫೆಡರಲ್ ಕಾನೂನುಗಳನ್ನೂ ತರಬಹುದು.

ಹೀಗೆ ಟ್ರಂಪ್ ಅವರ ಮುಂದಿನ ಎರಡು ವರ್ಷಗಳ ಅಧ್ಯಕ್ಷಗಿರಿ ದುರ್ಬಲವಾಗಿರುವ, ಸತತ ದಾಳಿ ಎದುರಿಸಬೇಕಾದ ಅವಧಿಯಾಗಿರುವುದು ವಾಸ್ತವ. ಇದಕ್ಕೆ ಟ್ರಂಪ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ಯಾಕೆಂದರೆ ಪ್ರತಿ ದಿನ ತಾನು ಏನು ಮಾಡುತ್ತೇನೆ ಎಂದು ಟ್ರಂಪ್ ಅವರಿಗೆ ಗೊತ್ತಿರುವುದಿಲ್ಲ. ಆ ದಿನ ಏನು ಅನಿಸುತ್ತದೋ ಅದನ್ನು ಮಾಡುತ್ತಾರೆ ಎನ್ನಲಾಗಿದೆ. ರಿಪಬ್ಲಿಕನ್ನರಿಗೆ ಭಾರೀ ಪ್ರರಾಭವ ತಂದ ವಿಷಯಗಳಿಗೆ ಅವರು ಸಕಾರಾತ್ಮಕ ಪ್ರತಿಕ್ರಿಯೆ ತೋರಬಹುದು. ತೈಲ (ಅದರಲ್ಲೂ ಡಿಸೀಲ್) ಪೂರೈಕೆ ಹೆಚ್ಚಿಸಿ ಮತ್ತು ಬೆಲೆ ಇಳಿಸಲು ರಶ್ಯಾ ಜತೆ ಒಪ್ಪಂದ ಇತ್ಯಾದಿ ಕ್ರಮಗಳನ್ನು ಚುನಾವಣೆಯ ಮೊದಲೇ ಅವರು ಕೈಗೊಂಡಿದ್ದರು ಎಂದು ಗಮನಿಸಬಹುದು. ಇದನ್ನೇ ಸುಂಕ ಯುದ್ಧ, ವಾಣಿಜ್ಯ ಒಪ್ಪಂದದ ಷರತ್ತುಗಳು, ICE ಪಡೆಗಳ ಕಠಿಣ ಕ್ರಮಗಳಿಗೆ ಅಂಕುಶದ ಬಗೆಗೂ ಹೇಳಬಹುದು. ಈ ಕೆಲವು ಕ್ರಮಗಳನ್ನು ಕೈಗೊಳ್ಳಲು ಭಾರೀ ಪರಾಭವದಿಂದ ಭೀತರಾದ ರಿಪಬ್ಲಿಕನ್ ಪಕ್ಷ ಮತ್ತು ‘ಮಗ’ ಸಂಘಟನೆಯ ವಿಭಾಗಗಳೂ ಒತ್ತಡ ಹಾಕಬಹುದು. ಆದರೆ ಟ್ರಂಪ್ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ವ್ಯಕ್ತಿಯಲ್ಲ. ಆನೆಗಾತ್ರದ ಅಹಂ ಇರುವ ವ್ಯಕ್ತಿ. ಯಾರದೇ ಸಲಹೆಗೆ, ಒತ್ತಡಕ್ಕೆ ಬಗ್ಗುವ ವ್ಯಕ್ತಿಯಲ್ಲ. ಮೂರನೇ ಅವಧಿಯ ಅಧ್ಯಕ್ಷಗಿರಿ ಅವಕಾಶವಿಲ್ಲದಿರುವದರಿಂದ ಯಾವುದೇ ಲಂಗು ಲಗಾಮಿಲ್ಲದೆ ರಿಪಬ್ಲಿಕನ್ ಅಥವಾ ‘ಮಗ’ ಒತ್ತಡ ಲೆಕ್ಕಿಸದೆ ಅವೇ ಕ್ರಮಗಳನ್ನು ಇನ್ನಷ್ಟು ಕಠಿಣವಾಗಿ ಮುಂದುವರೆಸುವ ಸಾಧ್ಯತೆ ಇಲ್ಲದಿಲ್ಲ. ತನ್ನ ಹೆಸರು ‘ಶಾಶ್ವತಗೊಳಿಸುವ’ ಬಾಲ್ ರೂಂ, ವಿಜಯ ಕಮಾನು ಇತ್ಯಾದಿ ಪ್ರಾಜೆಕ್ಟುಗಳತ್ತ ಗಮನ ಕೇಂದ್ರೀಕರಿಸುವ ಸಾಧ್ಯತೆಯೂ ಇದೆ. ಎ.ಐ/ಡಾಟಾ ಸೆಂಟರ್ ನಿರ್ಬಂಧಗಳ ವಿಷಯದಲ್ಲಿ ಮಾತ್ರ ರಾಜಿ ಮಾಡಿಕೊಳ್ಳದೆ ಇರುವ ಸಾಧ್ಯತೆಯೇ ಹೆಚ್ಚು.

ಟ್ರಂಪ್ ಅವರ ಪ್ರತಿಕ್ರಿಯೆ ಡೆಮೊಕ್ರಾಟರ ಮುಂದಿನ ವ್ಯೂಹ, ತಂತ್ರ ದ ಮೇಲೆ ಹೆಚ್ಚಾಗಿ ಅವಲಂಬಿಸಿದೆ. ಅವರು ಮಹಾಭಿಯೋಗದ ಮತ್ತು ಹಲವು ಹಗರಣಗಳ ತನಿಖೆಗಳ ಮೇಲೆ ಒತ್ತು ಕೊಡುತ್ತಾರೋ, ಅಥವಾ ಜನವಿರೋಧಿ ನೀತಿಗಳನ್ನು ಬದಲಾಯಿಸಿ ಜನರಿಗೆ ಪರಿಹಾರ ಒದಗಿಸುವ ಪ್ರಗತಿಪರ ನೀತಿಗಳ ಅಂಗೀಕಾರದ ಮೇಲೆ ಒತ್ತು ಕೊಡುತ್ತಾರೋ ಎಂಬುದು ನಿರ್ಧರಿಸುತ್ತದೆ. ಡೆಮೊಕ್ರಾಟರ ಆಯ್ಕೆ ಯಾವುದೇ ಇದ್ದರೂ ಟ್ರಂಪ್ ಅವರ ಮುಂದಿನ ಎರಡು ವರ್ಷಗಳ ಅಧ್ಯಕ್ಷಗಿರಿ ದುರ್ಬಲವಾಗಿರುವ, ಸತತ ದಾಳಿ ಎದುರಿಸಬೇಕಾದ ಅವಧಿಯಾಗಿರುವುದಂತೂ ಖಚಿತ.

***********************

ಇದನ್ನೂ ನೋಡಿ : ಫ್ರಾನ್ಸ್‌ನಲ್ಲಿ ವಿದ್ಯಾರ್ಥಿ ಕ್ರಾಂತಿ! ಸರ್ಕಾರಕ್ಕೆ ಸವಾಲಾದ ಐತಿಹಾಸಿಕ ಹೋರಾಟ | ಗುರುರಾಜ ದೇಸಾಯಿ

Please follow and like us:
Donate Janashakthi Media

Leave a Reply

Your email address will not be published. Required fields are marked *