“ಅಪ್ಪ ಸತ್ತರೂ ಸರಿ ತಿಥಿ ವಡೆ ತಿನ್ನಲೇ ಬೇಕು” ಪಟಾಕಿ ತೆವಲಿಗೆ ನಲುಗಿದ ಭಾರತ

Please follow and like us:

 

ದೀಪಾವಳಿ ಹಬ್ಬದ ಈ ಎರಡು ದಿನಗಳಲ್ಲಿ ಭಾರತ ಒಂದು ಪ್ರಾಪಂಚಿಕ ದಾಖಲೆ ಬರೆದಿದೆ. ದೆಹಲಿಯ ವಾಯುಗುಣಮಟ್ಟ ಸೂಚ್ಯಂಕ (AQI) ಸರ್ವಕಾಲಿಕ ಕುಸಿತ ಕಂಡಿದೆ. ಇದು ನವೆಂಬರ್‌ 9 ರಂದು 500 ಮೀರಿತ್ತು. ನಾವು ಜ್ವರ ಬಂದಾಗ ದೇಹದ ತಾಪಮಾನವನ್ನು ಥರ್ಮಾಮೀಟರ್ ಮೂಲಕ ಹೇಗೆ ಅಳೆಯುತ್ತೇವೆಯೋ ಅದೇ ರೀತಿ ಗಾಳಿ ಎಷ್ಟು ಕಲುಷಿತವಾಗಿದೆ ಮತ್ತು ಅದು ನಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಸುವ ಅಂಕಿಯೇ AQI. ಭಾರತದಲ್ಲಿ AQI ಸಾಮಾನ್ಯವಾಗಿ 0 ರಿಂದ 500 ರವರೆಗೆ ಇರುತ್ತದೆ. ಸಂಖ್ಯೆ ಹೆಚ್ಚಿದಂತೆ ಮಾಲಿನ್ಯದ ಪ್ರಮಾಣ ಹೆಚ್ಚಿದೆ ಎಂದು ಅರ್ಥಮಾಡಿಕೊಳ್ಳಬೇಕು. ತಿಥಿ ವಡೆ
ಟಿ ಎ ಪ್ರಶಾಂತ್ ಬಾಬು

AQI ಮಟ್ಟಗಳನ್ನು ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು. 0–50 ಉತ್ತಮ, 51–100 ತೃಪ್ತಿಕರ, 101–200 ಮಧ್ಯಮ, 201–300 ಕಳಪೆ, 301–400 ಅತ್ಯಂತ ಕಳಪೆ. ಅಂದರೆ ದೆಹಲಿಯ ವಾಯುಮಾಲಿನ್ಯ ನಮ್ಮ ಅಳತೆಮಾನವನ್ನೂ ಅಂದರೆ AQIನ್ನು ಮೀರಿಸಿಬಿಟ್ಟಿದೆ. ಅಲ್ಲದೆ ದೆಹಲಿಯ ಮುಂಡ್ಕಾ ಪ್ರದೇಶದ ಪಿ.ಎಂ. 2.5 ಸಾಂದ್ರತೆ ಪ್ರತಿ ಘನ ಮೀಟರ್‌ಗೆ 3,744 ಮೈಕ್ರೋಗ್ರಾಂ ತಲುಪಿತ್ತು. ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡೋಣ.

ನೀವು ಒಂದು ಗ್ಲಾಸ್ ನೀರನ್ನು ತೆಗೆದುಕೊಂಡಿದ್ದೀರಿ ಎಂದುಕೊಳ್ಳಿ. ಅದರಲ್ಲಿ ಒಂದು ಚಮಚ ಮಣ್ಣನ್ನು ಹಾಕಿದರೆ ನೀರು ಸ್ವಲ್ಪ ಕಲುಷಿತವಾಗುತ್ತದೆ. ಹತ್ತು ಚಮಚ ಮಣ್ಣು ಹಾಕಿದರೆ ಹೆಚ್ಚು ಕಲುಷಿತವಾಗುತ್ತದೆ. ಅಂದರೆ ನೀರಿನಲ್ಲಿ ಎಷ್ಟು ಮಣ್ಣು ಸೇರಿದೆ ಎಂಬುದೇ ಅದರ ಸಾಂದ್ರತೆ. ಅದೇ ರೀತಿ ಗಾಳಿಯಲ್ಲಿ ಎಷ್ಟು ಪ್ರಮಾಣದ ಧೂಳು ಮತ್ತು ವಿಷಕಾರಿ ಕಣಗಳಿವೆ ಎಂಬುದನ್ನು ಅಳೆಯುವುದೇ ವಾಯುಮಾಲಿನ್ಯದ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ಮೈಕ್ರೋಗ್ರಾಂ/ಘನ ಮೀಟರ್ (µg/m³) ಎಂಬ ಘಟಕದಲ್ಲಿ ಅಳೆಯುತ್ತಾರೆ. ಇದರ ಅರ್ಥ ದೆಹಲಿಯ ಒಂದು ಘನ ಮೀಟರ್ ಗಾಳಿಯಲ್ಲಿ 3,744 ಮೈಕ್ರೋಗ್ರಾಂಗಳಷ್ಟು PM2.5 ಕಣಗಳಿದ್ದವು. PM2.5 ಎಂದರೆ 2.5 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಚಿಕ್ಕ ಗಾಳಿಯಲ್ಲಿರುವ ಸೂಕ್ಷ್ಮ ಧೂಳಿನ ಕಣಗಳು. ಇವು ಎಷ್ಟು ಚಿಕ್ಕದಾಗಿರುತ್ತವೆ ಎಂದು ಅರ್ಥಮಾಡಿಕೊಳ್ಳ ಬೇಕಾದರೆ ನಿಮ್ಮ ಕೂದಲಿನ ಎಳೆಯೊಂದನ್ನು ನೆನಪಿಸಿಕೊಳ್ಳಿ. ಈ PM2.5 ಕಣಗಳು ಕೂದಲ ಎಳೆಗಿಂತ ಸುಮಾರು 30 ಪಟ್ಟು ಚಿಕ್ಕದಾಗಿರುತ್ತವೆ. ಇವು ಇಷ್ಟು ಚಿಕ್ಕ ಕಣವಾಗಿರುವುದರಿಂದಲೇ ಶ್ವಾಸಕೋಶದ ಆಳದವರೆಗೆ ಸುಲಭವಾಗಿ ಪ್ರವೇಶಿಸಬಲ್ಲವು.ಇಂತಹ ಗಾಳಿಯನ್ನು ಉಸಿರಾಡುವುದರಿಂದ ಆರೋಗ್ಯಕ್ಕೆ ಗಂಭೀರ ಅಪಾಯವಿದೆ. ದೆಹಲಿಯ ಗಾಳಿಯೊಂದೇ ಕಲುಷಿತವಾಗಿಲ್ಲ ಪ್ರಪಂಚದಾದ್ಯಂತ ಪಟ್ಟಿ ಮಾಡಲಾಗಿರುವ 100 ಅತ್ಯಂತ ಕಲುಷಿತ ವಾಯು ಹೊಂದಿರುವ ನಗರಗಳಲ್ಲಿ 66 ನಗರಗಳು ಭಾರತದಲ್ಲೇ ಇವೆ. ಈಗ ದೀಪಾವಳಿ ಸಂಧರ್ಭದಲ್ಲಿ ಇದು 99 ಕ್ಕೇರಿದೆ. ಅಂದರೆ ಎಲ್ಲಾ 100 ಕಲುಷಿತ ನಗರಗಳ ಪೈಕಿ 99 ಕಲುಷಿತ ವಾಯು ಹೊಂದಿರುವ ನಗರಗಳು ಭಾರತದಲ್ಲೇ ಇವೆ. ಇದರ ಹಿಂದಿರುವ ವಿಲನ್ ಯಾರೆಂದರೆ ನಮ್ಮ ಮೆಚ್ಚಿನ “ಪಟಾಕಿ”.

ಪಟಾಕಿ ಸುಡಬೇಡಿ ಎಂದವರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸಲಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ನಟಿ ದಿಯಾಮಿರ್ಜಾರವರು ದೀಪಾವಳಿ ಸಂಧರ್ಭ ದಲ್ಲಿ ಪಟಾಕಿಗಳ ಬಳಕೆ ಕಡಿಮೆ ಮಾಡುವಂತೆ ಒಂದು ವೀಡಿಯೋ ಮೂಲಕ ಮುಂಬೈ ಜನರಿಗೆ ಮನವಿಮಾಡಿದ್ದರು. ಇದೇನೂ ಅವರು ತಮ್ಮ ಇಚ್ಚೆಯಂತೆ ಮಾಡಿದ್ದಲ್ಲ. ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಈ ವೀಡಿಯೋ ಮಾಡಿಸಲಾಗಿತ್ತು. ಆಕೆ ಮುಸ್ಲಿಂ ಎಂಬ ಕಾರಣಕ್ಕೋ ಏನೋ ಆ ವಿಡಿಯೋವನ್ನು ವಿರೋಧಿಸಲಾಯಿತು. ದೀಪಾವಳಿ ಆಚರಣೆಯನ್ನು ಅವಳಿಂದ ಕಲಿಯಬೇಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಯಿತು. ಕಡೆಗೆ ಒತ್ತಡಕ್ಕೆ ಮಣಿದ ಮುಂಬೈ ಮಹಾನಗರ ಪಾಲಿಕೆ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಬೇಕಾಯಿತು. ಕಡೆಗೆ ಬಾಂಬೆ ಹೈಕೋರ್ಟ್ ಮಧ್ಯ ಪ್ರವೇಶಿಸಿ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ವಿಷಯಕ್ಕೆ ಧಾರ್ಮಿಕ ಅಥವಾ ರಾಜಕೀಯ ಬಣ್ಣ ನೀಡಬಾರದು ಎಂದು ಖಾರವಾಗಿ ಪ್ರತಿಕ್ರಿಯಿಸಿತು. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರಿಗೂ ಹಬ್ಬಗಳಲ್ಲಿ ಭಾಗವಹಿಸುವ ಹಕ್ಕಿದೆ ಎಂದು ನೆನಪಿಸಿತು.ಅಲ್ಲದೇ ವಿಡಿಯೋವನ್ನು ಮರುಪ್ರಕಟಿಸುವಂತೆ BMCಗೆ ನಿರ್ದೇಶಿಸಿತು.

ಹಾಗೆಯೇ ಸಾರ್ವಜನಿಕ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧ ವಿಧಿಸಿತು. ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದಮಾಲಿನ್ಯ ನಿಯಂತ್ರಿಸಲು ಜಾಗೃತಿ ಮೂಡಿಸುವಂತೆ ಸೂಚಿಸಿತು. ಆದರೆ ಇದಾವುದೂ ಧರ್ಮಾಂಧರಿಗೆ ತಾಗಲೇ ಇಲ್ಲ. “ಅಪ್ಪ ಸತ್ತರೂ ಸರಿ ತಿಥಿ ವಡೆ ತಿನ್ನಲೇ ಬೇಕು” ಅಂತ ನಮ್ಮಲ್ಲಿ ಒಂದು ಗಾದೆ ಇದೆ. ಅದೇ ರೀತಿ ಕೆಲವರಿಗೆ ದೇಶ ಹಾಳಾದರೂ ಪರವಾಗಿಲ್ಲ, ನಾಳೆ ನಾವೇ ಉಸಿರಾಡಲು ಕಷ್ಟವಾರೂ ಪರವಾಗಿಲ್ಲ ನಾವು ಪಟಾಕಿ ಹೊಡೆಯಲೇ ಬೇಕು ಎನ್ನುವ ಮೂರ್ಖರಿಗೆ ಯಾರುತಾನೆ ಬುದ್ದಿ ಹೇಳಲು ಸಾಧ್ಯ.

ಅವರೆಲ್ಲರೂ ಪಟಾಕಿ ಸುಡುವ ಮೂಲಕ ದೀಪಾವಳಿಯನ್ನು ಅರ್ಥ ಪೂರ್ಣವಾಗಿಸಿದ್ದೇವೆ. ಇದು ಸಮ್ಮ ಸಂಸ್ಕೃತಿಯೆಂದೇ ಭಾವಿಸಿದ್ದಾರೆ. ಆದ್ದರಿಂದಲೇ ಪಟಾಕಿ ಸುಡದಿದ್ದರೆ ದೀಪಾವಳಿ ಹಬ್ಬವಾಗುವುದಿಲ್ಲ ಎನ್ನುವುದು ಕೆಲವರ ಅಂಬೋಣ. ಆದರೆ ಪಟಾಕಿ ಮೊದಲು ಕಂಡುಹಿಡಿದದ್ದಾಗಲೀ ಬಳಸಿದ್ದಾಗಲಿ ನಾವಲ್ಲ ಎಂಬುದು ಅರಗಿಸಿಕೊಳ್ಳಲು ಕಷ್ಟವಾಗಬಹುದು.

ಪಟಾಕಿಗಳ ಇತಿಹಾಸವು ಕೇವಲ ದೀಪಾವಳಿಯ ಆಚರಣೆಗೆ ಸಂಬಂಧಿಸಿದ್ದಲ್ಲ. ಇದು ಮಾನವನ ರಸಾಯನಶಾಸ್ತ್ರದ ಜ್ಞಾನ, ಯುದ್ಧತಂತ್ರ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಬೆಳವಣಿಗೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಅದೊಂದು ಅದ್ಬುತ ಅವಿಷ್ಕಾರವೂ ಹೌದು. ಪಟಾಕಿ ಮನೋರಂಜನೆಯ ವಸ್ತುವಷ್ಟೇ ಅಲ್ಲ, ರಕ್ಷಣಾ ತಂತ್ರಜ್ಞಾನದಲ್ಲಿ, ಸಮುದ್ರಮಧ್ಯದಲ್ಲಿ ಅಪಾಯದ ಸಂಕೇತಗಳನ್ನು ನೀಡಲು, ರಸ್ತೆ ಮತ್ತು ರೈಲ್ವೆ ಸುರಕ್ಷತೆ ಸಂಕೇತಗಳನ್ನು ಹರಡಲು, ವಿಮಾನಯಾನ ಹಾಗು ಬಾಹ್ಯಾಕಾಶ ಸಂಶೋಧನೆ ಸುರಕ್ಷತೆಗಳಲ್ಲಿ, ಗಣಿಗಾರಿಕೆ ಮತ್ತು ನಿರ್ಮಾಣಕ್ಷೇತ್ರದಲ್ಲಿ ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ಇದರ ಅತಿ ಉಪಯುಕ್ತ ಬಳಕೆ ಇದೆ. ಅದು ಸಾಮಾನ್ಯ ಪಟಾಕಿ ರೂಪದಲ್ಲಿರದೆ ಇದರ ಮೂಲ ತತ್ವವನ್ನು ಆಧರಿಸಿದೆ. ತಿಥಿ ವಡೆ

ಇದನ್ನೂ ಓದಿ : ನವೆಂಬರ್‌ 16ರಿಂದ 18ರವರೆಗೆ ಬೆಂಗಳೂರು ಕೃಷಿ ಮೇಳ: ಬರ ನಿರ್ವಹಣೆಗೆ ಮೂರು ಹೊಸ ಬೆಳೆ ತಳಿಗಳ ಬಿಡುಗಡೆ

ಪಟಾಕಿಯ ಮೂಲ ತತ್ವವನ್ನು ಆಧರಿಸಿದ ತಂತ್ರಜ್ಞಾನವನ್ನು ವಿಜ್ಞಾನದ ಭಾಷೆಯಲ್ಲಿ ಫೈರೋಟೆಕ್ನಿಕ್ ತಂತ್ರಜ್ಞಾನವೆಂದು ಹೇಳಲಾಗುತ್ತದೆ. ಇದನ್ನು ಆಧರಿಸಿಯೇ ತಯಾರಿಸಲಾದ ತಂತ್ರಜ್ಞಾನದ ಮೂಲಕವೇ ಅಪಘಾತ ಸಂಧರ್ಭದಲ್ಲಿ ಕಾರಿನ ಏರ್ ಬ್ಯಾಗ್ ತೆರೆದುಕೊಳ್ಳುತ್ತದೆ, ಸೆನ್ಸರ್‌ಗಳ ಮೂಲಕ ಅಪಘಾತದ ಸುಳಿವು ಸಿಕ್ಕ ತಕ್ಷಣವೇ ಪಟಾಕಿಯ ರೀತಿಯಲ್ಲಿಯೇ ಸ್ಫೋಟವೊಂದು ಸಂಭವಿಸಿ ಏರ್ ಬ್ಯಾಗ್ ತುಂಬಿಕೊಳ್ಳುತ್ತದೆ. ಇದೇ ರೀತಿಯಲ್ಲಿ ಅಪಘಾತದ ಸಂದರ್ಭಗಳಲ್ಲಿ ಜೆಟ್ ಪೈಲೆಟ್‌ಗಳು ತಮ್ಮ ಸೀಟಿನ ಅಡಿಯಲ್ಲಿರುವ ಸ್ಫೋಟಕದ ಗುಂಡಿ ಒತ್ತಿ ತನ್ನ ಸೀಟು ರಾಕೇಟ್ ರೀತಿಯಲ್ಲಿ ಮೇಲಕ್ಕೇರುವಂತೆ ಮಾಡಿ ತಮ್ಮ ಜೀವ ಉಳಿಸಿಕೊಳ್ಳುತ್ತಾರೆ. ಸಮುದ್ರದ ನಡುವಿನಲ್ಲಿ ಅಪಾಯಕ್ಕೆ ಸಿಲುಕಿದವರು ಇದೇ ರೀತಿಯ ಪಟಾಕಿಯ ಬೆಳಕು ಸೂಸುವ ಬೇರೆ ಬೇರೆ ಸಾಧನಗಳನ್ನು ಹೊತ್ತಿಸಿ ಬೇರೆಯವರ ಗಮನ ಸೆಳೆಯುವುದನ್ನು ನೀವು ಹಲವಾರು ಸಿನಿಮಾಗಳಲ್ಲಿ ನೋಡಿರುತ್ತೀರಿ.

ಇನ್ನು ಯುದ್ದವೆಂದರೆ ಸದ್ದು, ಬೆಂಕಿ, ಸ್ಫೋಟ, ವಿನಾಶವಿಲ್ಲದ್ದಿದ್ದರೆ ಹೇಗೆ? ಅದೆಲ್ಲವನ್ನೂ ನೀಡಬಲ್ಲ ವಸ್ತುವೆಂದರೆ ಅದು ಪಟಾಕಿ ಮಾತ್ರ. ಫೈರೋಟೆಕ್ನಿಕ್ ತಂತ್ರಜ್ಞಾನ ಆಧಾರಿತ ಧ್ವಂಸಕ ಆಯುಧಗಳನ್ನು ಬಳಸದಿದ್ದರೆ ಯುದ್ದಕ್ಕೆ ಅರ್ಥವಾದರೂ ಇದೆಯೇ? ಸಧ್ಯಕ್ಕೆ ವಿದ್ವಂಸಕ ಪ್ರಯೋಜನಗಳ ಕುರಿತು, ಯುಧ್ದದ ಕುರಿತು ಮಾತುನಿಲ್ಲಿಸಿ. ಪಟಾಕಿಯ ಮೂಲ ಹುಡುಕೋಣ.

ಹಾಗಾದರೆ ಪಟಾಕಿ ಮೂಲ ಎಲ್ಲಿ? ಪಟಾಕಿಗಳ ಮೂಲ ಚೀನಾ. ಮದ್ದಿನ ಆವಿಷ್ಕಾರಕ್ಕೂ ಹಿಂದೆ ಅಂದರೆ ಸುಮಾರು 2,000 ವರ್ಷಗಳ ಹಿಂದೆ ಚೀನಾದಲ್ಲಿ ಬಿದಿರಿನ ತುಂಡುಗಳನ್ನು ಬೆಂಕಿಗೆ ಹಾಕಿ ಸಿಡಿಸುವ ಪದ್ಧತಿ ಇತ್ತು. ಬಿದಿರಿನ ಒಳಭಾಗದಲ್ಲಿನ ಗಾಳಿ ಬಿಸಿಯಾಗಿ ವಿಸ್ತರಿಸಿದಾಗ ದೊಡ್ಡ ಶಬ್ದದೊಂದಿಗೆ ಬಿದಿರು ಸಿಡಿಯುತ್ತಿತ್ತು. ದುಷ್ಟಶಕ್ತಿಗಳನ್ನು ಓಡಿಸಲು ಮತ್ತು ಶುಭಸಂದರ್ಭಗಳಲ್ಲಿ ಶಬ್ದ ಮಾಡುವ ಉದ್ದೇಶದಿಂದ ಇದನ್ನು ಬಳಸಲಾಗುತ್ತಿತ್ತು. ಇದನ್ನು ಈಗಿನ ಕಾಲದ ಪಟಾಕಿ ಅನ್ನಲು ಸಾದ್ಯವಿಲ್ಲದಿದ್ದರೂ ದೊಡ್ಡ ಶಬ್ದ ಮಾಡಬಹುದಾದ ಮೊದಲ ಪ್ರಯತ್ನ ಎನ್ನಬಹುದೇನೋ.

ನಂತರ ಸುಮಾರು ಕ್ರಿ.ಶ. 9ನೇ ಶತಮಾನದಲ್ಲಿ ಚೀನಾದ ರಸವಿದ್ಯೆ (Alchemy) ಪ್ರಯೋಗಗಳ ಕಡೆಗೆ ಹೆಚ್ಚು ಅನ್ವೇಷಕರು ಆಕರ್ಷಿತರಾಗಿದ್ದರು, ವಿವಿಧ ಮಿಶ್ರಣ ಕೂಡಿಸಿ ಚಿನ್ನವನ್ನು ಮಾಡಬಹುದೆಂಬ ನಂಬಿಕೆಯಿಂದ ಹಲವರು ಇಂಥಹಾ ಪ್ರಯೋಗಗಳಲ್ಲಿ ತಮ್ಮ ಜೀವನವನ್ನೇ ಸವೆಸಿದ್ದರು. ಹಾಗೆಯೇ ಅಮರತ್ವದ ಔಷಧ ಹುಡುಕುವ ಅನೇಕ ಪ್ರಯತ್ನಗಳೂ ನಡೆಯುತ್ತಿದ್ದವು. ಈ ದುರಾಸೆಯಿಂದಲೇ ರಸಾಯನಶಾಸ್ತ್ರದಲ್ಲಿ ಅನೇಕ ಪ್ರಯೋಗಗಳು ನಡೆದು ಅನೇಕ ಅನ್ವೇಷಣೆಗಳಿಗೆ ಕಾರಣವಾಯಿತು. ಇಂಥಹಾ ಪ್ರಯೋಗ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಫೋಟಕ ಗುಣವಿರುವ ಮಿಶ್ರಣವೊಂದು ರೂಪುಗೊಂಡಿತು. ಇದರಲ್ಲಿ ಮೂರು ಪ್ರಮುಖ ವಸ್ತುಗಳಿದ್ದವು: ಪೊಟ್ಯಾಸಿಯಂ ನೈಟ್ರೇಟ್ (ಶೋರಾ), ಇದ್ದಿಲು, ಗಂಧಕ. ಈ ಮಿಶ್ರಣವನ್ನು ಇತಿಹಾಸದಲ್ಲಿ ಕಪ್ಪು ಮದ್ದು (Black Powder) ಎಂದು ಕರೆಯಲಾಗಿದೆ. ಆದರೆ ಇದನ್ನು ನಿಖರವಾಗಿ ಯಾರು ಮೊದಲು ಕಂಡುಹಿಡಿದರು ಎಂಬುದು ತಿಳಿದಿಲ್ಲ.

ಹೀಗೆ ಚೀನಾದಲ್ಲಿ ಪ್ರಾರಂಭವಾದ ಪಟಾಕಿಗಳ ಸಂಭಮ ಜಗತ್ತಿಗೆಲ್ಲಾ ಹರಡಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. 9ನೇ ಶತಮಾನದಲ್ಲಿ ಪ್ರಯೋಗದ ಹಂತದಲ್ಲಿದ್ದ ಮದ್ದಿನ ಆವಿಷ್ಕಾರ 10ನೇ ಶತಮಾನದಲ್ಲಿ ಸ್ಫೋಟಕ ವಸ್ತುಗಳ ತಯಾರಿಕೆಗೆ ಕಾರಣವಾಯಿತು.

ಇಷ್ಟಾದ ಮೇಲೆ ಸಾಮ್ರಾಜ್ಯಶಾಯಿಗಳ ಕಣ್ಣು ಬೀಳದೇ ಇರುತ್ತದೆಯೇ ? ಕೇವಲ ಇನ್ನೊಂದು ಶತಮಾನದ ಹೊತ್ತಿಗೆ ಮದ್ದಿನ ತಯಾರಿಕೆಯ ವಿವರಣೆಗಳು ಮತ್ತು ಯುದ್ಧೋಪಯೋಗಿ ಬಳಕೆ ಅಸ್ತ್ರಗಳ ತಯಾಕೆಗಾಗಿಯೂ ಇದರ ತಂತ್ರಜ್ಞಾನ ಬಳಸಲಾಯಿತು.12–13ನೇ ಶತಮಾನದಲ್ಲಿ ರಾಕೆಟ್‌ಗಳು ಮತ್ತು ಸ್ಫೋಟಕ ಆಯುಧಗಳನ್ನು ಅಭಿವೃದ್ಧಿ ಪಡಿಸಲಾಯಿತು.13ನೇ ಶತಮಾನದಲ್ಲಿ ಮದ್ದಿನ ತಂತ್ರಜ್ಞಾನ ಯುರೋಪ್ ಮತ್ತು ಅರಬ್ ಪ್ರದೇಶಗಳಿಗೆ ಹರಡುಕೊಂಡಿತು. 14–15ನೇ ಶತಮಾನದಲ್ಲಿ ಯುರೋಪಿನಲ್ಲಿ ಫಿರಂಗಿ, ಬಂದೂಕು ಮತ್ತು ಪಟಾಕಿಗಳ ಅಭಿವೃದ್ಧಿ ಹೆಚ್ಚಿನ ಪ್ರಚಾರ ಪಡೆಯಿತು. ಯುರೋಪು ಇಡೀ ಜಗತ್ತನ್ನು ಗೆಲ್ಲಲು ಇದೂ ಒಂದು ಕಾರಣವಾಗಿರಬಹುದು. ನೀವು ಗಮನಿಸಿರಬಹುದು ಭಾರತೀಯ ರಾಜರ ಸೈನಿಕರು ಕತ್ತಿಹಿಡಿದು ಹೋರಾಡುತ್ತಿದ್ದಾಗ ಎದುರಾಳಿ ಬ್ರಿಟೀಷರು ಬಂದುಕು ಹಿಡಿದು ಬಂದು ಭಾರತೀಯ ರಾಜರನ್ನು ಸುಲಭವಾಗಿ ಸೋಲಿಸುತ್ತಿದ್ದರು. ಹದಿನೆಂಟನೇ ಶತಮಾನದ ಕೊನೆಯಲ್ಲಿ ಮಾತ್ರ ಟಿಪ್ಪು ಇದೇ ಪಟಾಕಿಗಳಿಂದ ಕ್ಷಿಪಣಿ ತಯಾರಿಸಿ ಬ್ರಿಟೀಷರಿಗೆ ಚೆಳ್ಳೆಹಣ್ಣು ತಿನ್ನಿಸಿದ್ದ. ತಿಥಿ ವಡೆ

ಭಾರತದಲ್ಲಿ ಪಟಾಕಿ:
ಭಾರತದಲ್ಲಿ ಪಟಾಕಿಗಳ ಇತಿಹಾಸದ ಬಗ್ಗೆ ಕೆಲವು ಪ್ರಮುಖ ಐತಿಹಾಸಿಕ ದಾಖಲೆಗಳಿವೆ. ಈ ಕುರಿತು ಪಿ.ಕೆ.ಗೋಡೆಯವರು ನಡೆಸಿರುವ ಸಂಶೋಧನೆಗಳ ಆಧಾರದಲ್ಲಿ ನೋಡುವುದಾದರೆ, 13–14ನೇ ಶತಮಾನದಲ್ಲೇ ಪೂರ್ಣಪ್ರಮಾಣದಲ್ಲಿ ಮದ್ದಿನ ತಂತ್ರಜ್ಞಾನ ಅಭಿವೃದ್ದಿಯಾಗಿದ್ದರೂ ಇದರ ಅಧಿಕೃತ ದಾಖಲೆ ಕಾಣುವುದು ವಿಜಯನಗರ ಸಾಮ್ರಾಜ್ಯದಲ್ಲಿ. ಪರ್ಷಿಯಾದ ಪ್ರವಾಸಿ ಮತ್ತು ರಾಯಭಾರಿ ಅಬ್ದುರ್ ರಜಾಕ್ ವಿಜಯನಗರಕ್ಕೆ ಭೇಟಿ ನೀಡಿದ್ದನು. ಅವನು ಎರಡನೇ ದೇವರಾಯನ ಆಳ್ವಿಕೆಯ ಮಹಾನವಮಿ ಉತ್ಸವದಲ್ಲಿ ವಿವಿಧ ರೀತಿಯ ಪಟಾಕಿ ಮತ್ತು ಅಗ್ನಿ ಪ್ರದರ್ಶನಗಳನ್ನು ಕಂಡಿರುವುದಾಗಿ ತನ್ನ ಪ್ರವಾಸದ ದಾಖಲೆಯಲ್ಲಿ ವಿವರಿಸಿದ್ದಾನೆ. ಇದು ಭಾರತದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದ ಪ್ರಮುಖ ಐತಿಹಾಸಿಕ ಸಾಕ್ಷ್ಯಗಳಲ್ಲಿ ಒಂದಾಗಿದೆ. ಕ್ರಿ.ಶ,1500ದ ಆಸುಪಾಸಿನ ಒಡಿಸ್ಸಾದ ಗಜಪತಿ ಪ್ರತಾಪರುದ್ರದೇವನ ಕೌತುಕ ಚಿಂತಾಮಣಿ ಕೃತಿಯಲ್ಲಿ ಪಟಾಕಿ ತಯಾರಿಕೆಯ ಸೂತ್ರಗಳಿವೆ. ಇದೇ ಕಾಲದ ಏಕನಾಥರ ಮರಾಠಿ ಕಾವ್ಯಗಳಲ್ಲಿ ಮದುವೆ ಸಂಧರ್ಭಗಳಲ್ಲಿ ನಡೆಸಲಾಗುತ್ತಿದ್ದ ಪಟಾಕಿ ಪ್ರದರ್ಶನಗಳ ಉಲ್ಲೇಖವಿದೆ.

ಮುಂದೆ ಮೊಘಲರ ಕಾಲ ಅಂದರೆ 17ನೇ ಶತಮಾನದಲ್ಲಿ ರಾಜಮನೆತನದ ಮದುವೆಗಳಲ್ಲಿ ಪಟಾಕಿಗಳನ್ನು ಬಳಸಲಾಗುತ್ತಿತ್ತು. ರಾಜರ ಉತ್ಸವಗಳಲ್ಲಿ ಆಕಾಶದಲ್ಲಿ ಬೆಳಕಿನ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. ಇದನ್ನು ನಾವು ಮೊಘಲ್ ಚಕ್ರವರ್ತಿಗಳ ಕಾಲದ ಚಿತ್ರಕಲೆಗಳಲ್ಲಿ ಕಾಣಬಹುದಾಗಿದೆ. 1609ರ ಸುಮಾರಿಗೆ ಕರ್ನಾಟಕದಲ್ಲಿ ಬಿಜಾಪುರದ ಆದಿಲ್ ಶಾಹಿ ಅರಮನೆಯ ಮದುವೆಯೊಂದರಲ್ಲಿ ಪಟಾಕಿಗಳಿಗಾಗಿ ದೊಡ್ಡ ಮೊತ್ತ ಖರ್ಚು ಮಾಡಿದ ಉಲ್ಲೇಖವಿದೆ.

ಹಾಗಾದರೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯ ಯಾವಾಗ ಆರಂಭವಾಯಿತು?

ಇದು ಬಹಳ ಆಸಕ್ತಿದಾಯಕ ಪ್ರಶ್ನೆ. ಸಾಮಾನ್ಯವಾಗಿ ದೀಪಾವಳಿಯನ್ನು ರಾಮನ ಅಯೋಧ್ಯೆಗೆ ಮರಳುವಿಕೆ, ನರಕಾಸುರನ ವಧೆ ಮತ್ತು ಲಕ್ಷ್ಮಿ ಪೂಜೆಯಂತಹ ವಿವಿಧ ಧಾರ್ಮಿಕ ಸಂಪ್ರದಾಯಗಳೊಂದಿಗೆ ಪ್ರಸ್ತಾಪಿಸಲಾಗುತ್ತದೆ.
ಹೀಗಾಗಿ, ದೀಪಾವಳಿಯ ಮೂಲ ಸಂಪ್ರದಾಯ ದೀಪಹಚ್ಚುವುದಾಗಿತ್ತೇ ಹೊರತು ಪಟಾಕಿ ಸಿಡಿಸುವುದಾಗಿರಲಿಲ್ಲ.

ಹಾಗಾದರೆ ನಮ್ಮ ಕಾವ್ಯಗಳಲ್ಲಿ ಬರುವ ಬಿರುಸು ಬಾಣಗಳ ವಿವರಣೆ ಏನನ್ನು ಸೂಚಿಸುತ್ತದೆ ?

ಈ ಉಲ್ಲೇಖಗಳು ಬಾಹುಬಲಿ ಚಲನಚಿತ್ರದಲ್ಲಿ ತೋರಿಸಿರುವಂತೆ ಬಾಣದ ತುದಿಯಲ್ಲಿ ಬಟ್ಟೆ ಕಟ್ಟಿ ಅದಕ್ಕೆ ಬೆಂಕಿ ಹಚ್ಚಿ ಹೊಡೆಯುವ ಯುದ್ದ ಕಲೆಯಾಗಿತ್ತು. ಇದಕ್ಕೆ ಅಗ್ನಿಬಾಣ, ಅಗ್ನೇಯಾಸ್ತ್ರಗಳೆಂಬ ಹೆಸರಿತ್ತು. ಇದರಲ್ಲಿ ಸ್ಫೋಟಕದಂಥಹಾ ಯಾವುದೇ ವಸ್ತು ಇರುತ್ತಿರಲಿಲ್ಲ.

ಆಧುನಿಕ ಪಟಾಕಿಗಳ ಅಭಿವೃದ್ಧಿ:

18ನೇ ಶತಮಾನದ ನಂತರ ಪಟಾಕಿಗಳ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆಗಳಾದವು. 1786ರಲ್ಲಿ Claude Louis Berthollet ಪೊಟ್ಯಾಸಿಯಂ ಕ್ಲೋರೈಟ್‌ನ ಗುಣಗಳನ್ನು ಕಂಡುಹಿಡಿದರು. ನಂತರ ಮೆಗ್ನೀಸಿಯಂ ಮತ್ತು ಅಲ್ಯೂಮಿನಿಯಂನಂತಹ ಲೋಹಗಳ ಬಳಕೆಯಿಂದ ಹೆಚ್ಚು ಪ್ರಕಾಶಮಾನವಾದ ಪಟಾಕಿಗಳು ಅಭಿವೃದ್ಧಿಯಾದವು. ವಿವಿಧ ರಾಸಾಯನಿಕ ಸಂಯುಕ್ತಗಳಿಂದ ಕೆಂಪು, ಹಸಿರು, ನೀಲಿ, ಹಳದಿ ಮತ್ತು ಬಿಳಿ ಬಣ್ಣಗಳನ್ನು ಉತ್ಪಾದಿಸುವ ತಂತ್ರಜ್ಞಾನ ಬೆಳೆಯಿತು. ಆಕಾಶದಲ್ಲಿ ವಿವಿಧ ಆಕಾರಗಳನ್ನು ಸೃಷ್ಟಿಸುವ ಪಟಾಕಿಗಳು ಅಭಿವೃದ್ಧಿಯಾದವು.

ಭಾರತದಲ್ಲಿ ಪಟಾಕಿ ತಯಾರಿಕೆ:
19 ನೇ ಶತಮಾನದಲ್ಲಿ ಭಾರತದಲ್ಲಿ ಪಟಾಕಿ ತಯಾರಿಕಾ ಚಟುವಟಿಕೆಗಳು ಆರಂಭವಾದವು. 20ನೇ ಶತಮಾನದಲ್ಲಿ ತಮಿಳುನಾಡಿನ “ಶಿವಕಾಶಿ” ಪಟಾಕಿ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಬೆಳೆಯಿತು. ಇಂದು ಇದೇ ಉದ್ಯಮ ಸಣ್ಣ ಕೈಗಾರಿಕೆಗಳಿಂದ ದೊಡ್ಡ ಉತ್ಪಾದನಾ ಘಟಕಗಳವರೆಗೆ ವಿಸ್ತರಿಸಿದೆ. ಇಂದು ದೇಶದ ವಿವಿಧ ಭಾಗಗಳಿಗೆ ಶಿವಕಾಶಿಯಿಂದ ಪಟಾಕಿಗಳನ್ನು ಸರಬರಾಜು ಮಾಡಲಾಗುತ್ತದೆ. ಈ ಉದ್ಯಮದಲ್ಲಿ ಅತ್ಯಂತ ಅಪಾಯಕಾರಿ ಕೆಲಸಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದ ಅನೇಕ ಪ್ರಕರಣಗಳು ಕಂಡುಬಂದಿವೆ. ಪ್ರಸ್ತುತ ಅನೇಕ ಕಠಿಣ ಕಾನೂನು ಕ್ರಮಗಳಿಂದಾಗಿ ಇದು ತಪ್ಪಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಪೂರ್ಣವಾಗಿ ನಿಂತಿಲ್ಲ. ಬುದ್ದಿವಂತ ಬಂಡವಾಳಿಗರು ಇಂಥಹಾ ಕೆಲಸಗಳನ್ನು ಗುತ್ತಿಗೆದಾರರ ಮೂಲಕ ಮನೆಗಳಿಗೆ ವರ್ಗಾಯಿಸಿ ಮಕ್ಕಳಿಂದ ಮಾಡಿಸುವ ಪದ್ದತಿ ವರದಿಯಾಗುತ್ತಲೇ ಇದೆ. ಇಲ್ಲಿ ನಾವು ಖುಷಿಯಿಂದ ಹಚ್ಚುವ ಪಟಾಕಿ ಅಲ್ಲಿ ಎಷ್ಟೋ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತಿದೆ.

ಈ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಿ ಯಾವುದೇ ಸುರಕ್ಷತೆ ಇಲ್ಲದ ವಾತಾವರಣದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೇ ಮಹಿಳಾ ಕಾರ್ಮಿಕರ ಸ್ಥಿತಿ ಇನ್ನೂ ಗಂಭೀರವಾಗಿದೆ. ಕಳೆದ 3 ವರ್ಷಗಳಲ್ಲಿ ನಡೆದ 75 ಅಪಘಾತಗಳಲ್ಲಿ 241 ಜನ ಮೃತರಾಗಿದ್ದಾರೆ. 199 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವು ರಾಷ್ಟ್ರೀಯ ಹಸಿರು ನ್ಯಾಯಾಲಯದ ಮುಂದೆ ಸರ್ಕಾರ ಸಲ್ಲಿಸಿದ ಅಂಕಿ ಅಂಶಗಳಾಗಿದ್ದು ವಾಸ್ತವದ ಅಂಶಗಳು ಇನ್ನೂ ಘನಘೋರವಾಗಿವೆ.

ಪಟಾಕಿಗಳು ಮನರಂಜನೆ ನೀಡಿದರೂ ಕೆಲವು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ವಾಯುಮಾಲಿನ್ಯದಿಂದಾಗಿ ಹೊಗೆ ಮತ್ತು ಸೂಕ್ಷ್ಮ ಧೂಳಿನ ಕಣಗಳು ಶ್ವಾಸಕೋಶವನ್ನು ಪ್ರವೇಶಿಸಿ ಗಂಭೀರ ಕಾಯಿಲೆಗಳನ್ನು ತರುತ್ತವೆ. ಶಬ್ದಮಾಲಿನ್ಯದಿಂದಾಗಿ ಮಕ್ಕಳು, ವೃದ್ಧರು ಮತ್ತು ಪ್ರಾಣಿಗಳಿಗೆ ತೊಂದರೆಯಾಗುತ್ತದೆ.
ಅಪಾರವಾದ ಕಸ ಮತ್ತು ರಾಸಾಯನಿಕ ಅವಶೇಷಗಳು ಸುತ್ತಮುತ್ತಲ ಪರಿಸರದಲ್ಲಿ ಉಳಿದುಕೊಳ್ಳುತ್ತವೆ. ಅಲ್ಲದೇ ಪಟಾಕಿ ಹಚ್ಚುವಾಗಿನ ಅಜಾಗರೂಕತೆಯಿಂದಾಗಿ ಅಪಘಾತ, ಸುಟ್ಟ ಗಾಯಗಳು ಮತ್ತು ಬೆಂಕಿ ಅವಘಡಗಳು ಸಂಭವಿಸುತ್ತಿವೆ.

ಈ ಲೇಖನ ಬರೆದು ಮುಗಿಸುವ ವೇಳೆ ಅಂದರೆ ದೀಪಾವಳಿಯ 3ನೇ ದಿನವಾದ ಇಂದು ಮಧ್ಯಾಹ್ನದ ಹೊತ್ತಿಗೆ ಚಂಡೀಗಢ–ಪಂಚಕುಲ–ಮೊಹಾಲಿಯ ಪಟಾಕಿ ಅವಘಡಗಳಲ್ಲಿ ಕ್ರಮವಾಗಿ 303, 32 ಮತ್ತು 27 ಮಂದಿ ಗಾಯಗೊಂಡಿದ್ದಾರೆ — ಒಟ್ಟು 362. ಚಂಡೀಗಢದಲ್ಲಿ ಕನಿಷ್ಠ 15 ಮಂದಿಗೆ ಕಣ್ಣಿನ ತುರ್ತು ಶಸ್ತ್ರಚಿಕಿತ್ಸೆ ನಡೆದಿದ್ದಾಗಿ ಹಿಂದುಸ್ತಾನ್‌ ಟೈಮ್ಸ್ ವರದಿಮಾಡಿದೆ.

• ದೆಹಲಿ: ಅಗ್ನಿಶಾಮಕ ಸೇವೆಗೆ ಒಟ್ಟು 257 ತುರ್ತು ಕರೆಗಳು ಬಂದಿದ್ದು, ಅವುಗಳಲ್ಲಿ 214 ಬೆಂಕಿ ಸಂಬಂಧಿತ ಮತ್ತು 24 ಪಟಾಕಿಯಿಂದ ಉಂಟಾದ ಬೆಂಕಿ ಕರೆಗಳು. ದೆಹಲಿಯಲ್ಲಿ ಪಟಾಕಿ ಮತ್ತು ದೀಪಗಳಿಗೆ ಸಂಬಂಧಿಸಿದ ಅವಘಡಗಳಲ್ಲಿ ಸುಮಾರು 500 ಮಂದಿ ಗಾಯಗೊಂಡ ವರದಿಯನ್ನು ದಿ ವೀಕ್‌ ನೀಡಿದೆ.

• ಹೈದರಾಬಾದ್: ನಾಲ್ಕು ಆಸ್ಪತ್ರೆಗಳ ಅಂಕಿ ಸೇರಿಸಿ ಕನಿಷ್ಠ 179 ಪಟಾಕಿ ಗಾಯಗಳು ವರದಿಯಾಗಿವೆ. ತೆಲಂಗಾಣ ಅಗ್ನಿಶಾಮಕ ಸೇವೆಗೆ 122 ದೀಪಾವಳಿ ಸಂಬಂಧಿತ ಕರೆಗಳು ಬಂದಿದ್ದು, ಅವುಗಳಲ್ಲಿ 49 ಹೈದರಾಬಾದ್‌ನಿಂದಲೇ ಬಂದಿವೆ.

• ಮುಂಬೈ ಮಹಾನಗರ ಪ್ರದೇಶ: ಮುಂಬೈ ಅಗ್ನಿಶಾಮಕ ದಳಕ್ಕೆ ನವೆಂಬರ್ 6ರಿಂದ ನವೆಂಬರ್ 9ರ ಬೆಳಗ್ಗೆವರೆಗೆ 282 ಬೆಂಕಿ ಕರೆಗಳು ಬಂದಿದ್ದು, ಅವುಗಳಲ್ಲಿ 200 ಪಟಾಕಿಗೆ ಸಂಬಂಧಿಸಿದ್ದವು. ಮುಂಬೈ ಪ್ರದೇಶದ ದೀಪಾವಳಿ ರಾತ್ರಿ ಬೆಂಕಿ ಅವಘಡಗಳು 380 ಮೀರಿದವು ಎಂದು ಹಿಂದುಸ್ಥಾನ್‌ ಟೈಮ್ಸ್‌ನ ಮತ್ತೊಂದು ವರದಿ ಹೇಳಿದೆ.

• ತಮಿಳುನಾಡು: ದೀಪಾವಳಿಯ 48 ಗಂಟೆಗಳಲ್ಲಿ 462 ಸುಟ್ಟ ಗಾಯಗಳ ತುರ್ತು ಪ್ರಕರಣಗಳು ದಾಖಲಾಗಿವೆ. ಇಬ್ಬರ ಸಾವು ಸಂಭವಿಸಿದೆ.

• ದೇಶದ ಇತರ ಭಾಗಗಳು: ಹಲವು ನಗರಗಳಲ್ಲಿ ಬೆಂಕಿ ಪ್ರಕರಣಗಳು ವರದಿಯಾಗಿವೆ. ಇಂಡಿಯಾ ಟುಡೆ ವರದಿ ಪ್ರಕಾರ, ಪುಣೆಯಲ್ಲಿ 63 ಬೆಂಕಿ ಅವಘಡಗಳು ಸಂಭವಿಸಿವೆ; ರಾಜಸ್ಥಾನದ ಪಾಲಿಯಲ್ಲಿ ಪಟಾಕಿ ಅಂಗಡಿಗೆ ತಗುಲಿದ ಬೆಂಕಿಯಲ್ಲಿ ಇಬ್ಬರು ಮತ್ತು ದೆಹಲಿಯಲ್ಲಿ ಪಟಾಕಿ ತಗುಲಿ ಒಂದು ಮಗು ಮೃತಪಟ್ಟಿದೆ. ಅದೇ ವರದಿಯಲ್ಲಿ ಮುಂಬೈನ ಪ್ರತ್ಯೇಕ ಬೆಂಕಿ ಅವಘಡದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಎಂದು ವರದಿಯಾಗಿದೆ.

ನಮ್ಮ ಜನರಿಗೆ ಮತ್ತು ಆಳುವವರಿಗೆ ಬುದ್ದಿ ಬರಲು ಇನ್ನೆಷ್ಟು ಸಾವು ನೋವುಗಳಾಗಬೇಕೋ…………. ತಿಥಿ ವಡೆ

ಇದನ್ನೂ ನೋಡಿ :ಎಸ್‌ಐಆರ್‌ | ಮತದಾರರ ಪಟ್ಟಿ ಅಂತಿಮ: 99.32 ಲಕ್ಷ ಹೆಸರು ಡಿಲೀಟ್‌! ಗುರುರಾಜ ದೇಸಾಯಿ

Please follow and like us:
Donate Janashakthi Media

Leave a Reply

Your email address will not be published. Required fields are marked *