30 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ದಾಖಲೆ ಸೃಷ್ಟಿಸಿದ ಸಂಭ್ರಮದ ಬೆನ್ನಲ್ಲೇ ಬಡವರ ದುಸ್ಥಿತಿಯ ದೃಶ್ಯ ವೈರಲ್ – ಪಡಿತರ ವ್ಯವಸ್ಥೆಯಲ್ಲಿ ಉಚಿತ ಸಾಸಿವೆ ಎಣ್ಣೆ ನೀಡುವ ಭರವಸೆ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 30 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ದೀಪೋತ್ಸವ ಆಚರಿಸಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ, ದೀಪಗಳಲ್ಲಿ ಉಳಿದ ಎಣ್ಣೆಯನ್ನು ಸಂಗ್ರಹಿಸಲು ಬಡವರು ಮುಗಿಬಿದ್ದಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸರಯೂ ನದಿ ತೀರದ ಘಾಟ್ಗಳಲ್ಲಿ ನಡೆದ ಈ ಘಟನೆ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ನವೆಂಬರ್ 7ರಂದು ನಡೆದ ದೀಪೋತ್ಸವದ 10ನೇ ಆವೃತ್ತಿಯಲ್ಲಿ 30 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನೂ ನಿರ್ಮಿಸಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದ ಬಳಿಕ ದೀಪಗಳಲ್ಲಿ ಉಳಿದ ಎಣ್ಣೆಯನ್ನು ಸಂಗ್ರಹಿಸಲು ಬಡವರು ಗುಂಪುಗೂಡಿದ ದೃಶ್ಯಗಳು ಸಂಭ್ರಮದ ಆಚರಣೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿವೆ. ಕೆಲವು ದೃಶ್ಯಗಳಲ್ಲಿ ಎಣ್ಣೆ ಸಂಗ್ರಹಿಸಲು ಬಂದವರನ್ನು ಕೈಯಲ್ಲಿ ಕೋಲು ಹಿಡಿದ ವ್ಯಕ್ತಿಗಳು ತಡೆಯುತ್ತಿರುವುದು ಕಂಡುಬಂದಿದೆ. ಕೆಲವರ ಮೇಲೆ ಕೋಲಿನಿಂದ ಹಲ್ಲೆ ನಡೆಸಿರುವುದಾಗಿ ಹರಿದಾಡಿದ ವಿಡಿಯೊಗಳನ್ನೂ ಅಖಿಲೇಶ್ ಯಾದವ್ ಹಂಚಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡವರು ಉಳಿದ ಎಣ್ಣೆಯನ್ನು ಸಂಗ್ರಹಿಸಲು ಬಂದಾಗ ಅವಮಾನ ಮತ್ತು ದೌರ್ಜನ್ಯಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಮೂಲಕ ಬಡ ಕುಟುಂಬಗಳಿಗೆ ಸಾಸಿವೆ ಎಣ್ಣೆ ಒದಗಿಸಲಾಗುವುದು. ಶೋಷಿತರು, ವಂಚಿತರು ಮತ್ತು ಬಡವರು ಎಣ್ಣೆಗಾಗಿ ಹೀಗೆ ಅವಮಾನಕ್ಕೊಳಗಾಗುವ ಪರಿಸ್ಥಿತಿ ಬರಬಾರದು ಎಂದು ಅವರು ಹೇಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪಗಳ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆ ಕೈಬಿಡಿ: ಎಸ್ಎಫ್ಐ ಆಗ್ರಹ
ಅಖಿಲೇಶ್ ಯಾದವ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಯೋಧ್ಯೆ ಮೇಯರ್ ಗಿರೀಶ್ ಪತಿ ತ್ರಿಪಾಠಿ, ದೀಪೋತ್ಸವಕ್ಕೂ ಮುನ್ನವೇ ಕೊಳಚೆ ಪ್ರದೇಶಗಳು ಮತ್ತು ಅಗತ್ಯವಿರುವ ಕುಟುಂಬಗಳಿಗೆ ಎಣ್ಣೆ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಬಾರಿ ತಾವೇ ಖುದ್ದಾಗಿ ವಿತರಣೆಯ ಮೇಲ್ವಿಚಾರಣೆ ನಡೆಸಿದ್ದಾಗಿ ತಿಳಿಸಿದ್ದಾರೆ.
ದೀಪೋತ್ಸವದ ಬಳಿಕ ಲಕ್ಷಾಂತರ ದೀಪಗಳನ್ನು ತಕ್ಷಣ ತೆರವುಗೊಳಿಸುವುದು ಕಷ್ಟದ ಕೆಲಸ. ಬಹುತೇಕ ದೀಪಗಳು ಇನ್ನೂ ಉರಿಯುತ್ತಿರುತ್ತವೆ. ಹೀಗಾಗಿ ಅವುಗಳನ್ನು ತಕ್ಷಣ ತೆರವುಗೊಳಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಮೇಯರ್ ಒಪ್ಪಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅಯೋಧ್ಯೆಯ ಅಭಿವೃದ್ಧಿ ಕುರಿತು ತಮ್ಮ ಪಕ್ಷದ ಯೋಜನೆಗಳನ್ನೂ ಅಖಿಲೇಶ್ ಯಾದವ್ ಪ್ರಕಟಿಸಿದ್ದಾರೆ. ಪಡಿತರ ವ್ಯವಸ್ಥೆಯ ಮೂಲಕ ಎಣ್ಣೆ ಮತ್ತು ತುಪ್ಪ ವಿತರಣೆ, ಸ್ಥಳೀಯ ಸಾಂಪ್ರದಾಯಿಕ ದೋಣಿಗಾರರ ಬದುಕಿಗೆ ನೆರವು, ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಭರವಸೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಹೊರಗಿನ ಗುತ್ತಿಗೆದಾರರಿಗೆ ಹೆಚ್ಚಿನ ಲಾಭವಾಗುತ್ತಿದ್ದು, ಸ್ಥಳೀಯ ಜನರ ಹಿತಾಸಕ್ತಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭೂ ದಾಖಲೆಗಳನ್ನು ಪರಿಶೀಲಿಸಿ, ವೃತ್ತದರ (ಸರ್ಕಲ್ ರೇಟ್) ನಿಗದಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೀಪೋತ್ಸವದ ನಂತರದ ಈ ಘಟನೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಒಂದೆಡೆ ಆಡಳಿತವು ಬಡವರಿಗೆ ನೆರವು ನೀಡಿರುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಬಡವರು ಉಳಿದ ಎಣ್ಣೆಗಾಗಿ ಪರದಾಡುತ್ತಿರುವ ದೃಶ್ಯಗಳನ್ನು ಮುಂದಿಟ್ಟುಕೊಂಡು ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ನೋಡಿ : ಋತ್ವಿಕ್ ಘಟಕ್ -100| ಮೇಘೆ ಡಾಕಾ ತಾರಾ ಸಿನಿಮಾ ಕುರಿತು ಮುರಳಿ ಕೃಷ್ಣ ಮಾತುಕತೆ Janashakthi Media
