ವಸಂತರಾಜ ಎನ್.ಕೆ
ಯು.ಎಸ್ 2026 ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು ಯು.ಎಸ್ ನಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಅಚ್ಚರಿ. ಹರ್ಷ ಎರಡನ್ನೂ ತಂದಿವೆ. ಜಗತ್ತಿನ ಎಲ್ಲೆಡೆ ಉಗ್ರ ಬಲಪಂಥದ ಪ್ರಭಾವ ಹೆಚ್ಚುತ್ತಿದ್ದ ಹಿನ್ನೆಲಯಲ್ಲಿ ಬ್ರೆಜಿಲ್, ಇಸ್ರೇಲ್ ಚುನಾವಣಾ ಫಲಿತಾಂಶಗಳ ಬೆನ್ನಲ್ಲಿ ಬಂದ ಯು.ಎಸ್ ಫಲಿತಾಂಶಗಳು ಉಗ್ರ ಬಲಪಂಥವನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆಯೆಂಬ ಆಶಾಭಾವನೆ ಮೂಡಿಸಿದೆ. ಈ ಫಲಿತಾಂಶಗಳ ಬಗ್ಗೆ ಎದ್ದಿರುವ ಕೆಲವು ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುವುದು ಆ ಕುರಿತು ಹೆಚ್ಚಿನ ಮಾಹಿತಿ ತಿಳಿದಿಕೊಳ್ಳುವ ಮತ್ತು ವಿಶ್ಲೇಷಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಇದನ್ನು ನೀಲೀ ಸುನಾಮಿ ಎನ್ನಬಹುದೇ? ಚಾರಿತ್ರಿಕ ಪ್ರಥಮಗಳು ಯಾವುವು? ಇದಕ್ಕೆ ಇರಾನ್ ಯುದ್ಧ ಕಾರಣವೇ? ಇತರ ಪ್ರಮುಖ ಕಾರಣಗಳಿವೆಯೇ? ಇದರಿಂದ ಇರಾನ್ ಯುದ್ಧ ನಿಲ್ಲುತ್ತಾ? ಟ್ರಂಪ್ ಸರಕಾರದ ಮೇಲೆ ಯಾವ ಪರಿಣಾಮ ಬೀರಲಿದೆ? ಯು.ಎಸ್ ರಾಜಕೀಯದ ಮೇಲೆ ಪರಿಣಾಮಗಳೇನು? ಟ್ರಂಪ್ ವಿದೇಶ ನೀತಿಯ ಮೇಲೆ, ಭಾರತದ ವಾಣಿಜ್ಯ ಒಪ್ಪಂದ, ಸುಂಕ ದರದ ಮೇಲೆ ಪರಿಣಾಮಗಳೇನು? – ಇವು ಆ ಪ್ರಶ್ನೆಗಳು. ಮೊದಲ ಮೂರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ
1. ಯು.ಎಸ್ ಮಧ್ಯಂತರ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ವಿಜಯ ವನ್ನು ‘ನೀಲಿ ಸುನಾಮಿ’ ಎಂದು ಬಣ್ಣಿಸಲಾಗಿದೆ. ಇದು ಅಷ್ಟು ಭಾರೀ ವಿಜಯವೇ ?
ನಾಲ್ಕು ವರ್ಷದ ಯು.ಎಸ್ ಅಧ್ಯಕ್ಷೀಯ ಅವಧಿಯ ಮಧ್ಯದಲ್ಲಿ ಬರುವ – ಕಾಂಗ್ರೆಸ್ (ಪಾರ್ಲಿಮೆಂಟಿ) ನ ಮೇಲ್-ಸದನ (ಸೆನೆಟ್) ಮತ್ತು ಕೆಳ ಸದನ (ಪ್ರತಿನಿಧಿ ಸಭೆ – ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ) ಮತ್ತು ರಾಜ್ಯಗಳ ಗವರ್ನರ್ ಗಳ – ಚುನಾವಣೆಗಳಲ್ಲಿ ಒಂದು ಅಥವಾ ಎರಡರಲ್ಲಿ ಅಧ್ಯಕ್ಷರ ಪಕ್ಷಕ್ಕೆ ಹಿನ್ನಡೆಯಾಗುವುದು ಸಾಮಾನ್ಯ. ಆದರೆ ಮೂರೂ ಚುನಾವಣೆಗಳಲ್ಲಿ ಅಧ್ಯಕ್ಷರ ಪಕ್ಷವಲ್ಲದ ವಿರೋಧ ಪಕ್ಷ ಗೆಲ್ಲುವುದು ತೀರಾ ಅಪರೂಪ. ಇದು ಹಿಂದಿನ ಹಲವು ದಶಕಗಳಲ್ಲಿ ಕೇವಲ ಎರಡು ಬಾರಿ ಮಾತ್ರ – 1994 ಮತ್ತು 2006 ರಲ್ಲಿ – ಆಗಿದೆ. ಅದೂ ಪ್ರತಿಯೊಂದರಲ್ಲೂ ದೊಡ್ಡ ಬಹುಮತ ಪಡೆಯುವುದು ಇನ್ನೂ ಅಪರೂಪ.
ಈ ಬಾರಿ ವಿರೋಧ ಪಕ್ಷದಲ್ಲಿರುವ ಡೆಮೊಕ್ರಾಟಿಕ್ ಪಕ್ಷ ಈ ಮೂರೂ ಚುನಾವಣೆಗಳಲ್ಲಿ ಬಹುಮತ ಸಾಧಿಸಿರುವುದು ವಿಶೇಷ. ಸೆನೆಟ್ ನಲ್ಲಿ2 ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದ ಸೀಟುಗಳಿಗೆ ಮಾತ್ರ ಚುನಾವಣೆಯಾಗುತ್ತದೆ. ಹಾಗಾಗಿ 100 ಸೀಟುಗಳಲ್ಲಿ 35 ಸೀಟಿಗೆ ಚುನಾವಣೆ ನಡೆದಿತ್ತು. ರಿಪಬ್ಲಿಕನ್ನರ 7 ಸೀಟುಗಳನ್ನು ಕಸಿದುಕೊಂಡು ಡೆಮೊ್ಕ್ರಾಟಿಕ್ ಪಕ್ಷ 54 ಮತ್ತು ರಿಪಬ್ಲಿಕನ್ 44 ಸೀಟುಗಳನ್ನು ಗೆದ್ದಿದೆ. ಇನ್ನುಳಿದ ಸೀಟುಗಳಲ್ಲೂ ಡೆಮೊ್ಕ್ರಾಟಿಕ್ ಪಕ್ಷ ಮುಂದಿದೆ. ಪ್ರತಿನಿಧಿ ಸಭೆಯ 435 ಸೀಟುಗಳಲ್ಲಿ ಒಟ್ಟಿನಲ್ಲಿ41 ಸೀಟುಗಳನ್ನು ಕಸಿದುಕೊಂಡು ಡೆಮೊ್ಕ್ರಾಟಿಕ್ ಪಕ್ಷ 253 ಸೀಟುಗಳೊಂದಿಗೆ ಭಾರೀ ಬಹುಮತ ಗಳಿಸಿದೆ. ರಿಪಬ್ಲಿಕನ್ ಪಕ್ಷ 157 ಸೀಟುಗಳಿಗೆ ಕುಸಿದಿದೆ. ರಾಜ್ಯಗಳ ಗವರ್ನರ್ ಹುದ್ದೆಗೆ 50 ರಲ್ಲಿ 36 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, 34ರಲ್ಲಿ ಫಲಿತಾಂಶಗಳು ಬಂದಿದ್ದು ಡೆಮೊಕ್ರಾಟರು 5 ರಾಜ್ಯಗಳನ್ನು ಕಸಿದು 28 ಗೆದ್ದುಕೊಂಡರೆ, ರಿಪಬ್ಲಿಕನ್ 20ರಲ್ಲಿ ಗೆದ್ದಿದ್ದಾರೆ. 2 ಸೀಟುಗಳ ಫಲಿತಾಂಶಗಳು ಬಾಕಿಯಿವೆ. ಅದರಲ್ಲೂ ಡೆಮೊಕ್ರಾಟರು ಮುಂದಿದ್ದಾರೆ.

ಎನ್.ಬಿ.ಸಿ ನ್ಯೂಸ್ ಎಕ್ಸಿಟ್ ಪೋಲ್ ಗಳ ಪ್ರಕಾರ, ಹೆಚ್ಚು ಕಡಿಮೆ ಎಲ್ಲ ಜನವಿಭಾಗಗಳಲ್ಲಿ ಡೆಮೊಕ್ರಾಟರ ಬೆಂಬಲ ರಿಬ್ಲಿಕನ್ನರಿಗಿಂತ ಭಾರೀ ಹೆಚ್ಚಿತ್ತು. ‘ಜನಾಂಗ ಮತ್ತು ಲಿಂಗ ಮೂಲ’ದಲ್ಲಿ ಬಿಳಿಯ ಪುರುಷರು (45%) ಬಿಟ್ಟು ಎಲ್ಲ ಇತರ ವಿಭಾಗಗಳಲ್ಲಿ – ಬಿಳಿಯ ಮಹಿಳೆಯರು (52%), ಕರಿಯ ಪುರುಷರು (86%), ಕರಿಯ ಮಹಿಳೆಯರು (93%), ಲ್ಯಾಟಿನೊ ಪುರುಷರು (58%), ಲ್ಯಾಟಿನೊ ಮಹಿಳೆಯರು (68%), ಇತರರು (63% – ಡೆಮೊಕ್ರಾಟರನ್ನು ಬೆಂಬಲಿಸಿದ್ದಾರೆ. ಏಶ್ಯನರಲ್ಲೂ 71% ಡೆಮೊಕ್ರಾಟರನ್ನು ಬೆಂಬಲಿಸಿದ್ದಾರೆ. ವಿವಿಧ ವಯೋಮಾನಗಳಲ್ಲೂ 65ಕ್ಕಿಂತ ಹೆಚ್ಚು (50%) ಬಿಟ್ಟರೆ ಎಲ್ಲ ವಯೋಮಾನಗಳಲ್ಲೂ 18-29 (73%), 30-44 (62%), 45-64 (52%) ಡೆಮೊಕ್ರಾಟರಿಗೆ ಮತ ಹಾಕಿದ್ದಾರೆ. ಕಾಲೇಜು ಶಿಕ್ಷಣವಿಲ್ಲದ ಬಿಳಿಯರಲ್ಲಿ ಮಾತ್ರ ರಿಪಬ್ಲಿಕನ್ (60%) ಹೆಚ್ಚಿನ ಬೆಂಬಲ ಗಳಿಸಿದ್ದಾರೆ. ಎಲ್ಲ ಆದಾಯ ವಿಭಾಗಗಳಲ್ಲೂ, ಯೂನಿಯನುಗಳಲ್ಲಿ ಸಂಘಟಿತ ಕಾರ್ಮಿಕ ವಿಭಾಗಗಳಲ್ಲಿ ಬಹುಸಂಖ್ಯಾತರು ಡೆಮೊಕ್ರಾಟರಿಗ ಮತ ನೀಡಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರಿಗ ಮತ ನೀಡಿದ ಹಲವು ಜನವಿಭಾಗಗಳು ಮತ್ತು ಒಟ್ಟು ಸುಮಾರು 8% ಈ ಬಾರಿ ಡೆಮೊಕ್ರಾಟರನ್ನು ಬೆಂಬಲಿಸಿದ್ದಾರೆ ಎಂದು ಎನ್.ಬಿ.ಸಿ ನ್ಯೂಸ್ ಎಕ್ಸಿಟ್ ಪೋಲ್ ತಿಳಿಸಿದೆ.
https://www.nbcnews.com/politics/2026-elections/exit-polls
ಯು.ಎಸ್ ನಲ್ಲಿ ಎರಡು ಪಕ್ಷ ವ್ಯವಸ್ಥೆ ಇದ್ದು ರಾಜ್ಯ ಮಟ್ಟದಲ್ಲಿ ಸಾಮಾನ್ಯವಾಗಿ ಒಂದು ಪಕ್ಷದ ಅಧಿಪತ್ಯವಿರುತ್ತದೆ. ಹಲವು ದಶಕಗಳ ಕಾಲ (1932 ರಿಂದ ಕ್ಯಾನ್ಸಾಸ್, 1988 ರಿಂದ ಟೆಕ್ಸಾಸ್ , 1998ರಿಂದ ದಕ್ಷಿಣ ಕೆರೊಲಿನಾ, 2008ರಿಂದ ಅಯೋವಾ, ಉತ್ತರ ಕೆರೊಲಿನಾ ಮತ್ತು 2018 ರಿಂದ ಒಹೈಯೊ) ಸೆನೆಟ್ ಗೆ ರಿಪಬ್ಲಿಕನ್ ಸೆನೆಟರ್ ಗಳನ್ನೇ ಆಯ್ಕೆ ಮಾಡಿದ ಏಳು ರಾಜ್ಯಗಳಲ್ಲಿ ಡೆಮೊಕ್ರಾಟರು ಗೆದ್ದಿದ್ದಾರೆ. 1932 ರ ನಂತರ ಕ್ಯಾನ್ಸಾಸ್ ನಲ್ಲಿ ಡೆಮೊಕ್ರಾಟರ ಜಯವು ‘ತಮಿಳುನಾಡಿನಲ್ಲಿ ಬಿಜೆಪಿ ಗೆದ್ದಂತೆ’ ಎಂದು ಯು.ಎಸ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಶ್ಲೇಷಕರು ಉದ್ಗರಿಸಿದ್ದಾರೆ! ಹಲವು ಕ್ಷೇತ್ರಗಳಲ್ಲಿ ಬಿಲಿಯನೇರುಗಳು ಅಥವಾ ಅವರು ಬೆಂಭಲಿಸಿದ ಪ್ರಮುಖ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಅವರ ಖರ್ಚಿನ ಒಂದು ಸಣ್ಣ ಭಾಗ ಖರ್ಚು ಮಾಡಿದ ಡೆಮೊಕ್ರಾಟಿಕ್ ಅಭ್ಯರ್ಥಿಗಳು ಸೋಲಿಸಿದ್ದಾರೆ. ಅಧ್ಯಕ್ಷ ಟ್ರಂಪ್ ವೈಯಕ್ತಿಕವಾಗಿ ಆಯ್ಕೆ ಮಾಡಿದ ಹೆಚ್ಚಿನ ಅಭ್ಯರ್ಥಿಗಳು ಸೋತಿದ್ದಾರೆ.

ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲೂ ಡೆಮೊಕ್ರಾಟರು 10 ಹೆಚ್ಚಿನ ರಾಜ್ಯಗಳಲ್ಲಿ ಎರಡು ಸದನಗಳಲ್ಲಿ ಬಹುಮತ ಪಡೆದರು. ಅವುಗಳಲ್ಲಿ 6 ರಾಜ್ಯಗಳಲ್ಲಿ ಗವರ್ನರ್ ಸ್ಥಾನ ಸಹ ಗೆದ್ದುಕೊಂಡು ಡೆಮೊಕ್ರಾಟರು ಪೂರ್ಣ ಅಧಿಕಾರ ಪಡೆದಿದ್ದಾರೆ. ಅರಿಝೋನಾ ದಲ್ಲಿ 50 ವರ್ಷಗಳ, ಟೆಕ್ಸಾಸ್ ನಲ್ಲಿ 20 ವರ್ಷಗಳ ಮತ್ತು ಉತ್ತರ ಕೆರೊಲಿನಾದಲ್ಲಿ 16 ವರ್ಷಗಳ ನಂತರ ರಾಜ್ಯ ಸದನಗಳಲ್ಲಿ ಬಹುಮತ ಪಡೆದಿದ್ದಾರೆ. ಡೆಮೊಕ್ರಾಟ್ ಗವರ್ನರ್ ಆಡಳಿತದಲ್ಲಿ ದೇಶದ ಮುಕ್ಕಾಲು ಪಾಲು ಜನ ಮತ್ತು ಗವರ್ನರ್ ಮತ್ತು ಎರಡೂ ಸದನಗಳು ಮೂರೂ ಡಮೊಕ್ರಾಟರ ನಿಯಂತ್ರಣದ ವ್ಯಾಪ್ತಿಯಲ್ಲಿ ದೇಶದ 53% ಜನ ಇದ್ದಾರೆ. ಯು.ಎಸ್ ಸಂವಿಧಾನದ ಪ್ರಕಾರ ರಾಜ್ಯಗಳಿಗೆ ವ್ಯಾಪಕ ಮತ್ತು ಹೆಚ್ಚಿನ ಅಧಿಕಾರವಿರುವುದರಿಂದ ಇದು ಗಮನಾರ್ಹ.
ಈ ಎಲ್ಲ ಅಂಶಗಳನ್ನು ಗಮನಿಸಿದರೆ ಈ ಚುನಾವಣೆಯಲ್ಲಿ ಡೆಮೊಕ್ರಾಟರ ಭಾರೀ ವಿಜಯವನ್ನು “ನೀಲಿ ಸುನಾಮಿ’ ಎಂದು ಕರೆಯುವುದು ತಪ್ಪಲ್ಲ. (ಡೆಮೊಕ್ರಾಟಿಕ್ ಪಕ್ಷವನ್ನು ನೀಲಿ ಪಕ್ಷವೆಂದೂ, ರಿಪಬ್ಲಿಕನ್ ಪಕ್ಷವವನ್ನು ಕೆಂಪ ಪಕ್ಷವೆಂದೂ ಕರೆಯುವುದು ವಾಡಿಕೆ)
2. ಹಲವು ಚಾರಿತ್ರಿಕ ಮೊದಲು ಗಳು ಈ ಫಲಿತಾಂಶಗಳಲ್ಲಿ ಇವೆ ಎನ್ನಲಾಗಿದೆ. ಅವು ಯಾವುವು? ಅವುಗಳ ಮಹತ್ವವೇನು ?
ಯು.ಎಸ್ ಪ್ರಜಾಸತ್ತಾತ್ಮಕ ದೇಶವೆಂದು ಹೆಸರಾಗಿದ್ದರೂ ಅದರ ರಾಜಕಾರಣದಲ್ಲಿ ಭಾಗವಹಿಸುತ್ತಿದ್ದದ್ದು ಅದರರಲ್ಲೂ ಅಧ್ಯಕ್ಷರು, ಗವರ್ನರು, ಸೆನೆಟರ್ ಇಂತಹ ಸ್ಥಾನಗಳಿಗೆ ಆಯ್ಕೆಯಾಗುತ್ತಿದ್ದದ್ದು ಶ್ರೀಮಂತ ಬಿಳಿಯ ಪುರುಷರು ಮಾತ್ರ, ಕಳೆದ ಕೆಲವು ಚುನಾವಣೆಗಳಿಂದ ರಾಜಕಾರಣಕ್ಕೆ ಇತರರೂ ಪ್ರವೇಶಿಸುತ್ತಿದ್ದು ಪ್ರಮುಖ ಸ್ಥಾನಗಳಿಗೆ ಆಯ್ಕೆಯಾಗುತ್ತಿದ್ದಾರೆ. ಈ ಬಾರಿಯ ಚುನಾವಣೆಗಳಲ್ಲಿ ಹಲವು ಚಾರಿತ್ರಿಕ ಪ್ರಥಮಗಳು ಕಂಡು ಬಂದಿವೆ. ಅವುಗಳಲ್ಲಿ ಈ ಕೆಳಗಿನವು ಪ್ರಮುಖವಾದ್ದು
*ಕೈಶಾ ಲ್ಯಾನ್ಸ್ ಬಾಟಮ್ಸ್ ದೇಶದ ಮತ್ತು ಜಾರ್ಜಿಯಾ ರಾಜ್ಯದ ಮೊದಲ ಕರಿಯ ಮತ್ತು ಮಹಿಳಾ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಹಿಂದೆ ಅಟ್ಲಾಂಟಾದ ಮೇಯರ್ ಆಗಿದ್ದು, ರಿಪಬ್ಲಿಕನ್ ಬಿಲಿಯನೇರ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
* ಅಬ್ದುಲ್ ಎಲ್-ಸೈಯದ್ ದೇಶದ ಮೊದಲ ಮುಸ್ಲಿಂ ಸೆನೆಟರ್ ಆಗಿ ಮಿಶಿಗನ್ ನಿಂದ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಅಧ್ಯಕ್ಷ ಟ್ರಂಪ್, ಉಪಾಧ್ಯಕ್ಷ ವಾನ್ಸ್ ಮತ್ತು ಎದುರಾಳಿ ರಿಪಬ್ಲಿಕನ್ ಅಭ್ಯರ್ಥಿ ರೋಜರ್ಸ್ ಅಭೂತಪೂರ್ವ ಧಾರ್ಮಿಕ-ದ್ವೇಷ ಮತ್ತು ಜನಾಂಗೀಯ-ದ್ವೇಷ ಪೂರಿತ ಪ್ರಚಾರ ನಡೆಸಿದ್ದರು. ಅವರನ್ನು ‘ಜಿಹಾದಿ’, ‘ವಿದೇಶೀ ಭಯೋತ್ಪಾದಕ’ ಎಂದೆಲ್ಲ ನಿಂದಿಸಲಾಗಿತ್ತು. ಯೆಹೂದಿ-ಇಸ್ರೇಲಿ ಶ್ರೀಮಂತರ ಕೂಟ ಐಪಾಕ್ ಅವರನ್ನು ಸೋಲಿಸಲು ರೆಕಾರ್ಡ್ ಹಣ ಖರ್ಚು ಮಾಡಿತ್ತು. ಅವರು ಡೆಮೊಕ್ರಾಟಿಕ್ ಫ್ರಾಥಮಿಕ ಚುನಾವಣೆಗಳಲ್ಲಿ ಸೋಲಿಸಿದ ಡೆಮೊಕ್ರಾಟಿಕ್ ನಾಯಕ ರಿಪಬ್ಲಿಕನ್ ಅಭ್ಯರ್ಥಿಯನ್ನು ಬೆಂಬಲಿಸಿದ್ದ. ಈ ತೊಡಕುಗಳನ್ನು ಮೀರಿ ಅವರು ಗೆದ್ದಿದ್ದಾರೆ.
* ಕ್ಸೇವಿಯರ್ ಬೆಸೆರ್ರಾ ಕ್ಯಾಲಿಫೋರ್ನಿಯ ರಾಜ್ಯದ ಮೊದಲ ಲ್ಯಾಟಿನೊ (ಲ್ಯಾಟಿನ್ ಅಮೆರಿಕನ್ ದೇಶಗಳ ಮೂಲದವರು) ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಲಿಫೋರ್ನಿಯ ದ ಜನಸಂಖ್ಯೆಯಲ್ಲಿ ಲ್ಯಾಟಿನೊಗಳು 40% ಇದ್ದರೂ, ಈವರೆಗೆ ಯಾರೂ ಗವರ್ನರ್ ಆಗಿ ಆಯ್ಕೆಯಾಗಿರಲಿಲ್ಲ.
* ಗಿನಾ ಹಿನೊಜೊಸಾ ಟೆಕ್ಸಾಸ್ ರಾಜ್ಯದ ಮೊದಲ ಲ್ಯಾಟಿನೊ (ಲ್ಯಾಟಿನ್ ಅಮೆರಿಕನ್ ದೇಶಗಳ ಮೂಲದವರು) ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಡೆಮೊಕ್ರಾಟಿಕ್ ಪಕ್ಷದವರು.
* ದೆಬ್ ಹಾಲಾಂಡ್ ದೇಶದಲ್ಲಿಯೇ ಮೊದಲ ಅಮೆರಿಕನ್ ಮಹಿಳಾ ಮೂಲನಿವಾಸಿ ಗವರ್ನರ್ ಆಗಿದ್ದಾರೆ. ಅವರು ನ್ಯೂ ಮೆಕ್ಸಿಕೊದ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
* ಬೈರನ್ ಡೊನಾಲ್ಡ್ಸ್ ಫ್ಲಾರಿಡಾ ರಾಜ್ಯದ ಮೊದಲ ಕರಿಯ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ರಿಪಬ್ಲಿಕನ್ ಪಕ್ಷದವರು.
* ಕ್ರಿಸ್ ಪಾಪ್ಪಾಸ್ ದೇಶದ ಮೊದಲ ಸ್ವಘೋಷಿತ ಸಲಿಂಗಕಾಮಿ ಸೆನೆಟರ್ ಆಗಿದ್ದಾರೆ. ಅವರು ಡೆಮೊಕ್ರಾಟಿಕ್ ಪಕ್ಷದವರಾಗಿದ್ದು ನ್ಯೂ ಹಾಂಪ್ ಶೈರ್ ನಿಂದ ಚುನಾಯಿತರಾಗಿದ್ದಾರೆ.
* ಪೆಗ್ಗಿ ಫ್ಲಾನಗನ್ ದೇಶದ ಮೊದಲ ಅಮೆರಿಕನ್ ಮಹಿಳಾ ಮೂಲನಿವಾಸಿ ಸೆನೆಟರ್ ಆಗಿದ್ದಾರೆ. ಅವರು ಮಿನ್ನೆಸೋಟಾ ದಿಂದ ಚುನಾಯಿತರಾಗಿದ್ದಾರೆ.

* ಡೇವಿಡ್ ಕ್ರೌಲಿ ಮತ್ತು ಆರನ್ ಫೋರ್ಡ್ ಅನುಕ್ರಮವಾಗಿ ವಿಸ್ಕೊನ್ಸಿನ್ ಮತ್ತು ನೆವಾಡಾ ರಾಜ್ಯಗಳ ಮೊದಲ ಕರಿಯ ಗವರ್ನರ್ ಗಳಾಗಿ ಚುನಾಯಿತರಾಗಿದ್ದಾರೆ. ಅವರಿಬ್ಬರೂ ಡೆಮೊಕ್ರಾಟಿಕ್ ಪಕ್ಷದವರು.
* ಆಮಿ ಎಕ್ಟನ್ (ಡೆಮೊಕ್ರಾಟಿಕ್) ಮತ್ತು ಮಾರ್ಶಾ ಬ್ಲಾಕ್ ಬರ್ನ್ (ರಿಪಬ್ಲಿಕನ್) ಅನುಕ್ರಮವಾಗಿ ಒಹೈಯೊ ಮತ್ತು ಟೆನ್ನೆಸ್ಸಿ ರಾಜ್ಯಗಳ ಮೊದಲ ಮಹಿಳಾ ಗವರ್ನರ್ ಗಳಾಗಿ ಚುನಾಯಿತರಾಗಿದ್ದಾರೆ.
* ಅಬೇರ್ ಕವಾಸ್ (ಡೆಮೊಕ್ರಾಟಿಕ್) ನ್ಯೂ ಯಾರ್ಕ್ ಶಾಸನ ಸಭೆಗೆ ಚುನಾಯಿತರಾದ ಮೊದಲ ಪ್ಯಾಲೆಸ್ಟೈನ್ ಆಗಿದ್ದಾರೆ. ಅವರು ಎಡಪಂಥೀಯ ಡಿ.ಎಸ್.ಎ ಗುಂಪಿಗೆ ಸೇರಿದವರು ಸಹ.

ಮೂರು ಮೇಯರ್ ಮತ್ತು 8 ಪ್ರತಿನಿಧಿ ಸಭೆ ಸ್ಥಾನ ಪಡೆದ ಎಡಪಂಥೀಯ ಡಿ.ಎಸ್.ಎ
2016ರಲ್ಲಿ ಬರ್ನಿ ಸ್ಯಾಂಡರ್ಸ್ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಗಳಿಗೆ ಸ್ಪರ್ಧೆ ಮಾಡಿದ ಮೇಲೆ ರಚಿತವಾದ ಡಿ.ಎಸ್.ಎ (ಡೆಮೊಕ್ರಾಟಿಕ್ ಸೋಶಲಿಸ್ಟ್ಸ್ ಆಫ್ ಅಮೆರಿಕಾ) ಡೆಮೊಕ್ರಾಟಿಕ್ ಪಕ್ಷದೊಳಗೆ ಕೆಲಸ ಮಾಡುವ ಎಡಪಂಥೀಯ ಗುಂಪಾಗಿದ್ದು, ಅದರ ಜನಪ್ರಿಯತೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದ್ದು, ಈ ಬಾರಿಯ ಚುನಾವಣೆಗಳಲ್ಲಿ ಅದು ಮೂರು ಮೇಯರ್ ಮತ್ತು 8 ಪ್ರತಿನಿಧಿ ಸಭೆ ಸ್ಥಾನಗಳನ್ನು ಗೆದ್ದುಕೊಳ್ಳಲು ಸಾಧ್ಯವಾಗಿದೆ. ಇವಲ್ಲದೆ 294 ರಾಜ್ಯ ಮತ್ತು ಸ್ತಳಿಯ ಮಟ್ಟದ ಶಾಸಕರ ಸ್ಥಾನಗಳಿಗೆ ಡಿ.ಎಸ್.ಎ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವುಗಳಲ್ಲಿ 149 ಸ್ಥಾನಗಳಲ್ಲಿ ಗೆದ್ದಿದ್ದಾರೆ. 37 ಸ್ಥಾನಗಳ ಮತ ಎಣಿಕೆ ಇನ್ನೂ ನಡೆಯುತ್ತಿದೆ.
ಗೆದ್ದಿರುವ ಮೂರು ಮೇಯರ್ ಗಳು – ನಿತ್ಯಾ ರಾಮನ್ (ಲಾಸ್ ಏಂಜಲೀಸ್), ಜಾನಿಸ್ ಲೆವಿಸ್ ಜಾರ್ಜ್ ( ವಾಶಿಂಗ್ಟನ್), ಡೇವಿಡ್ ಮೊರಾಲೆಸ್ (ಪ್ರಾವಿಡೆನ್ಸ್, ರೋಡ್ ದ್ವೀಪ)
ಫೆಡೆರಲ್ ಪ್ರತಿನಿಧಿ ಸಭೆಗೆ ಗೆದ್ದಿರುವವರು – ಎಂಜೆಲಾ ಗೊನ್ಸಾಲೆಸ್-ಟೊರೆಸ್ (ಕ್ಯಾಲಿಫೋರ್ನಿಯ), ಮೆಲಾಟ್ ಕಿರೋಸ್ (ಕೊಲರಾಡೊ), ಡೊನೊವನ್ ಮೆಕ್ಕಿನೆ (ಮಿಶಿಗನ್), ದಾಲಿಯಲಿಝಾ ಅವಿಲಾ ಶೆವೆಲಿಯರ್ (ನ್ಯೂಯಾರ್ಕ್), ಕ್ಲೇರ್ ವಾಲ್ಡೇಝ್ (ನ್ಯೂಯಾರ್ಕ್), ಕ್ರಿಸ್ ರಾಬ್ (ಪೆನ್ಸಿಲ್ವೇನಿಯ), ರಶೀದಾ ತ್ಲಾಯಬ್ (ಮಿಶಿಗನ್), ಅಲೆಕ್ಸಾಂಡ್ರಿಯ ಒಕೆಸಿಯೊ-ಕೋರ್ಟೆಝ್ (ನ್ಯೂಯಾರ್ಕ್),
3. ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಈ ಭಾರೀ ಸೋಲಿಗೆ ಇರಾನ್ ಯುದ್ಧ ಕಾರಣವೇ ?
ಎನ್.ಬಿ.ಸಿ ನ್ಯೂಸ್ ಎಕ್ಸಿಟ್ ಪೋಲ್ ಗಳ ಪ್ರಕಾರ, ಈ ಚುನಾವಣೆಯಲ್ಲಿ ಇರಾನ್ ಯುದ್ಧ ನಿರ್ಣಾಯಕ ಅಥವಾ ಪ್ರಮುಖ ಅಂಶವಾಗಿತ್ತು ಎಂದು 74% ಜನ ಹೇಳಿದ್ದಾರೆ. ಜೀವನ ವೆಚ್ಚ ನಿರ್ಣಾಯಕ ಅಥವಾ ಪ್ರಮುಖ ಅಂಶವಾಗಿತ್ತು ಎಂದು 89% ಜನ ಹೇಳಿದ್ದಾರೆ. ದೇಶ ಎದುರಿಸುತ್ತಿರುವ ಆರು ಸಮಸ್ಯೆಗಳಲ್ಲಿ ಪ್ರಧಾನ ಸಮಸ್ಯೆ ಯಾವುದು ಎಂಬ ಪ್ರಶ್ನೆಗೆ ಆರ್ಥಿಕ ಸ್ಥಿತಿ ಎಂದು 39% ಜನ ಹೇಳಿದ್ದಾರೆ. ಇದು ಆರು ಸಮಸ್ಯೆಗಳಲ್ಲಿ ಗರಿಷ್ಟ ಜನ ಗುರುತಿಸಿದ ಸಮಸ್ಯೆ. ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಪ್ರಶ್ನೆಗೆ ಕೆಟ್ಟದಾಗಿದೆ ಎಂದು 75% ಜನ ಹೇಳಿದ್ದಾರೆ. ಹಾಗಾಗಿ ಈ ಭಾರಿ ಸೋಲಿಗೆ ಇರಾನ್ ಯುದ್ಧ ಕಾರಣವೆಂದು ಹೇಳುವುದು ಪೂರ್ಣ ಸರಿಯಾಗಲಿಕ್ಕಿಲ್ಲ. ಆದರೆ ಇರಾನ್ ಯುದ್ಧ ಆರ್ಥಿಕ ಸ್ಥಿತಿಯನ್ನು ಕೆಟ್ಟದಾಗಿಸುವ ಮತ್ತು . ಜೀವನ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದೆ. ಆರ್ಥಿಕ ಸ್ಥಿತಿ ಮತ್ತು . ಜೀವನ ವೆಚ್ಚದ ಮೇಲೆ ಇರಾನ್ ಯುದ್ಧ ತೀವ್ರ ದುಷ್ಪರಿಣಾಮ ಬೀರದಿದ್ದರೆ, ಮತ್ತು ಯುದ್ಧದಲ್ಲಿ ಅವಮಾನಕಾರಿ ಯಾಗಿ ಸೋಲದಿದ್ದರೆ ಬಹುಶಃ ಇಂತಹ ಭಾರೀ ಆಕ್ರೋಶ ಇರುತ್ತಿರಲಿಲ್ಲ. ಉದಾಹರಣೆಗೆ ಇನ್ನೂ ಹೆಚ್ಚು ದೀರ್ಘಕಾಲ ನಡೆಯುತ್ತಿರುವ ಉಕ್ರೇನ್ ಯುದ್ಧದ ವಿರುದ್ಧ ಅಷ್ಟು ಆಕ್ರೋಶ ವಿರೊಧ ಕಂಡು ಬಂದಿಲ್ಲವೆಂದು ಗಮನಿಸಬಹುದು. ಏಕೆಂದರೆ ಅದರ ದುಷ್ಪರಿಣಾಮ ಜನತೆಗೆ ಕಂಡು ಬರಲಿಲ್ಲ.

ಆದರೆ ಇರಾನ್ ಯುದ್ಧ ಸ್ವತಂತ್ರವಾಗಿ ಒಂದು ಅಂಶ ಅಲ್ಲವೆಂದೂ ಸಹ ಹೇಳುವಂತಿಲ್ಲ. ಏಕೆಂದರೆ ಇದೇ ಪೋಲ್ ನಲ್ಲಿ 63% ಜನ ಇರಾನ್ ಮೇಲೆ ಯುದ್ಧ ಹೂಡಿದ್ದು ತಪ್ಪು ನಿರ್ಧಾರ ಎಂದಿದ್ದಾರೆ. ಇಸ್ರೇಲ್ ಗೆ ಯು.ಎಸ್ ಬೆಂಬಲ ಅತಿಯಾಯ್ತಾ ಎಂಬ ಪ್ರಶ್ನೆಗೆ 51% ಜನ ಅತಿಯಾಯ್ತು ಎಂದಿದ್ದಾರೆ. ಗಾಜಾ ನರಮೇಧದ ಬಗ್ಗೆ ಈ ಪೋಲ್ ನಲ್ಲಿ ಯಾವುದೇ ಪ್ರಶ್ನೆಯಿಲ್ಲದಿದ್ದರೂ, ಇತರ ಸಮೀಕ್ಷೆಗಳು, ವಿದ್ಯಾರ್ಥಿ ಮತ್ತಿತರ ವಿಭಾಗಗಳ ಪ್ರತಿರೋಧ ಚಳುವಳಿಗಳು, ಇಸ್ರೇಲಿನ ಗಾಜಾ ನರಮೇಧ ಮತ್ತು ಇರಾನ್ ಮೇಲೆ ಆಕ್ರಮಣ ಮಾಡಲು ಕುಮ್ಮಕ್ಕು ಇವುಗಳಿಗೆ ಜನತೆಯ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ಸ್ಪಷ್ಟ ಪಡಿಸಿವೆ. ಬಹುಶಃ ವಿಯೇಟ್ನಾಂ ಯುದ್ಧದ ನಂತರ ಇರಾನ್ ಯುದ್ಧ, ಯು.ಎಸ್ ಜನತೆಗೆ ಅತ್ಯಂತ ಅಪ್ರಿಯವಾದ ಯುದ್ಧವಾಗಿತ್ತು. ಯು.ಎಸ್ ಜನತೆ ಸಾಮಾನ್ಯವಾಗಿ ವಿದೇಶ ನೀತಿ ಮತ್ತು ದೇಶದ ಆಂತರಿಕ ಸಮಸ್ಯೆಗಳಿಗೆ ತಳುಕು ಹಾಕುವುದಿಲ್ಲ ಅಥವಾ ಅವುಗಳ ಸಂಬಂಧದ ಬಗ್ಗೆ ತಲೆ ಕೆಡಿಸುವುದಿಲ್ಲ. ಆದರೆ ಈ ಬಾರಿ ಜೀವನ ವೆಚ್ಚದಲ್ಲಿ ಭಾರೀ ಏರಿಕೆ, ಆರ್ಥಿಕ ದುಸ್ಥಿತಿ ಮತ್ತು ಇರಾನ್ ಯುದ್ಧಗಳ ನಡುವೆ ಸಂಬಂಧವನ್ನು ಸ್ಪಷ್ಟವಾಗಿ ಗುರುತಿಸಿದರು ಎಂಬುದು ಗಮನಾರ್ಹ.
*********************
