ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ನಗರದ ರಾಜಾಜಿನಗರದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಗೀಡಾದವರಲ್ಲಿ ಏಳು ವರ್ಷದ ಬಾಲಕನೂ ಸೇರಿದ್ದಾನೆ. ಆರೋಪಿಯನ್ನು ಇಂದೂಶೇಖರ್ ಅಲಿಯಾಸ್ ಶೇಖರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹತ್ಯಾಕಾಂಡ
ಪತ್ನಿ ಸುನಿತಾ, ಅತ್ತೆ ರೂಪಾವತಿ, ಭಾಮೈದರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಪುನೀತ್ ಕೊಲೆಯಾದವರು. ಈ ಪೈಕಿ ಬಾಲಕ ಪುನೀತ್‌ನ ಮೃತದೇಹ ಮಾತ್ರ ಇದುವರೆಗೆ ಪತ್ತೆಯಾಗಿದೆ. ಉಳಿದ ಆರು ಮಂದಿಯ ಮೃತದೇಹಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ 59ನೇ ಕ್ರಾಸ್, ಭಾಶ್ಯಂ ವೃತ್ತದ ಸಮೀಪದ ಮನೆಯಲ್ಲಿ ಈ ಹತ್ಯೆಗಳು ನಡೆದಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಚಿಕ್ಕಬಳ್ಳಾಪುರ ಸೇರಿದಂತೆ ಸಂಬಂಧಪಟ್ಟ ಪ್ರದೇಶಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಸುನಿತಾಳನ್ನು ಮದುವೆಯಾಗಿದ್ದ ಶೇಖರ್, ಆಕೆ ತವರು ಮನೆಗೆ ಹೋಗುವ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಂಪತಿ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಕುಟುಂಬದವರು ಹಲವು ಬಾರಿ ಪ್ರಯತ್ನಿಸಿದ್ದರೂ ಸಮಸ್ಯೆ ಮುಂದುವರಿದಿತ್ತು. ಸುನಿತಾಳಿಗೆ ಆಕೆಯ ತಾಯಿ ಮತ್ತು ಸಹೋದರರು ಬೆಂಬಲ ನೀಡುತ್ತಿರುವುದಕ್ಕೆ ಆರೋಪಿ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಹತ್ಯಾಕಾಂಡ
ಇದನ್ನೂ ಓದಿ : ಖ್ಯಾತ ಸಾಹಿತ್ಯ ವಿಮರ್ಶಕ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ನಿಧನ
ತನಿಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಮೊದಲು ಪತ್ನಿ ಸುನಿತಾಳನ್ನು ಹತ್ಯೆ ಮಾಡಿ, ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ನಂದಿ ಬೆಟ್ಟದ ಸಮೀಪ ಎಸೆದಿದ್ದಾನೆ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಿ, ನೆರೆಹೊರೆಯವರಿಗೆ ಆಕೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದ ಎನ್ನಲಾಗಿದೆ. ನಂತರ ತನ್ನ ಭಾಮೈದರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದಾನೆ. ಅವರ ಪತ್ನಿಯರಾದ ದಿವ್ಯಾ, ನಳಿನಿ, ಅತ್ತೆ ರೂಪಾವತಿ ಹಾಗೂ ಬಾಲಕ ಪುನೀತ್‌ನನ್ನೂ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹತ್ಯಾಕಾಂಡ
ನಳಿನಿಯ ತಾಯಿ ಗುರುವಾರ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಪತ್ತೆಯಾದವರ ಕುರಿತು ತನಿಖೆ ನಡೆಸಿದ ಪೊಲೀಸರು ಶೇಖರ್‌ನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಹತ್ಯೆಗಳ ಸಂಗತಿ ಬಯಲಾಗಿದೆ. ಕೊಲೆಗಳ ಬಳಿಕ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲು ಆರೋಪಿ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರು ಮತ್ತು ಹತ್ಯೆಗೆ ಬಳಸಿದ್ದ ಗ್ರೈಂಡರ್ ಕಲ್ಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಪ್ರಕಾರ, ಆರೋಪಿಯು 15ರಿಂದ 20 ದಿನಗಳ ಅವಧಿಯಲ್ಲಿ ಏಳು ಮಂದಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಆದರೆ ಆತ ನೀಡಿರುವ ಕಾಲಕ್ರಮವನ್ನು ಪೊಲೀಸರು ಇನ್ನೂ ಪರಿಶೀಲಿಸುತ್ತಿದ್ದಾರೆ. ಮೃತದೇಹಗಳನ್ನು ಎಲ್ಲಿ ಎಸೆದಿದ್ದಾನೆ ಎಂಬುದನ್ನೂ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ದೃಢಪಡಿಸಲಾಗುತ್ತಿದೆ. ಮೃತದೇಹಗಳನ್ನು ಸಾಗಿಸಲು ಆರೋಪಿಗೆ ಬೇರೆ ಯಾರಾದರೂ ನೆರವಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹತ್ಯಾಕಾಂಡ
ಇದನ್ನೂ ನೋಡಿ : ಎಸ್‌ಐಆರ್ ರದ್ದತಿಗೆ ಪಟ್ಟು: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್ ಪ್ರತಿಭಟನೆ Janashakthi
