ಪಂಜಾಬ್ ವಿಧಾನಸಭೆ ಚುನಾವಣೆ | 40 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಆಪ್; ಧುರಿಯಿಂದ ಮುಖ್ಯಮಂತ್ರಿ ಭಗವಂತ್ ಮಾನ್ ಸ್ಪರ್ಧೆ

ಜೈಲಿನಲ್ಲಿರುವ ಸಚಿವ ಸಂಜೀವ್ ಅರೋರಾಗೆ ಲುಧಿಯಾನ ಪಶ್ಚಿಮ ಕ್ಷೇತ್ರದಿಂದ ಟಿಕೆಟ್ | ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್‌ಗೆ ಕೊಟ್ಕಾಪುರಾ ಕ್ಷೇತ್ರ ಪಂಜಾಬ್
ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ತನ್ನ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದು, ಜೈಲಿನಲ್ಲಿರುವ ಸಚಿವ ಸಂಜೀವ್ ಅರೋರಾ ಅವರಿಗೆ ಲುಧಿಯಾನ ಪಶ್ಚಿಮ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ವಿಧಾನಸಭೆಯ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು ಕೊಟ್ಕಾಪುರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್, ಪಕ್ಷದ ಪಂಜಾಬ್ ಉಸ್ತುವಾರಿ ಮನೀಶ್ ಸಿಸೋಡಿಯಾ, ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಚ್ಚು ಗಮನ ಸೆಳೆದಿರುವುದು ಸಚಿವ ಸಂಜೀವ್ ಅರೋರಾ ಅವರಿಗೆ ನೀಡಿರುವ ಟಿಕೆಟ್. ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ 2026ರ ಮೇ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೂ ಪಕ್ಷ ಲುಧಿಯಾನ ಪಶ್ಚಿಮ ಕ್ಷೇತ್ರದಿಂದ ಅವರನ್ನು ಮತ್ತೆ ಕಣಕ್ಕಿಳಿಸಿದೆ.

2025ರಲ್ಲಿ ಲುಧಿಯಾನ ಪಶ್ಚಿಮ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅರೋರಾ, ಇದೀಗ 2027ರ ವಿಧಾನಸಭೆ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರ ಬಂಧನವನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಆಪ್ ಈ ಹಿಂದೆ ಟೀಕಿಸಿತ್ತು. ಇ.ಡಿ. ಪ್ರಕರಣದ ಆರೋಪಗಳು ಇನ್ನೂ ನ್ಯಾಯಾಂಗ ವಿಚಾರಣೆಗೆ ಒಳಪಟ್ಟಿವೆ.

40 ಅಭ್ಯರ್ಥಿಗಳಲ್ಲಿ ನಾಲ್ವರು ಮಹಿಳೆಯರು

ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟ್ಟಿಯಲ್ಲಿರುವ 40 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಾಗಿದ್ದಾರೆ. ಏಳು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಮುಖ ಅಭ್ಯರ್ಥಿಗಳ ಕ್ಷೇತ್ರಗಳ ವಿವರ ಹೀಗಿದೆ:

ಅಭ್ಯರ್ಥಿ ಕ್ಷೇತ್ರ
ಭಗವಂತ್ ಮಾನ್ ಧುರಿ
ಸಂಜೀವ್ ಅರೋರಾ ಲುಧಿಯಾನ ಪಶ್ಚಿಮ
ಕುಲ್ತಾರ್ ಸಿಂಗ್ ಸಂಧ್ವಾನ್ ಕೊಟ್ಕಾಪುರಾ
ಕುಲದೀಪ್ ಸಿಂಗ್ ಧಲಿವಾಲ್ ಅಜನಾಲಾ
ಬಾಲ್ಕಾರ್ ಸಿಂಗ್ ಕರ್ತಾರ್‌ಪುರ
ಜೈ ಕೃಷ್ಣ ಸಿಂಗ್ ರೌರಿ ಗಢ್‌ಶಂಕರ್
ಕುಲ್ವಂತ್ ಸಿಂಗ್ ಮೊಹಾಲಿ
ಅಮನ್ಶೇರ್ ಸಿಂಗ್ (ಶೆರಿ ಕಲ್ಸಿ) ಬಟಾಲಾ
ಇಂದರ್‌ಬೀರ್ ಸಿಂಗ್ ನಿಜ್ಜರ್ ಅಮೃತಸರ ದಕ್ಷಿಣ
ಹರ್‌ಮೀತ್ ಸಿಂಗ್ ಸಂಧು ತರ್ನ್ ತಾರಣ್
ಅಮನ್ದೀಪ್ ಕೌರ್ ಅರೋರಾ ಮೊಗಾ
ಇಂದರ್‌ಜಿತ್ ಕೌರ್ ಮಾನ್ ನಕೋದರ್

ಇದಲ್ಲದೆ, ಬಲ್ಜಿಂದರ್ ಕೌರ್ ಅವರಿಗೆ ತಲ್ವಂಡಿ ಸಾಬೋ, ಸಂತೋಷ್ ಕಟಾರಿಯಾ ಅವರಿಗೆ ಬಲಾಚೌರ್, ಮನ್ವಿಂದರ್ ಸಿಂಗ್ ಗಿಯಾಸ್ಪುರ ಅವರಿಗೆ ಪಾಯಲ್ ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ : ಕೋಚಿಂಗ್ ಕೇಂದ್ರಗಳಿಗೆ ಕಡಿವಾಣ | 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ; ದಿನಕ್ಕೆ 5 ಗಂಟೆ ಮಾತ್ರ ತರಗತಿ

ಜನಾಭಿಪ್ರಾಯ ಮತ್ತು ಸಮೀಕ್ಷೆ ಆಧರಿಸಿ ಆಯ್ಕೆ

ಅಭ್ಯರ್ಥಿಗಳ ಆಯ್ಕೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಭಗವಂತ್ ಮಾನ್, ಸಾರ್ವಜನಿಕ ಸಮೀಕ್ಷೆಗಳು ಮತ್ತು ಜನರಿಂದ ಬಂದ ಅಭಿಪ್ರಾಯಗಳ ಆಧಾರದಲ್ಲಿ 40 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ಸಾಕಷ್ಟು ಸಮಯ ನೀಡುವ ಉದ್ದೇಶದಿಂದ ಇತರ ಪಕ್ಷಗಳಿಗಿಂತ ಮುಂಚಿತವಾಗಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.

ತಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಮಹಿಳೆಯರಿಗೆ ನೀಡಿರುವ ಸೌಲಭ್ಯಗಳು ಹಾಗೂ ಗೃಹ ಬಳಕೆಯ ವಿದ್ಯುತ್ ಗ್ರಾಹಕರಿಗೆ ಒದಗಿಸಿರುವ ಪ್ರಯೋಜನಗಳ ಆಧಾರದಲ್ಲಿ ಮತದಾರರ ಜನಾದೇಶ ಪಡೆಯುವುದಾಗಿ ಮಾನ್ ಹೇಳಿದರು.

ಮುಂದಿನ ಪಟ್ಟಿಯಲ್ಲಿ ಹೊಸ ಮುಖಗಳಿಗೂ ಅವಕಾಶ ನೀಡಲು ಪಕ್ಷ ನಿರ್ಧರಿಸಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಕೊನೆಯ ಕ್ಷಣದವರೆಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿಸಲಿದೆ ಎಂದು ಟೀಕಿಸಿದ ಮಾನ್, ತಮ್ಮ ಪಕ್ಷ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಶ್ವಾಸ ಹೊಂದಿದೆ ಎಂದರು.

ಅರವಿಂದ್ ಕೇಜ್ರಿವಾಲ್ ಅವರು ಅಭ್ಯರ್ಥಿಗಳಿಗೆ ಶುಭಾಶಯ ಕೋರಿದ್ದು, ಮನೀಶ್ ಸಿಸೋಡಿಯಾ ಅವರು ಪ್ರತಿ ಮನೆಗೂ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವಂತೆ ಅಭ್ಯರ್ಥಿಗಳಿಗೆ ಕರೆ ನೀಡಿದ್ದಾರೆ.

2022ರಲ್ಲಿ 92 ಸ್ಥಾನ ಗೆದ್ದಿದ್ದ ಆಪ್

2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ 18 ಸ್ಥಾನಗಳನ್ನು ಪಡೆದಿತ್ತು.

2027ರ ಆರಂಭದಲ್ಲಿ, ಫೆಬ್ರವರಿ–ಮಾರ್ಚ್ ಅವಧಿಯಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. 117 ಸದಸ್ಯ ಬಲದ ವಿಧಾನಸಭೆಯ ಐದು ವರ್ಷಗಳ ಅವಧಿ 2027ರ ಮಾರ್ಚ್ 16ರಂದು ಮುಕ್ತಾಯಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆಗೆ ಹಲವು ತಿಂಗಳು ಮುಂಚಿತವಾಗಿಯೇ 40 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿರುವ ಆಪ್, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನೂ ಹಂತ ಹಂತವಾಗಿ ಪ್ರಕಟಿಸಲು ಸಿದ್ಧತೆ ನಡೆಸಿದೆ.

ಇದನ್ನೂ ನೋಡಿ : ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಸುರಕ್ಷಿತತೆ – ಆನ್‌ಲೈನ್ ಸಂವಾದ

Donate Janashakthi Media

Leave a Reply

Your email address will not be published. Required fields are marked *