ನವದೆಹಲಿ: ದೇಶದ ಬಹುನಿರೀಕ್ಷಿತ 2027ರ ಜನಗಣತಿಯ ಎರಡನೇ ಹಂತವಾದ ಜನಸಂಖ್ಯೆ ಗಣತಿ 2027ರ ಜನವರಿ 25ರಿಂದ ಆರಂಭವಾಗಲಿದೆ. ಫೆಬ್ರವರಿ 28ರವರೆಗೆ ದೇಶಾದ್ಯಂತ ಮನೆಮನೆಗೆ ತೆರಳಿ ಜನಸಂಖ್ಯೆ ಗಣತಿ ನಡೆಸಲು ಕೇಂದ್ರ ಗೃಹ ಸಚಿವಾಲಯ ವೇಳಾಪಟ್ಟಿ ಪ್ರಕಟಿಸಿದೆ. ಇದಕ್ಕೂ ಮುನ್ನ ಜನವರಿ 10ರಿಂದ 24ರವರೆಗೆ ಜನರು ಸ್ವತಃ ಆನ್ಲೈನ್ ಮೂಲಕ ತಮ್ಮ ಕುಟುಂಬದ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜನಗಣತಿ
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಲ್ಲಿ ಜನಗಣತಿ ನಡೆಯಲಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೊರತಾಗಿ ಇತರ ಜಾತಿಗಳ ವಿವರಗಳನ್ನೂ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ಜಾತಿ ಗಣತಿಯೂ 2027ರ ಜನಗಣತಿಯ ಪ್ರಮುಖ ಭಾಗವಾಗಲಿದೆ.
ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಜನವರಿ 25ರಿಂದ ಫೆಬ್ರವರಿ 28ರವರೆಗೆ ಮನೆಮನೆಗೆ ತೆರಳಿ ಜನಸಂಖ್ಯೆ ಗಣತಿ ನಡೆಯಲಿದೆ. ನಂತರ ಮಾರ್ಚ್ 1ರಿಂದ 5ರವರೆಗೆ ಪರಿಷ್ಕರಣಾ ಕಾರ್ಯ ನಡೆಯಲಿದೆ. 2027ರ ಮಾರ್ಚ್ 1ರ ಮಧ್ಯರಾತ್ರಿ 12 ಗಂಟೆಯನ್ನು ಜನಗಣತಿಯ ಉಲ್ಲೇಖ ದಿನಾಂಕವಾಗಿ ನಿಗದಿಪಡಿಸಲಾಗಿದೆ.ಜನಗಣತಿ
40 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ
ಈ ಬಾರಿಯ ಜನಗಣತಿಯಲ್ಲಿ ಒಟ್ಟು 40 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪೈಕಿ 13 ಹೊಸ ಪ್ರಶ್ನೆಗಳನ್ನು ಸೇರಿಸಲಾಗಿದೆ. ಜಾತಿ, ಧರ್ಮ, ರಾಷ್ಟ್ರೀಯತೆ, ಡಿಜಿಟಲ್ ಸಾಕ್ಷರತೆ, ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಗುರುತಿನ ದಾಖಲೆಗಳಿಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
ಕುಟುಂಬದ ಸದಸ್ಯರ ಜನನ ಸ್ಥಳ ಮತ್ತು ದಿನಾಂಕ, ತಂದೆ-ತಾಯಿಯ ಜನನ ಸ್ಥಳ ಮತ್ತು ದಿನಾಂಕ, ಸಂಗಾತಿಯ ಹೆಸರು, ಶಾಶ್ವತ ವಿಳಾಸ, ಕೋವಿಡ್ ಲಸಿಕೆ ಪಡೆದ ಸ್ಥಳ, ಪಾಸ್ಪೋರ್ಟ್ ಸಂಖ್ಯೆ ಮತ್ತು ಚಾಲನಾ ಪರವಾನಗಿ ಹೊಂದಿರುವ ಕುರಿತು ಮಾಹಿತಿ ಕೇಳಲಾಗುತ್ತದೆ.
ಇದಲ್ಲದೆ, ಲಭ್ಯವಿದ್ದಲ್ಲಿ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನೂ ದಾಖಲಿಸಲಾಗುತ್ತದೆ. ಈ ಮಾಹಿತಿಯನ್ನು ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಸಂಗ್ರಹಿಸಲಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಮುಂಚಿತವಾಗಿ ಗಣತಿ
ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನಸಂಖ್ಯೆ ಗಣತಿ ಪ್ರಕ್ರಿಯೆಯನ್ನು ದೇಶದ ಉಳಿದ ಭಾಗಗಳಿಗಿಂತ ಮುಂಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಈ ರಾಜ್ಯಗಳಲ್ಲಿ ಡಿಸೆಂಬರ್ 1, 2026ರಿಂದ ಜನವರಿ 4, 2027ರವರೆಗೆ ಮನೆಮನೆಗೆ ತೆರಳಿ ಗಣತಿ ನಡೆಯಲಿದೆ. ಸ್ವಯಂ ಗಣತಿಗೆ ನವೆಂಬರ್ 16ರಿಂದ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಹಿಮಾವೃತ ಪ್ರದೇಶಗಳು ಹಾಗೂ ಲಡಾಖ್ನಲ್ಲಿ ಜನಸಂಖ್ಯೆ ಗಣತಿ ಪ್ರಕ್ರಿಯೆ ಈಗಾಗಲೇ ಸೆಪ್ಟೆಂಬರ್ 30ರಂದು ಪೂರ್ಣಗೊಂಡಿದೆ. ಜನಾಂಗೀಯ ಹಿಂಸಾಚಾರದಿಂದ ತೊಂದರೆಗೀಡಾಗಿರುವ ಮಣಿಪುರದಲ್ಲಿ ಗಣತಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ಮೊದಲ ಹಂತ ಪೂರ್ಣ
2027ರ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ವಸತಿ ಗಣತಿ (House Listing and Housing Census) ಕಾರ್ಯ 2026ರ ಏಪ್ರಿಲ್ 1ರಂದು ಆರಂಭವಾಗಿತ್ತು. ಸೆಪ್ಟೆಂಬರ್ 30ರ ವೇಳೆಗೆ ಮಣಿಪುರ ಹೊರತುಪಡಿಸಿ ದೇಶಾದ್ಯಂತ ಈ ಹಂತದ ಕಾರ್ಯ ಪೂರ್ಣಗೊಂಡಿದೆ.
ಮೊದಲ ಹಂತದಲ್ಲಿ ಮನೆಗಳ ಸ್ಥಿತಿ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಕುಟುಂಬಗಳಿಗೆ ಲಭ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳ ಮಾಹಿತಿ ಸಂಗ್ರಹಿಸಲಾಗಿದೆ. ಎರಡನೇ ಹಂತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ವಲಸೆಗೆ ಸಂಬಂಧಿಸಿದ ವಿವರಗಳನ್ನು ದಾಖಲಿಸಲಾಗುತ್ತದೆ.
2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು. 2011ರಲ್ಲಿ ಕೊನೆಯ ಜನಗಣತಿ ನಡೆದಿತ್ತು. ಸುಮಾರು 16 ವರ್ಷಗಳ ಬಳಿಕ ನಡೆಯುತ್ತಿರುವ ಈ ಜನಗಣತಿಯು ದೇಶದ ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಹೊಸ ಮಾಹಿತಿಯನ್ನು ಒದಗಿಸಲಿದೆ.
ಇದನ್ನೂ ಓದಿ : ನೇತನ್ಯಾಹು ಸರಕಾರ ಇಳಿಸಲು ವಿರೋಧ ಕೂಟ ಮತ್ತು ಅರಬ್ ಪಕ್ಷಗಳ ಕೂಟದ ಜಂಟಿ ಸರಕಾರ ರಚನೆಗೆ ಇಸ್ರೇಲಿನ ಜನಾದೇಶ ಜಾರಿಯಾಗುತ್ತಾ?
ಜನಗಣತಿ 2027ಕ್ಕೆ ವಿರೋಧ ಪಕ್ಷಗಳ ಆಕ್ಷೇಪ; ಜಾತಿ ಗಣತಿ, ವೈಯಕ್ತಿಕ ಮಾಹಿತಿ ಸಂಗ್ರಹದ ಬಗ್ಗೆ ಆತಂಕ
2027ರ ಜನಗಣತಿ ಪ್ರಕ್ರಿಯೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಜನಗಣತಿ ವಿಧಾನ ಮತ್ತು ಪ್ರಶ್ನಾವಳಿಯ ಕುರಿತು ವಿರೋಧ ಪಕ್ಷಗಳು ಹಲವು ಆಕ್ಷೇಪಗಳನ್ನು ವ್ಯಕ್ತಪಡಿಸಿವೆ. ವಿಶೇಷವಾಗಿ ಜಾತಿ ಗಣತಿ ನಡೆಸುವ ವಿಧಾನ, ಆಧಾರ್ ಮತ್ತು ಬ್ಯಾಂಕ್ ಖಾತೆಗಳಂತಹ ವೈಯಕ್ತಿಕ ಮಾಹಿತಿಗಳ ಸಂಗ್ರಹ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕುರಿತ ಆತಂಕಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಾತಿ ಗಣತಿ ನಡೆಸುವ ವಿಧಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿ ವಿವರಗಳನ್ನು ದಾಖಲಿಸಲು ಮುಕ್ತ ಉತ್ತರದ ವಿಧಾನ ಅನುಸರಿಸುವುದರಿಂದ ಒಂದೇ ಜಾತಿಯ ಹೆಸರುಗಳು ವಿವಿಧ ರೀತಿಯಲ್ಲಿ ದಾಖಲಾಗುವ ಸಾಧ್ಯತೆಯಿದೆ. ಉಪಜಾತಿ ಮತ್ತು ಪ್ರಾದೇಶಿಕ ಹೆಸರುಗಳ ಕಾರಣದಿಂದ ನಿಖರವಾದ ಜಾತಿ ದತ್ತಾಂಶ ಸಂಗ್ರಹ ಕಷ್ಟವಾಗಬಹುದು ಎಂಬುದು ಕಾಂಗ್ರೆಸ್ ನಾಯಕರ ಆತಂಕ. ಹೀಗಾಗಿ ಬಿಹಾರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅನುಸರಿಸಿರುವ ಜಾತಿ ಗಣತಿಯ ಮಾದರಿಯನ್ನು ಪರಿಗಣಿಸಬೇಕು. ರಾಜಕೀಯ ಪಕ್ಷಗಳು, ತಜ್ಞರು ಮತ್ತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಜಾತಿ ಗಣತಿಗೆ ಸೂಕ್ತ ಪ್ರಶ್ನಾವಳಿ ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜಾತಿಗಳ ನಿಖರ ಜನಸಂಖ್ಯೆಯ ಮಾಹಿತಿ ಲಭ್ಯವಾದಾಗ ಮಾತ್ರ ಮೀಸಲಾತಿ, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯ ಎಂಬುದು ಕಾಂಗ್ರೆಸ್ನ ವಾದವಾಗಿದೆ.
ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಜನಗಣತಿಯ ಹೆಸರಿನಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾದರಿಯ ಮಾಹಿತಿ ಸಂಗ್ರಹ ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರ ಸಂಪೂರ್ಣ ವಿವರಗಳು, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಮಾಹಿತಿಗಳನ್ನು ಸಂಗ್ರಹಿಸುವುದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದ್ದಾರೆ. ಜನಗಣತಿ ಪ್ರಕ್ರಿಯೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಬೇರೆ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಜನಗಣತಿಯ ಪ್ರಶ್ನಾವಳಿಯಲ್ಲಿರುವ ಕೆಲವು ಅಂಶಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೋಷಕರ ಧರ್ಮ ಮತ್ತು ಜನನ ಸ್ಥಳದ ವಿವರಗಳನ್ನು ಕೇಳುವ ಅಗತ್ಯವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿರುವ ಅವರು, ಜನಗಣತಿ ಪ್ರಕ್ರಿಯೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ ದಾರಿಯಾಗಬಾರದು ಎಂದು ಎಚ್ಚರಿಸಿದ್ದಾರೆ. ಜನರ ಪೌರತ್ವವನ್ನು ಧರ್ಮದ ಆಧಾರದಲ್ಲಿ ನಿರ್ಧರಿಸುವ ಅಥವಾ ಜನರನ್ನು ವಿಭಜಿಸುವ ಪ್ರಕ್ರಿಯೆಗೆ ಜನಗಣತಿ ವೇದಿಕೆಯಾಗಬಾರದು ಎಂಬುದು ಅವರ ನಿಲುವಾಗಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು 2026ರ ಜನಗಣತಿ ನಿಯಮಗಳಿಗೆ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಗಣತಿದಾರರ ನೇಮಕಾತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ವಿವಿಧ ವರ್ಗದವರಿಗೆ ಅವಕಾಶ ಕಲ್ಪಿಸಿರುವುದು ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರಗಳಿಗೆ ವ್ಯಾಪಕ ಅಧಿಕಾರ ನೀಡಿರುವುದರ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಗಣತಿಯಲ್ಲಿ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡಲು ಬಲವಾದ ಕಾನೂನುಬದ್ಧ ವ್ಯವಸ್ಥೆ ಇರಬೇಕು. ಆಧಾರ್, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಮತ್ತು ಪೋಷಕರ ಧರ್ಮದಂತಹ ವಿವರಗಳನ್ನು ಸಂಗ್ರಹಿಸುವ ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಜನಗಣತಿ ಮಾಹಿತಿಯನ್ನು ಇತರ ದತ್ತಾಂಶಗಳೊಂದಿಗೆ ಜೋಡಿಸಿ ಬೇರೆ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳನ್ನು ತಡೆಯಬೇಕು ಎಂಬುದು ಸಿಪಿಐ(ಎಂ)ನ ಪ್ರಮುಖ ಬೇಡಿಕೆಯಾಗಿದೆ. ಜನಗಣತಿ
ಇದನ್ನೂ ನೋಡಿ : SIR ಕರ್ನಾಟಕ | ಬೆಂಗಳೂರಿನಲ್ಲಿ ಇಬ್ಬರು ಮತದಾರರಲ್ಲಿ ಒಬ್ಬರ ಹೆಸರು ಡಿಲೀಟ್! ಸಿಕ್ಕ ನುಸುಳುಕೋರರು ಎಷ್ಟು?
