ಪಂಚಾಯತ್‌ರಾಜ್ ಯೋಜನೆಗಳ ಸೌಲಭ್ಯಕ್ಕೆ ಆಧಾರ್ ಬದಲು ಮತದಾರರ ಗುರುತಿನ ಚೀಟಿ ಕಡ್ಡಾಯ?

ಫಲಾನುಭವಿಗಳ ಗುರುತಿಗೆ ಬಯೋಮೆಟ್ರಿಕ್ ಮತ್ತು ಎಪಿಕ್ ಸಂಖ್ಯೆ ಬಳಕೆ: ಕೇಂದ್ರ ಸಚಿವ ಲಾಲನ್ ಸಿಂಗ್ ಘೋಷಣೆ
ನವದೆಹಲಿ: ಪಂಚಾಯತ್‌ರಾಜ್ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸಿಗುವ ಹಣಕಾಸು ನೆರವು ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಇನ್ನು ಮುಂದೆ ಆಧಾರ್ ಕಾರ್ಡ್ ಬದಲಿಗೆ ಮತದಾರರ ಗುರುತಿನ ಚೀಟಿ (ಎಪಿಕ್) ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಲಾಗುವುದು ಎಂದು ಕೇಂದ್ರ ಪಂಚಾಯತ್‌ರಾಜ್ ಮತ್ತು ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಅಲಿಯಾಸ್ ಲಾಲನ್ ಸಿಂಗ್ ಘೋಷಿಸಿದ್ದಾರೆ. ಪಂಚಾಯತ್‌ರಾಜ್

ಪ್ರಸ್ತುತ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಮತ್ತು ಅವರಿಗೆ ಹಣ ಪಾವತಿಸಲು ಆಧಾರ್ ಕಾರ್ಡ್ ಪ್ರಮುಖ ಆಧಾರವಾಗಿದೆ. ಆದರೆ, ಇನ್ನು ಮುಂದೆ ಆಧಾರ್ ಕಾರ್ಡ್ ಫಲಾನುಭವಿಗಳ ಗುರುತಿನ ಪ್ರಮುಖ ದಾಖಲೆಯಾಗಿರುವುದಿಲ್ಲ. ಅದರ ಬದಲಿಗೆ ಮತದಾರರ ಗುರುತಿನ ಚೀಟಿಯಲ್ಲಿರುವ ಎಪಿಕ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

2026-27ನೇ ಸಾಲಿನ ಜನರ ಯೋಜನಾ ಅಭಿಯಾನಕ್ಕೆ (ಪೀಪಲ್ಸ್ ಪ್ಲಾನ್ ಕ್ಯಾಂಪೇನ್) ಸಂಬಂಧಿಸಿ ನವದೆಹಲಿಯಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಈ ಹೊಸ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದ್ದಾರೆ.

ಆಧಾರ್ ಕಾರ್ಡ್ ವಿತರಿಸುವ ಸಂಸ್ಥೆಗಳು ಎಲ್ಲ ಪ್ರದೇಶಗಳಲ್ಲೂ ಲಭ್ಯವಿವೆ. ಹೀಗಾಗಿ ಫಲಾನುಭವಿಗಳ ಗುರುತನ್ನು ದೃಢಪಡಿಸಲು ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಬಳಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಎಪಿಕ್ ಸಂಖ್ಯೆಯನ್ನು ಆಧರಿಸಿ ಫಲಾನುಭವಿಗಳಿಗೆ ಹಣ ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪಂಚಾಯತ್‌ರಾಜ್

ಇದನ್ನೂ ಓದಿ : ಹಣದುಬ್ಬರಕ್ಕೆ ಮೋದಿ ಹೊಣೆ, ಡಿ.ಕೆ. ಶಿವಕುಮಾರ್ ಅಲ್ಲ: ಪ್ರಿಯಾಂಕ್ ಖರ್ಗೆ

ಹೊಸ ಪಂಚಾಯತ್ ಯೋಜನೆಗೆ ಸಂಪುಟ ಅನುಮೋದನೆ

ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಪ್ರಧಾನ ಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆಗೆ (PM VGSY) ಅನುಮೋದನೆ ನೀಡಿದೆ. ಈ ಯೋಜನೆಯು ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ಬದಲಿಗೆ ಜಾರಿಗೆ ಬರಲಿದೆ.

2026-27ರಿಂದ 2030-31ರವರೆಗೆ, ಅಂದರೆ 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ವಿಕಸಿತ ಭಾರತ 2047ರ ಗುರಿಗೆ ಅನುಗುಣವಾಗಿ ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ.

ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳ ಯೋಜನೆಗಳನ್ನು ಸಮನ್ವಯಗೊಳಿಸಿ ಗ್ರಾಮಗಳ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಂಚಾಯತ್ ಅನುದಾನದಲ್ಲಿ ಶೇ.20ರಷ್ಟು ಕಾರ್ಯಕ್ಷಮತೆಗೆ ಸಂಬಂಧ

16ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ.20ರಷ್ಟು ಮೊತ್ತವನ್ನು ಪಂಚಾಯತ್‌ಗಳ ಕಾರ್ಯಕ್ಷಮತೆಗೆ ಜೋಡಿಸಲಾಗುವುದು ಎಂದು ಲಾಲನ್ ಸಿಂಗ್ ತಿಳಿಸಿದ್ದಾರೆ. ಸ್ಥಳೀಯ ಸಂಪನ್ಮೂಲಗಳ ಮೂಲಕ ಪಂಚಾಯತ್‌ಗಳು ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪಂಚಾಯತ್‌ಗಳಿಗೆ 16ನೇ ಹಣಕಾಸು ಆಯೋಗವು 4.35 ಲಕ್ಷ ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿದೆ ಎಂದು ಉಲ್ಲೇಖಿಸಿದ ಅವರು, ಈ ಮೊತ್ತ ಮಾತ್ರ ಪಂಚಾಯತ್‌ಗಳ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದ್ದರಿಂದ ಪಂಚಾಯತ್‌ಗಳು ತಮ್ಮದೇ ಆದ ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಪಂಚಾಯತ್‌ರಾಜ್

ಇದನ್ನೂ ನೋಡಿ : SIR ಕರ್ನಾಟಕ | ಬೆಂಗಳೂರಿನಲ್ಲಿ ಇಬ್ಬರು ಮತದಾರರಲ್ಲಿ ಒಬ್ಬರ ಹೆಸರು ಡಿಲೀಟ್‌! ಸಿಕ್ಕ ನುಸುಳುಕೋರರು ಎಷ್ಟು?

Donate Janashakthi Media

Leave a Reply

Your email address will not be published. Required fields are marked *