ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ‘ಸಾರ್ವಜನಿಕ ದೋಷಾರೋಪಣೆ’; ಇಂದು ಸಂಜೆ 4ಕ್ಕೆ ಮೂರು ಗಂಟೆಗಳ ವಿಚಾರಣೆ

ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ – ಖರ್ಗೆ ದೋಷಾರೋಪಣೆ ನಿರ್ಣಯ ಮಂಡನೆ, ರಾಹುಲ್ ಗಾಂಧಿಯಿಂದ ಚರ್ಚೆಗೆ ಸಮಾರೋಪ – 21 ಪಕ್ಷಗಳ ಪ್ರತಿನಿಧಿಗಳು ಸೇರಿ 30ಕ್ಕೂ ಹೆಚ್ಚು ಮಂದಿ ಭಾಗಿ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಮೈತ್ರಿಕೂಟ ಶುಕ್ರವಾರ ಮೂರು ಗಂಟೆಗಳ ಕಾಲ ‘ಸಾರ್ವಜನಿಕ ದೋಷಾರೋಪಣೆ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕೃತ ನಿವಾಸದಲ್ಲಿ ಸಂಜೆ 4 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜ್ಞಾನೇಶ್

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧ ದೋಷಾರೋಪಣೆ ನಿರ್ಣಯವನ್ನು ಮಂಡಿಸಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚರ್ಚೆಯ ಕೊನೆಯಲ್ಲಿ ಮಾತನಾಡಲಿದ್ದು, ಬಳಿಕ ಮತದಾನದ ಮೂಲಕ ನಿರ್ಣಯವನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಸಾರ್ವಜನಿಕ ದೋಷಾರೋಪಣೆ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್ ಮತ್ತು ಕೆ.ಸಿ. ವೇಣುಗೋಪಾಲ್, ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯಾನ್, ಸಮಾಜವಾದಿ ಪಕ್ಷದ ಹರೇಂದ್ರ ಮಲಿಕ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದ ಮಹುವಾ ಮಜಾ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ 21 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಕನಿಷ್ಠ 30 ಮಂದಿ ಮಾತನಾಡುವ ನಿರೀಕ್ಷೆಯಿದೆ. ಬಿಜೆಡಿಗೂ ಆಹ್ವಾನ ನೀಡಲಾಗಿದ್ದು, ಪಕ್ಷದ ಭಾಗವಹಿಸುವಿಕೆ ಇನ್ನೂ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಜ್ಞಾನೇಶ್

ಇದನ್ನೂ ಓದಿ : ಹಿಂದುಳಿದ ವರ್ಗಗಳ ಕಲ್ಯಾಣದಿಂದ ಬುಡಕಟ್ಟು ಅಭಿವೃದ್ಧಿವರೆಗೆ: 12 ಯೋಜನೆಗಳಿಗೆ ಸಚಿವ ಸಂಪುಟ ಅಸ್ತು!

ಎಸ್‌ಐಆರ್‌ನಿಂದ ಬಾಧಿತರಾದವರಿಗೂ ಮಾತಿನ ಅವಕಾಶ

ರಾಜಕೀಯ ಪಕ್ಷಗಳ ನಾಯಕರಷ್ಟೇ ಅಲ್ಲದೆ, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಿಂದ ತೊಂದರೆಗೊಳಗಾದ ಜನರೂ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರು ಮತ್ತು ಅದರಿಂದ ಸಮಸ್ಯೆ ಎದುರಿಸಿದವರು ತಮ್ಮ ಅಹವಾಲುಗಳನ್ನು ಮಂಡಿಸಲಿದ್ದಾರೆ.

ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಬೃಹತ್ ಪ್ರತಿಭಟನಾ ರ‍್ಯಾಲಿಗೂ ಮುನ್ನ ಈ ಸಾರ್ವಜನಿಕ ದೋಷಾರೋಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮತಗಳ್ಳತನದ ಆರೋಪಗಳು ಮತ್ತು ಎಸ್‌ಐಆರ್‌ ಪ್ರಕ್ರಿಯೆಯನ್ನು ವಿರೋಧಿಸಿ ಈ ರ‍್ಯಾಲಿ ನಡೆಯಲಿದೆ.

ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಹಕ್ಕುಗಳು ಮತ್ತು ಎಸ್‌ಐಆರ್‌ ಪ್ರಕ್ರಿಯೆಯ ಕುರಿತು ವಿರೋಧ ಪಕ್ಷಗಳು ಎತ್ತಿರುವ ಆಕ್ಷೇಪಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಮಂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಇದು ಸಾಂವಿಧಾನಿಕವಾಗಿ ನಡೆಯುವ ಮಹಾಭಿಯೋಗ ಪ್ರಕ್ರಿಯೆಯಲ್ಲ; ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ವಿರೋಧ ಪಕ್ಷಗಳು ರೂಪಿಸಿರುವ ಸಾಂಕೇತಿಕ ಸಾರ್ವಜನಿಕ ದೋಷಾರೋಪಣೆ ಕಾರ್ಯಕ್ರಮವಾಗಿದೆ. ಜ್ಞಾನೇಶ್

ಇದನ್ನೂ ನೋಡಿ : ಎಸ್‌ಐಆರ್‌ ಕರ್ನಾಟಕ | ಪತ್ತೆಯಾದ ವಿದೇಶಿ ಪ್ರಜೆಗಳೆಷ್ಟು? ಬಾಂಗ್ಲಾದೇಶದವರು ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *