ಬಿಡದಿ ಟೌನ್‌ಶಿಪ್ ಯೋಜನೆ ರದ್ದುಪಡಿಸಿ: ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಸಮಿತಿಗೆ KPRS ಮನವಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ನಡೆಯುತ್ತಿರುವ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಬಿಡದಿ ಟೌನ್‌ಶಿಪ್ ಯೋಜನೆ ಪರಿಶೀಲನಾ ಸಮಿತಿಗೆ ಮನವಿ ಸಲ್ಲಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳು ಸೇರಿದಂತೆ ಸುಮಾರು 26 ಗ್ರಾಮಗಳ ಫಲವತ್ತಾದ ಕೃಷಿ ಭೂಮಿಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು KPRS ತನ್ನ ಮನವಿಯಲ್ಲಿ ತಿಳಿಸಿದೆ. ಈ ಪ್ರದೇಶದಲ್ಲಿ ರೈತರು ಹೈನುಗಾರಿಕೆ, ರೇಷ್ಮೆ, ತೆಂಗು, ಅಡಿಕೆ, ಬಾಳೆ, ತರಕಾರಿ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಈ ಕೃಷಿ ಭೂಮಿಯನ್ನು ಅವಲಂಬಿಸಿ ಸಾವಿರಾರು ರೈತರು ಹಾಗೂ ಕೃಷಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಹಾಲು, ತರಕಾರಿ ಮತ್ತು ಹಣ್ಣುಗಳ ಪೂರೈಕೆಯಲ್ಲೂ ಈ ಪ್ರದೇಶ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಂಘ ಹೇಳಿದೆ.

ಪರಿಸರದ ಮೇಲೂ ಪರಿಣಾಮದ ಆತಂಕ

ಬೆಂಗಳೂರು ಸುತ್ತಮುತ್ತಲಿನ ಹಸಿರು ಪ್ರದೇಶಗಳು ಈಗಾಗಲೇ ನಗರೀಕರಣದ ಒತ್ತಡಕ್ಕೆ ಒಳಗಾಗಿವೆ. ಇಂತಹ ಸಂದರ್ಭದಲ್ಲಿ ಬಿಡದಿ ಪ್ರದೇಶದ ಕೃಷಿ ಭೂಮಿಯನ್ನು ಕಾಂಕ್ರೀಟ್‌ ಪ್ರದೇಶವಾಗಿ ಪರಿವರ್ತಿಸುವುದರಿಂದ ಬೆಂಗಳೂರಿನ ಪರಿಸರ ಹಾಗೂ ಹವಾಮಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು KPRS ಆತಂಕ ವ್ಯಕ್ತಪಡಿಸಿದೆ.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಪ್ರದೇಶದ ಸುತ್ತ ವೃಷಭಾವತಿ ಹಾಗೂ ಸುವರ್ಣಮುಖಿ ನದಿಗಳು ಹರಿಯುತ್ತಿದ್ದು, ಇಲ್ಲಿ ಹಲವು ಜೀವಸಂಕುಲಗಳು ಮತ್ತು ಜೀವವೈವಿಧ್ಯವಿದೆ. ಟೌನ್‌ಶಿಪ್ ಯೋಜನೆಯಿಂದ ಈ ಪರಿಸರ ವ್ಯವಸ್ಥೆಗೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಗುತ್ತಿಗೆ ಪದ್ಧತಿ ರದ್ದಾಗಲಿ; ಬೆಳಕು ನೀಡುವ ಕಾರ್ಮಿಕರ ಬದುಕು ಬೆಳಗಲಿ

9,640 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಸುಮಾರು 9,640 ಎಕರೆ ಕೃಷಿ ಭೂಮಿ ಉದ್ದೇಶಿಸಲಾಗಿದೆ ಎಂದು KPRS ತಿಳಿಸಿದೆ. ಇದರಲ್ಲಿ 2,500ಕ್ಕೂ ಹೆಚ್ಚು ಎಕರೆ ಭೂಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾಮಾಜಿಕ ಸಮುದಾಯಗಳಿಗೆ ಸಂಬಂಧಿಸಿದ ಭೂಮಿಯಾಗಿದ್ದು, ಕಾನೂನಿನ ಅಡಿಯಲ್ಲಿ ಮಂಜೂರಾದ ಭೂಮಿಯಾಗಿದೆ ಎಂದು ಸಂಘ ಹೇಳಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಹಿತಾಸಕ್ತಿಗಳನ್ನು ಕಡೆಗಣಿಸಲಾಗುತ್ತಿದೆ ಹಾಗೂ ಸೂಕ್ತ ಪರಿಹಾರವಿಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು KPRS ಆರೋಪಿಸಿದೆ.

ಗ್ರಾಮ ಪಂಚಾಯಿತಿಗಳ ಒಪ್ಪಿಗೆ ಪಡೆದಿಲ್ಲ

ಟೌನ್‌ಶಿಪ್ ಯೋಜನೆ ರೂಪಿಸುವ ಸಂದರ್ಭದಲ್ಲಿ ಸಂಬಂಧಿತ ಗ್ರಾಮ ಪಂಚಾಯಿತಿಗಳ ಅಭಿಪ್ರಾಯ ಮತ್ತು ಒಪ್ಪಿಗೆ ಪಡೆಯಲಾಗಿಲ್ಲ. ಕೆಲವು ಗ್ರಾಮಗಳಲ್ಲಿ ಗ್ರಾಮಸಭೆಗಳನ್ನೂ ನಡೆಸಿಲ್ಲ ಎಂದು KPRS ಆರೋಪಿಸಿದೆ. ಇಂತಹ ಮಹತ್ವದ ಯೋಜನೆಯಿಂದ ದೀರ್ಘಾವಧಿಯಲ್ಲಿ ಪರಿಣಾಮ ಎದುರಿಸಲಿರುವ ಜನರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ಯೋಜನೆಯನ್ನು ಜಾರಿಗೊಳಿಸುವುದು ಸರಿಯಲ್ಲ ಎಂದು ಸಂಘ ಹೇಳಿದೆ.

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ಸ್ಥಾಪನೆ ಕಾಯ್ದೆ–2013ರ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು KPRS ಆರೋಪಿಸಿದೆ. ಪ್ರಾಥಮಿಕ ಅಧಿಸೂಚನೆಯ ಸಂದರ್ಭದಲ್ಲಿ ರೈತರು ಸಲ್ಲಿಸಿದ್ದ 3,500ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಮರ್ಪಕವಾಗಿ ವಿಚಾರಣೆ ನಡೆಸಿಲ್ಲ ಎಂದು ಸಂಘ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯಿಂದ ಉಂಟಾಗಬಹುದಾದ ಸಾಮಾಜಿಕ, ಆರ್ಥಿಕ, ಕಾನೂನು ಮತ್ತು ಪರಿಸರ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಿ, ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಭೂಸ್ವಾಧೀನ ಅಧಿಸೂಚನೆಗಳನ್ನು ರದ್ದುಪಡಿಸುವಂತೆ KPRS ಸಮಿತಿಗೆ ಮನವಿ ಮಾಡಿದೆ.

KPRS ರಾಜ್ಯ ಸಮಿತಿಯ ಅಧ್ಯಕ್ಷ ಯು. ಬಸವರಾಜ ಹಾಗೂ ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ಅವರು ಮನವಿಗೆ ಸಹಿ ಹಾಕಿದ್ದಾರೆ.

ಇದನ್ನೂ ನೋಡಿ : “ಜೊಕುಮಾರಸ್ವಾಮಿ: ಜನಪದ ನಂಬಿಕೆ ಮತ್ತು ಆಚರಣೆ” — ಜೀವನ್‌ಸಾಬ್‌ ವಾಲೀಕಾರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *