ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಗೆ ಅಗತ್ಯ ಅನುಮತಿಗಳು ಮತ್ತು ಕೇಂದ್ರದ ನೆರವು ತ್ವರಿತವಾಗಿ ದೊರೆಯುವಂತೆ ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಸಚಿವರನ್ನು ಭೇಟಿಯಾದ ಅವರು, ಯೋಜನೆಯ ವಿಸ್ತೃತ ಯೋಜನಾ ವರದಿಯ ಪರಿಶೀಲನೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಕರ್ನಾಟಕ ಸರ್ಕಾರವು ₹16,745 ಕೋಟಿ ವೆಚ್ಚದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ. ಇದರೊಂದಿಗೆ ಆಗಸ್ಟ್ 13ರಂದು ಅನುಸರಣೆ ವರದಿಯನ್ನೂ ಕೇಂದ್ರ ಜಲ ಆಯೋಗಕ್ಕೆ ನೀಡಲಾಗಿದೆ. ಈ ವರದಿಯ ಪರಿಶೀಲನೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ ಅಗತ್ಯ ಅನುಮತಿಗಳಿಗೆ ವೇಗ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ, ನೀರಾವರಿಗೆ ಬಳಸುವುದಿಲ್ಲ ಎಂಬ ಕರ್ನಾಟಕದ ನಿಲುವನ್ನು ಕೇಂದ್ರ ಜಲಶಕ್ತಿ ಸಚಿವರು ಅರ್ಥಮಾಡಿಕೊಂಡಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಯೋಜನೆ ಕುರಿತು ತಮಿಳುನಾಡಿನಲ್ಲಿರುವ ಆಕ್ಷೇಪಣೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಅಲ್ಲಿನ ಸರ್ಕಾರವು ಅಧಿಕಾರಿಗಳ ನಿಯೋಗವನ್ನು ಮೇಕೆದಾಟು ಪ್ರದೇಶಕ್ಕೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಅವರು ಆಹ್ವಾನಿಸಿದ್ದಾರೆ. ತಮಿಳುನಾಡಿನ ನಿಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಮುಖಾಮುಖಿಯಾಗಿ ಚರ್ಚಿಸಲು ತಾವು ಸಿದ್ಧವಿದ್ದು, ಮೇಕೆದಾಟು ಸೇರಿದಂತೆ ಕಾವೇರಿ ನೀರು ಹಂಚಿಕೆ ಸಂಬಂಧಿತ ವಿಷಯಗಳ ಕುರಿತು ಮಾತುಕತೆ ನಡೆಸಲು ಅವರನ್ನು ಆಹ್ವಾನಿಸುವುದಾಗಿ ಶಿವಕುಮಾರ್ ಹೇಳಿದ್ದಾರೆ. ಈ ಹಿಂದೆ ಬೆಂಗಳೂರಿಗೆ ಭೇಟಿ ನೀಡಿ ಕಾವೇರಿ ನೀರು ಮತ್ತು ಮೇಕೆದಾಟು ವಿಚಾರ ಚರ್ಚಿಸುವ ಪ್ರಸ್ತಾವನೆ ಮುಂದೂಡಿಕೆಯಾಗಿತ್ತು. ಇದೀಗ ಮತ್ತೊಮ್ಮೆ ನೇರ ಮಾತುಕತೆಗೆ ಆಹ್ವಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದನ್ನೂ ಓದಿ : ಗುತ್ತಿಗೆ ಪದ್ಧತಿ ರದ್ದಾಗಲಿ; ಬೆಳಕು ನೀಡುವ ಕಾರ್ಮಿಕರ ಬದುಕು ಬೆಳಗಲಿ
ಇದೇ ಸಂದರ್ಭದಲ್ಲಿ ಕೃಷ್ಣಾ ನೀರು ವಿವಾದ, ಮಹದಾಯಿ ಹಾಗೂ ಮೇಲ್ಕೃಷ್ಣಾ ಯೋಜನೆ ಸೇರಿದಂತೆ ರಾಜ್ಯದ ಹಲವು ಜಲಸಂಪನ್ಮೂಲ ವಿಚಾರಗಳ ಬಗ್ಗೆಯೂ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ. ಕೃಷ್ಣಾ ನೀರು ವಿವಾದ ನ್ಯಾಯಮಂಡಳಿ-2ರ ತೀರ್ಪಿಗೆ ಸಂಬಂಧಿಸಿದ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವುದರಿಂದ, ಕೇಂದ್ರ ಸರ್ಕಾರವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತೀರ್ಪಿನ ಅಧಿಸೂಚನೆ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಲಾಗಿದೆ.
ಮೇಕೆದಾಟು ಯೋಜನೆಯು ಕಾವೇರಿ ನದಿಗೆ ಅಡ್ಡಲಾಗಿ ಪ್ರಸ್ತಾಪಿಸಲಾಗಿರುವ ಸಮತೋಲನ ಜಲಾಶಯವಾಗಿದ್ದು, ಕರ್ನಾಟಕದ ಪ್ರಕಾರ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಪೂರೈಕೆ ಹಾಗೂ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದುಹೋಗುವ ನೀರನ್ನು ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ. ಆದರೆ ಯೋಜನೆಯಿಂದ ಕೆಳಹರಿವಿನ ನೀರಿನ ಲಭ್ಯತೆ ಮತ್ತು ಕಾವೇರಿ ನೀರು ಹಂಚಿಕೆ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಬಹುದು ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಯೋಜನೆಗೆ ಪರಿಸರ ಮತ್ತು ಅರಣ್ಯ ಸೇರಿದಂತೆ ಅಗತ್ಯ ಅನುಮತಿಗಳು ಇನ್ನೂ ಬಾಕಿ ಇವೆ.
ಮೇಕೆದಾಟು ಜೊತೆಗೆ ₹21,167.93 ಕೋಟಿ ವೆಚ್ಚದ ಮೇಲ್ದಂಡೆ ಭದ್ರಾ ಯೋಜನೆಗೆ ಕೇಂದ್ರದ ನೆರವು ನೀಡಬೇಕು ಹಾಗೂ ಅದನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರಿಸಬೇಕು ಎಂದು ಕೂಡ ಶಿವಕುಮಾರ್ ಮನವಿ ಮಾಡಿದ್ದಾರೆ. ಮಹದಾಯಿ ವಿಚಾರದಲ್ಲಿ ಕರ್ನಾಟಕ ಮತ್ತು ಗೋವಾ ಮುಖ್ಯಮಂತ್ರಿಗಳ ಜಂಟಿ ಸಭೆ ನಡೆಸುವ ಭರವಸೆಯನ್ನೂ ಕೇಂದ್ರದಿಂದ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ : “ಜೊಕುಮಾರಸ್ವಾಮಿ: ಜನಪದ ನಂಬಿಕೆ ಮತ್ತು ಆಚರಣೆ” — ಜೀವನ್ಸಾಬ್ ವಾಲೀಕಾರ್ Janashakthi Media
