ಸಿಇಸಿ ವಜಾ ಆಗ್ರಹಿಸಿ ಸಪ್ಟಂಬರ್‌ 26 ರಿಂದ ಅಕ್ಟೋಬರ್ 2 ರವರೆಗೆ ಪ್ರತಿಭಟನೆಗೆ ಎಡಪಕ್ಷಗಳ ಜಂಟಿ ಕರೆ

  • ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು, ಎಸ್‌ಐಆರ್‌  ನಿಲ್ಲಿಸಬೇಕು

  • ತಪ್ಪಾಗಿ ಕೈಬಿಟ್ಟಿರುವವರ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸಬೇಕು

  • ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಬೇಕು

ನವದೆಹಲಿ : ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ವಿಷಯಗಳ ಕುರಿತು ಸೆಪ್ಟೆಂಬರ್ 23 ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಳು, ಚುನಾವಣಾ ಆಯೋಗವು ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಧಾನದ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಸಿಇಸಿ

ಇವು ಕೇವಲ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೆ ಸೀಮಿತವಾಗಿಲ್ಲ. ಅವು ಭಾರತದ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ಸಮಗ್ರತೆಯ ಬಗ್ಗೆಯೂ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತವೆ. ಅವು ರಾಜಿಗಿಳಿದಿರುವ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯ ಮೇಲೆ ಬಂದಿರುವ ಆರೋಪವಾಗಿದೆ ಎಂದು ಸಿಪಿಐ(ಎಂ), ಸಿಪಿಐ ಮತ್ತು ಸಿಪಿಐ(ಎಂ-ಎಲ್‌) -ಲಿಬರೇಷನ್‌ ಪಕ್ಷಗಳು ಜಂಟಿ ಹೇಳಿಕೆಯೊಂದರಲ್ಲಿ ಹೇಳಿವೆ.

ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು, ಕನಿಷ್ಠ 14 ಸಂದರ್ಭಗಳಲ್ಲಿ, ಮತದಾರರ ನೋಂದಣಿ, ಹೆಸರುಗಳನ್ನು ತೆಗೆದು ಹಾಕಿರುವುದು, ಮತ್ತೆ ಸೇರಿಸಿರುವುದು, ಮತ್ತು ಎಸ್‌ಐಆರ್ ನ್ನು ನಡೆಸುತ್ತಿರುವ ಬಗೆಗೆ ಸಂಬಂಧಿಸಿದ ನಿರ್ಧಾರಗಳಿಗೆ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಅವರುಗಳು ತಮ್ಮ ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳಲಾದ ನಿರ್ಧಾರಗಳ ಬಗ್ಗೆಯೂ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ವಿಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು ಪದೇ ಪದೇ ಎತ್ತಿರುವ ಕಳವಳಗಳನ್ನು ಈಗ ಹೊರಬಂದಿರುವ ಸಂಗತಿಗಳು ದೃಢಪಡಿಸುತ್ತವೆ ಮತ್ತು ಎಸ್‌ಐಆರ್ ಹಾಗೂ  ಚುನಾವಣಾ ಪಟ್ಟಿ ನಿರ್ವಹಣೆ ಪಾರದರ್ಶಕವಾಗಿದೆ ಮತ್ತು ವಿಕೇಂದ್ರೀಕೃತವಾಗಿದೆ ಎಂಬ ಹೇಳಿಕೆಗಳ ಪೊಳ್ಳುತನವನ್ನು ಬಯಲಿಗೆಳೆಯುತ್ತವೆ. ಇಬ್ಬರು ಆಯುಕ್ತರು ಮತದಾರರ ದತ್ತಾಂಶ ನೆಲೆಯ ಕೇಂದ್ರೀಕರಣವಾಗಿದೆ ಮತ್ತು  ಮತ್ತು ರಾಜ್ಯ ಮತ್ತು ಕ್ಷೇತ್ರ ಮಟ್ಟದಲ್ಲಿ ಶಾಸನಬದ್ಧ ಅಧಿಕಾರಿಗಳಿಗೆ ಅವನ್ನು ನೋಡಲು ನಿರ್ಬಂಧಗಳನ್ನು ಹಾಕಲಾಗಿದೆ ಎಂದು ನಿರ್ದಿಷ್ಟವಾಗಿ ಗುರುತಿಸಿದ್ದಾರೆ. ಇದರ ಪರಿಣಾಮಗಳು ಕೇವಲ ಆಡಳಿತಾತ್ಮಕವಲ್ಲ. ಉದಾಹರಣೆಗೆ, ಗೋವಾದಲ್ಲಿ, ಚುನಾವಣಾ ನೋಂದಣಿ ಅಧಿಕಾರಿಗಳು(ಇಆರ್‌ಒ) 97 ಮತದಾರರನ್ನು ಅರ್ಹರು ಎಂಬ ತಮ್ಮ  ನಿರ್ಧಾರಗಳನ್ನು ದಾಖಲಿಸುವುದನ್ನು ಸಾಫ್ಟ್‌ವೇರ್ ನಿರ್ಬಂಧಗಳು ತಡೆದಿವೆ ಎಂದು ವರದಿಯಾಗಿದೆ. ಸಿಇಸಿ

ಇದನ್ನೂ ಓದಿ : ಮೋದಿ, ಶಾ ‘ದೇಶದ್ರೋಹಿಗಳು’; ಗ್ಯಾನೇಶ್‌ ಕುಮಾರ್‌ ತಕ್ಷಣ ರಾಜೀನಾಮೆ ನೀಡಲಿ: ರಾಹುಲ್ ಗಾಂಧಿ

ಆದ್ದರಿಂದ, ಈ ವಿಷಯವು ಎಸ್‌ಐಆರ್‌ ಅನ್ನು ಮೀರಿ ಬಹಳ ದೂರ ಹೋಗಿದೆ. ಇದು ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಮೂಲಭೂತ ಪ್ರಜಾಸತ್ತಾತ್ಮಕ ತತ್ವದ ರಕ್ಷಣೆಗೆ ಸಂಬಂಧಿಸಿದೆ. ಮತದಾನದ ಹಕ್ಕನ್ನು ಅಪಾರದರ್ಶಕ, ಕೇಂದ್ರೀಯವಾಗಿ ನಿಯಂತ್ರಿತ ಪ್ರಕ್ರಿಯೆಗಳ ಮೇಲೆ ಅವಲಂಬಿಸುವಂತೆ ಮಾಡುವ ಯಾವುದೇ ವ್ಯವಸ್ಥೆಯು ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ.

ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಹಿಂದೆಂದೂ ಇಷ್ಟು ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದಿರುವ ಈ ಮೂರು ಕಮ್ಯುನಿಸ್ಟ್‌ ಪಕ್ಷಗಳು ಈ ವ್ಯವಸ್ಥೆಯಲ್ಲಿ ಕೈಯಾಡಿಸಿ ಆಯೋಗದಲ್ಲಿ ಜನರ ವಿಶ್ವಾಸವನ್ನು ಕುಗ್ಗಿಸಿರುವುದಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ರನ್ನು ಉತ್ತರದಾಯಿಯಾಗಿ ಮಾಡಬೇಕು ಎಂದು ಹೇಳಿವೆ.

ಅವು ಈ ಕೆಳಗಿನ ಆಗ್ರಹಗಳನ್ನು ಮಾಡಿವೆ:

  • ಜ್ಞಾನೇಶ್ ಕುಮಾರ್ ರನ್ನು ಅವರ ಹುದ್ದೆಯಿಂದ ತೆಗೆದುಹಾಕಬೇಕು.
  • ಎಸ್‌ಐಆರ್‌ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಮತದಾರರ ಪಟ್ಟಿಯಿಂದ ತಪ್ಪಾಗಿ ಕೈಬಿಟ್ಟಿರುವ  ಎಲ್ಲರ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸಬೇಕು.
  • ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಮರುಸ್ಥಾಪಿಸಬೇಕು.
  • ಚುನಾವಣಾ ಆಯುಕ್ತರ ನೇಮಕಾತಿಯ ಪ್ರಸ್ತುತ ವ್ಯವಸ್ಥೆಯನ್ನು ಬದಲಾಯಿಸಿ, ಸುಪ್ರೀಂ ಕೋರ್ಟ್ ಪ್ರಸ್ತಾವಿಸಿರುವ ಪ್ರಧಾನ ಮಂತ್ರಿ, ವಿಪಕ್ಷದ ನಾಯಕರು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಆಯ್ಕೆ ಸಮಿತಿಯನ್ನು ಆಧರಿಸಿದ ಒಂದು ವ್ಯವಸ್ಥೆಯನ್ನು ತರಬೇಕು.ದೇಶಾದ್ಯಂತ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಒಂದು ವಾರದ ಕಾಲ ಪ್ರತಿಭಟನೆಯನ್ನು ಆಯೋಜಿಸುವಂತೆ ಮೂರೂ ಕಮ್ಯುನಿಸ್ಟ್ ಪಕ್ಷಗಳು ತಮ್ಮ ಘಟಕಗಳಿಗೆ ಕರೆ ನೀಡಿವೆ. ಸೆಪ್ಟೆಂಬರ್ 26 ಮಹಾನ್‌ ಹುತಾತ್ಮ ಭಗತ್‌ ಸಿಂಗ್‌ರವರ ಜನ್ಮದಿನವಾಗಿದ್ದರೆ, ಅಕ್ಟೋಬರ್ 2 ಮಹಾತ್ಮ ಗಾಂಧಿಯವರ ಜನ್ಮದಿನವಾಗಿದೆ; ಇವರಿಬ್ಬರೂ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಗಾಗಿ ನಿರಂತರವಾಗಿ ಹೋರಾಡಿದವರು.ಈ ಚಳುವಳಿಯಲ್ಲಿ ಕೈಜೋಡಿಸುವಂತೆ ಈ ಮೂರು ಕಮ್ಯುನಿಸ್ಟ್‌ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ-ಯೇತರ, ಜಾತ್ಯತೀತ, ಪ್ರಜಾಪ್ರಭುತ್ವವಾದಿ ವಿಪಕ್ಷಗಳು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಕಾಳಜಿಯುಳ್ಳ ನಾಗರಿಕರಿಗೆ ಮನವಿ ಮಾಡಿದ್ದಾರೆ.ಸಿಪಿಐ(ಎಂ)   ಪ್ರಧಾನ ಕಾರ್ಯದರ್ಶಿ  ಎಂ.ಎ. ಬೇಬಿ,  ಸಿಪಿಐ   ಪ್ರಧಾನ ಕಾರ್ಯದರ್ಶಿ   ಡಿ. ರಾಜಾ   ಮತ್ತು    ಸಿಪಿಐ(ಎಂಎಲ್)-ಲಿಬರೇಷನ್    ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ  ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಸಿಇಸಿ

 ತುರ್ತು ಸಾವಿಧಾನಿಕ ಮಧ್ಯಪ್ರವೇಶ ಕೋರಿ ರಾಷ್ಟ್ರಪತಿಗಳಿಗೆ ಜಾನ್‌ ಬ್ರಿಟ್ಟಾಸ್‌ ಪತ್ರ

ರಾಜ್ಯಸಭೆಯಲ್ಲಿ ಸಿಪಿಐ(ಎಂ) ನಾಯಕರಾಗಿರುವ ಸಂಸದ ಜಾನ್ ಬ್ರಿಟ್ಟಾಸ್ ಅವರು, ನಡೆಯುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಸುತ್ತ ಉದ್ಭವಿಸಿರುವ ಆತಂಕಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಸಮಗ್ರತೆ, ಮತದಾರರ ಪಟ್ಟಿಗಳ ಸಮಗ್ರತೆ  ಮತ್ತು ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ತುರ್ತು ಸಾಂವಿಧಾನಿಕ ಮಧ್ಯಪ್ರವೇಶವನ್ನು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ, ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಸಂದರ್ಭಗಳಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ವಿವಿಧ ವಿಷಯಗಳ ಕುರಿತು ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಜಾನ್ ಬ್ರಿಟ್ಟಾಸ್ ಉಲ್ಲೇಖಿಸಿದ್ದಾರೆ. ಈ ವಿಷಯಗಳಲ್ಲಿ ‘ಫಾರ್ಮ್ 6’ಗೆ ಮಾಡಲಾದ ಬದಲಾವಣೆಗಳು, ಮತದಾರರ ಪಟ್ಟಿಯ ದತ್ತಾಂಶದ ಮೇಲಿನ ಕೇಂದ್ರೀಕೃತ ನಿಯಂತ್ರಣ, ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸೇರ್ಪಡೆ, ಹಾಗೂ ಮತದಾರರ ಹೆಸರುಗಳನ್ನು ಮರುಸ್ಥಾಪಿಸುವ ಆದೇಶಗಳ ವಿರುದ್ಧ ಚುನಾವಣಾ ಆಯೋಗವು ಸಲ್ಲಿಸಿದ ಮೇಲ್ಮನವಿಗಳು ಸೇರಿವೆ.

“ತಾರ್ಕಿಕ ಅಸಂಗತತೆ”ಗಳ ಆಧಾರದ ಮೇಲೆ ಎಸ್‌ಐಆರ್ ನೋಟೀಸುಗಳನ್ನು  ಹೊರಡಿಸಿರುವುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿರುವ ವಿಷಯದತ್ತಲೂ ಗಮನ ಸೆಳೆದ ಬ್ರಿಟ್ಟಾಸ್, ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವುದನ್ನು ತಡೆಯಲು ತಕ್ಷಣದ ರಕ್ಷಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ ನ್ಯಾಯಾಂಗ ಮತ್ತು ಸಂಸದೀಯ ಪರಿಶೀಲನೆಗಾಗಿ ಎಸ್‌ಐಆರ್‌ಗೆ ಸಂಬಂಧಿಸಿದ ಸಂಪೂರ್ಣ ಎಲೆಕ್ಟ್ರಾನಿಕ್ ಮತ್ತು ಆಡಳಿತಾತ್ಮಕ ದಾಖಲೆಗಳ ಜಾಡನ್ನು (audit trail) ಸಂರಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತಾದ ಸಂಸದೀಯ ಕಲಾಪಗಳು ಸಂವಿಧಾನಕ್ಕೆ ಅನುಗುಣವಾಗಿ ಮುಂದುವರಿಯಲು ಬಿಡುವುದನ್ನು  ಖಚಿತಪಡಿಸುವಂತೆಯೂ ಅವರು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯ ಯಾವುದೇ ಭಾಗವನ್ನು ಶಾಸನಬದ್ಧ ಅಧಿಕಾರ ಅಥವಾ ಸೂಕ್ತ ಸಾಂವಿಧಾನಿಕ ರಕ್ಷಣೆಯಿಲ್ಲದೆ ಕೈಗೊಳ್ಳಲಾಗಿದೆ ಎಂದು ಕಂಡುಬಂದಲ್ಲಿ ಸೂಕ್ತ ನ್ಯಾಯಾಂಗ ಪರಿಹಾರವನ್ನು ಒದಗಿಸುವುದು ಸೇರಿದಂತೆ, ಮತದಾನದ ಹಕ್ಕು ಮತ್ತು ಕಾನೂನಿನ ಆಳ್ವಿಕೆಯ ಪರಿಣಾಮಕಾರಿ ರಕ್ಷಣೆಗೆ ಪೂರಕವಾಗಿ ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರವು ನಿಲುವು ತಳೆಯುವ ಅಗತ್ಯವನ್ನೂ ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ಸಿಇಸಿ

ಇದನ್ನೂ ನೋಡಿ : ಎಸ್‌ಐಆರ್‌ ಎಡವಟ್ಟು | ಬಯಲಾಯ್ತು ಅಸಲಿ ಗುಟ್ಟು – ಜನಪರ ನಟ ಕಿಶೋರ್‌ ಕುಮಾರ್‌ ಜೊತೆ ಕೆ.ಎಸ್‌ ವಿಮಲಾ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *