ಬೆಂಗಳೂರು: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿರಂಗನ್ ಸಮಿತಿಯ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಅಂಗೀಕರಿಸಬಾರದು ಎಂದು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ನಿರ್ಣಯಿಸಿದೆ. ಕಸ್ತೂರಿರಂಗನ್
ಸೆಪ್ಟೆಂಬರ್ 27ರೊಳಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಈ ನಿರ್ಣಯ ಮಹತ್ವ ಪಡೆದಿದೆ. ಕರಡು ಅಧಿಸೂಚನೆಯಡಿ ಕರ್ನಾಟಕದ 10 ಜಿಲ್ಲೆಗಳ 33 ತಾಲೂಕುಗಳ 1,449 ಗ್ರಾಮಗಳು ಹಾಗೂ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವವಿದೆ.
ಈ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳ ಜತೆಗೆ ಕೃಷಿ ಭೂಮಿ, ತೋಟಗಳು, ವಸತಿ ಪ್ರದೇಶಗಳು ಮತ್ತು ಇತರ ಜನವಸತಿ ಪ್ರದೇಶಗಳೂ ಸೇರಿರುವ ಬಗ್ಗೆ ರಾಜ್ಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಕಸ್ತೂರಿರಂಗನ್
ಭೂಮಟ್ಟದ ಸಮೀಕ್ಷೆಗೆ ಒತ್ತಾಯ
ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ಗುರುತಿಸುವಾಗ ಉಪಗ್ರಹ ಆಧಾರಿತ ಮಾಹಿತಿಯನ್ನಷ್ಟೇ ಅವಲಂಬಿಸುವ ಬದಲು ಸ್ಥಳೀಯ ವಾಸ್ತವಾಂಶಗಳನ್ನು ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.
ಪ್ರತಿ ಪ್ರದೇಶದ ಸರ್ವೆ ನಂಬರ್ ಆಧಾರದಲ್ಲಿ ಭೂಮಟ್ಟದ ಸಮೀಕ್ಷೆ ನಡೆಸಿ, ಅರಣ್ಯ, ಕೃಷಿ ಭೂಮಿ, ತೋಟ, ವಸತಿ ಪ್ರದೇಶ ಹಾಗೂ ಇತರ ಭೂ ಬಳಕೆಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂಬುದು ರಾಜ್ಯದ ನಿಲುವಾಗಿದೆ.
ಬಗರ್‌ಹುಕುಂ ಭೂಮಿ, ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಹಕ್ಕುಪತ್ರ ಅರ್ಜಿಗಳು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನೂ ಸಮೀಕ್ಷೆಯ ಸಂದರ್ಭದಲ್ಲಿ ಪರಿಗಣಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ಒಂದು ಗ್ರಾಮದ ಒಂದು ಭಾಗದಲ್ಲಿ ಮಾತ್ರ ಅರಣ್ಯವಿದೆ ಎಂಬ ಕಾರಣಕ್ಕೆ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸುವುದು ಸರಿಯಾದ ವಿಧಾನವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕಸ್ತೂರಿರಂಗನ್
ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ
ಭೂಮಟ್ಟದ ವಾಸ್ತವಾಂಶಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಮುಂದಿಟ್ಟಿದೆ.
ಈ ಸಮಿತಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಗೆ ರೈತರು, ಪರಿಸರ ತಜ್ಞರು, ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ತಜ್ಞರನ್ನು ಒಳಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ಇದರ ಜತೆಗೆ ಡ್ರೋನ್ ಆಧಾರಿತ ಲೈಡಾರ್ (LiDAR) ತಂತ್ರಜ್ಞಾನ ಬಳಸಿಕೊಂಡು ಪ್ಲಾಟ್ ಮಟ್ಟದಲ್ಲಿ ನಕ್ಷೆ ಸಿದ್ಧಪಡಿಸುವ ಮೂಲಕ ನೈಸರ್ಗಿಕ ಅರಣ್ಯ ಮತ್ತು ಕೃಷಿ ಭೂಮಿಯನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಕಸ್ತೂರಿರಂಗನ್
ಪರಿಸರ ರಕ್ಷಣೆ ಜತೆಗೆ ಜನರ ಬದುಕಿಗೂ ಆದ್ಯತೆ
ಕಸ್ತೂರಿರಂಗನ್ ಪ್ರಸ್ತಾವಿತ ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ನದಿ ಮರಳು ಗಣಿಗಾರಿಕೆ ಸೇರಿದಂತೆ ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧ ಮತ್ತು ನಿಯಂತ್ರಣಗಳನ್ನು ಜಾರಿಗೊಳಿಸುವ ಪ್ರಸ್ತಾವವಿದೆ. ಕೆಲವು ಕೈಗಾರಿಕಾ ಹಾಗೂ ನಿರ್ಮಾಣ ಚಟುವಟಿಕೆಗಳಿಗೂ ನಿಯಮಗಳು ಅನ್ವಯಿಸುವ ಸಾಧ್ಯತೆಯಿದೆ.
ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಅಗತ್ಯವಿದ್ದರೂ, ಅಲ್ಲಿನ ರೈತರು, ಅರಣ್ಯವಾಸಿಗಳು ಹಾಗೂ ಸ್ಥಳೀಯ ಸಮುದಾಯಗಳ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರದ ರೀತಿಯಲ್ಲಿ ಕ್ರಮಗಳನ್ನು ರೂಪಿಸಬೇಕು ಎಂಬುದು ರಾಜ್ಯದ ನಿಲುವಾಗಿದೆ.
ಪರಿಸರ ಸೂಕ್ಷ್ಮ ವಲಯದ ನಿಯಮಗಳಿಂದ ಜೀವನೋಪಾಯಕ್ಕೆ ಪರಿಣಾಮ ಬೀರುವ ಜನರಿಗೆ ಪರ್ಯಾಯ ವ್ಯವಸ್ಥೆ ಹಾಗೂ ಅಗತ್ಯ ನೆರವು ಕಲ್ಪಿಸುವ ಕುರಿತೂ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ಒಟ್ಟಿನಲ್ಲಿ, ಕಸ್ತೂರಿರಂಗನ್ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಒಪ್ಪಿಕೊಳ್ಳದೆ, ಮೊದಲು ಭೂಮಟ್ಟದ ಸಮೀಕ್ಷೆ ನಡೆಸಿ, ಸರ್ವೆ ನಂಬರ್ ಆಧಾರದಲ್ಲಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ನಿಗದಿಪಡಿಸಬೇಕು ಎಂಬುದು ಕರ್ನಾಟಕ ವಿಧಾನಸಭೆಯ ನಿರ್ಣಯದ ಪ್ರಮುಖ ಅಂಶವಾಗಿದೆ.
ಇದನ್ನೂ ನೋಡಿ : ‘ಮಾರ್ನುಡಿ’ ದಮನಿತರ ಧ್ವನಿಯಾಗಲಿ | ಹಂಸಲೇಖ | ಮಾಸಪತ್ರಿಕೆ ಬಿಡುಗಡೆ Janashakthi Media
