ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇರಳ ಮಾದರಿಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಸ್ಥಳೀಯ ನಿವಾಸಿಗಳು, ರೈತರು ಹಾಗೂ ಆದಿವಾಸಿಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ವಿನಾಯಿತಿ ಪಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಆಗ್ರಹಿಸಿದೆ. ಕಸ್ತೂರಿ
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರಗಳ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಏಳನೇ ಕರಡು ಅಧಿಸೂಚನೆ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೇವಲ ರಾಜಕೀಯ ವಿರೋಧ ವ್ಯಕ್ತಪಡಿಸುವುದಕ್ಕೆ ಸೀಮಿತವಾಗದೆ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಜನರ ಜೀವನೋಪಾಯ ಎರಡನ್ನೂ ಸಮತೋಲನಗೊಳಿಸುವ ಸ್ಪಷ್ಟ ಹಾಗೂ ಪ್ರಾಯೋಗಿಕ ಪರ್ಯಾಯ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸಿದ್ಧಪಡಿಸಬೇಕು ಎಂದು ಕೆಪಿಆರ್ಎಸ್ ರಾಜ್ಯಾಧ್ಯಕ್ಷ ಯು. ಬಸವರಾಜ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ಒತ್ತಾಯಿಸಿದ್ದಾರೆ.
2026ರ ಜುಲೈ 27ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಕೊಡಗು, ಚಾಮರಾಜನಗರ, ಮೈಸೂರು ಮತ್ತು ಹಾಸನ ಜಿಲ್ಲೆಗಳ 39 ತಾಲ್ಲೂಕುಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಈ ಪ್ರದೇಶಗಳ ರೈತರು, ಆದಿವಾಸಿಗಳು ಹಾಗೂ ಇತರ ಸ್ಥಳೀಯ ನಿವಾಸಿಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಪಶುವೈದ್ಯ, ಕೃಷಿ ಕೋರ್ಸ್ಗಳಿಗೆ ಭಾರಿ ಬೇಡಿಕೆ; ಕರ್ನಾಟಕದಲ್ಲಿ ಎಂಜಿನಿಯರಿಂಗ್ ಸೀಟುಗಳು ಖಾಲಿ
ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ ವಿಶೇಷ ವಿಧಾನಸಭಾ ಅಧಿವೇಶನವನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಂಡು, ಪಶ್ಚಿಮ ಘಟ್ಟಗಳ ಜನರ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. ಅಲ್ಲದೆ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ಹೇರಬೇಕು ಎಂದು ಕೆಪಿಆರ್ಎಸ್ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರನ್ನು ಒತ್ತಾಯಿಸಿದೆ.
ಕೇರಳದ ಹಿಂದಿನ ಎಲ್ಡಿಎಫ್ ಸರ್ಕಾರ ಸ್ಥಳೀಯ ಜನರ ಜೀವನೋಪಾಯ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನಗೊಳಿಸುವ ಪರ್ಯಾಯ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯಗಳ ಮುಂದೆ ಮಂಡಿಸಿತ್ತು. ಇದರ ಪರಿಣಾಮವಾಗಿ ಜನವಸತಿ ಪ್ರದೇಶಗಳು, ಕೃಷಿ ಭೂಮಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಹೊರಗಿಡುವಲ್ಲಿ ಕೇರಳ ಯಶಸ್ವಿಯಾಗಿದೆ ಎಂದು ಕೆಪಿಆರ್ಎಸ್ ತಿಳಿಸಿದೆ.
ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಪಶ್ಚಿಮ ಘಟ್ಟಗಳ ಜನರು ಮತ್ತು ಜನಪರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಪರ್ಯಾಯ ಪ್ರಸ್ತಾವನೆ ಸಿದ್ಧಪಡಿಸಬೇಕು. ಪರಿಸರಕ್ಕೆ ಹಾನಿಕಾರಕವಾಗಿರುವ ಬೃಹತ್ ಕ್ವಾರಿಗಳು, ಗಣಿಗಾರಿಕೆ ಹಾಗೂ ಇತರ ಪರಿಸರ ನಾಶಕ ಯೋಜನೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದರ ಜೊತೆಗೆ, ಸ್ಥಳೀಯ ಜನರ ಜೀವನೋಪಾಯಕ್ಕೆ ಧಕ್ಕೆ ಬರದಂತೆ ಸೂಕ್ತ ವಿನಾಯಿತಿಗಳನ್ನು ಪಡೆಯಬೇಕು ಎಂದು ಸಂಘಟನೆಯ ನಾಯಕರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ :ಕ್ಯಾಸ್ಟ್ರೋ 100 | ಕ್ಯೂಬಾ ಆರೋಗ್ಯ–ಶಿಕ್ಷಣದಲ್ಲಿ ಜಗತ್ತಿಗೆ ಮಾದರಿಯಾಗಿದ್ದು ಹೇಗೆ? | ಭಾರತ ಏನು ಕಲಿಯಬೇಕು?
