ಬೆಂಗಳೂರು: ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ₹300 ಕೋಟಿ ಮೊತ್ತದ ಉದ್ಯೋಗ ನಿಧಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಸೆಪ್ಟೆಂಬರ್ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ, ವಿಜಯನಗರ, ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಜಿಲ್ಲೆಗಳಲ್ಲಿ ಹೊಸದಾಗಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ.
ಯೋಜನೆಯಡಿ ಹೊಸದಾಗಿ ಸೃಷ್ಟಿಯಾಗುವ ಪ್ರತಿ ಉದ್ಯೋಗಕ್ಕೆ ತಿಂಗಳಿಗೆ ₹2,500ರಂತೆ ಎರಡು ವರ್ಷಗಳ ಅವಧಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಉದ್ಯೋಗದಾತರು ಪಾವತಿಸುವ ಭವಿಷ್ಯ ನಿಧಿ (ಪಿಎಫ್) ಕೊಡುಗೆಗೆ ಈ ನೆರವನ್ನು ಜೋಡಿಸಲಾಗಿದೆ. ಇದರಿಂದ ಕೈಗಾರಿಕೆಗಳು ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಟಿಸಲು ಉತ್ತೇಜನ ದೊರೆಯಲಿದೆ.
ಇದನ್ನೂ ಓದಿ : ಪಶುವೈದ್ಯ, ಕೃಷಿ ಕೋರ್ಸ್ಗಳಿಗೆ ಭಾರಿ ಬೇಡಿಕೆ; ಕರ್ನಾಟಕದಲ್ಲಿ ಎಂಜಿನಿಯರಿಂಗ್ ಸೀಟುಗಳು ಖಾಲಿ
ಇದರ ಜೊತೆಗೆ ಹಿಂದುಳಿದ ತಾಲ್ಲೂಕುಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಯೋಜನೆಗಳಿಗೆ ಹೂಡಿಕೆ ಆಧಾರಿತವಾಗಿ ಗರಿಷ್ಠ ಶೇ 10ರಷ್ಟು ಹಾಗೂ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಸ್ಥಾಪನೆಯಾಗುವ ಯೋಜನೆಗಳಿಗೆ ಗರಿಷ್ಠ ಶೇ 20ರಷ್ಟು ನೆರವು ನೀಡುವ ವ್ಯವಸ್ಥೆಯನ್ನೂ ಸರ್ಕಾರ ರೂಪಿಸಿದೆ.
ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಪ್ರಾದೇಶಿಕ ಅಸಮಾನತೆ ಕಡಿಮೆ ಮಾಡುವುದು, ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಕೈಗಾರಿಕಾ ಹೂಡಿಕೆಯನ್ನು ಬೆಂಗಳೂರಿನ ಹೊರಗೂ ವಿಸ್ತರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ನೋಡಿ : ಕನಿಷ್ಠ ವೇತನ ಜಾರಿ ಮಾಡಿ, ನಮ್ಮ ಬದುಕು ಉಳಿಸಿ! | 20 ಸಾವಿರ ಕಾರ್ಮಿಕರ ಬೃಹತ್ ಹೋರಾಟJanashakthi Media
