ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT), B.Sc ನರ್ಸಿಂಗ್ ಮತ್ತಿತರ ಕೋರ್ಸ್‌ಗಳಿಗೆ CET ಕೌನ್ಸೆಲಿಂಗ್‌ನ ಎರಡನೇ ಸುತ್ತಿನಲ್ಲಿ ಕೆಲವು ಕಾಲೇಜುಗಳಿಗೆ ಸೀಟು ಹಂಚಿಕೆಯಾಗಿತ್ತು. ಆದರೆ ಪ್ರವೇಶ ಪಡೆಯಲು ಕಾಲೇಜುಗಳಿಗೆ ತೆರಳಿದ ವಿದ್ಯಾರ್ಥಿಗಳಿಗೆ, ನೀಡಲಾಗಿದ್ದ ವಿಳಾಸದಲ್ಲಿ ಕಾಲೇಜೇ ಇಲ್ಲ ಎಂಬುದು ತಿಳಿದುಬಂದಿದೆ. ‘ಕಾಣೆಯಾದ’
ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಶುಲ್ಕ ಪಾವತಿಸಿ, ಸೀಟು ದೃಢೀಕರಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ಪ್ರವೇಶಕ್ಕಾಗಿ ತೆರಳಿದಾಗ, ನೀಡಲಾಗಿದ್ದ ವಿಳಾಸದಲ್ಲಿ ಕಾಲೇಜು ಕಾಣಿಸದೆ ಇರುವುದನ್ನು ಕಂಡುಬಂದಿದೆ.
ಬೆಂಗಳೂರಿನ ಸ್ನೇಹಾ (ಹೆಸರು ಬದಲಿಸಲಾಗಿದೆ) ಅವರು, “ನನಗೆ ಮ್ಯಾಗ್ರತ್ ರಸ್ತೆಯಲ್ಲಿರುವ ಹೊಸ್ಮಾಟ್ ಆಸ್ಪತ್ರೆ ಶೈಕ್ಷಣಿಕ ಸಂಸ್ಥೆಯ ಹೊಸ್ಮಾಟ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಸೀಟು ಸಿಕ್ಕಿತ್ತು. ಪ್ರವೇಶಕ್ಕಾಗಿ ಕಾಲೇಜಿಗೆ ಹೋದಾಗ ಆಶ್ಚರ್ಯವಾಯಿತು. ದೃಢೀಕರಣ ಪತ್ರದಲ್ಲಿ ಹೊಸ್ಮಾಟ್ ಆಸ್ಪತ್ರೆಯ ವಿಳಾಸವಿತ್ತು, ಆದರೆ ಅಲ್ಲಿ ಹೊಸ್ಮಾಟ್ ಕಾಲೇಜ್ ಆಫ್ ಫಿಸಿಯೋಥೆರಪಿ ಇರಲಿಲ್ಲ. BPT ಕಾಲೇಜು ಎರಡು ವರ್ಷಗಳಿಂದ ಮುಚ್ಚಲ್ಪಟ್ಟಿದೆ ಎಂದು ಸಿಬ್ಬಂದಿ ತಿಳಿಸಿದರು” ಎಂದು ಹೇಳಿದರು.
ಮಂಗಳೂರಿನ ಬಿಕರ್ಣಕಟ್ಟೆಯ ಮಸೂದ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ತನ್ನ ಮಗನಿಗೆ ಸೀಟು ಸಿಕ್ಕಿತ್ತು ಎಂದು ಒಬ್ಬ ಪೋಷಕರು ಹೇಳಿದರು. “ಆದರೆ ಫಿಸಿಯೋಥೆರಪಿ ಕಾಲೇಜಿನ ಬದಲು ದೃಢೀಕರಣ ಪತ್ರದಲ್ಲಿದ್ದ ವಿಳಾಸದಲ್ಲಿ ನರ್ಸಿಂಗ್ ಕಾಲೇಜು ಇತ್ತು. ವಿಚಾರಿಸಿದಾಗ ಮಸೂದ್ BPT ಕಾಲೇಜು ಬೇರೆ ವಿಳಾಸದಲ್ಲಿದ್ದು, ಬಹಳ ದೂರದಲ್ಲಿದೆ ಎಂದು ತಿಳಿಯಿತು” ಎಂದು ಅವರು ಹೇಳಿದರು.
ಬೆಂಗಳೂರಿನ ಆನೇಕಲ್ ತಾಲೂಕಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಸುಶ್ರುತ ನರ್ಸಿಂಗ್ ಕಾಲೇಜಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳೂ, ಸೂಚಿಸಲಾದ ವಿಳಾಸದಲ್ಲಿ ಕಾಲೇಜು ಇಲ್ಲ ಎಂದು KEAಗೆ ದೂರು ನೀಡಿದ್ದಾರೆ. ‘ಕಾಣೆಯಾದ’
ಇದನ್ನೂ ಓದಿ :ಎಸ್‌ಐಆರ್: 43.81 ಲಕ್ಷ ಮತದಾರರಿಗೆ ನೋಟಿಸ್, ಅ.27ರಂದು ಅಂತಿಮ ಪಟ್ಟಿ
ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ B.W. Lions Super Speciality Eye Hospital ಅನ್ನು ಆಯ್ಕೆ ಮಾಡಿಕೊಂಡಿದ್ದ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಸೀಟು ಪಡೆದ ವಿದ್ಯಾರ್ಥಿಗಳೂ ಆಸ್ಪತ್ರೆ ಮುಚ್ಚಲ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನ್ಯೂ BEL ರಸ್ತೆಯಲ್ಲಿರುವ M.S. Ramaiah University of Applied Sciences Engineering College ಅನ್ನು ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳೂ KEAಗೆ ಮನವಿ ಸಲ್ಲಿಸಿದ್ದಾರೆ. ಕಾಲೇಜು ಆಡಳಿತವು ಅವರನ್ನು ಪೀನ್ಯಾದಲ್ಲಿರುವ M.S. Ramaiah University of Applied Sciences (Ramaiah Technology Campus)ನಲ್ಲಿ ಪ್ರವೇಶ ಪಡೆಯುವಂತೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ.
“KEA ಅಧಿಕಾರಿಗಳು ಮೂರನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಮತ್ತೆ ಸೀಟು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಆದರೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾಗಿದ್ದ ಸೀಟಿಗೆ ನಾನು Choice-1 ನೀಡಿದ್ದೆ, ಶುಲ್ಕ ಪಾವತಿಸಿ ದೃಢೀಕರಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಸುತ್ತಿನಲ್ಲಿ ನನಗೆ ಹೇಗೆ ಸೀಟು ಹಂಚಿಕೆಯಾಗುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ” ಎಂದು ಸ್ನೇಹಾ ಹೇಳಿದರು.
“BPT ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹುತೇಕ ವೃತ್ತಿಪರ ಕೋರ್ಸ್‌ಗಳನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS)ಕ್ಕೆ ಸಂಯೋಜಿತವಾಗಿರುವ ಕಾಲೇಜುಗಳಲ್ಲಿ ನಡೆಸಲಾಗುತ್ತದೆ. ಸೀಟು ಮ್ಯಾಟ್ರಿಕ್ಸ್ ಸಲ್ಲಿಸುವ ಮೊದಲು ಈ ಕಾಲೇಜುಗಳನ್ನು RGUHS ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಪರಿಶೀಲಿಸುತ್ತವೆ. ಕಾಲೇಜುಗಳನ್ನು ಪರಿಶೀಲಿಸದೇ ಅಧಿಕಾರಿಗಳು ಸೀಟು ಮ್ಯಾಟ್ರಿಕ್ಸ್‌ಗೆ ಅನುಮೋದನೆ ನೀಡಿರುವುದು ಕ್ಷಮಿಸಲಾಗದ ಸಂಗತಿ” ಎಂದು ಪೋಷಕರಾದ ಗಣೇಶ್ ಪ್ರಸಾದ್ ಹೇಳಿದರು.
RGUHS ಉಪಕುಲಪತಿ ಬಿ.ಸಿ. ಭಗವಾನ್ ಅವರು, ಮೂರು ಅಥವಾ ನಾಲ್ಕು ಕಾಲೇಜುಗಳು ಹೊಸ ನಿಯಮಗಳ ಪ್ರಕಾರ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿವೆ ಎಂದು ಹೇಳಿದರು.
“ನಾವು ಕಾಲೇಜು ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಕಳುಹಿಸಿದ್ದೇವೆ. ಕೆಲವೊಮ್ಮೆ ಅನುಮೋದನೆ ಅಥವಾ ಸಂಬಂಧಿತ ದಾಖಲೆಗಳು KEAಗೆ ತಲುಪುವುದು ತಡವಾಗಬಹುದು. ಈ ವಿಷಯವನ್ನು ತಕ್ಷಣ ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಮನವಿಗಳಿಗೆ ಪ್ರತಿಕ್ರಿಯಿಸಿರುವ KEA ಕಾರ್ಯನಿರ್ವಾಹಕ ನಿರ್ದೇಶಕರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಕಾಲೇಜಿಗೆ ವರದಿ ಮಾಡುವ ಕೊನೆಯ ದಿನಾಂಕ ಆಗಸ್ಟ್ 31 ಆಗಿರುವುದರಿಂದ, ಅಭ್ಯರ್ಥಿಗಳ ಗೊಂದಲವನ್ನು ತಕ್ಷಣ ಪರಿಹರಿಸುವಂತೆ ಅವರು ಮನವಿ ಮಾಡಿದ್ದಾರೆ.
(ಮೂಲ ದಿ ಹಿಂದೂ, ಲೇಖನ : ಜಯಂತ್ ಆರ್, ಅನುವಾದ :ಎಂ. ಚಂದನ್)
ಇದನ್ನೂ ನೋಡಿ : ‘ಮನೆ ಮುಂದೆ ವಾಹನ ನಿಲ್ಲಿಸೋಕೆ ದುಡ್ಡಾ?’ | ಪಾರ್ಕಿಂಗ್ ಶುಲ್ಕದ ವಿರುದ್ಧ ಜನಾಕ್ರೋಶ Janashakthi Media
