ಕೆಇಎ ಮಹಾ ಎಡವಟ್ಟು: ಒಂದೇ ದಿನ ಎರಡು ಪರೀಕ್ಷೆ; ಕೇಂದ್ರಗಳ ಅಂತರ 100 ಕಿ.ಮೀ!

ರಾಜ್ಯಾದ್ಯಂತ ಪರೀಕ್ಷಾರ್ಥಿಗಳ ಆಕ್ರೋಶ | ಒಂದೇ ದಿನ ಎರಡು ಪರೀಕ್ಷೆ ಬರೆಯಬೇಕಾದ ಅಭ್ಯರ್ಥಿಗಳಿಗೆ ಸಂಕಷ್ಟ
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಹಾಗೂ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿ ಎಡವಟ್ಟು ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ರಾಜ್ಯಾದ್ಯಂತ ಪರೀಕ್ಷಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಗೊಂದಲಕ್ಕೀಡಾಗಿದ್ದಾರೆ.

ಆಗಸ್ಟ್ 2ರಂದು ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಒಟ್ಟು ಸುಮಾರು 3,995 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯುತ್ತಿದ್ದು, ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಪ್ರತ್ಯೇಕವಾಗಿ 596 ಹುದ್ದೆಗಳಿಗೆ ಪರೀಕ್ಷೆ ಆಯೋಜಿಸಲಾಗಿದೆ.

ಆದರೆ ಒಂದೇ ದಿನ ಹೈದರಾಬಾದ್ ಕರ್ನಾಟಕ (ಎಚ್‌ಕೆ) ಹಾಗೂ ನಾನ್‌-ಎಚ್‌ಕೆ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುತ್ತಿರುವುದು ಇದೀಗ ಸಮಸ್ಯೆಗೆ ಕಾರಣವಾಗಿದೆ. ಎಚ್‌ಕೆ ಅಭ್ಯರ್ಥಿಗಳಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಪರೀಕ್ಷೆ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ 2.30ರಿಂದ ಸಂಜೆ 4ರವರೆಗೆ ನಾನ್‌-ಎಚ್‌ಕೆ ಪರೀಕ್ಷೆ ನಡೆಯಲಿದೆ.

ಇದರಿಂದ ಎಚ್‌ಕೆ ಮತ್ತು ನಾನ್‌-ಎಚ್‌ಕೆ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಒಂದೇ ದಿನ ಎರಡು ಪರೀಕ್ಷೆಗಳನ್ನು ಬರೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಕೆಇಎ ಅಭ್ಯರ್ಥಿಗಳಿಗೆ ನೀಡಿರುವ ಪರೀಕ್ಷಾ ಕೇಂದ್ರಗಳು ಮಾತ್ರ ಬೇರೆ ಬೇರೆ ಸ್ಥಳಗಳಲ್ಲಿವೆ. ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ನಡುವಿನ ಅಂತರವೇ 100ರಿಂದ 120 ಕಿಲೋಮೀಟರ್‌ವರೆಗೆ ಇದೆ ಎನ್ನಲಾಗಿದೆ.

ಎರಡು ಗಂಟೆಗಳಲ್ಲಿ 60–70 ಕಿ.ಮೀ. ಪ್ರಯಾಣ ಹೇಗೆ?

ಬೆಳಿಗ್ಗೆ 10.30ರಿಂದ 12.30ರವರೆಗೆ ಎಚ್‌ಕೆ ಪರೀಕ್ಷೆ ಬರೆದ ನಂತರ, ಮಧ್ಯಾಹ್ನ 2.30ಕ್ಕೆ ನಾನ್‌-ಎಚ್‌ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು. ಎರಡು ಪರೀಕ್ಷೆಗಳ ನಡುವೆ ಕೇವಲ ಎರಡು ಗಂಟೆಗಳ ಅಂತರವಿದ್ದು, ಈ ಅವಧಿಯಲ್ಲಿ 60ರಿಂದ 70 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಿ ಮತ್ತೊಂದು ಪರೀಕ್ಷಾ ಕೇಂದ್ರ ತಲುಪುವುದು ಹೇಗೆ ಎಂಬ ಪ್ರಶ್ನೆಯನ್ನು ಅಭ್ಯರ್ಥಿಗಳು ಎತ್ತಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿ ಹೋರಾಟದ ‘ಪ್ರತೀಕಾರ’ವೇ? ಐಷಿ ಘೋಷ್‌ ಬಂಧನಕ್ಕೆ ದೆಹಲಿ ಪೊಲೀಸರ ಯತ್ನ

ಕೊಪ್ಪಳದಲ್ಲಿ ಒಂದು ಪರೀಕ್ಷೆ, ಗಂಗಾವತಿಯಲ್ಲಿ ಮತ್ತೊಂದು!

ಈ ಗೊಂದಲಕ್ಕೆ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಯೊಬ್ಬರ ಪರಿಸ್ಥಿತಿಯೇ ಸ್ಪಷ್ಟ ಉದಾಹರಣೆಯಾಗಿದೆ. ಅವರಿಗೆ ಎಚ್‌ಕೆ ಪರೀಕ್ಷಾ ಕೇಂದ್ರವನ್ನು ಕೊಪ್ಪಳದಲ್ಲಿ ನೀಡಲಾಗಿದ್ದು, ಅದೇ ದಿನ ನಡೆಯುವ ನಾನ್‌-ಎಚ್‌ಕೆ ಪರೀಕ್ಷಾ ಕೇಂದ್ರವನ್ನು ಗಂಗಾವತಿಯಲ್ಲಿ ನೀಡಲಾಗಿದೆ.

ಅಂದರೆ, ಬೆಳಿಗ್ಗೆ ಕೊಪ್ಪಳದಲ್ಲಿ ಎಚ್‌ಕೆ ಪರೀಕ್ಷೆ ಬರೆದ ಬಳಿಕ, ಮಧ್ಯಾಹ್ನ ನಡೆಯುವ ನಾನ್‌-ಎಚ್‌ಕೆ ಪರೀಕ್ಷೆ ಬರೆಯಲು ಗಂಗಾವತಿಗೆ ತೆರಳಬೇಕಿದೆ. ಎರಡು ಪರೀಕ್ಷೆಗಳ ನಡುವೆ ಕೇವಲ ಎರಡು ಗಂಟೆಗಳ ಸಮಯವಿದೆ. ಹೀಗಿರುವಾಗ ಪರೀಕ್ಷಾರ್ಥಿಗಳು ನಿಗದಿತ ಸಮಯಕ್ಕೆ ಗಂಗಾವತಿ ತಲುಪಿ ಪರೀಕ್ಷೆ ಬರೆಯುವುದು ಹೇಗೆ? ಒಂದು ಪರೀಕ್ಷೆ ಬರೆಯಲು ತೆರಳಿದರೆ ಮತ್ತೊಂದು ಪರೀಕ್ಷೆ ತಪ್ಪಿಹೋಗುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲವೇ? ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ರಾಜ್ಯಾದ್ಯಂತ ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ಅಭ್ಯರ್ಥಿಗಳು ಕೆಇಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.“ನಾವು ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಎರಡೂ ಪರೀಕ್ಷೆಗಳನ್ನು ಬರೆಯಲು ನಮಗೆ ಅವಕಾಶವಿದೆ. ಆದರೆ ಒಂದೇ ದಿನ ಎರಡು ಪರೀಕ್ಷೆಗಳನ್ನು ನಡೆಸಿ, ಎರಡು ಪರೀಕ್ಷಾ ಕೇಂದ್ರಗಳನ್ನು ದೂರದೂರಿನಲ್ಲಿ ನೀಡಿದರೆ ನಾವು ಎರಡೂ ಪರೀಕ್ಷೆಗಳನ್ನು ಹೇಗೆ ಬರೆಯಬೇಕು? ಒಂದೇ ಕೇಂದ್ರದಲ್ಲಿ ಅಥವಾ ಸಮೀಪದ ಕೇಂದ್ರಗಳಲ್ಲಿ ಎರಡೂ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬೇಕು” ಎಂದು ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.

ಕೆಇಎ ತಕ್ಷಣ ಗೊಂದಲ ಬಗೆಹರಿಸಲಿ

ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪರೀಕ್ಷಾ ಕೇಂದ್ರಗಳ ಈ ಗೊಂದಲ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಸಾವಿರಾರು ಯುವಜನರಿಗೆ ಕೆಇಎಯ ಈ ವ್ಯವಸ್ಥೆಯಿಂದ ಒಂದೇ ಒಂದು ಪರೀಕ್ಷೆಯನ್ನೂ ತಪ್ಪಿಸಿಕೊಳ್ಳುವ ಪರಿಸ್ಥಿತಿ ಎದುರಾಗಬಾರದು ಎಂದು ಅಭ್ಯರ್ಥಿಗಳು ಮತ್ತು ಎಸ್‌ಎಫ್‌ಐ ಸಂಘಟನೆ ಆಗ್ರಹಿಸಿದೆ.

ಹೀಗಾಗಿ ಕೆಇಎ ಕೂಡಲೇ ಸಮಸ್ಯೆಯನ್ನು ಪರಿಶೀಲಿಸಿ, ಎಚ್‌ಕೆ ಮತ್ತು ನಾನ್‌-ಎಚ್‌ಕೆ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷಾ ಕೇಂದ್ರದಲ್ಲಿ ಅಥವಾ ಪರಸ್ಪರ ಸಮೀಪದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಎರಡೂ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವಂತೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಅಗತ್ಯ ಬದಲಾವಣೆ ಮಾಡಿ, ಅಭ್ಯರ್ಥಿಗಳಿಗೆ ಸಮರ್ಪಕ ಸಮಯಾವಕಾಶ ನೀಡಬೇಕು ಎಂದು ರಾಜ್ಯಾದ್ಯಂತ ಪರೀಕ್ಷಾರ್ಥಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಆರ್ಚರ್ ಮೀನು: ನೀರಿನ ಬಾಣ ಬಿಟ್ಟು ಬೇಟೆಯಾಡುವ ಗುರಿಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *