ಬೆಂಗಳೂರು: ಫುಟ್‌ಬಾಲ್ ಪ್ರೇಮಿಗಳ ಬಹುನಿರೀಕ್ಷಿತ ಫಿಫಾ ವಿಶ್ವಕಪ್-2026 ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ಹಿನ್ನೆಲೆ ನಗರದಲ್ಲಿನ ಕ್ರೀಡಾಭಿಮಾನಿಗಳಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆ ಸಿಹಿ ಸುದ್ದಿ ನೀಡಿದೆ. ಫಿಫಾ
ಮುಂಬರುವ ಜುಲೈ 14, 15 ಹಾಗೂ 19ರಂದು ನಡೆಯಲಿರುವ ಪ್ರಮುಖ ಪಂದ್ಯಗಳ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬೆಳಗಿನ ಜಾವ 3:30ರವರೆಗೆ ಆಹಾರ ಸೇವೆ ಒದಗಿಸಲು ಅನುಮತಿ ನೀಡಲಾಗಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ನಿರ್ಧಾರದಿಂದ ತಡರಾತ್ರಿ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳಿಗೆ ಅನುಕೂಲವಾಗಲಿದ್ದು, ನಗರದ ವಿವಿಧ ಭಾಗಗಳಲ್ಲಿ ದೊಡ್ಡ ಪರದೆಗಳ ಮುಂದೆ ಹಾಗೂ ಹೋಟೆಲ್‌ಗಳಲ್ಲಿ ಗುಂಪುಗೂಡಿ ಪಂದ್ಯ ವೀಕ್ಷಿಸಲು ಅವಕಾಶ ಸಿಗಲಿದೆ. ಸಾಮಾನ್ಯವಾಗಿ ನಿಗದಿತ ಸಮಯದ ನಂತರ ಮುಚ್ಚುವ ಹೋಟೆಲ್‌ಗಳಿಗೆ ಈ ವಿಶೇಷ ದಿನಗಳಲ್ಲಿ ಹೆಚ್ಚುವರಿ ಅರ್ಧ ಗಂಟೆ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ಲಖ್ನೌ| ಮುಸ್ಲಿಂ ಯುವಕನ ಮೇಲೆ ಗುಂಪು ದಾಳಿ; ಧಾರ್ಮಿಕ ನಿಂದನೆ
ಫಿಫಾ ವಿಶ್ವಕಪ್ ಟೂರ್ನಿಯು ಈ ಬಾರಿ ಅಮೆರಿಕಾ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯುತ್ತಿದ್ದು, ಪ್ರಮುಖ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 12:30ಕ್ಕೆ ಆರಂಭವಾಗಲಿವೆ. ಇದರಿಂದ ಕ್ರೀಡಾಭಿಮಾನಿಗಳು ತಡರಾತ್ರಿ ಹೊರಗಡೆ ಸೇರಿ ಪಂದ್ಯ ವೀಕ್ಷಿಸುವ ಸಾಧ್ಯತೆ ಹೆಚ್ಚಾಗಿದೆ.
ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ, ಅಭಿಮಾನಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ.
ಪಂದ್ಯಾವಳಿಯ ವೇಳಾಪಟ್ಟಿಯ ಪ್ರಕಾರ, ಜುಲೈ 15ರಂದು ಡಲ್ಲಾಸ್‌ನಲ್ಲಿ ಫ್ರಾನ್ಸ್ ಮತ್ತು ಸ್ಪೇನ್ ನಡುವೆ ಮೊದಲ ಸೆಮಿಫೈನಲ್ ನಡೆಯಲಿದ್ದು, ಜುಲೈ 16ರಂದು ಅಟ್ಲಾಂಟದಲ್ಲಿ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದೆ. ಫೈನಲ್ ಪಂದ್ಯವು ಜುಲೈ 20ರಂದು ನ್ಯೂಯಾರ್ಕ್‌ನಲ್ಲಿ ಜರುಗಲಿದೆ.
ಈ ಕ್ರಮದಿಂದ ನಗರದಲ್ಲಿನ ಹೋಟೆಲ್ ಉದ್ಯಮಿಗಳಿಗೆ ಸಹ ಲಾಭವಾಗಲಿದ್ದು, ತಡರಾತ್ರಿ ಆಹಾರ ಸೇವನೆಗಾಗಿ ಹೊರ ಹೋಗುವ ಗ್ರಾಹಕರಿಗೂ ಅನುಕೂಲ ಕಲ್ಪಿಸಲಾಗಿದೆ.
ಇದನ್ನೂ ನೋಡಿ: “ಭೂಗಳ್ಳರ ಸರ್ಕಾರ!” ಜನಾಕ್ರೋಶ ಸಮಾವೇಶದಲ್ಲಿ ಜಿ.ಎನ್. ನಾಗರಾಜರ ಆಕ್ರೋಶ Janashakthi Media
