ಸಂಪುಟ 10 ಸಂಚಿಕೆ 3 ಜನವರಿ 17, 2016 ಪಿಡಿ ಸಂಪಾದಕೀಯ – ಪ್ರಕಾಶ್ ಕಾರಟ್
ಮೋದಿ ಸರಕಾರ ಎಡವಟ್ಟಾಗಿದೆ ಎಂಬುದನ್ನು ಸ್ವೀಕರಿಸಬೇಕು. ಇದು ಕೂಡ ಹಲವು ಕಳವಳಕಾರಿ ಪ್ರಶ್ನೆಗಳನ್ನು ಎತ್ತುತ್ತದೆ. ಇದನ್ನು ಪ್ರತಿಷ್ಠೆಯ ವಿಷಯವಾಗಿ ಮಾಡದೆ ಕೊರತೆಯನ್ನು ಒಪ್ಪಿಕೊಳ್ಳಬೇಕು ಮತ್ತು ಇಂತಹ ತಪ್ಪು ಇನ್ನು ಮುಂದೆ ಪುನರಾವರ್ತನೆಗೊಳ್ಳದಂತಾಗಲು ಒಂದು ಸೂಕ್ತವಾದ ತನಿಖೆ ನಡೆಸಬೇಕು.
ಇಸ್ಲಾಮಾಬಾದ್ಗೆ ಸುಷ್ಮಾ ಸ್ವರಾಜ್ ಅವರ ಭೇಟಿಯ ವೇಳೆಗೆ ಪಾಕಿಸ್ತಾನದೊಡನೆ ಮಾತುಕತೆಗಳು ಮತ್ತೆ ಆರಂಭಗೊಂಡಿವೆ ಎಂದು ಪ್ರಕಟಿಸಿ ನಾಲ್ಕು ವಾರಗಳೂ ಕಳೆದಿಲ್ಲ. ಅಷ್ಟರಲ್ಲೇ ಪಠಾಣಕೋಟ್ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಇಂತಹ ಒಂದು ದಾಳಿ ನಡೆಯಬಹುದೆಂದು ಗಡಿಯ ಆಚೆಯೂ ಈಚೆಯೂ ಹಲವು ವೀಕ್ಷಕರು ಮೊದಲೇ ಯೋಚಿಸಿದ್ದರು. ಲಾಹೋರಿಗೆ ಮೋದಿ ಭೇಟಿ ಬಹುಶಃ ದಾಳಿಯ ಯೋಜನೆಯನ್ನು ತ್ವರಿತಗೊಳಿಸಿತು.ಪಠಾಣಕೋಟ್ನ್ ಭಾರತೀಯ ವೈಮಾನಿಕ ಪಡೆಯ ನೆಲೆಯ ಮೇಲಿನ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಏಳು ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿಯ ಸಾವು ಸಂಭವಿಸಿದೆ. ಒಳಹೊಕ್ಕ ಆರು ಸಶಸ್ತ್ರ ಮಂದಿಯನ್ನು ಹೊರಗೆಳೆದು ಮುಗಿಸಲು ಮೂರೂವರೆ ದಿನಗಳು ಬೇಕಾದವು. ಕಳೆದ ವರ್ಷದಲ್ಲಿ ಎರಡು ಬಾರಿ ಮಾತುಕತೆಗಳನ್ನು ಹಿಂದಕ್ಕೆ ತಗೊಂಡ ನಂತರ ಮಾತುಕತೆಗಳನ್ನು ಪುನರಾರಂಭಿಸುವ ನಿಲುವಿನತ್ತ ಬಂದಿರುವ ಬಿಜೆಪಿ ಸರಕಾರ ಈಗ ಈ ದಾರಿಯಲ್ಲೇ ಮುಂದುವರೆಯಬೇಕು, ಉಗ್ರಗಾಮಿ-ಜಿಹಾದಿ ಗುಂಪುಗಳ ಕೈಮೇಲಾಗಲು ಬಿಡಬಾರದು.
ನಿಜ ಹೇಳಬೇಕೆಂದರೆ, ಪಠಾಣಕೋಟ್ ಘಟನೆ ಸರಕಾರದ ಕೈಗಳನ್ನು ಬಲಪಡಿಸಿದೆ, ಮಾತುಕತೆಗಳ ಅಜೆಂಡಾದಲ್ಲಿ ಭಯೋತ್ಪಾದನೆಯ ಪ್ರಶ್ನೆಯಲ್ಲಿ ಇದನ್ನು ಎತ್ತಿಕೊಳ್ಳಬಹುದು. ಪಾಕಿಸ್ತಾನೀ ಪ್ರಭುತ್ವ ಅಲ್ಲಿನ ಬೇಹುಗಾರಿಕೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಕೆಲವು ವಿಭಾಗಗಳ ಕೃಪಾಪೋಷಣೆ ಹೊಂದಿರುವ ಆ ಜಿಹಾದಿ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬುದನ್ನು ಈ ಘಟನೆ ಮತ್ತೆ ತೋರಿಸಿದೆ.
ಈಗಾಗಲೇ ರೂಪಿಸಿರುವ ಮಾತುಕತೆಗಳ ವೇಳಾ ಪಟ್ಟಿಗೆ ಬದ್ಧವಾಗಿರಬೇಕು. ಇದರಲ್ಲಿ ಭಯೋತ್ಪಾದನೆಯ ಪ್ರಶ್ನೆ ಆದ್ಯತೆ ಪಡೆಯುವಂತೆ ಮಾಡಬೇಕು. ಮಾತುಕತೆಗಳಿಂದ ಹಿಂದೆ ಸರಿದರೆ, ಅದು ಭಾರತದ ಸಾಮರಿಕ ಆಯ್ಕೆಗಳನ್ನು ಕುಂಠಿತಗೊಳಿಸುತ್ತದೆ ಮತ್ತು ಘರ್ಷಣೆಗಳು ಮತ್ತೆ ಆರಂಭವಾದರೆ ಅವು ಭಾರತದ ಆರ್ಥಿಕ ಚೇತರಿಕೆ ಮತ್ತು ಪ್ರಗತಿಗೆ ಬಾಧಕವಾಗುತ್ತವೆ.
ಇದು ಅಂಗೀಕರಿಸಬೇಕಾದ ಹೊರಗಣ ನಿಲುವಾದರೆ, ಈ ಭಯೋತ್ಪಾದನಾ ಕ್ರಿಯೆಗೆ ಗಲಿಬಿಲಿಯ ಮತ್ತು ನಿರ್ದಿಷ್ಟ ಗಮನವಿಲ್ಲದ ರೀತಿಯ ಪ್ರತಿಕ್ರಿಯೆಯ ವಿಮರ್ಶೆ ತುರ್ತಾಗಿ ಆಗಬೇಕಾಗಿದೆ. ಕೆಲವು ಭದ್ರತಾ ಪರಿಣಿತರು ಇದೊಂದು ಪತನ ಎಂದೇ ಹೇಳಿದ್ದಾರೆ. ಈ ಇಡೀ ಕಾರ್ಯಾಚರಣೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.
ಮೊದಲನೆಯದಾಗಿ, ಈ ದಾಳಿಯ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಬಂದಿತ್ತು. ಭಯೋತ್ಪಾದಕ ತಂಡ ಒಬ್ಬ ಪೊಲೀಸ್ ಸೂಪರಿಂಟೆಂಡೆಂಟ್ ಕಾರನ್ನು ಹೈಜಾಕ್ ಮಾಡಿತ್ತು, ಆ ಎಸ್ಪಿ ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಎಚ್ಚರಿಸಿದ್ದರು. ಇದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರ(ಎನ್ಎಸ್ಎ) ಮಟ್ಟದಲ್ಲಿ ಎತ್ತಿಕೊಳ್ಳಲು ಸಾಕಷ್ಟು ಸಮಯವಿತ್ತು. ವಾಯುನೆಲೆಯಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿ ಎನ್ಎಸ್ಎ ಅಜಿತ್ ದೋವಲ್ರವರ ಸೂಚನೆಯಂತೆ ಎನ್ಎಸ್ಜಿ ಕಮಾಂಡೋಗಳನ್ನು ವಿಮಾನದಲ್ಲಿ ಕರೆ ತರಲಾಯಿತು.
ಆದರೂ ಆರು ಭಯೋತ್ಪಾದಕರಿಗೆ ವಾಯುನೆಲೆಯ ಹೊರ ಆವರಣವನ್ನು ದಾಟಿ ಪ್ರವೇಶಿಲು ಸಾಧ್ಯವಾಗಿತ್ತು. ಪಠಾಣಕೋಟ್ನಲ್ಲಿ ಒಂದು ದೊಡ್ಡ ಸೇನಾನೆಲೆ ಇರುವಾಗ ಭಯೋತ್ಪಾದಕರ ಪತ್ತೆ ಕಾರ್ಯಾಚರಣೆಗೆ ಅವರನ್ನೇಕೆ ಕರೆಯಲಿಲ್ಲ? ಹೊರಾವರಣದ ರಕ್ಷಣೆಯ ಕೆಲಸವನ್ನು ನಿವೃತ್ತ ಮಿಲಿಟರಿ ಸಿಬ್ಬಂದಿ ಇರುವ ರಕ್ಷಣಾ ಭದ್ರತಾ ತಂಡಕ್ಕೆ ವಹಿಸಲಾಗಿದೆ. ಈ ದಾಳಿಯಲ್ಲಿ ಅತಿ ಹೆಚ್ಚು ಸಾವು-ನೋವು ಕಂಡದ್ದು ಈ ತಂಡವೇ. ವಿವಿಧ ಪಡೆಗಳು ಮತ್ತು ಏಜೆನ್ಸಿಗಳ ನಡುವೆ ಸರಿಯಾದ ಸಂಯೋಜನೆ ಇದ್ದಂತಿರಲಿಲ್ಲ. ಗೃಹ ಮಂತ್ರಿಗಳು ಮೊದಲ ದಿನದ ನಂತರ ಕಾರ್ಯಾಚರಣೆ ಯಶಶ್ವಿಯಾಗಿ ಮುಗಿದಿದೆ ಎಂದು ಘೋಷಿಸಿದರು. ನಂತರ ಅವರು ತನ್ನ ಈ ಟ್ವೀಟನ್ನು ಹಿಂತೆಗೆದುಕೊಳ್ಳಬೇಕಾಯಿತು. ಇದೇ ಈ ಸಮಸ್ತ ಕಾರ್ಯಾಚರಣೆಯನ್ನು ಹೇಗೆ ದಡ್ಡತನದಿಂದ ನಡೆಸಲಾಗಿದೆ ಎಂಬುದನ್ನು ತೋರಿಸುತ್ತದೆ.
ಮೋದಿ ಸರಕಾರ ಎಡವಟ್ಟಾಗಿದೆ ಎಂಬುದನ್ನು ಸ್ವೀಕರಿಸಬೇಕು, ಇದು ಕೂಡ ಹಲವು ಕಳವಳಕಾರಿ ಪ್ರಶ್ನೆಗಳನ್ನು ಎತ್ತುತ್ತದೆ. ಇದನ್ನು ಪ್ರತಿಷ್ಠೆಯ ವಿಷಯವಾಗಿ ಮಾಡದೆ ಕೊರತೆಯನ್ನು ಒಪ್ಪಿಕೊಳ್ಳಬೇಕು ಮತ್ತು ಇಂತಹ ತಪ್ಪು ಇನ್ನು ಮುಂದೆÀ ಪುನರಾವರ್ತನೆಗೊಳ್ಳದಂತಾಗಲು ಒಂದು ಸೂಕ್ತವಾದ ತನಿಖೆ ನಡೆಸಬೇಕು..
ಪಠಾಣ್ಕೋಟ್ ಭಯೋತ್ಪಾದಕ ದಾಳಿ:ಸಿಪಿಐ(ಎಂ)ಖಂಡನೆ
ಪಂಜಾಬಿನ ಪಠಾಣಕೋಟ್ನಲ್ಲಿರುವ ಭಾರತೀಯ ವಿಮಾನ ಪಡೆಯ ನೆಲೆಯ ಮೇಲೆ ಜನವರಿ 2ರ ಮುಂಜಾವಿನಲ್ಲಿ ಆರಂಭವಾದ ಭಯೋತ್ಪಾದಕ ದಾಳಿಯನ್ನು 36 ಗಂಟೆಗಳ ಕಾರ್ಯಾಚರಣೆಯ ನಂತರ ನಿಗ್ರಹಿಸಲಾಗಿದೆ ಎಂದು ಮಂಗಳವಾರದಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಯೋತ್ಪಾದಕರ ವಿರುದ್ಧದ ಈ ಕಾರ್ಯಾಚರಣೆಯಲ್ಲಿ ಏಳು ಮಂದಿ ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿ ಅಸು ನೀಗಿದ್ದಾರೆ. ಎಲ್ಲ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದೂ ತಿಳಿಸಲಾಗಿದೆ. ಈ ಮೊದಲು ಜನವರಿ 2ರ ರಾತ್ರಿಯ ಮೊದಲೇ ಕಾರ್ಯಾಚರಣೆ ಮುಗಿದಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಕಾರ್ಯಾಚರಣೆ ನಾಲ್ಕನೇ ದಿನದ ವರೆಗೂ ಮುಂದುವರೆಯಿತು.
ಈ ಭಯೋತ್ಪಾದಕ ದಾಳಿಯನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ ಹಾಗೂ ತಮ್ಮ ಕರ್ತವ್ಯ ನೆರವೇರಿಸುತ್ತ ಪ್ರಾಣಾರ್ಪಣೆ ಮಾಡಿದ ಧೀರರ ಕುಟುಂಬಗಳಿಗೆ ಅದು ಹಾರ್ದಿಕ ಸಂತಾಪವನ್ನು ವ್ಯಕ್ತಪಡಿಸಿದೆ.ಪಾಕಿಸ್ತಾನದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಿರುವ ನಿರ್ಣಯ ಕೈಗೊಂಡ ಬೆನ್ನ ಹಿಂದೆಯೇ ಈ ದಾಳಿ ಹೊಮ್ಮಿ ಬಂದಿದೆ. ಸಂವಾದದ ಪ್ರಕ್ರಿಯೆಯನ್ನು ಛಿದ್ರಗೊಳಿಸುವುದೇ ಇದರ ಆಶಯ ಎಂಬುದು ಸ್ವಯಂವೇದ್ಯ ಎಂದಿರುವ ಸಿಪಿಐ(ಎಂ) ಇಂತಹ ಛಿದ್ರಕಾರಿಗಳ ಹುನ್ನಾರಗಳನ್ನು ಸೋಲಿಸಬೇಕು, ಕೇಂದ್ರ ಸರಕಾರ ಸಂವಾದದ ಹಾದಿಯಲ್ಲಿ ಮುಂದುವರೆಯಬೇಕು ಎಂದು ಅಭಿಪ್ರಾಯ ಪಟ್ಟಿದೆ.
ಈ ಭಯೋತ್ಪಾದಕ ದಾಳಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ದಾಳಿ ಸಂಭವಿಸಬಹುದು ಎಂಬ ಬಗ್ಗೆ ಸಾಕಷ್ಟು ಗುಪ್ತಚರ ಮಾಹಿತಿಗಳನ್ನು ಒದಗಿಸಲಾಗಿತ್ತು, ಎಚ್ಚರವಾಗಿರಲೂ ಹೇಳಲಾಗಿತ್ತು ಎಂದು ತಿಳಿದು ಬಂದಿದೆ. ಆದರೂ ಭಯೋತ್ಪಾದಕ ತಂಡಕ್ಕೆ ವೈಮಾನಿಕ ನೆಲೆಯ ಆವರಣದಲ್ಲಿ ಪ್ರವೇಶಿಸುವುದು ಸಾಧ್ಯವಾಯಿತು. ಭಯೋತ್ಪಾದಕ ದಾಳಿಯನ್ನು ನಿಗ್ರಹಿಸಲು ನಾಲ್ಕು ದಿನಗಳು ಬೇಕಾದವು. ಈ ನಡುವೆ ಉನ್ನತ ಅಧಿಕಾರಸ್ಥರಿಂದ ಗೊಂದಲಕಾರಿ ಹೇಳಿಕೆಗಳು ಪರಿಸ್ಥಿತಿಯನ್ನು ಮಸುಕುಗೊಳಿಸಿದವು. ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ಆಗಬೇಕಾಗಿದೆ ಮತ್ತು ಈ ಘಟನೆಯಿಂದ ಪಾಠ ಕಲಿಯಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೋ ಹೇಳಿದೆ.