ಜಸ್ಟಿಸ್ ನಾಗಮೋಹನ್ ದಾಸ್ರ “ಮೆಮೋರೆಬಲ್ ಟ್ರಯಲ್ಸ್” ಪುಸ್ತಕ ಬಿಡುಗಡೆ
ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ರಚಿಸಿರುವ “ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು” ಕೃತಿಯ ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಪುಸ್ತಕ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳನ್ನು ಉಚಿತವಾಗಿ ಪಡೆಯುವುದಕ್ಕಿಂತ ಹಣ ಕೊಟ್ಟು ಖರೀದಿಸಿ ಓದುವ ಸಂಸ್ಕೃತಿ ಬೆಳೆಬೇಕು ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಹೆಚ್ಚು ಸಮಯ ದೊರೆಯಲಿರುವುದರಿಂದ ತಾವು ಕೂಡ ಹೆಚ್ಚಿನ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುವುದಾಗಿ ಹೇಳಿದರು.
ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನಿವೃತ್ತಿಯ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. 2018ರಲ್ಲಿ ಪ್ರಕಟಿಸಿದ ‘ಸಂವಿಧಾನ ಓದು’ ಕೃತಿ ಯುವಜನರಲ್ಲಿ ಸಂವಿಧಾನದ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಿದ್ದರಾಮಯ್ಯ ಪ್ರಶಂಸಿಸಿದರು.
ಇದನ್ನೂ ಓದಿ: ಸೇತುವೆ ಬದಲು ಬ್ಯಾನರ್: ಆದಿವಾಸಿಗಳಿಗೆ ದಾರಿ ಮುಚ್ಚಿದ ಆರೋಪ; ಇಲಾಖೆ ವಿರುದ್ಧ ಆಕ್ರೋಶ
ಸಂವಿಧಾನವು ವ್ಯಕ್ತಿಗಳಿಗಿಂತ ಶ್ರೇಷ್ಠವಾದದ್ದು. ಪ್ರತಿಯೊಬ್ಬ ನಾಗರಿಕರೂ ಅದರ ಮೌಲ್ಯಗಳು, ಆಶಯಗಳು ಹಾಗೂ ತತ್ವಗಳನ್ನು ತಿಳಿದುಕೊಳ್ಳಬೇಕು. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸಂವಿಧಾನದ ಆಶಯಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಬೇಕು. ಇಲ್ಲವಾದರೆ ಸಮಾಜದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
ಸಮಾಜದಲ್ಲಿ ಅಸಮಾನತೆ ಇನ್ನೂ ಮುಂದುವರಿದಿದ್ದು, ಅದನ್ನು ನಿವಾರಿಸಲು ಸಂವಿಧಾನದ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅಗತ್ಯ. ಇತಿಹಾಸ ತಿಳಿದಾಗ ಮಾತ್ರ ಭವಿಷ್ಯ ನಿರ್ಮಾಣ ಸಾಧ್ಯವೆಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ಅವರು ಸ್ಮರಿಸಿದರು.
“ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು” ಕೃತಿಯಲ್ಲಿ 21 ಪ್ರಮುಖ ಪ್ರಕರಣಗಳನ್ನು ಆಯ್ಕೆ ಮಾಡಿ, ದೇಶಕ್ಕಾಗಿ ಹೋರಾಡಿದವರ ಹಾಗೂ ಸಾಮಾನ್ಯ ಜನರ ಹಕ್ಕುಗಳಿಗಾಗಿ ನಡೆದ ಹೋರಾಟಗಳನ್ನು ವಿವರಿಸಲಾಗಿದೆ. ಇಂತಹ ಕೃತಿಗಳು ಜನರಲ್ಲಿ ಅರಿವು ಮೂಡಿಸಲು ಸಹಾಯಕವಾಗುತ್ತವೆ ಎಂದು ಹೇಳಿದರು.
ಸತ್ಯ ಮತ್ತು ಅಸತ್ಯವನ್ನು ಗುರುತಿಸುವ ಚಿಂತನೆ ಸಮಾಜದಲ್ಲಿ ಬೆಳೆಬೇಕು. ಮೌಢ್ಯಗಳನ್ನು ತಿರಸ್ಕರಿಸಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯ. ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದ ಅವರು, ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಸಮಾಜದಲ್ಲಿ ಸಮಾನತೆ ಮೂಡಬೇಕು ಎಂದು ಕರೆ ನೀಡಿದರು.
ಈ ಕೃತಿಯನ್ನು ಎಲ್ಲರೂ ಓದಿ, ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ನಾಗಮೋಹನ್ ದಾಸ್ ಅವರು ಇನ್ನಷ್ಟು ಕೃತಿಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಲೇಖಕಿ ತಸ್ರಿಮ್ ಮುಲ್ಲಾ, ಜಸ್ಟೀಸ್ ನಾಗಮೋಹನ್ ದಾಸ್, ಇಂಗ್ಲಿಷ್ ಆವೃತ್ತಿಯ ಅನುವಾದಕರಾದ ಬಿ.ಎಸ್.ಲೋಕೇಶ್ಚಂದ್ರ, ಜನ ಸಂಸ್ಕೃತಿ ಅಧ್ಯಯನ ಮತ್ತು ಪ್ರಕಾಶನದ ಬಿ.ರಾಜಶೇಖರಮೂರ್ತಿ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು
ಇದನ್ನೂ ನೋಡಿ: 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ
