ಕಳೆದ ಏಪ್ರಿಲ್ 1ರಂದು ಮೂರ್ಖರ ದಿನವೆನ್ನುತ್ತ ನಾವೆಲ್ಲ ಏಳುತ್ತಿದ್ದಾಗ ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಶೇಕಡಾ 20ರಷ್ಟು ಇಥೆನಾಲ್ ಬೆರೆಸಿದ ‘ಇ-20’ ಇಂಧನ ತುಂಬಿಕೊಂಡಿತು. ವ್ಯತ್ಯಾಸವೇ ತಿಳಿಯದ ಗ್ರಾಹಕರು ಅದನ್ನೇ ತಮ್ಮ ವಾಹನಗಳಿಗೆ ತುಂಬಿಸಿಕೊಂಡರು. ಅಂದಿನಿಂದ ಇ-20 ಬಳಕೆಯೇ ಎಲ್ಲೆಡೆ ಕಡ್ಡಾಯವಾಗಿದೆ. ಬೇರೆ ಆಯ್ಕೆ ಇಲ್ಲ.
– ನಾಗೇಶ ಹೆಗಡೆ
ಇಥೆನಾಲ್ ಅಂದರೆ ಬೆಲ್ಲದ ಕಾಕಂಬಿ ಇಲ್ಲವೆ ಮೆಕ್ಕೆ ಜೋಳ ಅಥವಾ ಹಳಸಲು ಅಕ್ಕಿಯನ್ನು ಬಟ್ಟಿ ಇಳಿಸಿದಾಗ ಸಿಗುವ ಅಲ್ಕೊಹಾಲ್. ಹಾಗೆಂದು ಅದು ಬಾಟಲಿಯಲ್ಲಿ ಪ್ರತ್ಯೇಕ ಮಾರಾಟಕ್ಕೆ ಸಿಗುತ್ತಿಲ್ಲ, ನೆನಪಿಡಿ! ಸರ್ಕಾರಿ ನಿರ್ದೇಶನದ ಪ್ರಕಾರ ತೈಲ ಕಂಪನಿಗಳೇ ಪೆಟ್ರೋಲಿಗೆ 20% ಅಲ್ಕೊಹಾಲನ್ನು ಬೆರೆಸಿರುತ್ತಾರೆ.
ಇದರ ವಿರುದ್ಧ ಪೆಟ್ರೋಲ್ ವಾಹನಗಳ ಬಳಕೆದಾರರ ಆಕ್ರೋಶ ಕಳೆದ ಮೂರು ತಿಂಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹೊಮ್ಮುತ್ತಿದೆ. ಅದರಲ್ಲಿ ಕೆಲಮಟ್ಟಿನ ಸತ್ಯಾಂಶ ಮತ್ತು ಅನೇಕ ಊಹಾಪೋಹಗಳಿವೆ. ಅಂಥ ಎಲ್ಲ ಟೀಕೆಗಳಿಗೆ ಉತ್ತರವಾಗಿ ಭಾರತ ಸರ್ಕಾರ ಮೊನ್ನೆ ಜುಲೈ 3ರಂದು ಹತ್ತು ಅಂಶಗಳ ಸ್ಪಷ್ಟೀಕರಣ ನೀಡಿದೆ. ಇಂದಿನ ಈ ಅಂಕಣದಲ್ಲಿ ಅವೆರಡರ ಹೋಲಿಕೆ, ಅದರಾಚಿನ ಕಣ್ಣೋಟ ಇದೆ.
ಇದನ್ನೂ ಓದಿ: ನೀರಿನ ಕೊರತೆ: 3 ಸ್ಟೇಡಿಯಂಗಳಲ್ಲಿ ಕ್ರೀಡೆ ನಿಷೇಧ
ಕ್ರಿಕೆಟ್‌ನಲ್ಲಿ ಟಿ-ಟ್ವೆಂಟಿ 2003ರಲ್ಲಿ ಆರಂಭವಾದ ಹಾಗೆ ಪೆಟ್ರೋಲಿನಲ್ಲಿ ಇಥೆನಾಲ್ ಮಿಶ್ರಣದ ಆಟವೂ ನಮ್ಮ ದೇಶದಲ್ಲಿ 2003ರಲ್ಲೇ ಪ್ರಾರಂಭವಾಯಿತು.
ಮೊದಮೊದಲು ಸಣ್ಣ ಪ್ರಮಾಣದಲ್ಲಿ ಕೆಲವೇ ಸೀಮಿತ ವಾಹನಗಳಿಗೆ ಮಿಶ್ರ ಇಂಧನವನ್ನು ಪ್ರಯೋಗಿಸಿ ನೋಡಲಾಯಿತು. ಇಥೆನಾಲ್ ಉತ್ಪಾದನೆ ಕೂಡ ಆಗ ಕಮ್ಮಿ ಇತ್ತು. ಪೆಟ್ರೋಲ್ ಹೊಗೆಯನ್ನು ಮತ್ತು ಹೊರೆಯನ್ನು ಕಮ್ಮಿ ಮಾಡುವ ಉದ್ದೇಶದಿಂದ ಇಥೆನಾಲ್ ಬೆರಕೆ ಮಾಡಬೇಕೆಂಬ ಸರಕಾರಿ ನಿಲುವು ಗಟ್ಟಿಯಾಗಲಿದೆ ಎಂಬ ವಾಸನೆ ಹಿಡಿದು ಸಕ್ಕರೆ ಕಾರ್ಖಾನೆಯ ಶಕ್ತಿಶಾಲಿ ಕುಳಗಳೂ ಕಾಕಂಬಿಯಿಂದ ಇಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುತ್ತ ಹೋದವು.
[ಕೋವಿಡ್ ಕಾಲದಲ್ಲಿ ಕಂಡಕಂಡ ಕಡೆ ಸಿಂಪಡನೆ ಮಾಡುತ್ತಿದ್ದ ‘ಸ್ಯಾನಿಟೈಸರ್’ ಅಂದರೆ ಮತ್ತೇನಲ್ಲ; ಇದೇ ಕಾಕಂಬಿ ಅಥವಾ ಕೊಳೆತ ಅಕ್ಕಿಯನ್ನು ಬಟ್ಟಿ ಇಳಿಸಿ ಪಡೆದ ಮದ್ಯಸಾರ].
ಪೆಟ್ರೋಲಿಗೆ ಇಥೆನಾಲ್ 20% ಸೇರ್ಪಡೆಯಿಂದ ಅನಾನುಕೂಲ ಆಗದಂತೆ ಪೆಟ್ರೋಲ್ ವಾಹನಗಳ ತಯಾರಕರೂ ಎಂಜಿನ್‌ನಲ್ಲಿ ತುಸು ತುಸು ಬದಲಾವಣೆ ಮಾಡುತ್ತ ಹೋದರು.
ಸುಧಾರಿತ ದೇಶಗಳೆಲ್ಲ ಇದೇ ಹಾದಿ ಹಿಡಿದಿದ್ದರಿಂದ ತಂತ್ರಜ್ಞಾನ ವರ್ಗಾವಣೆ ಕೂಡ ಸಮಸ್ಯೆ ಆಗಿರಲಿಲ್ಲ. ಅಮೆರಿಕವಂತೂ 15 ವರ್ಷಗಳ ಹಿಂದೆಯೇ ತನ್ನ ಹೆಚ್ಚುವರಿ ಇಥೆನಾಲನ್ನು ಭಾರತಕ್ಕೆ ತಂದು ಸುರಿಯಬೇಕೆಂದು ಹವಣಿಸಿ, ಇಲ್ಲಿನ ರಾಜಕಾರಣಿಗಳನ್ನೂ ಅಧಿಕಾರಿಗಳ ತಂಡವನ್ನೂ ತನ್ನಲ್ಲಿಗೆ ಕರೆಸಿ ಟೂರ್ ಹೊಡೆಸಿತ್ತು. ಆದರೆ ಇಥೆನಾಲನ್ನು ನಾವೇ ಉತ್ಪಾದಿಸುತ್ತೇವೆಂದು ನಮ್ಮ ಉದ್ಯಮಿಗಳು ತೊಡೆತಟ್ಟಿ ನಿಂತರು.
ಉತ್ಪಾದನೆ ಏರುತ್ತ ನಮ್ಮ ಅಗತ್ಯಕ್ಕಿಂತ ಹೆಚ್ಚಾಯಿತು. ಭಾರತದ ಉದ್ಯಮಿಗಳೇ ವಿದೇಶೀ ಮಾರುಕಟ್ಟೆಯನ್ನು ಹುಡುಕುವ ಪ್ರಸಂಗ ಬಂತು. ಸರಕಾರವೇನೋ ನಿಧಾನಕ್ಕೆ 2030ರ ವೇಳೆಗೆ ಸಾರ್ವತ್ರಿಕ ಇ-ಟ್ವೆಂಟಿಯನ್ನು ಕಡ್ಡಾಯ ಮಾಡಬೇಕೆಂದಿತ್ತು. ಆದರೆ ಇಥೆನಾಲ್ ಮಹಾಪೂರದ ಒತ್ತಡದಿಂದಾಗಿ ಐದು ವರ್ಷ ಮೊದಲೇ ಬೆರಕೆ ಪೆಟ್ರೋಲನ್ನು ದೇಶಕ್ಕೆಲ್ಲ ಹರಿಸಿತು. ಉದ್ಯಮಿಗಳು ಖುಷ್. ವಾಹನ ರಿಪೇರಿಯ ಮೆಕ್ಯಾನಿಕ್‌ಗಳೂ ಖುಷ್.
ಇತ್ತ ಖಾಸಗಿ ವಾಹನಗಳ ಬಳಕೆದಾರರು ಈ ಹಠಾತ್ ಬದಲಾವಣೆಗೆ ಸಿದ್ಧ ಇರಲಿಲ್ಲ. ತುಸುವೂ ಮುನ್ಸೂಚನೆ ನೀಡದೆ ‘ಇದೇನು ಇನ್ನೊಂದು ನೋಟ್ ಬಂದಿ, ಇದು ಇಂಧನ ಬಂದಿ!’ ಎಂದು ಕೆಲವರು ತಿವಿದರು.
ಇಥೆನಾಲ್ ಮಿಶ್ರಣದಿಂದಾಗಿ ’ಮೈಲೇಜ್ ಕಮ್ಮಿ ಆಯ್ತು, ಎಂಜಿನ್ ಹಾಳಾಯ್ತು‘ ಎಂದೆಲ್ಲ ಹಳೆಯ (2023ರ ಹಿಂದಿನ) ಗಾಡಿಗಳ ಮಾಲಿಕರು ದೂರತೊಡಗಿದರು. ಅವರ ಕೋಪಾಗ್ನಿಗೆ ಪೆಟ್ರೋಲ್ ಸುರಿದಂತೆ ಮೆಕ್ಯಾನಿಕ್‌ಗಳು ಅಂಥ ಗಾಡಿಗಳ ಮಾಮೂಲು ರಿಪೇರಿಗೂ ಬೆರಕೆ ಇಂಧನವನ್ನೇ ಬೈಯುತ್ತ ಜಾಸ್ತಿ ಶುಲ್ಕ ವಸೂಲು ಮಾಡತೊಡಗಿದರು.
ಎಂಜಿನ್‌ಗಳ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದ ವಾಹನದಾರರೂ ರಿಪೇರಿಗೆ ಹೆಚ್ಚು ಹಣ ತೆತ್ತೆನೆಂದು ರೀಲ್ಸ್ ಮಾಡತೊಡಗಿದರು.
ಕೆಲವರಂತೂ ‘ಇಥೆನಾಲ್ ಬೆರಕೆಯಿಂದಾಗಿ ಪೆಟ್ರೋಲ್ ಟ್ಯಾಂಕಿಗೆ ಇರುವೆ- ಜೇನ್ನೊಣ ಬರುತ್ತಿವೆ’ ಎಂದೆಲ್ಲ ರೀಲ್ ಬಿಡತೊಡಗಿದರು. ಇಥೆನಾಲ್ ನೀರನ್ನು ಹೀರುತ್ತದೆಂದೂ ಪೆಟ್ರೋಲ್ ಟ್ಯಾಂಕ್‌ಗೆ ತುಕ್ಕು ಹಿಡಿಯುತ್ತದೆಂದೂ ಆಕ್ಷೇಪಣೆ ಬಂತು. ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳಂತೂ ಸಕ್ಕರೆ ಕಾರ್ಖಾನೆಗಳ ಕೋಟ್ಯಧೀಶರೇ ಈ ಸಂಕಷ್ಟಗಳಿಗೆಲ್ಲ ಕಾರಣವೆಂದು ಹೇಳತೊಡಗಿದರು.
ಸಾರಿಗೆ ಸಚಿವ ಗಡ್ಕರಿಯವರ ಇಬ್ಬರು ಮಕ್ಕಳೇ ಇಥೆನಾಲ್ ಉದ್ಯಮಿಗಳಾಗಿದ್ದರಿಂದ ʻಬೆರಕೆ ಇಂಧನಕ್ಕೆ ವಿಶೇಷ ಒತ್ತು ಸಿಕ್ಕಿದೆ‘ ಎಂದರು. ಇನ್ನು ಕೆಲವರು ‘ಇಥೆನಾಲ್ ಘಟಕಗಳೇ ಮಾಲಿನ್ಯ ಹಬ್ಬಿಸುತ್ತಿವೆ’ ಎಂದರು. ಆಕ್ರೋಶ ವೈರಲ್ ಆಯಿತು.
ಹೀಗೆ ಇ-ಟ್ಟೆಂಟಿಯ ಟೀಕಾಕಾರರ ಕೈ ಮೇಲಾಗಿದ್ದರಿಂದ ಕೇಂದ್ರ ಸರ್ಕಾರ -ಈಗಾಗಲೇ ಗೆದ್ದು ಬೀಗುತ್ತಿದ್ದರೂ- ಮತ್ತೆ ಕಣಕ್ಕಿಳಿಯಿತು. ಹಳೇ ಗಾಡಿಗಳ ಮೈಲೇಜ್ ಮೊದಲಿಗಿಂತ ಅತ್ಯಲ್ಪ ಪ್ರಮಾಣದಲ್ಲಿ (ಶೇ.3ರಿಂ-10ರಷ್ಟು ಮಾತ್ರ) ಇಳಿಕೆ ಆದೀತೆಂದೂ ಎಂಜಿನ್ ಸವಕಳಿ ನಗಣ್ಯವೆಂದೂ ವಾಹನ ಉತ್ಪಾದಕರ ಮೂಲಕ ಹೇಳಿಸಿತು. ಕಳೆದ 20 ವರ್ಷಗಳಿಂದ ಪೆಟ್ರೋಲಿಗೆ ತುಸು ತುಸುವೇ ಅಲ್ಕೊಹಾಲ್ ಸೇರಿಸುತ್ತ, ವಾಹನಗಳ ಪರೀಕ್ಷೆ ಮಾಡಲಾಗುತ್ತಿದ್ದು ಎಂಜಿನ್‌ಗೆ ಏನೂ ತೊಂದರೆ ಇಲ್ಲವೆಂದು ಸಾರಿ ಹೇಳಿತು. ಚೀನಾ, ಬ್ರಝಿಲ್, ಜರ್ಮನಿ ಮುಂತಾದ ದೇಶಗಳಲ್ಲಿ ಸಮಸ್ಯೆಯೇ ಇಲ್ಲವೆಂದು ಮಾರುತಿ, ಟೊಯೊಟಾ ವಕ್ತಾರರು ಹೇಳಿದರು.
ಗೋದಾಮಿನಲ್ಲಿ ಕೊಳೆತು ಹಾಳಾಗುತ್ತಿದ್ದ ಅಕ್ಕಿಯಿಂದ ಇಥೆನಾಲ್ ತಯಾರಿಸಿ ಹೀಗೆ ಬೆರಕೆ ಮಾಡುವುದರಿಂದ ರಸ್ತೆಯ ಹೊಗೆ ಮಾಲಿನ್ಯ ಶೇ. 20ರಷ್ಟು ಕಡಿಮೆ ಆಗಿದೆ; ವಿದೇಶೀ ಆಮದು ಪೆಟ್ರೋಲ್ ವೆಚ್ಚದಲ್ಲಿ ₹1.4 ಲಕ್ಷ ಕೋಟಿ ಉಳಿತಾಯವಾಗಿದೆ; ಕಬ್ಬು, ಮೆಕ್ಕೆಜೋಳ ಬೆಳೆಗಾರರ ಆದಾಯ ₹1.2 ಲಕ್ಷ ಕೋಟಿ ಹೆಚ್ಚಾಗಿದೆ ಎಂತಲೂ ಆರ್ಥಿಕ ತಜ್ಞರು ಟಿವಿ ಚಾನೆಲ್‌ಗಳಲ್ಲಿ ಘೋಷಿಸಿದರು. [ಮೆಕ್ಕೆ ಜೋಳದಿಂದ ಮದ್ಯಸಾರವನ್ನು ಹಿಂಡಿ ತೆಗೆದ ಮೇಲೆ ಉಳಿಕೆ ಭಾಗವನ್ನು ಕೋಳಿ ಸಾಕಣೆದಾರರು ಒಯ್ಯುತ್ತಿದ್ದಾರೆ. ಖುಷಿಯಾಗಿದ್ದಾರೆ]
ಇಥೆನಾಲ್ ಉತ್ಪಾದಕ ಕಂಪನಿಗಳ ಸಂಖ್ಯೆ 385 ಮೀರಿದ್ದು, ಗಡ್ಕರಿ ಮಕ್ಕಳ ಕಂಪನಿಯ ಪಾಲು ಶೇಕಡಾ 1ಕ್ಕಿಂತ ಕಡಿಮೆ ಎಂಬ ಸಮಜಾಯಿಷಿ ಬಂತು. ರಾಷ್ಟ್ರದ ಅತಿ ಹೆಚ್ಚಿನ ಇಥೆನಾಲ್ ಉತ್ಪಾದನೆ ನಮ್ಮ ನಿರಾಣಿ ಒಡೆತನದ ಕಂಪನಿಯಿಂದ ಬರುತ್ತಿದೆ ಎಂಬುದೂ ಗೊತ್ತಾಯಿತು.
ಇ-ಟ್ವೆಂಟಿಯಿಂದಾಗಿ ಉದ್ಯಮಿಗಳಿಗೆ, ದೇಶಕ್ಕೆ ಅಷ್ಟೆಲ್ಲ ಅನುಕೂಲ ಆಗಿದ್ದೇ ಹೌದಾದರೆ ಇಂಧನದ ಬೆಲೆಯನ್ನು ಕೊಂಚವೂ ಇಳಿಸುತ್ತಿಲ್ಲವೇಕೆ?
ಬ್ರಝಿಲ್, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಚೀನಾ ದೇಶಗಳಲ್ಲಿ ಬಳಕೆದಾರರಿಗೆ ಬದಲೀ ಆಯ್ಕೆಗಳಿವೆ. ನಮ್ಮಲ್ಲೂ ಸಾಮಾನ್ಯ ಪೆಟ್ರೋಲ್ ಮತ್ತು ಇ-20 ಎರಡೂ ಸಿಗುವಂತೆ ಮಾಡಬಹುದಿತ್ತಲ್ಲ? ಒಂದನ್ನೇ ಕಡ್ಡಾಯ ಮಾಡಿದ್ದೇಕೆ? ಈ ಪ್ರಶ್ನೆಗಳಿಗೆ ಸಮಂಜಸ ಉತ್ತರ ಇದುವರೆಗಂತೂ ಬಂದಿಲ್ಲ.
ಬೆರಕೆ ಇಂಧನದಿಂದಾಗಿ ನಿಜಕ್ಕೂ ಎಂಜಿನ್‌ಗಳಿಗೆ ಹಾನಿ ಆಗುತ್ತಿದ್ದರೆ ರಸ್ತೆ ಪಕ್ಕದಲ್ಲಿ ಕೆಟ್ಟು ನಿಲ್ಲುವ ಕಾರುಗಳ ಸಂಖ್ಯೆ ಹೆಚ್ಚಬಹುದು, ಮೈಲೇಜ್ ಕಮ್ಮಿ ಆಗುವುದೇ ಹೌದಾದರೆ ಬೈಕ್‌ಗಳಲ್ಲಿ ಮನೆಮನೆ ಸುತ್ತುವ ಗಿಗ್ ಕಾರ್ಮಿಕರು ಬೀದಿಗಿಳಿದಾರು. ಮುಂದಿನ ಐದಾರು ತಿಂಗಳಲ್ಲಿ ಅದೇನೂ ಆಗಿಲ್ಲವೆಂದರೆ ಈಗಿನದು ತಾತ್ಕಾಲಿಕ ಆತಂಕವೆಂದು ಪರಿಗಣಿಸಿ, ಸರ್ಕಾರ ಇಥೆನಾಲ್ ಪ್ರಮಾಣವನ್ನು ಇನ್ನೂ ಹೆಚ್ಚಿಸುತ್ತ [ಇ-27], ಇ-85, ಇ-100 ಇಂಧನವನ್ನೂ ಹರಿಸಬಹುದು.
ಈ ಹಂತದಲ್ಲಿ ಸಮಚಿತ್ತದ ಚಿಂತನೆ ಏನಿರಬೇಕು?
ಹೌದು, ವಾಹನ ಮಾಲಿನ್ಯ ತುಸು ತಗ್ಗಲಿದೆ; ವಿದೇಶೀ ತೈಲ ಆಮದಿನಲ್ಲಿ ಉಳಿತಾಯ ಆಗಲಿದೆ. ಇಥೆನಾಲ್‌ನಿಂದಾಗಿ ರೈತರ ಆದಾಯ ಸ್ವಲ್ಪ ಹೆಚ್ಚಾಗುತ್ತದೆ; ಎಂಜಿನ್ ಸವಕಳಿ ತಡೆಯಬಲ್ಲ ಬದಲೀ ಬಿಡಿಭಾಗಗಳು ರೆಡಿ ಇವೆ. [ಅವುಗಳ ಬೆಲೆ ಕೇವಲ ₹350]
ಹಾಗೆಂದು ಇಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುತ್ತ ಹೋಗಬೇಕೆ?
ಕಬ್ಬು ಬೆಳೆಗೆ ತೀರಾ ಜಾಸ್ತಿ ನೀರು, ರಸಗೊಬ್ಬರ ಬೇಕು. ಅಣೆಕಟ್ಟುಗಳ ನೀರು ಸಾಲದೆಂದು ಅಂತರ್ಜಲಕ್ಕೆ ಕನ್ನ, ಮೋಡಬಿತ್ತನೆಗಾಗಿ ಬೇರೊಂದು ಜಿಲ್ಲೆಯ ಮೋಡಚೌರ್ಯ -ಇವೆಲ್ಲ ಅನರ್ಥಗಳೂ ಸಕ್ಕರೆ ಕಾರ್ಖಾನೆಯ ಮಾಲೀಕರ ಲಾಭಾಂಶವನ್ನು ಹೆಚ್ಚಿಸುತ್ತವೆ. ಇನ್ನೆಷ್ಟೊ ಲಕ್ಷ ಹೆಕ್ಟೇರುಗಳಿಗೆ ಕಬ್ಬು, ಮೆಕ್ಕೆಜೋಳ ವಿಸ್ತರಿಸುತ್ತದೆ. ಬರ ನೀಗಿಸುವ ಹೆಸರಲ್ಲಿ ಇನ್ನಷ್ಟು ನದಿ ಜೋಡಣೆ ಯೋಜನೆ ಬರಬಹುದು, ಅಂತರ್ಜಲ ಇನ್ನಷ್ಟು ಕುಸಿದು ನೆಲ ಬಂಜರಾಗಬಹುದು. ತಾಪಮಾನ ಏರಿಕೆ, ಎಲ್ ನೈನೊ ಪ್ರತಾಪ ಇನ್ನಷ್ಟು ತೀವ್ರವಾಗಬಹುದು.
ಇಂಥ ಸರಣಿ ಸಮಸ್ಯೆಗಳನ್ನು ಆರಂಭದಲ್ಲೇ ಚಿವುಟಿ ಹಾಕುವಂಥ ಯೋಜನೆಯೊಂದು 20 ವರ್ಷಗಳ ಹಿಂದೆ ಕರ್ನಾಟಕದಲ್ಲಿ ರೂಪುಗೊಂಡಿತ್ತು. ಆಹಾರದ್ರವ್ಯ ಬೆಳೆಯದ ಬಂಜರು ಭೂಮಿಯಲ್ಲಿ ಮಾತ್ರ ಇಂಧನಸಸ್ಯಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ‘ಜೈವಿಕ ಇಂಧನ ಮಂಡಳಿ’ ಆರಂಭವಾಗಿತ್ತು.
ಹೊಂಗೆ, ಬೇವು, ಸಿಮಾರೂಬಾ ಮತ್ತಿತರ ಹತ್ತಾರು ಬಗೆಯ ಖಾದ್ಯೇತರ ತೈಲಸಸ್ಯಗಳನ್ನು ಬರಡು ಭೂಮಿಯಲ್ಲಿ ಬೆಳೆಸಲೆಂದು ಮಾದರಿಯ ‘ಇಂಧನವನ’ಗಳನ್ನು ಅರಣ್ಯ ಇಲಾಖೆ ಅಲ್ಲಲ್ಲಿ ಸೃಷ್ಟಿಸಿತ್ತು. ಹಳ್ಳಿಗಳಲ್ಲಿ ಇಥೆನಾಲ್, ಬಯೊಡೀಸೆಲ್ ಉತ್ಪಾದನೆಯ ಪ್ರಯೋಗ ಕೂಡ ನಡೆದಿತ್ತು. ಅನೇಕ ಜಿಲ್ಲೆಗಳಲ್ಲಿ ಚಳವಳಿ ಮಾದರಿಯಲ್ಲಿ ವಿಚಾರ ಮಂಥನ ನಡೆದವು. ಪ್ರಚಾರಕ್ಕೆ ಮಾಹಿತಿಪತ್ರ, ಪುಸ್ತಕ, ವಿಡಿಯೊ ಅಷ್ಟೇ ಅಲ್ಲ, ಪೂರ್ಣಪ್ರಮಾಣದ ಸಿನೆಮಾ ಕೂಡ ತಯಾರಾಗಿತ್ತು.
[ ಬೇಳೂರು ಸುದರ್ಶನ ‘ಉರಿಯ ಸಿರಿ’ ಹೆಸರಿನ ಪುಸ್ತಕವನ್ನು ರಚಿಸಿದ್ದು, ಅದರಲ್ಲಿ ನಮಗೆ ಗೊತ್ತೇ ಇರದ, ಸಾಕಷ್ಟು ಎಣ್ಣೆ ಅಂಶವುಳ್ಳ ಅನೇಕ ಕಾಡು ಸಸ್ಯಗಳ ಪಟ್ಟಿಯನ್ನೂ ಕೊಟ್ಟಿದ್ದರು. ನಾನೊಂದು ಸಿನೆಮಾಕ್ಕೂ ಚಿತ್ರಕಥೆ ಬರೆದಿದ್ದೆ. ಜೈವಿಕ ಇಂಧನವನ್ನು ವಾಹನಕ್ಕೆ ಬಳಸಿದ ವಿಜ್ಞಾನಿಯನ್ನು ಪೆಟ್ರೋಲ್ ಕಂಪನಿಗಳು ಏಮಾರಿಸುವ ಕತೆಯುಳ್ಳ ‘ಸೂರ್ಯ’ ಹೆಸರಿನ ಫೀಚರ್ ಫಿಲ್ಮ್‌ಗೆ ನಾನು ಬರೆದ ಹಾಡಿಗೂ ಚಿತ್ರೀಕರಣವಾಗಿತ್ತು]
’ಜೈವಿಕ ಇಂಧನ ಮಂಡಳಿ‘ Biofuel Board ಈಗಲೂ ಇದೆ, ಹೆಸರಿಗಷ್ಟೆ. ಬಂಡವಾಳ ಇಲ್ಲ. ಉತ್ಸಾಹಿ ಕಾರ್ಯಪಡೆಯೂ ಉಳಿದಿಲ್ಲ.
ಹೋಗಲಿ, ರೈತರ ಕೃಷಿತ್ಯಾಜ್ಯಗಳನ್ನೇ ಯಂತ್ರದ ಮೂಲಕ ಸಾಂದ್ರಗೊಳಿಸಿ, ಸಹಕಾರಿ ವ್ಯವಸ್ಥೆಯಲ್ಲಿ ಹೋಬಳಿಮಟ್ಟದ ಗೋದಾಮುಗಳಲ್ಲಿ ಸಂಗ್ರಹಿಸುವ ವ್ಯವಸ್ಥೆ ಇದ್ದಿದ್ದರೆ ಇಥೆನಾಲ್ ಉದ್ಯಮಿಗಳನ್ನು ಸೆಳೆಯಲು ಸಾಧ್ಯವಿತ್ತು.
‘ಉದ್ಯಮಿಗಳು ಅಂಥವನ್ನು ಎತ್ತೊಯ್ಯಲು ಸಿದ್ಧರಿದ್ದಾರೆ. ಆದರೆ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಲು ಯಾರಿಗೂ ಇಷ್ಟವಿಲ್ಲ‘ ಎನ್ನುತ್ತಾರೆ, ಜೈವಿಕ ಇಂಧನತಜ್ಞ ವೈ.ಬಿ.ರಾಮಕೃಷ್ಣ.
[ಯಡ್ಯೂರಪ್ಪನವರ ಮೊದಲ ಆಡಳಿತ ಅವಧಿಯಲ್ಲಿ ‘ಜೈವಿಕ ಇಂಧನ ಮಂಡಳಿ’ ಕಾರ್ಯಾರಂಭ ಮಾಡಿದಾಗ ಇವರೇ ಅಧ್ಯಕ್ಷರಾಗಿದ್ದರು. ಮುಂದೆ ಅವರು ಕೇಂದ್ರ ಸರಕಾರದ ಜೈವಿಕ ಇಂಧನ ಸಲಹಾಮಂಡಳಿಯ ಮುಖ್ಯಸ್ಥರಾದರು. ಪಂಜಾಬಿನಲ್ಲಿ ಭತ್ತದ ಹುಲ್ಲನ್ನು ಸುಡುವುದನ್ನು ತಡೆಯಲು ಇವರು ಕೈಗೊಂಡ ಕ್ರಮ ಮಾದರಿಯದೆನಿಸಿದೆ].
ನಮಗಿಂದು ಸಮೃದ್ಧಿಯಲ್ಲೂ ಸಂದಿಗ್ಧ ಎದುರಾಗಿದೆ! ಭತ್ತ, ಜೋಳ, ಕಬ್ಬು, ಗೋಧಿ ಉತ್ಪಾದನೆ ಮೇರೆ ಮೀರಿದೆ. ಸರ್ಕಾರಿ ಆಹಾರ ನಿಗಮದ ಗೋದಾಮುಗಳು ತುಂಬಿ ತುಳುಕುತ್ತಿವೆ.
[ಗೋದಾಮುಗಳಲ್ಲಿ ಧಾನ್ಯಸಂಗ್ರಹಕ್ಕೆ ಜಾಗ ಇಲ್ಲದೆ, ಮಳೆಗೆ, ಹೆಗ್ಗಣ ಕಾಟಕ್ಕೆ ಸಿಕ್ಕು] ಪ್ರತಿವರ್ಷ ಲಕ್ಷಾಂತರ ಟನ್ ಆಹಾರಧಾನ್ಯ ಮುಗ್ಗುತ್ತಿದೆ. ಅಕ್ಕಿ ಕೆಟ್ಟಷ್ಟೂ ಇಥೆನಾಲ್ ಉದ್ಯಮಿಗಳ ಹೊಟ್ಟೆ ತಂಪಾಗುವಂಥ ವಿಪರ್ಯಾಸ ನಮ್ಮದಾಗಿದೆ.
[ಇಥೆನಾಲ್ ಬೇಡವೆಂದು ಘೋಷಣೆ ಕೂಗುವ ವಿಡಿಯೊಗಳನ್ನು ವೈರಲ್ ಮಾಡುವ ಬದಲು ನಮ್ಮ ಬೇಡಿಕೆ ಏನಿರಬೇಕು?
1. ಸಕ್ಕರೆ ಉದ್ಯಮಿಗಳಿಂದ ಇಥೆನಾಲ್ ಪಡೆಯುವುದನ್ನು ಕಡಿಮೆ ಮಾಡಿ, ಕ್ರಮೇಣ ನಿಲ್ಲಿಸಬೇಕು. ಅವರು ಬೇಕಿದ್ದರೆ ತಮ್ಮ ಉತ್ಪಾದನೆಯನ್ನು ಬೇರೆಡೆ ಮಾರಿಕೊಳ್ಳಲಿ.
2. ಚೀನಾದಲ್ಲಿ ಇಥೆನಾಲ್ ಉತ್ಪಾದನೆಗೆಂದೇ ಬಿದಿರನ್ನು ಬೆಳೆಸುತ್ತಾರೆ. ನಮ್ಮಲ್ಲೂ ಅಸ್ಸಾಮಿನ ಗೋಲಾಘಾಟ್ ಎಂಬಲ್ಲಿ ಫಿನ್ಲೆಂಡ್ ನೆರವಿನಿಂದ ಬಿದಿರಿನಿಂದ ಇಥೆನಾಲ್ ಉತ್ಪಾದನೆಯ ಬಹುದೊಡ್ಡ ಫ್ಯಾಕ್ಟರಿ ಇದೆ. ರೈತರಿಂದ ಅವರು ಬಿದಿರನ್ನು ಕೊಳ್ಳುತ್ತಾರೆ. ನಮ್ಮಲ್ಲೂ ಖರಾಬ್ ಜಮೀನಿನಲ್ಲಿ ಬಿದಿರು ಬೆಳೆಯಲು ರೈತರಿಗೆ ಪ್ರೇರಣೆ ನೀಡಬೇಕು. ಅದು ಪರಿಸರಸ್ನೇಹಿ ಕೆಲಸ. ಬಯೊಫ್ಯುಯೆಲ್ ಮಂಡಳಿ ಈ ಕೆಲಸಕ್ಕೆ ಮುಂದಾಗಬೇಕು.
3. ನಮ್ಮ ನಾಡಿನಲ್ಲಿ 13 ಲಕ್ಷ ಹೆಕ್ಟೇರ್ ಬಂಜರುಭೂಮಿ ಇದೆ. ಅಲ್ಲಿ ಬಿದಿರು ಮತ್ತು ಇಂಧನ ಸಸ್ಯಗಳನ್ನು ಬೆಳೆಯಲು ನೆಲಮೂಲದ ಶ್ರಮಜೀವಿಗಳಿಗೆ ಅವಕಾಶ ನೀಡಬೇಕು. ಕೃಷಿ/ಅರಣ್ಯ ವಿಜ್ಞಾನಿಗಳು ಸೂಕ್ತ ಬರನಿರೋಧಕ ತಳಿಗಳನ್ನು ಅವರಿಗೆ ನೀಡಬೇಕು. ಇದರಿಂದ ಜೇನು, ಪಕ್ಷಿ, ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತದೆ. ನೆಲ ಹಸಿರಾದರೆ ಅದರ ಅನುಕೂಲಗಳು ಹೇಳತೀರದಷ್ಟಿವೆ.
4. ಸರ್ಕಾರಿ ಗೋದಾಮುಗಳಲ್ಲಿ ಧಾನ್ಯಗಳ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಿ, ಇಥೆನಾಲ್ ಉತ್ಪಾದನೆಗೆ ಬೇಕಿದ್ದ ಮೂಲದ್ರವ್ಯಗಳನ್ನು ರೈತರಿಂದಲೇ ಪಡೆಯಬೇಕು.]
ಪೆಟ್ರೋಲ್, ಇಥೆನಾಲ್ ರಗಳೆಗಳೇ ಇಲ್ಲದ ಇಲೆಕ್ಟ್ರಿಕ್ ವಾಹನಗಳು ಬಂದಿವೆ. ಪರಿಸರಸ್ನೇಹಿ ಜಲಜನಕ ಇಂಧನವೂ ನಾಳೆ ಮುನ್ನೆಲೆಗೆ ಬರಲಿದೆ. ಸದ್ಯಕ್ಕೆ ಅದು ಅದಾನಿ ಅಖಾಡಾದಲ್ಲಿದೆ. ಕೃಷಿತ್ಯಾಜ್ಯದಿಂದ ನೇರವಾಗಿ ಜಲಜನಕ ಅನಿಲವನ್ನು ಉತ್ಪಾದಿಸಬಲ್ಲ ಯಂತ್ರವೊಂದು ಬೆಂಗಳೂರಿನ ಐಐಎಸ್‌ಸಿಯಲ್ಲಿ ಸಜ್ಜಾಗಿ ನಿಂತಿದೆ. ಹಳ್ಳಿಗೆ ಹೋಗಿ ಸೆತ್ತೆ-ಸದೆ ಸಂಗ್ರಹಿಸಿ ತರಬಲ್ಲ ಉದ್ಯಮಿಗಳಿಗಾಗಿ, ಸರ್ಕಾರಿ ಬೆಂಬಲಕ್ಕಾಗಿ ಅದು ಕಾಯುತ್ತ ನಿಂತಿದೆ.
ಸರ್ಕಾರವೊ ಹಳ್ಳಿಗರನ್ನೇ ಗುಳೆ ಎಬ್ಬಿಸಿ ನಗರಕ್ಕೆ ತಳ್ಳುವ ಹೊಸಹೊಸ ವ್ಯೂಹ ರಚಿಸುತ್ತ ನಿಂತಿದೆ.
ಇದನ್ನೂ ನೋಡಿ: SIR ಕರ್ನಾಟಕ | ಕೆಲಸದ ಒತ್ತಡ, ಅಪಪ್ರಚಾರ: ಎಸ್‌ಐಆರ್ ಕೆಲಸದ ನೋವು ಬಿಚ್ಚಿಟ್ಟ ಬಿಎಲ್‌ಒ Janashakthi Media
