ಮಹಾರಾಷ್ಟ್ರ: ಮುಂಬೈ ಸೇರಿದಂತೆ ಹಲವು ಭಾಗಗಳು ಭಾರಿ ಮುಂಗಾರು ಮಳೆಯಿಂದ ಜಲಾವೃತವಾಗಿರುವ ನಡುವೆಯೇ, ರಾಜ್ಯದ ದೊಡ್ಡ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಮುಂದುವರಿದಿದೆ ಎಂದು ಮಹಾರಾಷ್ಟ್ರ ಸರ್ಕಾರ ಜುಲೈ 8ರಂದು ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ. ರಾಜ್ಯದ 1,200ಕ್ಕೂ ಹೆಚ್ಚು ಗ್ರಾಮಗಳು ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ. ಮಹಾರಾಷ್ಟ್ರ
ಕಾಂಗ್ರೆಸ್ ಶಾಸಕ ಅಮಿತ್ ದೇಶಮುಖ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ಗುಲಾಬ್ರಾವ್ ಪಾಟೀಲ್, ರಾಜ್ಯದಲ್ಲಿ ವ್ಯಾಪಕ ನೀರಿನ ಕೊರತೆ ಇದೆ ಎಂಬ ದೇಶಮುಖ್ ಅವರ ಆರೋಪ “ಭಾಗಶಃ ಸತ್ಯ” ಎಂದು ಒಪ್ಪಿಕೊಂಡರು. ಮಹಾರಾಷ್ಟ್ರ
ಜೂನ್ 22ರ ವರದಿ ಪ್ರಕಾರ, ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ 25 ಜಿಲ್ಲೆಗಳು ನೀರಿನ ಕೊರತೆ ಎದುರಿಸುತ್ತಿವೆ. 1,279 ಗ್ರಾಮಗಳು ಮತ್ತು 3,389 ಸಣ್ಣ ವಸತಿಗಳಿಗೆ 1,413 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿಯ ಸಾವು ಪ್ರಕರಣ – ಬಿಜೆಪಿ ಮುಖಂಡ ಸೇರಿ ಮೂವರ ಬಂಧನ
ಸರ್ಕಾರದ ವರದಿಗಳಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳ ಸಂಖ್ಯೆ 2,285 ಎಂದು ಉಲ್ಲೇಖಿಸಲಾಗಿದೆ. ಆದರೆ ವಾಸ್ತವದಲ್ಲಿ ಈ ಸಂಖ್ಯೆ 8,000ರಿಂದ 9,000ದವರೆಗೆ ಇದೆ ಎಂದು ಅಮಿತ್ ದೇಶಮುಖ್ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀರಿನ ಕೊರತೆಯಿಂದ ಬಾಧಿತವಾಗಿರುವ 12,406 ಗ್ರಾಮಗಳು ಮತ್ತು ವಸತಿಗಳಿಗೆ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಖಾಸಗಿ ಬಾವಿಗಳನ್ನು ಬಳಕೆಗೆ ಪಡೆಯುವುದು, ನೀರು ಪೂರೈಕೆ ಯೋಜನೆಗಳು ಮತ್ತು ಸಾರ್ವಜನಿಕ ಕೊಳವೆಗಳ ದುರಸ್ತಿ ಹಾಗೂ ತುರ್ತು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಆಗಸ್ಟ್ 31ರವರೆಗೆ ಅಣೆಕಟ್ಟುಗಳ ನೀರಿನ ಬಳಕೆಯನ್ನು ಎಚ್ಚರಿಕೆಯಿಂದ ಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಮುಂಬೈನಲ್ಲಿ ಪ್ರವಾಹ, ಮರಾಠವಾಡದಲ್ಲಿ ಬರದ ಸಂಕಷ್ಟ
ಜುಲೈ ಆರಂಭದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮುಂಬೈ ಮತ್ತು ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ, ಮುಂಗಾರು ಮಳೆಯ ಅಸಮಾನ ಹಂಚಿಕೆಯಿಂದ ಬರಪೀಡಿತ ಮರಾಠವಾಡ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದೆ.
ಎಂಟು ಜಿಲ್ಲೆಗಳನ್ನು ಒಳಗೊಂಡಿರುವ ಮರಾಠವಾಡದಲ್ಲಿ ಈ ಮುಂಗಾರು ಅವಧಿಯಲ್ಲಿ ಇದುವರೆಗೆ 158.4 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 182.1 ಮಿ.ಮೀ ಮಳೆಯಾಗಬೇಕಿದ್ದು, ಈ ಬಾರಿ ಶೇ.87ರಷ್ಟು ಮಾತ್ರ ಮಳೆಯಾಗಿದೆ.
ಲಾತೂರ್ ಜಿಲ್ಲೆಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾಮಾನ್ಯ ಮಳೆಯ ಪ್ರಮಾಣದ ಶೇ.64.2ರಷ್ಟು ಮಾತ್ರ ದಾಖಲಾಗಿದೆ. ನಂತರ ಪರಭಣಿ ಶೇ.64.7, ಹಿಂಗೋಳಿ ಶೇ.77 ಮತ್ತು ನಾಂದೇಡ್ ಶೇ.77.2ರಷ್ಟು ಮಳೆ ಪಡೆದಿವೆ.
ಬೀಡ್ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯ ಶೇ.91ರಷ್ಟು, ಧಾರಾಶಿವದಲ್ಲಿ ಶೇ.94ರಷ್ಟು ಮಳೆಯಾಗಿದ್ದರೆ, ಛತ್ರಪತಿ ಸಂಭಾಜಿನಗರ ಮತ್ತು ಜಲ್ನಾ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.106.9 ಮತ್ತು ಶೇ.114ರಷ್ಟು ಅಧಿಕ ಮಳೆಯಾಗಿದೆ.
ಆದರೆ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾದರೂ, ಮರಾಠವಾಡದ ಜಲಾಶಯಗಳ ನೀರಿನ ಮಟ್ಟ ಇನ್ನೂ ಆತಂಕಕಾರಿ ಸ್ಥಿತಿಯಲ್ಲಿದೆ.
ಪ್ರದೇಶದ 11 ಪ್ರಮುಖ ಅಣೆಕಟ್ಟುಗಳಲ್ಲಿ ಒಟ್ಟು ನೀರಿನ ಸಂಗ್ರಹ ಶೇ.34.21ರಷ್ಟಿದ್ದು, ಕಳೆದ ವರ್ಷದ ಇದೇ ಅವಧಿಯ ಶೇ.49.86ಕ್ಕೆ ಹೋಲಿಸಿದರೆ ಭಾರಿ ಕುಸಿತ ಕಂಡಿದೆ.
ಧಾರಾಶಿವದ ಸೀನಾ ಕೊಲೇವಾಡ್ ಅಣೆಕಟ್ಟು ಸಂಪೂರ್ಣ ಬತ್ತಿಹೋಗಿದ್ದು, ಪ್ರದೇಶದ ಅತಿದೊಡ್ಡ ಜಲಾಶಯವಾದ ಜಾಯಕವಾಡಿ ಅಣೆಕಟ್ಟಿನಲ್ಲಿ ಶೇ.28.69ರಷ್ಟು ಮಾತ್ರ ನೀರು ಉಳಿದಿದೆ.
103 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು
ಮರಾಠವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು, ಜಲ್ನಾ, ಪರಭಣಿ, ನಾಂದೇಡ್, ಬೀಡ್ ಮತ್ತು ಲಾತೂರ್ ಜಿಲ್ಲೆಗಳ 103 ಗ್ರಾಮಗಳು ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ.
ವಿಪರ್ಯಾಸವೆಂದರೆ, ಈ ಋತುವಿನಲ್ಲಿ ಮರಾಠವಾಡದಲ್ಲೇ ಅತಿ ಹೆಚ್ಚು ಮಳೆ ಪಡೆದಿರುವ ಜಲ್ನಾ ಜಿಲ್ಲೆಯಲ್ಲಿ ಅತಿ ಹೆಚ್ಚು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಜಲ್ನಾದ 20 ಗ್ರಾಮಗಳು ಮತ್ತು 32 ವಸತಿಗಳಿಗೆ 107 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಬೀಡ್ ಜಿಲ್ಲೆಯಲ್ಲಿ 21 ಗ್ರಾಮಗಳು ಮತ್ತು 36 ವಸತಿಗಳಿಗೆ 65 ಟ್ಯಾಂಕರ್‌ಗಳು ಕಾರ್ಯನಿರ್ವಹಿಸುತ್ತಿವೆ.
ನಾಂದೇಡ್, ಪರಭಣಿ ಮತ್ತು ಲಾತೂರ್ ಜಿಲ್ಲೆಗಳಲ್ಲಿ ಕ್ರಮವಾಗಿ 15, 12 ಮತ್ತು ಒಂದು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಕುಡಿಯುವ ನೀರಿನ ಪೂರೈಕೆಯನ್ನು ಹೆಚ್ಚಿಸಲು ಆಡಳಿತವು 882 ಬಾವಿಗಳನ್ನು ವಶಕ್ಕೆ ಪಡೆದಿದ್ದು, ಇವುಗಳ ಮೂಲಕ ಪ್ರದೇಶದ 691 ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ನಾಂದೇಡ್ ಜಿಲ್ಲೆಯಲ್ಲಿ ಅತಿ ಹೆಚ್ಚು 247 ಬಾವಿಗಳನ್ನು ಬಳಕೆಗೆ ಪಡೆಯಲಾಗಿದೆ.
ಇದನ್ನೂ ನೋಡಿ: ಎಸ್‌ಐಆರ್ ವಿರುದ್ಧ ರಾಜ್ಯವ್ಯಾಪಿ ಕಾವಲು ಸಮಿತಿ | ಮತದಾರರ ಹಕ್ಕು ರಕ್ಷಣೆಗೆ ಹೋರಾಟJanashakthi Media
