ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದ ಪರಿಣಾಮ ಒಬ್ಬರು ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಬುಧವಾರ ಸಂಜೆ ರೋಹಿಣಿಯ ಎಂಸಿಡಿ ಶಾಲೆ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಏಕಾಏಕಿ ಭಾರೀ ಸದ್ದಿನೊಂದಿಗೆ ಕುಸಿದಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಭಯಭೀತರಾಗಿದ್ದು, ಅನೇಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ರಕ್ಷಣಾ ಸಿಬ್ಬಂದಿ ಬರುವ ಮುನ್ನವೇ ಸ್ಥಳೀಯರು ಸಲಗೆ, ಕಬ್ಬಿಣದ ರಾಡ್ಗಳ ಸಹಾಯದಿಂದ ಇಟ್ಟಿಗೆ ಹಾಗೂ ಕಾಂಕ್ರೀಟ್ ಅವಶೇಷಗಳನ್ನು ತೆರವುಗೊಳಿಸಲು ಮುಂದಾದರು.
ನಂತರ ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯನ್ನು ಕೈಗೊಂಡರು. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಮತ್ತೊಬ್ಬರ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಇದನ್ನೂ ಓದಿ : ಮಹಾರಾಷ್ಟ್ರ | ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3,000 ಎಲ್ಪಿಜಿ ಸಿಲಿಂಡರ್ಗಳು
ರಕ್ಷಣಾ ಕಾರ್ಯಕ್ಕಾಗಿ ಅಗ್ನಿಶಾಮಕ ಇಲಾಖೆಯ ನಾಲ್ಕು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಅವಶೇಷಗಳಡಿ ಸಿಲುಕಿರುವವರು ಧೈರ್ಯ ಕಳೆದುಕೊಳ್ಳದಂತೆ ಸಿಬ್ಬಂದಿ ನಿರಂತರವಾಗಿ ಧ್ವನಿವರ್ಧಕಗಳ ಮೂಲಕ ಸಂಪರ್ಕ ಸಾಧಿಸಿ, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸುತ್ತಿದ್ದಾರೆ.
ಕಟ್ಟಡ ಕುಸಿತಕ್ಕೆ ನಿಖರ ಕಾರಣವನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಸುರಿದ ಭಾರಿ ಮಳೆಯಿಂದ ನಿರ್ಮಾಣ ಹಂತದ ಕಟ್ಟಡದ ರಚನೆ ದುರ್ಬಲಗೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಳೆ ಮತ್ತು ಕೆಸರಿನಿಂದ ಕೂಡಿದ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿದ್ದು, ಕಟ್ಟಡದ ಉಳಿದ ಭಾಗವೂ ಕುಸಿಯುವ ಅಪಾಯ ಇರುವುದರಿಂದ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ : ರಾಮ ಮಂದಿರ ಟ್ರಸ್ಟ್ ಹಗರಣ: ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ? ಹೊಣೆ ಹೊರುವರೇ ಮೋದಿ? MG ಹೆಗಡೆ | ಗುರುರಾಜ ದೇಸಾಯಿ
