ಬೆಂಗಳೂರು: ಆಪ್ ಆಧಾರಿತ ಕ್ಯಾಬ್ ಸೇವೆಗಳಾದ ಓಲಾ ಮತ್ತು ಉಬರ್ ವಿರುದ್ಧ ಟ್ಯಾಕ್ಸಿ ಹಾಗೂ ಆಟೋ ಚಾಲಕರ ಅಸಮಾಧಾನ ತೀವ್ರಗೊಂಡಿದ್ದು, ಜುಲೈ 13ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಟ್ಯಾಕ್ಸಿ ಮತ್ತು ಆಟೋ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕ್ಯಾಬ್
ಚಾಲಕರ ಆರೋಪದ ಪ್ರಕಾರ, ಸರ್ಕಾರ ನಿಗದಿಪಡಿಸಿದ ಪ್ರತಿ ಕಿಲೋಮೀಟರ್ಗೆ ₹24 ಬದಲು ಕಂಪನಿಗಳು ಕೇವಲ ₹17 ಮಾತ್ರ ಪಾವತಿಸುತ್ತಿವೆ. ಇದರಿಂದ ದಿನರಾತ್ರಿ ದುಡಿಯುವ ಚಾಲಕರಿಗೆ ಸಮರ್ಪಕ ಆದಾಯ ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುತೇಕ ಚಾಲಕರು ಸಾಲ ಪಡೆದು ಹೊಸ ಅಥವಾ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಿ ಈ ಸೇವೆಗಳೊಂದಿಗೆ ಸಂಯೋಜಿಸಿದ್ದಾರೆ. ಆದರೆ ಕಡಿಮೆ ಪಾವತಿಯಿಂದ EMI, ಇಂಧನ ವೆಚ್ಚ ಮತ್ತು ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: UGC-NET ಅಕ್ರಮ ಆರೋಪ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ
ಕೆಲವರು ಪ್ರತಿಭಟನೆಯ ಭಾಗವಾಗಿ ಬುಕಿಂಗ್ಗಳನ್ನು ರದ್ದು ಮಾಡಿ ನೇರವಾಗಿ ಪ್ರಯಾಣಿಕರಿಂದ ಹಣ ಪಡೆಯುತ್ತಿರುವ ಘಟನೆಗಳೂ ವರದಿಯಾಗಿವೆ. ಪ್ರಯಾಣಿಕರು ಕ್ಯಾನ್ಸಲ್ ಮಾಡಿದರೆ ಕಂಪನಿಗಳು ₹25 ದಂಡ ವಿಧಿಸುವುದರಿಂದ ಚಾಲಕರು ಈ ರೀತಿಯ ಕ್ರಮಕ್ಕೆ ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ, ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆಗೆ ಸಂಬಂಧಿಸಿದ ಹೆಚ್ಚುವರಿ ವೆಚ್ಚಕ್ಕೂ ಚಾಲಕರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇತ್ತೀಚೆಗೆ ದೇಶವ್ಯಾಪಿ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆಗಳು ನಡೆದಿದ್ದವು.
ಜುಲೈ 13ರಂದು ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆ ದಿನ ಖಾಸಗಿ ವಾಹನಗಳ ಬಳಕೆ ಹೆಚ್ಚಾಗುವ ಸಾಧ್ಯತೆ ಇದ್ದು, ನಮ್ಮ ಮೆಟ್ರೋ ಹಾಗೂ BMTC ಬಸ್ ಸೇವೆಗಳಲ್ಲಿ ಜನಸಂದಣಿ ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನೂ ನೋಡಿ: ನವ ಉದಾರವಾದಿ ಆರ್ಥಿಕತೆಯಲ್ಲಿ ನಿರುದ್ಯೋಗದ ಬಿಕ್ಕಟ್ಟು -ನಾಗರಾಜ ಶಾನಭೋಗ Janashakthi Media
