ಉತ್ತರಪ್ರದೇಶ ಸರ್ಕಾರ ಆರಂಭದಲ್ಲಿ ಹಗರಣದ ವರದಿಗಳನ್ನು ತಳ್ಳಿ ಹಾಕಲು ಪ್ರಯತ್ನಿಸಿದರೂ, ಆಮೇಲೆ ಕೆಲವು ಪೊಲೀಸ್ ಕ್ರಮವನ್ನು ತೆಗೆದುಕೊಳ್ಳಲೇ ಬೇಕಾಗಿ ಬಂತು ಹಾಗೂ ಎಸ್ಐಟಿ ರಚಿಸಲೇ ಬೇಕಾಯಿತು. ಆದರೆ, ಪ್ರಧಾನ ಮಂತ್ರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳೇ ಸ್ವತಃ ಟ್ರಸ್ಟ್ ಜತೆ ನಿಕಟವಾಗಿ ಸಹಯೋಗ ಹೊಂದಿರುವುದರಿಂದ ಯಾವುದೇ ಕಾರ್ಯಾಂಗ ತನಿಖೆಯು ವಿಶ್ವಾಸಾರ್ಹವಾಗಿರುವುದಿಲ್ಲ. ಕೋಟಿಗಟ್ಟಲೆ ಭಕ್ತರ ನಂಬಿಕೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಆರ್ಎಸ್ಎಸ್-ಬಿಜೆಪಿ ಈಗಲೂ ಅಧಿಕಾರದಲ್ಲಿ ಮುಂದುವರಿದಿದೆ. ಯಾವ ಕೋಟ್ಯಂತರ ಮಂದಿಯ ನಂಬಿಕೆಯ ಹೆಸರಿನಲ್ಲಿ ಈ ಆಳ್ವಿಕೆ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಹಿಡಿದುಕೊಂಡಿದೆಯೋ ಆ ಕೋಟ್ಯಂತರ ಶ್ರದ್ಧಾವಂತರ ನಂಬಿಕೆಗೆ ಮಾನ್ಯತೆ ನೀಡಿ ತಕ್ಷಣವೇ ಒಂದು ನ್ಯಾಯಾಂಗ ತನಿಖೆಯನ್ನು ಆರಂಭಿಸಬೇಕು. ಇದು ಈ ನೆಲದ ಕಾನೂನು ಮತ್ತು ನಮ್ಮ ಸಾಂವಿಧಾನಿಕ ಚೌಕಟ್ಟಿನ ಕನಿಷ್ಠ ಆಗ್ರಹ.
ನೀಲೋತ್ಪಲ್ ಬಸು
ಕನ್ನಡಕ್ಕೆ: ವಿಶ್ವ
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಉತ್ತರ ಪ್ರದೇಶದ ಆದಿತ್ಯನಾಥ ಸರ್ಕಾರದ ಭಾರಿ ಪ್ರಯತ್ನಗಳ ಹೊರತಾಗಿಯೂ ಹಿಂದುತ್ವ ಪಡೆಯ ಮುಖಕ್ಕೆ ಹೊಡೆಯುವ ರೀತಿಯಲ್ಲಿ ದೊಡ್ಡ ಹಗರಣವೊಂದು ಸ್ಫೋಟಗೊಂಡಿದೆ. ಕಳೆದ ಎರಡುವರೆ ದಶಕಗಳಲ್ಲಿ ಚುನಾವಣಾ ಲಾಭಗಳನ್ನು ನಗದೀಕರಿಸಿಕೊಳ್ಳಲು ಬಿಜೆಪಿಯ ಬ್ಲಾಂಕ್ ಚೆಕ್ನಂತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಬಹುದೊಡ್ಡ ರಾಜಕೀಯ ಯೋಜನೆಯು ಅಂತಿಮವಾಗಿ ಅವರ ಅತ್ಯಂತ ದೊಡ್ಡ ಮುಜುಗರದ ವಿಚಾರವಾಗಿ ಪರಿಣಮಿಸಿದೆ.
ಆರ್ಎಸ್ಎಸ್ ಮತ್ತು ಅದರ ಸೈದ್ಧಾಂತಿಕ ಕಾಲಾಳುಗಳು ನಡೆಸಿದ ಕಳವು ಹಾಗೂ ದುರುಪಯೋಗದ ವಿಚಾರವು ಅಧಿಕಾರದ ವಲಯಗಳಲ್ಲಿ ತಗ್ಗಿದ ದನಿಯಲ್ಲಿ ಚರ್ಚೆಯಾಗುತ್ತಿದ್ದರೆ ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ನೀಡಲಾದ ನಗದು ಮತ್ತು ಅಮೂಲ್ಯ ವಸ್ತುಗಳ ಕಳ್ಳತನ ನಿಯಮಿತವಾಗಿ ನಡೆದಿರುವುದು ಎಳ್ಳಷ್ಟೂ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಪದೇ ಪದೇ ಕಳ್ಳತನವಾಗಿರುವುದು ಗಮನಕ್ಕೆ ಬಂದಿಲ್ಲ ಅಥವಾ ಅದನ್ನು ಮುಚ್ಚಿಹಾಕಲಾಗಿದೆ ಎನ್ನುವ ವಾಸ್ತವತೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗಮನಿಸಿದೆ. ತಪ್ಪು ನಡೆದಿದ್ದು ಬಹಿರಂಗಗೊಂಡ ನಂತರ ಎಸ್ಐಟಿ ರಚಿಸಬೇಕಾದ ಒತ್ತಡಕ್ಕೆ ರಾಜ್ಯ ಸರ್ಕಾರ ಒಳಗಾಗಿತ್ತು. ಕಳವು ಮತ್ತು ಕಳವಾದ ಸ್ವಲ್ಪ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆಯೆಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ಇಷ್ಟೊಂದು ಅಗಾಧ ಪ್ರಮಾಣದ ಕ್ರಿಮಿನಲ್ ಕೃತ್ಯವು ಒಂದು ಗಣನೀಯ ಅವಧಿಯಲ್ಲಿ ಯಾರ ಗಮನಕ್ಕೂ ಬಾರದೇ ಹೇಗೆ ನಡೆಯಿತು ಎನ್ನುವುದು ಸ್ಪಷ್ಟವಾಗಿಲ್ಲ. 2020ರಲ್ಲಿ ರಚಿಸಲಾದ ಶ್ರೀ ರಾಮ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಉನ್ನತಾಧಿಕಾರಿಗಳ ಗಮನಕ್ಕೆ ಬಾರದೇ ಇಂಥ ಕೃತ್ಯ ಮುಂದುವರಿಯಲು ಸಾಧ್ಯವೇ ಎಂಬ ಇನ್ನೊಂದು ಪ್ರಶ್ನೆಯೂ ಎದುರಾಗಿದೆ.
ದೇವರಿಗೆ ಅರ್ಪಿಸಿದ ನಗದು ಹಾಗೂ ಆಭರಣಗಳು ಕಳವಾಗಿದ್ದು ತುಂಬಾ ಗಂಭೀರವಾದ ವಿಚಾರವೇ ಹೌದು. ಆದರೆ, ಕೋಟ್ಯಂತರ ಜನರ ನಂಬಿಕೆಗೆ ವಿಶ್ವಾಸದ್ರೋಹ ಎಸಗಿರುವುದು ಇನ್ನೂ ಗಂಭೀರವಾದುದಾಗಿದೆ. ರಾಮ ಜನ್ಮಭೂಮಿ ಚಳವಳಿಯ ಇತಿಹಾಸ ಈಗ ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದೆ. ಭಾರತದಂಥ ಒಂದು ದೇಶದಲ್ಲಿ ರಾಜಕೀಯವಲ್ಲವಾದರೂ ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ನಂಬಿಕೆಯ ಪಾತ್ರವನ್ನು ಯಾರೂ ನಿರಾಕರಿಸುವಂತಿಲ್ಲ. ಒಂದು ರೀತಿಯಲ್ಲಿ, ರಾಮ ಜನ್ಮಭೂಮಿ ದೇವಸ್ಥಾನವು ಬಿಜೆಪಿ ಮತ್ತದರ ಹಿಂದುತ್ವ ಪಡೆಯ ಸೈದ್ಧಾಂತಿಕ ಪಥದರ್ಶಕವಾಗಿತ್ತು. ರಾಜಕೀಯ ಮತ್ತು ಚುನಾವಣಾ ಲಾಭಕ್ಕಾಗಿ ಜನರ ಧಾರ್ಮಿಕ ಭಾವನೆಗಳನ್ನು ಇನ್ನಿಲ್ಲದಂತೆ ಅಭೂತಪೂರ್ವವಾಗಿ ಬಳಸಿಕೊಂಡಿದ್ದು ಗತಿಸಿಹೋದ ದಿನಗಳ ಪ್ರಮುಖ ಲಕ್ಷಣವಾಗಿದೆ. ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲದೆ ದೇಶದ ಅತ್ಯುನ್ನತ ನ್ಯಾಯಾಂಗ ಕೂಡ ಇಂಥ ಅತಿರೇಕದ ಬೆಳವಣಿಗೆಗಳಿಗೂ ತಮಗೂ ಸಂಬಂಧವಿಲ್ಲವೆಂದು ಕೈತೊಳೆದುಕೊಳ್ಳುವಂತಿಲ್ಲ.
ಜೈಶ್ರೀರಾಮ್!
“ಮೈ ಚೌಕೀದಾರ್ ಹೂಂ”
ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ
ದೊಂಬಿ ನಡೆಸಿ ದೇವಾಲಯದ ಜಾಗವನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನುವುದು ವಾಸ್ತವ ಸಂಗತಿ ಎನ್ನುವುದನ್ನು ಸುಪ್ರೀಂ ಕೋರ್ಟಿನ ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ತಮ್ಮ ಆದೇಶದಲ್ಲಿ ಗುರುತಿಸಿದ್ದರು. ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಸಂಶಯಾಸ್ಪದ ಸ್ವರೂಪ ಮತ್ತು ಅದರೊಳಗಿನ ಖುಲ್ಲಂಖುಲ್ಲಾ ಸ್ವಯಂ ವೈರುಧ್ಯಗಳು ನಮ್ಮಲ್ಲಿ ಅನೇಕರಿಗೆ, ವಿಶೇಷವಾಗಿ ಎಡ ಪಂಥೀಯರು, ದೀರ್ಘಕಾಲೀನ ಕಾನೂನು ವಿವಾದಕ್ಕೆ ತೆರೆ ಬಿದ್ದರೂ ನ್ಯಾಯವು ಇನ್ನೂ ಸಿಕ್ಕಿಲ್ಲ ಎಂದು ಅಭಿಪ್ರಾಯಪಡಲು ಕಾರಣವಾಗಿತ್ತು. ಸ್ವತಃ ನ್ಯಾಯಮೂರ್ತಿ ಚಂದ್ರಚೂಡ್ಗೆ ಕೂಡ ತಮ್ಮ ಆದೇಶವನ್ನು ಕಾನೂನು ಮತ್ತು ಸಾಂವಿಧಾನಿಕ ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ಧೈರ್ಯ ಬರಲಿಲ್ಲ! ಆದ್ದರಿಂದ ದೈವಿಕ ಮಧ್ಯಪ್ರವೇಶವಾಗಿದ್ದರಿಂದ ಅದೇ `ದೊಂಬಿಕೋರರಿಗೆ’ ಆ ಜಾಗದ ಮಾಲಿಕತ್ವ ವಹಿಸಿ ಪ್ರಕರಣ ಇತ್ಯರ್ಥಪಡಿಸಲಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದರು. ಕೇಂದ್ರ ಸರ್ಕಾರದಿಂದ ಟ್ರಸ್ಟ್ ರಚಿಸಲು ಕೂಡ ಸುಪ್ರೀಂ ಕೋರ್ಟ್ ಹಾದಿ ಸುಗಮಗೊಳಿಸಿತು. ಮಂದಿರ ನಿರ್ಮಿಸುವ ಕಾರ್ಯವನ್ನು ಹಾಗೂ ದೈನಂದಿನ ವ್ಯವಹಾರಗಳನ್ನು ಸ್ವತಂತ್ರವಾಗಿ ನೋಡಿಕೊಳ್ಳುವ ಟ್ರಸ್ಟ್ಅನ್ನು ರಚಿಸಬೇಕೆಂದು ಅದು ನಿರ್ದಿಷ್ಟವಾಗಿ ನಿರ್ದೇಶನ ನೀಡಿತ್ತು.
ಇದನ್ನೂ ನೋಡಿ : ರಾಮಜನ್ಮಭೂಮಿ ಟ್ರಸ್ಟನ್ನು ಆರ್ಟಿಐ ಕಾಯ್ದೆಯ ಅಡಿಗೆ ತನ್ನಿ – ಗೃಹಮಂತ್ರಿಗಳಿಗೆ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪತ್ರ
ಆದರೆ, ಯಾವುದೇ ವಸ್ತುನಿಷ್ಠ ವೀಕ್ಷಕರಿಗಾದರೂ ಮೋದಿ ಆಳ್ವಿಕೆಯ ಅಡಿಯಲ್ಲಿ ಸ್ವಾತಂತ್ರ್ಯವೆನ್ನುವುದು ಒಂದು ಭ್ರಮೆಯೇ ಸರಿ. ಒಬ್ಬ ಸ್ವಯಂಘೋಷಿತ ಸ್ವಯಂಸೇವಕ ಪ್ರಧಾನ ಮಂತ್ರಿಯಾಗಿರುವಾಗ ಅದೊಂದು ವಿರೋಧಾಭಾಸವೇ ಆಗಿದೆ. ಆರೆಸ್ಸೆಸ್ ಕೇಂದ್ರಬಿಂದುವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕೆಲವು ವಿಶ್ಲೇಷಕರು ಗಮನಿಸಿದಂತೆ, ಅದು `ಶ್ರಮ ವಿಭಜನೆ’ಯ ನೀತಿಯನ್ನು ಹೊಂದಿದೆ. ಅಂಥ ವಿಭಜನೆಯಡಿ ಕೂಲಿ ಮತ್ತು ಅದರ ಸಂಚಯವು ರಾಮ ಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿದ್ದ ವಿಎಚ್ಪಿಗೆ ಒದಗಿದೆ. ಟ್ರಸ್ಟಿನ ಸಂಯೋಜನೆ ಹೇಗಿರುತ್ತದೆ ಎನ್ನುವುದನ್ನು ಆಗಲೇ ಯಾರಾದರೂ ಊಹಿಸಬಹುದಿತ್ತು. ಆಯ್ದ ಕೆಲವೇ ಸದಸ್ಯರಲ್ಲಿ ಕೂಡ ಈಗ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಕೇಂದ್ರ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿದ್ದರು. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಸಹಯೋಗದಿಂದ ವರ್ತಿಸುತ್ತಿರುವುದಕ್ಕೆ ಇದು ವಿವರಣೆ ನೀಡುತ್ತದೆ.
ಆರೆಸ್ಸೆಸ್-ಬಿಜೆಪಿ ಪಾತ್ರ ಟ್ರಸ್ಟ್ ಸಂಯೋಜನೆಗಷ್ಟೇ ಸೀಮಿತವಾಗಿಲ್ಲ. ದೇವಾಲಯದ ನಿರ್ಮಾಣ ಉದ್ಘಾಟನೆ (ಶಿಲಾನ್ಯಾಸ), ವಿಗ್ರಹದ ಪ್ರತಿಷ್ಠಾಪನೆ ಮತ್ತು ʼಧ್ವಜಾರೋಹಣʼ ಈ ಎಲ್ಲ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸ್ವತಃ ಪ್ರಧಾನಿಯೇ ವಹಿಸಿದ್ದರು. ತೀರಾ ಧಾರ್ಮಿಕವಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯ ಪ್ರಧಾನಪಾತ್ರವು ಹಲವು ಪ್ರಶ್ನೆಗಳನ್ನು ಎತ್ತಿತ್ತು ಮಾತ್ರವಲ್ಲದೆ ಕೆಲವು ಶಂಕರಾಚಾರ್ಯರ ಕೆಂಗಣ್ಣಿಗೂ ಗುರಿಯಾಗಿತ್ತು. ಮೋದಿಯ 12 ವರ್ಷಗಳ ಅಧಿಕೃತ `ಸಾಧನೆಗಳ’ ಪಟ್ಟಿಯಲ್ಲಿ ಅಯೋಧ್ಯೆಯಲ್ಲಿ `ಭವ್ಯ’ ರಾಮ ಮಂದಿರ ನಿರ್ಮಾಣ ಕೂಡ ಸೇರುತ್ತದೆ. ನಿಜ, ಇಂಥ ವರ್ಣನೆಯು ಪ್ರಧಾನ ಮಂತ್ರಿ ಎಂಬ ಒಂದೇ ವ್ಯಕ್ತಿಯಲ್ಲಿ `ಧಾರ್ಮಿಕ ನಂಬಿಕೆಗಳ ಮುಖ್ಯಸ್ಥ’ ಮತ್ತು `ರಾಜಕೀಯ ಅಧಿಕಾರದ ಮುಖ್ಯಸ್ಥ’ನ ಪಾತ್ರಗಳ ಬೆಸುಗೆಗೆ ಆಧಾರವಾಗುತ್ತದೆ.
ಆದರೂ, ಪ್ರಧಾನ ಮಂತ್ರಿಗಳು ಮೌನಕ್ಕೆ ಶರಣಾಗಿದ್ದಾರೆ. ತನ್ನ ಎಕ್ಸ್ ಖಾತೆ ಮೂಲಕ ಕೂಡ ಅವರು ಕಳವಿನ ಬಗ್ಗೆ `ಬೇಸರವನ್ನು’ ದಾಖಲಿಸಲಿಲ್ಲ! ಆದರೆ, ಪ್ರಸ್ತುತ ಆಕ್ರೋಶಕಾರೀ ಬೆಳವಣಿಗೆ ಇನ್ನೂ ಅಧಿಕ ನಿಂದನೀಯ. ರಾಮ ಮಂದಿರ ನಿರ್ಮಾಣ ಆರಂಭವಾಗುವುದಕ್ಕೂ ಮೊದಲು, ಅಂದರೆ 2020ರಲ್ಲೇ ಯೋಜನೆಯ ಲೆಕ್ಕಪತ್ರ ನಿರ್ವಹಣೆ ರೀತಿಯ ಕುರಿತು ಲೆಕ್ಕತಪಾಸಣೆ (ಆಡಿಟ್) ವರದಿಯೊಂದು ಅನುಮಾನ ವ್ಯಕ್ತಪಡಿಸಿತ್ತು. ಅವರ ಆಡಳಿತದ ಇತರ ಪರಿಚಿತ ಲಕ್ಷಣಗಳು, ಅಂದರೆ, ಕೂಡ ಹೀಗಿವೆ: ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಕೂಡ ಕಂಡು ಬಂದಿದ್ದವು. ಹಗರಣವನ್ನು ಮುಚ್ಚಿಹಾಕುವ ಮುಖ್ಯವಾಹಿನಿ ಮಾಧ್ಯಮ ಪ್ರಯತ್ನಗಳ ಹೊರತಾಗಿಯೂ ಈಗ ಹೊರ ಬರುತ್ತಿರುವ ವರದಿಗಳು ಇದನ್ನು ದೃಢಪಡಿಸುತ್ತವೆ.
ಕಾವಲು (ವಿಜಿಲೆನ್ಸ್) ವ್ಯವಸ್ಥೆ ಒತ್ತಟ್ಟಿಗಿರಲಿ,ಮೇಲ್ವಿಚಾರಣೆಯ ವ್ಯವಸ್ಥೆಯೆಂಬುದೇ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಯೋಧ್ಯೆ ಬಾರ್ ಅಸೋಸಿಯೇಷನ್ ಈಗ ಹಗರಣದ ಆರೋಪಿಗಳಲ್ಲಿ ಯಾರಿಗೂ ಕಾನೂನು ರಕ್ಷಣೆಯ ನೆರವು ಒದಗಿಸಬಾರದೆಂದು ದೊಡ್ಡದಾಗಿ ಹೇಳುತ್ತಿದೆ. ಆದರೆ ಈ ಮುಂಚೆ ಈಗಿನ ಹೊಲಸು ಬೆಳವಣಿಗೆಗಳ ಸರಣಿಯ ಬಗ್ಗೆ ಒಂದು ಪಿಸು ಮಾತೂ ಕೇಳಬಂದಿರಲಿಲ್ಲ. ಕಳ್ಳತನಕ್ಕಾಗಿ ಸಿಸಿಟಿವಿ ಕ್ಯಾಮರಾಗಳನ್ನು ಬಂದ್ ಮಾಡಲಾಗಿತ್ತು ಎನ್ನುವುದು ಕೂಡ ಈಗ ಕಂಡುಬಂದಿದೆ. ಈ ಎಲ್ಲವೂ ಅತ್ಯುನ್ನತ ಮಟ್ಟದಲ್ಲಿ ಇರುವವರು ಶಾಮೀಲಾಗದೇ ನಡೆಯಲು ಸಾಧ್ಯವೇ?
ರಾಜ್ಯ ಸರ್ಕಾರ ಆರಂಭದಲ್ಲಿ ಹಗರಣದ ವರದಿಗಳನ್ನು ತಳ್ಳಿ ಹಾಕಲು ಪ್ರಯತ್ನಿಸಿತ್ತು. ಆದರೆ ಅದು ಕೆಲವು ಪೊಲೀಸ್ ಕ್ರಮವನ್ನು ತೆಗೆದುಕೊಳ್ಳಲೇ ಬೇಕಾಗಿ ಬಂತು ಹಾಗೂ ಎಸ್ಐಟಿ ರಚಿಸಲೇ ಬೇಕಾಯಿತು. ಆದರೆ, ಪ್ರಧಾನ ಮಂತ್ರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳೇ ಸ್ವತಃ ಟ್ರಸ್ಟ್ ಜತೆ ನಿಕಟವಾಗಿ ಸಹಯೋಗ ಹೊಂದಿರುವುದರಿಂದ ಯಾವುದೇ ಕಾರ್ಯಾಂಗ ತನಿಖೆಯು ವಿಶ್ವಾಸಾರ್ಹವಾಗಿರುವುದಿಲ್ಲ. ಕೋಟಿಗಟ್ಟಲೆ ಭಕ್ತರ ನಂಬಿಕೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಆರ್ಎಸ್ಎಸ್-ಬಿಜೆಪಿ ಈಗಲೂ ಅಧಿಕಾರದಲ್ಲಿ ಮುಂದುವರಿದಿದೆ. ಯಾವ ಕೋಟ್ಯಂತರ ಮಂದಿಯ ನಂಬಿಕೆಯ ಹೆಸರಿನಲ್ಲಿ ಈ ಆಳ್ವಿಕೆ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಹಿಡಿದುಕೊಂಡಿದೆಯೋ ಆ ಕೋಟ್ಯಂತರ ಶ್ರದ್ಧಾವಂತರ ನಂಬಿಕೆಗೆ ಮಾನ್ಯತೆ ನೀಡಿ ತಕ್ಷಣವೇ ಒಂದು ನ್ಯಾಯಾಂಗ ತನಿಖೆಯನ್ನು ಆರಂಭಿಸಬೇಕು. ಇದು ಈ ನೆಲದ ಕಾನೂನು ಮತ್ತು ನಮ್ಮ ಸಾಂವಿಧಾನಿಕ ಚೌಕಟ್ಟಿನ ಕನಿಷ್ಠ ಆಗ್ರಹ.
“ಇಲ್ಲಣ್ಣಾ, ರಾಮಮಂದಿರದ ಈ ಬಿರುಕು ನಂತರ ಮಾಡಿದ್ದಲ್ಲ.
ನೋಡಿ ಇದು, ಮೂಲ ನಕಾಶೆಯಲ್ಲೇ ಸೇರಿತ್ತು.”

ವ್ಯಂಗ್ಯಚಿತ್ರ ಕೃಪೆ: ರಾಜೇಂದ್ರ ಧೋಡಪ್ಕರ್
ಇದನ್ನೂ ನೋಡಿ : SIR ಕರ್ತವ್ಯದಲ್ಲಿ ಮತ್ತೊಂದು ಆಘಾತ! ಬಿಎಲ್ಒಗೆ ಜಾತಿ ನಿಂದನೆ; ಎಫ್ಐಆರ್ ದಾಖಲು Janashakthi Media

