ಹಾಸನ: ಜುಲೈ 10ರಂದು ದೇಶಾದ್ಯಂತ ಸ್ಕೀಮ್ ನೌಕರರು “ಕಪ್ಪು ದಿನಾಚರಣೆ” ನಡೆಸಲಿದ್ದು, ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ ತಿಳಿಸಿದರು. ಸ್ಕೀಮ್
ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ ಸಮರ್ಪಕ ಅನುದಾನ ನೀಡದೆ, ಪೌಷ್ಟಿಕ ಆಹಾರದ ಘಟಕ ವೆಚ್ಚವನ್ನೂ ಹೆಚ್ಚಿಸದ ಕಾರಣ ಅಂಗನವಾಡಿ ವ್ಯವಸ್ಥೆ ದುರ್ಬಲವಾಗುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020) ಜಾರಿಯಿಂದ 3 ರಿಂದ 6 ವರ್ಷದ ಮಕ್ಕಳನ್ನು ಸರ್ಕಾರಿ ಶಾಲೆಗಳ ಎಲ್ಕೆಜಿ–ಯುಕೆಜಿ ತರಗತಿಗಳಿಗೆ ವರ್ಗಾಯಿಸಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಸ್ಥಳೀಯ ತಾಜಾ ಆಹಾರದ ಬದಲಿಗೆ ಸಂಸ್ಕರಿತ ಪ್ಯಾಕೆಟ್ ಆಹಾರ, ನಗದು ವರ್ಗಾವಣೆ ಹಾಗೂ ಕಾರ್ಪೊರೇಟ್ ವ್ಯವಸ್ಥೆಗಳ ಮೂಲಕ ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಎಫ್ಆರ್ಎಸ್, ಇ-ಕೆವೈಸಿ, ಪೋಷಣ್ ಟ್ರ್ಯಾಕರ್ ಸೇರಿದಂತೆ ಡಿಜಿಟಲ್ ವ್ಯವಸ್ಥೆಗಳನ್ನು ಅಗತ್ಯ ಸೌಲಭ್ಯಗಳಿಲ್ಲದೆ ಜಾರಿಗೊಳಿಸಿರುವುದರಿಂದ ನೌಕರರು ಮತ್ತು ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಬಿಎಲ್ಒ, ಎಸ್ಐಆರ್ ಹಾಗೂ ಇತರೆ ಸಮೀಕ್ಷೆಗಳ ಹೆಚ್ಚುವರಿ ಕೆಲಸದ ಹೊರೆಯನ್ನೂ ಅಂಗನವಾಡಿ ನೌಕರರ ಮೇಲೆ ಹಾಕಲಾಗಿದೆ ಎಂದು ದೂರಿದರು.
2018ರಿಂದ ಅಂಗನವಾಡಿ ನೌಕರರ ಗೌರವಧನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಕಾರ್ಮಿಕರೆಂದು ಮಾನ್ಯತೆ ನೀಡದೆ ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದ ಸಂಘಟನೆ, ರಾಜ್ಯ ಸರ್ಕಾರ ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ವೇತನ ಹೆಚ್ಚಳ ಜಾರಿಗೊಳಿಸಬೇಕು ಎಂದು ಆಗ್ರಹಿಸಿತು.
ಅಕ್ಷರ ದಾಸೋಹ ಯೋಜನೆಗೆ ಅಗತ್ಯ ಅನುದಾನ ಹೆಚ್ಚಿಸದೇ ಅದನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಸಂಘಟನೆ, ಬಿಸಿಯೂಟ ನೌಕರರಿಗೆ ₹7 ಸಾವಿರ ವೇತನ ಹೆಚ್ಚಳ ನೀಡಬೇಕು ಹಾಗೂ ಇಸ್ಕಾನ್ಗೆ ಬಿಸಿಯೂಟ ಯೋಜನೆ ನೀಡುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಓಬಳಾಪುರಂ ಮೈನಿಂಗ್ ಪ್ರಕರಣ: ಕೇಂದ್ರ ಸೂಚನೆಯಿಂದ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ
ಹೋರಾಟದ ಪ್ರಮುಖ ಬೇಡಿಕೆಗಳಲ್ಲಿ ಅಂಗನವಾಡಿ ನೌಕರರ ಖಾಯಂಗೊಳಿಸುವಿಕೆ, ಕನಿಷ್ಠ ವೇತನ ಜಾರಿ, ಪಿಂಚಣಿ, ಆರೋಗ್ಯ ವಿಮೆ, ಗ್ರಾಚ್ಯುಟಿ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ–ಯುಕೆಜಿ ಆರಂಭ, ಬಿಎಲ್ಒ ಹಾಗೂ ಇಲಾಖೇತರ ಕೆಲಸಗಳಿಂದ ಮುಕ್ತಗೊಳಿಸುವುದು, ಡಿಜಿಟಲ್ ಕೆಲಸಕ್ಕೆ ಅಗತ್ಯ ಟ್ಯಾಬ್ಲೆಟ್ ಮತ್ತು ಡೇಟಾ ಸೌಲಭ್ಯ ಒದಗಿಸುವುದು, ಉತ್ತಮ ಗುಣಮಟ್ಟದ ಸ್ಥಳೀಯ ಪೌಷ್ಟಿಕ ಆಹಾರ ಪೂರೈಕೆ ಹಾಗೂ ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯಡಿಯಲ್ಲಿಯೇ ಮುಂದುವರಿಸುವುದು ಸೇರಿ ಒಟ್ಟು 40 ಬೇಡಿಕೆಗಳಿವೆ ಎಂದು ತಿಳಿಸಿದರು.
ಜುಲೈ 10ರಂದು ರಾಜ್ಯಾದ್ಯಂತ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದು, ಸರ್ಕಾರಗಳು ತಕ್ಷಣವೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಸ್ಕೀಮ್
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ. ಬಿ.ಪುಷ್ಪ, ಕಾಮಾಕ್ಷಿ ರಾಜು, ಜಿ. ಪಿ. ಶೈಲಜಾ, ಮೀನಾಕ್ಷಿ, ಅರವಿಂದ ಇದ್ದರು.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವ ಜಿಬಿಎ? ಬದುಕಿನ ಹಕ್ಕಿಗಾಗಿ ಫ್ರೀಡಂ ಪಾರ್ಕ್ನಲ್ಲಿ ಹೋರಾಟ!
