ಬೆಂಗಳೂರು: ರಾಜ್ಯದಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕರ್ತವ್ಯದ ಹೆಸರಿನಲ್ಲಿ ಕೆಳಹಂತದ ನೌಕರರ ಮೇಲೆ ಹೇರುತ್ತಿರುವ ಅತಿಯಾದ ಒತ್ತಡ ಈಗ ಸರಣಿ ಸಾವುಗಳಿಗೆ ಕಾರಣವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಕಿರುಕುಳಕ್ಕೆ ಮೂರು ದಿನಗಳಲ್ಲೇ ಮೂವರು ನೌಕರರು ಮೃತಪಟ್ಟಿದ್ದು, ಮೇಲಧಿಕಾರಿಗಳ ವಿರುದ್ಧ ಕಂದಾಯ ಇಲಾಖೆ ಹಾಗೂ ಬಿಎಲ್ಓ ಸಿಬ್ಬಂದಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದ ವೇಳೆ ಬೂತ್ ಮಟ್ಟದ ಅಧಿಕಾರಿ (BLO) ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಬೀದರ್ ಜಿಲ್ಲೆಯ ಅಮಲಾಪುರ ಗ್ರಾಮದಲ್ಲಿ ನಡೆದಿದೆ. ಭಾಲ್ಕಿ ತಾಲೂಕಿನ ಮೂಲದ 45 ವರ್ಷದ ಸುನೀಲ್ ಮೃತಪಟ್ಟವರು. ಕಳೆದ ಹಲವು ದಿನಗಳಿಂದ ಎಸ್ಐಆರ್ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅವರು, ಅಮಲಾಪುರ ಗ್ರಾಮದ 33ನೇ ಬೂತ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯದ ವೇಳೆ ಅಕಸ್ಮಿಕವಾಗಿ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಅವರು, ಸ್ಥಳೀಯರ ಸಹಾಯದಿಂದ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟರು. ಆದರೆ ಚಿಕಿತ್ಸೆ ಸಂದರ್ಭದಲ್ಲಿ ಸ್ಟಂಟ್ ಅಳವಡಿಸುವ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಘಟನೆ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್: ಒಬ್ಬ BLOಗೆ ನೂರಾರು ಮನೆಗಳು; ಮತದಾರರ ಪಟ್ಟಿ ಪರಿಷ್ಕರಣೆಯ ಸವಾಲುಗಳೇನು?
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್ಓ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ನಿಧನರಾಗಿದ್ದಾರೆ. ಇತ್ತೀಚೆಗೆ ಜಾರಿಯಾದ ಕಡ್ಡಾಯ ಎಸ್ಐಆರ್ ಪ್ರಕ್ರಿಯೆಯ ಟಾರ್ಗೆಟ್ ಮುಗಿಸಲು ನಟರಾಜ್ ಹಗಲಿರುಳು ಶ್ರಮಿಸುತ್ತಿದ್ದರು. ತಡರಾತ್ರಿವರೆಗೂ ನಿಗದಿತ ಕೆಲಸ ಮುಗಿಸಿ ಮನೆಗೆ ಬಂದು ಮಲಗಿದ್ದ ನಟರಾಜ್, ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡದಿಂದಾಗಿ ರಾತ್ರಿಯೇ ಹೃದಯಾಘಾತಕ್ಕೊಳಗಾಗಿದ್ದಾರೆ. ಮುಂಜಾನೆ ಅವರು ಎದ್ದೇಳಲೇ ಇಲ್ಲ ಎಂದು ತಿಳಿದುಬಂದಿದೆ. ಕರ್ತವ್ಯನಿರತ ಅಧಿಕಾರಿಯ ದಿಢೀರ್ ಸಾವು ಅವರ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ.
ತುಮಕೂರಿನ ಗೂಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿದ್ದ 26 ವರ್ಷದ ಯುವತಿ ಭುವನಾ, ಶನಿವಾರ ಮುಂಜಾನೆ ಎಸ್ಐಆರ್ ಕೆಲಸದ ಗಡಿಬಿಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ದುರ್ಮರಣಕ್ಕೀಡಾಗಿದ್ದರು.
ಇದನ್ನೂ ನೋಡಿ: ಆರ್ಎಸ್ಎಸ್ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?
